January 17, 2018

Breaking News

ವನದೇವಿಯ ಮುಡಿಚೆಂಡು

ಮೊದಲ ಮಳೆಗಾಗಿ ರೈತರು ಎದುರು ನೋಡುತ್ತಾರೆ. ಬಿಸಿಲ ಬೇಗೆಗೆ ಬೆಂದವರೆಲ್ಲರಿಗೂ ಕೂಡ ಮೊದಲ ಮಳೆಯ ಸುವಾಸನೆ ಬಲು ಇಷ್ಟ. ಮೊದಲ ಮಳೆಗೆ ಕಾಯುತ್ತಿದ್ದಂತೆ ಭೂಮಿಯಾಳದಿಂದ ವನದೇವಿಯ ಮುಡಿಚೆಂಡು ಹೊರಹೊಮ್ಮುತ್ತದೆ. ಇದನ್ನು ಬ್ಲಡ್ಲಿಲ್ಲಿ ಎಂದು ಕರೆಯುತ್ತಾರೆ.

ಬಯಲುಸೀಮೆಯಲ್ಲಿ ಅಪರೂಪವಾದ ಈ ಹೂವು ತಾಲ್ಲೂಕಿನ ಬೋದಗೂರಿನ ಸಾವಯವ ಕೃಷಿಕ ವೆಂಟಕಸ್ವಾಮಿರೆಡ್ಡಿ ಅವರ ತೋಟದಲ್ಲಿ ಸುಂದರವಾಗಿ ಅರಳಿನಿಂತಿದೆ. ಫುಟ್ಬಾಲ್ ಗಾತ್ರದಷ್ಟು ದೊಡ್ಡದಾಗಿ ಅರಳಿರುವ ಎರಡು ಹೂಗಳು ಮತ್ತು ಇನ್ನೇನು ಅರಳಲು ಸಿದ್ಧತೆನಡೆಸಿರುವ ಮತ್ತೊಂದು ಹೂ ಆಕರ್ಷಕವಾಗಿದ್ದು ಹೂ ಪ್ರಿಯರನ್ನು ಆಹ್ವಾನಿಸುತ್ತಿದೆ.

ಆಕರ್ಷಕ ಹೂಗಳಲ್ಲಿ ಬ್ಲಡ್ಲಿಲ್ಲಿಯೂ ಒಂದು. ಈ ಹೂವಿನ ಸಸ್ಯ ಶಾಸ್ತ್ರೀಯ ಹೆಸರು ಹೆಕ್ಮಂಥಸ್ ಕೊಕ್ಸೀನಿಯಸ್. ಇದು ದಕ್ಷಿಣಾ ಆಫ್ರಿಕಾದಿಂದ ಬಂದ ಸಸ್ಯ.

ಮೊದಲ ಮಳೆಯ ಹೂವಿದು. ರಕ್ತಕೆಂಪು ಬಣ್ಣದ ಈ ಹೂ, ಬಲಿತಂತೆ ಗುಲಾಬಿ ಬಣ್ಣಕ್ಕೆ ತಿರುಗಿ, ಅನಂತರ ಹಸುರು ಬಣ್ಣಕ್ಕೆ ತಿರುಗುವ ಪ್ರಕ್ರಿಯೆ ನೋಡಲು ಆಹ್ಲಾದಕರ. ಕೊನೆಗೆ ಅದರ ದಂಟಿನಂತೆಯೇ ಹೂಗಳು ಉದುರಿ, ಅದರಲ್ಲಿ ಹಳದಿ ಬಣ್ಣದ ಹಣ್ಣುಗಳಾಗುತ್ತವೆ. ಬೀಜಗಳಿಂದ ಸಸ್ಯ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ನೆಲದಾಳದಲ್ಲಿ ಗಡ್ಡೆಗಳನ್ನು ನೆಟ್ಟು, ಬಹುದಿನ ಕಾಲ ಬಾಳುವ ಈ ಹೂವಿನ ಸಸ್ಯವನ್ನು ಅಭಿವೃದ್ಧಿಪಡಿಸಬಹುದು. ನಿಧಾನವಾಗಿ ನೆಲದಾಳದಲ್ಲಿ ಗಡ್ಡೆಗಳು ದ್ವಿಗುಣಗೊಂಡು, ವರ್ಷಗಳು ಕಳೆದಂತೆ ಹೂವಿನ ತೋರಣದ ಸಾಲು ಕಾಣಸಿಗುತ್ತದೆ.

ಗರುಡಲಿಲ್ಲಿ, ವಾಟರ್ಲಿಲ್ಲಿ, ಸಿಡಿಲಮರಿ, ಥಂಡರ್ಲಿಲ್ಲಿ, ತಿಂಗಳರಾಣಿ, ಮ್ಯಾಗ್ಮಿಲಿಯಾ, ಲ್ಯಾಟ್ರಿನ್ಬ್ರಶ್, ಗದಾ ಪುಷ್ಪ ಎಂದು ಇದಕ್ಕೆ ಹಲವಾರು ನಾಮಧೇಯಗಳು. ಹೂಗಳಿಂದ ತುಂಬಿದ ಗೋಲಾಕಾರದ ಬೆಡಗಿ, ಲಾವಣ್ಯವತಿಯಾಗಿ ರಸಿಕರ ಕಣ್ಮನಗಳಿಗೆ ಹರ್ಷೋಲ್ಲಾಸ ತುಂಬುತ್ತದೆ.

ಒಮ್ಮೆ ಮಾತ್ರ ಅರಳುವ ಅಪರೂಪ್ ಈ ಅತಿಥಿ ಚೆಲ್ಲುವ ಸೌಂದರ್ಯವನ್ನು ಕಂಡಾಗ ಅದರ ಅಸ್ತಿತ್ವ ಸಾರ್ಥಕ ಎನ್ನಿಸುತ್ತದೆ. ಇದೊಂದು ಸಂಯುಕ್ತ ಹೂ. ಪ್ರತಿ ಹೂವಿನಲ್ಲಿ ಸೂಜಿಯಾಕಾರದಲ್ಲಿ ಏಳು ದಳಗಳಿರುತ್ತವೆ. ಅದರ ತಳಭಾಗದಲ್ಲಿ ಆರು ತೆಳ್ಳಗಿನ ದಳಗಳಂತಿರುವ ಪುಷ್ಪಪಾತ್ರೆ ಇರುತ್ತದೆ. ಈ ರೀತಿಯ ಹೂಗಳು ಒಂದೇ ಮುಷ್ಟಿಯಲ್ಲಿ ಅದುಮಿ ಹಿಡಿದಂತೆ ಗೋಲಾಕಾರವಾಗಿ ಇರುತ್ತವೆ. ಬಯಲಿನಲ್ಲಿ ಭುಮಿಯನ್ನು ಸೀಳಿಬಂದಂತೆ ಬಾಣದಂತಿರುವ ಮೊಗ್ಗು ಹೊರಚಿಮ್ಮಿ ನಿಧಾನವಾಗಿ ಹೂವಾಗಿ ಅರಳುತ್ತದೆ.

ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ವೆಂಟಕಸ್ವಾಮಿರೆಡ್ಡಿ ಅವರ ತೋಟದಲ್ಲಿ ಅರಳಿರುವ ಬ್ಲಡ್ಲಿಲ್ಲಿ ಹೂಗಳು.
ದಪ್ಪ ಎಲೆ ಹಸುರು ಬಣ್ಣದ್ದಾಗಿದ್ದು, ಬೇಸಿಗೆ ಕಾಲದಲ್ಲಿ ಹಳದಿ ಬಣ್ಣಕ್ಕೆ ತಿರುಗಿ ಗಿಡ ನಶಿಸುತ್ತದೆ. ನೆಲದ ಆಳದಲ್ಲಿ ಗಡ್ಡೆ ಇದ್ದು, ಬಿಳಿ ಈರುಳ್ಳಿಯಂತೆ ಅಡಗಿರುತ್ತದೆ. ವರ್ಷಗಳು ಕಳೆದಂತೆ ಗಡ್ಡೆಗಳ ಗಾತ್ರ ದೊಡ್ಡದಾಗುತ್ತದೆ. ಅಂಥ ಗಿಡಗಳ ಹೂಗಳೂ ದೊಡ್ಡದಾಗಿರುತ್ತವೆ. ಗಡ್ಡೆಯ ಸುತ್ತಲೂ ಮರಿ ಕಂದುಗಳಾಗಿ ಗಡ್ಡೆಗಳಾಗುತ್ತವೆ. ಗೊಂಚಲು ಗೊಂಚಲು ಹೂಗಳು ಅರಳಿ ನಿಂತಾಗ ನೋಡಲು ಬಲು ಚೆನ್ನ. ಇಂಥ ಹೂವಿನ ಗಡ್ಡೆಗಳಿಗೆ ಬೇಸಿಗೆಯಲ್ಲಿ ನೀರಿನ ಅಗತ್ಯವೇ ಇರುವುದಿಲ್ಲ.

‘ನಾನು ಯಾವುದೇ ಕೃಷಿ ಮೇಳಕ್ಕೆ ಹೋಗಲಿ ಅಥವಾ ಕೃಷ್ಇ ಅಧ್ಯಯನ ಪ್ರವಾಸಕ್ಕೆ ಹೋಗಲಿ ವಿಶೇಷವಾಗಿ ಕಂಡ ಸಸ್ಯಗಳನ್ನು ತಂದು ನಮ್ಮ ತೋಟದಲ್ಲಿ ನೆಡುತ್ತೇನೆ. ಅದೇ ರೀತಿಯಲ್ಲಿ ತಂದು ನೆಟ್ಟ ಗಡ್ಡೆಯಿಂದ ಬ್ಲಡ್ಲಿಲ್ಲಿ ಹೂಗಳು ಅರಳಿವೆ. ನಮ್ಮ ತೋಟಕ್ಕೆ ಭೇಟಿ ನೀಡುವವರೆಲ್ಲ ಈ ಹೂಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಭಾಗದಲ್ಲಿ ಅಪರೂಪವೆನಿಸುವ ಈ ಹೂ ಇಷ್ಟೊಂದು ದೊಡ್ಡ ಗಾತ್ರದಲ್ಲಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ನಮ್ಮ ತೋಟ ಸಾವಯವದ್ದಾಗಿರುವುದೂ ಇದಕ್ಕೆ ಕಾರಣವಿರಬಹುದು. ಅಲಂಕಾರಿಕವಾಗಿಯೂ ಈ ಹೂಗಳನ್ನು ಬಳಸಬಹುದು. ಅನೇಕ ದಿನಗಳವರೆಗೂ ಬಾಡದಂತೆ, ಆಗತಾನೆ ಗಿಡದಿಂದ ಕಿತ್ತಂತೆ, ಕೆಲವು ದಿನಗಳ ಕಾಲ ಇದನ್ನು ಕಾಯ್ದಿಡಲು ಸಾಧ್ಯ’ ಎನ್ನುತ್ತಾರೆ ಸಾವಯವ ಕೃಷಿಕ ಬೋದಗೂರು ವೆಂಕಟಸ್ವಾಮಿರೆಡ್ಡಿ.

– ಡಿ.ಜಿ.ಮಲ್ಲಿಕಾರ್ಜುನ

About The Author

News, activities, lifestyle, business, culture and amazing people. Sidlaghatta, everything about a small town with a huge presence.

Related posts

Leave a Reply

Your email address will not be published. Required fields are marked *

Time limit is exhausted. Please reload the CAPTCHA.