30.3 C
Sidlaghatta
Tuesday, March 19, 2024

ಮನೆಯೊಳಗೆ ಮನೆಯೊಡೆಯ ಇದ್ದಾನೋ . . .?

- Advertisement -
- Advertisement -

ಹೊಸ್ತಿಲಲಿ ಹುಲ್ಲು ಹುಟ್ಟಿ
ಬಾಗಿಲೊಳು ರಜವು ತುಂಬಿ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ
ಎಂಬ ಬಸವಣ್ಣನವರ ವಚನ ಸಾರ್ವಕಾಲಿಕ ಸತ್ಯವನ್ನು ಹೇಳುವಂಥದ್ದು. ಒಳಗಡೆಯ ಸಾರವನ್ನರಿಯಲು ಒಳಗಡೆಗೇ ಪ್ರವೇಶಮಾಡಬೇಕೆಂದಿಲ್ಲ ಹೊರಗಡೆ ಗಮನಿಸಿಯೇ ತೀರ್ಮಾನಕ್ಕೆ ಬರಲು ಸಾಧ್ಯ. ಮನೆಯೊಂದನ್ನು ಒಳಗಡೆ ನೋಡಬೇಕೆಂದಾದರೆ ಮೊದಲು ಕಕ್ಕಸು ಮತ್ತು ಸ್ನಾನದ ಮನೆಯೊಂದನ್ನು – ಅನಂತರ ಅಡುಗೆಮನೆಯನ್ನು ಗಮನಿಸಿದರೆ ಮನೆಯವರ ಶಿಸ್ತು ಸ್ವಚ್ಛತೆ ಗೋಚರವಾಗುತ್ತದೆ. ಮನೆ ಎಂದರೆ ಅಲ್ಲಿ ಮನೆಮಂದಿಯ ಜವಾಬ್ದಾರಿಯಿರುತ್ತದೆ. ಅದು ತಮ್ಮದೆಂಬ ಭಾವ ಜಾಗೃತವಾಗಿರುತ್ತದೆ. ಆ ಕಾರಣದಿಂದಾಗಿಯೇ ಸದಾ ಸ್ವಚ್ಛವಾಗಿ ಮತ್ತು ಆದಷ್ಟು ಆಕರ್ಷಣೀಯವಾಗಿ ಇರುತ್ತದೆ. ಆದರೆ ಇದೇ ಮಾತನ್ನು ಸಾರ್ವಜನಿಕ ಕಛೇರಿಯ ಕುರಿತು ಆಡುವಂತಿಲ್ಲ. ಸಾರ್ವಜನಿಕ ಆಸ್ತಿ ಎಂದರೆ ಅದು ಎಲ್ಲರ ಮತ್ತು ಯಾರದ್ದೂ ಅಲ್ಲದ ಕಾರಣದಿಂದಾಗಿ ಅಲಕ್ಷಕ್ಕೆ ಗುರಿಯಾಗಿರುವುದೇ ಹೆಚ್ಚು. ಅದರಲ್ಲೂ ವಿಶೇಷವಾಗಿ ಸರಕಾರಿ ಅಥವಾ ಖಾಸಗಿ ಕಾಲೇಜುಗಳನ್ನು ಬೇಕಿದ್ದರೆ ಗಮನಿಸಬಹುದು.
ಕಾಲೇಜುಗಳಿಗೆ ವಿದ್ಯಾರ್ಥಿಗಳು ಕಲಿಕೆಗಾಗಿ ಬರುತ್ತಾರೋ ಕಿಡಿಗೇಡಿತನದ ಪ್ರದರ್ಶನಕ್ಕಾಗಿ ಬರುತ್ತಾರೋ ತಿಳಿಯುವುದಿಲ್ಲ, ಎಲ್ಲರೂ ಹಾಗಂತ ಅಲ್ಲ. ವಾಸ್ತವವಾಗಿ ಕಿಡಿಗೇಡಿಗಳ ಸಂಖ್ಯೆ ಅತ್ಯಂತ ಕಡಿಮೆ. ಆದರೆ ಅವರು ಕ್ರಿಯಾಶೀಲರು, ಸಂಪನ್ನರ ಸಂಖ್ಯೆ ಜಾಸ್ತಿ. ಆದರೆ ಅವರು ಸಜ್ಜನ ನಿಷ್ಕ್ರಿಯರು ಹೀಗಾಗಿ ಪ್ರತಿಭಟನೆ ಇರದೆ ತಪ್ಪನ್ನು ತಪ್ಪೆಂದು ಖಂಡಿಸುವ ಛಾತಿಯಿರದೆ ನೋಡಿದರೂ ನೋಡದಂತೆ ತಮ್ಮ ಪಾಡಿಗೆ ತಾವೆಂದು ಭಾವಿಸುತ್ತಿರುವುದರಿಂದಲೇ ವ್ಯವಸ್ಥೆ ಮತ್ತಷ್ಟು ಹದಗೆಡುತ್ತ ಸಾಗುತ್ತಿದೆ ಎಂದು ಅನ್ನಿಸುತ್ತಿದೆ. ಕಾಲೇಜಿನ ಒಳಗೆ ಪ್ರವೇಶಿಸುವ ಪೂರ್ವದಲ್ಲೆ ಅಲ್ಲಿನ ವಿದ್ಯಾರ್ಥಿಗಳ ಸಂಸ್ಕಾರವನ್ನು ಹೇಳಲು ಸಾಧ್ಯ. ಗೋಡೆಯ ತುಂಬೆಲ್ಲ ಪಾದರಕ್ಷೆಯ ಗುರುತುಗಳು ಕಾಲನ್ನು ಗೋಡೆಗೆ ತಾಗಿಸಿ ನಿಲ್ಲುವುದೇ ಚಟವಾದ ವಿದ್ಯಾರ್ಥಿಗಳಿದ್ದಲ್ಲಿ ಯಾವ ಗೋಡೆಯನ್ನು ಸುಣ್ಣ-ಬಣ್ಣದಿಂದ ಚೆಂದ ಕಾಣುವಂತೆ ಇಡಲಾಗುವುದಿಲ್ಲ. ಸುತ್ತೆಲ್ಲ ಗುಟ್ಕಾ ಪ್ಯಾಕೆಟ್ ಚೂರುಗಳ ಚಾಕಲೇಟ್ ಕವರು ಇತ್ಯಾದಿಗಳನ್ನು ಸಮೃದ್ದವಾಗಿ ಹರಡುತ್ತಲೇ ಇದ್ದರೆ ಯಾವುದೇ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರುಗಳಿಂದ ಏನನ್ನೂ ಮಾಡಲಾಗುವುದಿಲ್ಲ. ಎಷ್ಟು ಎಂದು ಮಾಡುವುದು?
ಕಿಡಿಗೇಡಿತನವನ್ನೇ ವ್ಯಕ್ತಿತ್ವದ ಅವಿಭಾಜ್ಯ ಅಂಗವನ್ನಾಗಿಸಿಕೊಂಡು ಬರುವ ವಿದ್ಯಾರ್ಥಿಗಳನ್ನು ಹದ್ದು ಬಸ್ತಿನಲ್ಲಿಡುವುದು ಕಷ್ಟ. ಡೆಸ್ಕಿನ ತುಂಬೆಲ್ಲ ತರಹೇವಾರಿ ಬರವಣಿಗೆಗಳು – ಚಿತ್ರಗಳನ್ನು ಬಿಡಿಸಿರುತ್ತಾರೆ. ಬ್ಲೇಡಿನಿಂದಲು ಕೆತ್ತಿರುತ್ತಾರೆ. ಸ್ವಿಚ್ ಬೋರ್ಡ್‍ಗಳನ್ನೆ ಒಡೆಯುತ್ತಿರುತ್ತಾರೆ. ಹಾಕಿಸಿದಂತೆಲ್ಲ ಬಲ್ಬುಗಳನ್ನು ಒಡೆಯುತ್ತಾರೆ. ಬೋರ್ಡ್‍ಗಳ ಮೇಲೂ ಬೇಕಾಬಿಟ್ಟಿ ಬರೆದು – ಶಿಕ್ಷಕರು ಮತ್ತಲ್ಲಿ ಬರೆಯಲು ಬಾರದಂತೆ ಮಾಡಿರುತ್ತಾರೆ. ಹೀಗಾದಾಗ ಕಲ್ಪಿಸಿದ ಸೌಲ್ಯಭ್ಯಗಳು ಸದುಪಯೋಗಕ್ಕೆ ಬಾರದೆ ಹೋಗುತ್ತದೆ. ದೀಪಗಳು ಪ್ರಕಾಶಿಸುವುದಿಲ್ಲ. ಫ್ಯಾನುಗಳು ತಿರುಗುವುದಿಲ್ಲ, ಡೆಸ್ಕ್‍ಗಳನ್ನು ನೋಡಿದರೆ ಕೂಡ್ರುವುದೇ ಹೇಸಿಗೆ ಎನ್ನಿಸುತ್ತದೆ. ಜೊತೆಗೆ ತರಗತಿಯಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳುವ ಬೇಂಚುಗಳ ಪಕ್ಕದ ಗೋಡೆಗಳ ತುಂಬೆಲ್ಲ ವಿವಿಧ ವಿಷಯಗಳ ಟಿಪ್ಪಣಿಗಳನ್ನು ಬರೆದಿರುತ್ತಾರೆ. ಪರೀಕ್ಷಾ ಸಮಯದಲ್ಲಿ ಕಾಪಿ ಹೊಡೆಯಲು ಅನುಕೂಲವಾಗಲಿ ಎಂದು ಚೀಟಿ ತಂದಿದ್ದರೆ ಪರೀಕ್ಷಾ ಸಮಯದಲ್ಲಿ ಅದು ಕೊಠಡಿ ಮೇಲ್ವಿಚಾರಕರ ಕೈಗೆ ಸಿಕ್ಕರೆ ಅಥವಾ ವಿಶ್ವವಿದ್ಯಾನಿಲಯ ನೇಮಿಸಿದ ವೀಕ್ಷಕರಿಗೆ ಗೋಚರಿಸಿದರೆ ಅಥವಾ ಪರೀಕ್ಷಾ ಜಾಗೃತದಳದವರ ತಪಾಸಣೆಯ ವೇಳೆಯಲ್ಲಿ ಪತ್ತೆಯಾದರೆ – ಪರೀಕ್ಷೆಯಿಂದ ಡಿಬಾರಾಗುವ ಸಾಧ್ಯತೆಯಿದೆ. ಆದೇ ಡೆಸ್ಕ್‍ಗಳ ಮೇಲೆ – ಪಕ್ಕದ ಗೋಡೆಗಳ ಮೇಲೆ ಬರೆಯಲ್ಪಟ್ಟರೆ – ಎದುರಾಗಬಹುದಾದ ಅಪಾಯದಿಂದ ಪಾರಾಗಬಹುದೆಂಬ ಲೆಕ್ಕಾಚಾರ ವಿದ್ಯಾರ್ಥಿಗಳದ್ದು. ಈ ರೀತಿಯಾಗಿ ಡೆಸ್ಕುಗಳ ಮೇಲೆ ಗೋಡೆಗಳ ಮೇಲೆ ಬರೆಯಲು ವಿನಿಯೋಗಿಸುವ ಶ್ರಮ ಮತ್ತು ವೇಳೆಯನ್ನು ಓದಿನ ಕಡೆಗೆ ಬಳಸಿದ್ದರೆ ಖಂಡಿತವಾಗಿಯೂ ಅವರೆಲ್ಲ ಉತ್ತಮ ಅಂಕಗಳಿಸಿ ಉತ್ತೀರ್ಣರಾಗುತ್ತಿದ್ದರು. ಆದರೆ ಇಂದಿನ ಕೆಲವು ಕಿಡಿಗೇಡಿಗಳಿಗೆ ನೇರವಾದ ಮಾರ್ಗದಲ್ಲಿ ನಂಬಿಕೆಯಿಲ್ಲ, ಆಸಕ್ತಿಯೂ ಇಲ್ಲ.
ಇದರೊಟ್ಟಿಗೇ ಗ್ರಂಥಾಲಯದಲ್ಲಿ ಕೂಡ ಪುಸ್ತಕಗಳ ಹಾಳೆಗಳನ್ನು ಕೀಳುವುದು, ಪುಸ್ತಕಗಳ ಒಳಗಿನ ಮಾಹಿತಿಗಳನ್ನು ಕತ್ತರಿಸುವುದು ಇತ್ಯಾದಿ ಕಿಡಿಗೇಡಿತನ ಪ್ರದರ್ಶಿಸುತ್ತಾರೆ. ಇದರಿಂದಾಗಿ ಪ್ರಾಮಾಣಿಕವಾಗಿ ಓದಲು ಬರುವ ವಿದ್ಯಾರ್ಥಿಗಳಿಗೆ – ಸಂಸ್ಥೆಯಲ್ಲಿರುವ ಪುಸ್ತಕಗಳು ದೊರಕದೆ ಅವರು ಪರದಾಡುವಂತಾಗುತ್ತದೆ. ಗ್ರಂಥಪಾಲಕರಿಗೂ ಇವರ ಆಗಮನವೇ ಭಯಾನಕವಾಗಿರುತ್ತದೆ. ದಿನಗಳೆದಂತೆ ಅವರಲ್ಲೂ ವಿದ್ಯಾರ್ಥಿಗಳಿಗೆ ಸಹಾಯಮಾಡಬೇಕೆಂಬ ಕಾಳಜಿ ಕಣ್ಮರೆಯಾಗುತ್ತ ಸಾಗುತ್ತಿದೆ. ಹಾಗೇ ನೀರಿನ ನಲ್ಲಿ ಮುರಿಯುವುದು, ಶೌಚಾಲಯಗಳನ್ನು ಹಾಳುಮಾಡುವುದು ಇತ್ಯಾದಿಗಳಿಂದಾಗಿ – ಓದುವವರಿಗೆ ತೊಡಕು ಮತ್ತು ಅಂಥ ಒಂದು ವಾತಾವರಣದ ಸೃಷ್ಟಿಗೆ ಧಕ್ಕೆಯಾಗುತ್ತಿರುವುದು ವರ್ತಮಾನದ ಸತ್ಯ. ಸೈಕಲ್ ಸ್ಟಾಂಡ್ (ಅಲ್ಲೀಗ ಮೊಪೆಡ್, ಬೈಕು, ಕಾರುಗಳು ಮಾತ್ರ ಇರುತ್ತವೆ) ದಲ್ಲಿ ಕೂಡ ಕಿಡಿಗೇಡಿತನ ನೆರೆವೇರಿಸುತ್ತಾ – ಟೈರಿನ ಗಾಳಿ ತೆಗೆಯುವುದು – ಸೀಟಿನ ಕವರ್ ಹರಿಯುವುದು – ವಾಹನದ ಮೇಲೆಲ್ಲ ಗೀರುವುದು ಬಹುಶಃ ಅನಾಗರೀಕ ಸಂಸ್ಕøತಿಯ ಲಕ್ಷಣವಲ್ಲದೆ ಮತ್ತೇನೂ ಆಗಿರಲಿಕ್ಕೆ ಸಾಧ್ಯವಿಲ್ಲ. ತಮ್ಮ ಮನೆಯಾಗಿದ್ದರೆ ಅವರು ಹೀಗೆ ಮಾಡುತ್ತಿದ್ದರೆ? ಸರಕಾರ ಮತ್ತು ಸಾರ್ವಜನಿಕರ ಸ್ವತ್ತನ್ನು ಹೀಗೆ ಹಾಳುಗೆಡವುದರಿಂದ ಸಾಧಿಸುವುದಾದರು ಏನನ್ನು? ಪ್ರಾಂಶುಪಾಲರು – ಶಿಕ್ಷಕರು ಪದೇ ಪದೇ ತಿಳಿಹೇಳಿದಾಗ್ಯೂ ತಿದ್ದಿಕೊಳ್ಳದವರೆದುರು ಅವರೂ ಅಸಹಾಯಕರಾಗುತ್ತಾರೆ.
ಪದ್ಧತಿಯನ್ನು ಬದಲಾಯಿಸಿ – ಸುಂದರ ವಾತಾವರಣ ಸೃಷ್ಠಿಸುವುದರತ್ತ ನಮ್ಮೆಲ್ಲರ ಚಿತ್ತ ಹರಿಯಬೇಕಿದೆ. ಮೊದಲು ಕಿಡಿಗೇಡಿಗಳಿಗೆ ಬುದ್ಧಿ ಹೇಳುವುದು, ಹಾಜರಾತಿಯನ್ನು ಕಡ್ಡಾಯಗೊಳಿಸುವುದು ಮತ್ತು ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು. ಹೀಗಾದರೆ ವರ್ಷವಿಡೀ ತರಗತಿಯ ಹೊರಗಡೆಯೇ ಅಡ್ಡಾಡುವ ಪಡ್ಡೆ ಹುಡುಗರನ್ನು ನಿಯಂತ್ರಿಸಲು ಸಾದ್ಯ. ತರಗತಿಗಳು ನಡೆಯುತ್ತಿರುವಾಗಲೆ ಹೊರಗಡೆ ಸುತ್ತಾಡುವವರನ್ನು ನಿರ್ದಾಕ್ಷಿಣ್ಯವಾಗಿ ದಂಡಿಸುವ ಪೂರ್ವದಲ್ಲಿ ಅವರ ಪಾಲಕರುಗಳಿಗೆ ಮಾಹಿತಿ ನೀಡಿದರೆ ಸೂಕ್ತ. ಯಾವ ಪಾಲಕರಿಗೂ ತಮ್ಮ ಮಕ್ಕಳು ಉಡಾಳರಾಗಿ ಬೆಳೆಯುವುದು ಬೇಕಾಗಿರುವುದಿಲ್ಲ. ಇದನ್ನೂ ಅಲಕ್ಷಿಸಿದ ಪಕ್ಷದಲ್ಲಿ ಅವರನ್ನು ಅಲ್ಲಿಂದ ಹೊರ ಹಾಕುವುದೇ ಬಹಳ ಯುಕ್ತವಾದ ಮಾರ್ಗ. ಬುಟ್ಟಿಯೊಂದರಲ್ಲಿ ಇರುವ ಒಳ್ಳೆಯ ಹಣ್ಣುಗಳ ಜೊತೆ ಕೆಟ್ಟದೊಂದು ಸೇರಿದರೆ ಕಷ್ಟ, ಇಡೀ ಬುಟ್ಟಿಯ ಹಣ್ಣುಗಳು ಹಾಳಾಗುವುದಕ್ಕೆ ಮುನ್ನ ಕೆಟ್ಟಿದ್ದನ್ನಷ್ಟೇ ಕಿತ್ತೆಸೆಯುವುದು ಸೂಕ್ತವೇನೋ? ಕಾಪಿ ಹೊಡೆಯುವ ಪಿಡುಗಿನಿಂದ ಪಾರುಮಾಡುವ ಸಲುವಾಗಿ ನಾವು ಬೇಸರದಿಂದ ಆದರೆ ಗಂಭೀರವಾಗಿ ನೀಡಬಹುದಾದ ಸಲಹೆಯೆಂದರೆ – ಎಲ್ಲ ಡೆಸ್ಕುಗಳಿಗೂ ಡಾಂಬರನ್ನು ಹೊಡೆಯುವುದು ಅಷ್ಟನ್ನೂ ಕಪ್ಪು ಬಣ್ಣದಿಂದ ತುಂಬಿದರೆ – ಬರೆದುಕೊಳ್ಳಲು ಅಸಾಧ್ಯ. ಹಾಗೇ ಕೊಠಡಿಯೊಳಗಿನ ಗೋಡೆಗಳಿಗೆ – ನೆಲದಿಂದ ಕನಿಷ್ಠ ಐದು ಅಡಿಗಳವರೆಗೆ ಕಡುಗಪ್ಪು ಬಣ್ಣವನ್ನು ಬಳಿಯಬೇಕು ತರಗತಿಯ ಸೌಂದರ್ಯ ಹಾಳಾಗುತ್ತದೆ ನಿಜ. ಆದರೆ ಸೌಂದರ್ಯ ಪ್ರಜೆÐಯೇ ಇರದವರಿಗೆ ಪಾಠ ಕಲಿಸುವುದೂ ಇಂದಿನ ಅಗತ್ಯ, ಹಾಗೆ ಹೊರಗಡೆಯ ಗೋಡೆಗಳಿಗೂ – ನಾಲ್ಕು ಅಡಿಗಳವರೆಗೆ ಮಣ್ಣಿನ ಬಣ್ಣವನ್ನು ಮೆತ್ತಿಡುವುದು ಸೂಕ್ತವಾಗಬಹುದು. ಇನ್ನು ಲೈಟಿನ ಸ್ವಿಚ್ ಒಡೆಯುವುದು – ನಲ್ಲಿಗಳನ್ನು ಮುರಿದು ಹಾಕುವುದು – ಕುರ್ಚಿ – ಬೇಂಚ್‍ಗಳ ಅಂದಗೆಡಿಸುವುದು ನಡೆದರೆ – ಮತ್ತೆ ಮತ್ತೆ ಸರಿಮಾಡಿಸುವುದಕ್ಕೆ ಬದಲಾಗಿ ಆ ವರ್ಷವಿಡೀ ಅವರು ಅದರಲ್ಲೇ ಹೊಂದಿಕೊಳ್ಳುವ ಅನಿವಾರ್ಯತೆಯ ಶಿಕ್ಷೆ ನೀಡಬೇಕು. ಇದರಿಂದ ಓದಲಿಕ್ಕಾಗಿಯೇ ಬಂದ ಸಂಪನ್ನ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದು ನಿಜ. ಆದರೆ ಅವರಿಗೂ ಜವಾಬ್ದಾರಿ ಬರಬೇಕಾದ ಅಗತ್ಯವಿದೆ, ಯಾರು ಹಾಳುಗೇಡಿಗಳೋ ಅವರನ್ನು ಸರಿದಾರಿಗೆ ತರುವ ಅಥವಾ ಕನಿಷ್ಟ ಪಕ್ಷ ಅಂಥವರ ಕುರಿತು ಸಂಸ್ಥೆಗೆ ಸಂಬಂಧಿಸಿದವರ ಹತ್ತಿರ ಮಾಹಿತಿಯನ್ನಾದರೂ (ಗುಟ್ಟಿನಲ್ಲಿ ಬೇಕಾದರೆ) ನೀಡುವ ಧೈರ್ಯ ತೋರುವಂತಾಗಬೇಕು. ಇಷ್ಟೂ ಸಾಧ್ಯವಾಗದ ಪಕ್ಷದಲ್ಲಿ ಅವರು ಎಷ್ಟೇ ಅಧ್ಯಯನ ಮಾಡಿ – ಎಷ್ಟೇ ಅಂಕಗಳನ್ನು ಪಡೆದು ಉತ್ತೀರ್ಣರಾದರೂ – ಮುಂದೆ ಇದೇ ಸಮಾಜದಲ್ಲಿ ಧೈರ್ಯದಿಂದ ಬದುಕಲಾರರು. ಹೇಡಿಗಳಾಗಿಬಿಡುವ ಅಪಾಯವಿದೆ. ಬದುಕಿನಲ್ಲಿ ದಿಟ್ಟತನ ತೋರುವ – ಸಶಕ್ತ ಸುಶಿಕ್ಷಿತರನ್ನು ದೇಶವಿಂದು ಬಯಸುತ್ತದೆ.
ರವೀಂದ್ರ ಭಟ್ ಕುಳಿಬೀಡು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!