30.3 C
Sidlaghatta
Tuesday, March 19, 2024

ವೃತ್ತಿ ಶಿಕ್ಷಣ ಏಕರೂಪ ಪರೀಕ್ಷಾ ಪದ್ಧತಿ

- Advertisement -
- Advertisement -

ಇದೇ ಮೊದಲ ಬಾರಿಗೆ 2013 ರಲ್ಲಿ ಪಿ.ಯು.ಸಿ. ಪೂರೈಸಿದ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನೆದುರಿಸಬೇಕಾಗಿದೆ. ಇಷ್ಟು ವರ್ಷಗಳ ಕಾಲ ರಾಜ್ಯದ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿ ಅದರಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಇಂಜಿನಿಯರ್, ಆರ್ಕಿಟೆಕ್ಟ್, ವೈದ್ಯ ಮತ್ತು ದಂತವೈದ್ಯ ಕೋರ್ಸುಗಳಿಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗುತ್ತಿತ್ತು. ವಿದ್ಯಾರ್ಥಿಗಳು ತಮ್ಮ ರ್ಯಾಂಕಿಂಗ್ ನೋಡಿಕೊಂಡು ತಮ್ಮ ಕಾಲೇಜುಗಳ ಆಯ್ಕೆಗಳನ್ನು ಮಾಡಿಕೊಳ್ಳುವ ಪದ್ಧತಿ ಇತ್ತು. ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದ್ದ ಪದ್ದತಿ. ಈಗ ರಾಜ್ಯ ಪರೀಕ್ಷಾ ಪ್ರಾಧಿಕಾರ ನಡೆಸುತ್ತಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಗೆ ವಿದ್ಯಾರ್ಥಿಗಳು ಅಣಿಯಾಗಬೇಕಿದೆ. ಈಗ ಅವರ ಆಯ್ಕೆಯ ಹರಹು ರಾಷ್ಟ್ರಮಟ್ಟದ್ದಾಗಿರುತ್ತದೆ. ಇಲ್ಲಿನ ವಿದ್ಯಾರ್ಥಿಗಳು ತಮಗಿಷ್ಟವಾದ ಬೇರೆ ಬೇರೆ ರಾಜ್ಯಗಳ ಕಾಲೇಜುಗಳನ್ನು ಸೇರಬಹುದ್ದಾಗಿದ್ದಂತೆ ಬೇರೆ ಬೇರೆ ರಾಜ್ಯಗಳ ವಿದ್ಯಾರ್ಥಿಗಳು ಕೂಡ ಈ ರಾಜ್ಯದ ವಿವಿಧ ಕಾಲೇಜುಗಳಲ್ಲಿ ಪ್ರವೇಶ ಪಡೆಯಬಹುದಾಗಿದೆ. ಇದೆಲ್ಲವೂ ಸರಿ. ಆದರೆ ಇಲ್ಲಿನ ವಿದ್ಯಾರ್ಥಿಗಳು ಈಗ ಒಮ್ಮಿಂದೊಮ್ಮೆನೇ ರಾಷ್ಟ್ರಿಯ ಮಟ್ಟದ ಸಾಮಾನ್ಯ ಪ್ರವೇಶ ಪರೀಕ್ಷೆ ಎದುರಿಸಲು ಸಿದ್ದರಾಗಿದ್ದಾರೆಯೇ? ಇಲ್ಲಿನ ಶೈಕ್ಷಣಿಕ ಪಠ್ಯ ಕೇಂದ್ರಿಯ ಪಠ್ಯ ಕ್ರಮದೆದುರು ಕಡಿಮೆ ಗುಣಮಟ್ಟದ್ದಾಗಿದೆಯೇ? ಹಾಗಿದ್ದ ಪಕ್ಷದಲ್ಲಿ ಕೇಂದ್ರಿಯ ಪಠ್ಯ ಕ್ರಮದ ಮೇಲೆ ತಯಾರಾಗಿ ಬರುವ ಪ್ರಶ್ನೆಗಳಿಗೆ ಉತ್ತರಿಸಲು ನಮ್ಮ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲಾಗಿದೆಯೇ? ಹಾಗಿಲ್ಲದಿದ್ದಲ್ಲಿ ಹೊರರಾಜ್ಯದ ವಿದ್ಯಾರ್ಥಿಗಳೇ ನಮ್ಮ ರಾಜ್ಯದಲ್ಲಿನ ಕಾಲೇಜುಗಳಲ್ಲಿ ಪ್ರವೇಶ ಪಡೆದರೆ ನಮ್ಮವರಿಗೆ ಜಾಗ ಎಲ್ಲಿ? ಇವರ ಭವಿಷ್ಯವೇನು? ಇತ್ಯಾದಿ ಪ್ರಶ್ನೆಗಳು ಧುತ್ತೆಂದು ನಮ್ಮೆದುರಿಗೆ ಬಂದು ನಿಲ್ಲುವುದು ಸಹಜ. ಬಹುಶಃ ಇಂತಹ ಗೊಂದಲಗಳ ಪರಿಣಾಮವಾಗಿತೇ? ಕೆಲವು ಕಡೆ ವಿದ್ಯಾರ್ಥಿಗಳಿಂದ ಏಕರೂಪದ ಪರೀಕ್ಷಾ ಪದ್ಧತಿಯ ತಕ್ಷಣದ ಜಾರಿಗೆ ವಿರೋಧ ವ್ಯಕ್ತವಾಗಿದೆ. ಪ್ರತಿಭಟನೆಗಳು ಚದುರಿದಂತೆ ನಡೆದಿವೆ. ಯಾವುದೇ ಹೊಸತನಕ್ಕೆ ಬದಲಾವಣೆಗೆ ಅಣಿಯಾದ ಸಂದರ್ಭದಲ್ಲೆಲ್ಲಾ ಇದು ಸಹಜವಾದ ಪ್ರಕ್ರಿಯೆಯೂ ಹೌದು.
ಯಾವುದೇ ಪೂರ್ವ ಸಿದ್ದತೆಯನ್ನು ಕೈಗೊಳ್ಳದೇ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಏರಿಸುವ ಪ್ರಯತ್ನಗಳಾಗದೆ, ಏಕಾಏಕಿ ಇವರನ್ನು ಪರೀಕ್ಷೆ ಎದುರಿಸಿ ಎಂದು ಹೇಳಿದರೆ ಅದರ ತೀವ್ರ ಪರಿಣಾಮವಾಗುವುದು ವಿದ್ಯಾರ್ಥಿಗಳ ಮೇಲೆ ಎಂಬುದರಲ್ಲಿ ಎರಡು ಮಾತಿರಲಾರದು. ಆದರೆ ಕೇಂದ್ರದಿಂದ ಏಕರೂಪದ ಶಿಕ್ಷಣ ನೀತಿಗೆ ಒತ್ತಡ ಬೀಳುತ್ತ ಬಹಳ ವರ್ಷಗಳಾದರೂ, ಜಾರಿಗೊಳಿಸದೆ, ಮುಂದೂಡುತ್ತ ಮುಂದೂಡುತ್ತ ಹೋದದ್ದರ ಪರಿಣಾಮ ಇದು. ಮೊದಲು ಮುಂದೂಡವುದರಲ್ಲೇ ಜಾಣತನವನ್ನು ತೋರಿದಕ್ಕೆ, ಇದು ಇಂದು ಇದ್ದಕ್ಕಿದ್ದಂತೆ ಎಂಬ ಜನಾಭಿಪ್ರಾಯ ಮೂಡುವಂತಾಗಿದೆ. ಈಗ ಮೇಲಿನಿಂದ ಕಟ್ಟಪ್ಪಣೆ ಜಾರಿಯಾದ ಸಂದರ್ಭದಲ್ಲಿ ಮತ್ತೆ ಮೂಂದೂಡಲಾಗದ ಇಕ್ಕಟ್ಟಿನಲ್ಲಿ ಸಿಲುಕಿ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಿದೆ ಪ್ರಪಂಚದ ಎಲ್ಲ ರಂಗಗಳಲ್ಲೂ ಬದಲಾವಣೆಯ ಗಾಳಿ ಬೀಸುತ್ತಿರುವಾಗ ಅದು ಶೈಕ್ಷಣಿಕ ರಂಗವನ್ನು ಬಿಡಲು ಸಾಧ್ಯವಿಲ್ಲ ಎಂಬ ಸತ್ಯ ಸ್ವಲ್ಪ ಮೊದಲೇ ಅರ್ಥವಾಗಿದಿದ್ದರೆ, ವಿಧ್ಯಾರ್ಥಿಗಳ ದೃಷ್ಟಿಯಿಂದ ಒಳಿತಾಗುತ್ತಿತ್ತು. ಈ ವರ್ಷದ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಮಾತ್ರ ರಾಜ್ಯದ ಪಠ್ಯಕ್ರಮವಿದೆ, ಪ್ರಥಮ ಪಿಯುಸಿಗೆ ಕೇಂದ್ರಿಯ ಪಠ್ಯಕ್ರಮ ಜಾರಿಯಾಗಿದೆ ಹಾಗಾಗಿ ನಿರ್ಧಿಷ್ಟವಾಗಿ ತೊಂದರೆಯಾಗಿರುವುದು ಸಧ್ಯ ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವವರಿಗೆ ಮಾತ್ರ.
ಹಿಂದಿರುಗಿ ನೋಡಲಿಕ್ಕಾಗಿ, ಹಿಂದಿನವರನ್ನು ಹಳಿಯುತ್ತ ಕೂರುವುದಕ್ಕಾಗಲಿ ಈಗ ಸಮಯವಿಲ್ಲ, ಇದ್ದ ಸಮಯದಲ್ಲೇ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅಣಿಗೊಳಿಸುವ ಗುರುತರ ಜವಬ್ದಾರಿ ಶಿಕ್ಷಕ ಸಮುದಾಯದ ಮೇಲಿದೆ. ಪ್ರತಿಭಟನೆಗಳಿಂದ ಪರೀಕ್ಷಾ ಪದ್ಧತಿ ಬದಲಾಯಿಸಲಾಗುವುದಿಲ್ಲ. ಮಾನವೀಯತೆಯ ದೃಷ್ಟಿಯಿಂದ ಎಂಬ ಪದವನ್ನು ಮೇಲಿನವರಿಗೆ ಹೇಳುವುದಕ್ಕಿಂತ, ಇಲ್ಲಿನವರು ಉಪಯೋಗಿಸಿಕೊಳ್ಳುವುದು ಇಂದಿನ ಅಗತ್ಯ ಈ ಕಾರಣದಿಂದ ಈ ಒಂದು ಅವಧಿಯಲ್ಲಿ ವಿದ್ಯಾರ್ಥಿಗಳ ಒಳತಿಗಾಗಿ ಶಿಕ್ಷಕರು ತಮ್ಮ ಶ್ರಮವನ್ನು ಧಾರೆಯೆರದು ಅವರನ್ನು ಪರೀಕ್ಷೆಗೆ ಸಿದ್ದಗೊಳಿಸಬೇಕಿದೆ. ಅದನ್ನು ಬಿಟ್ಟು ನಾವು ನಮ್ಮ ಸುಖವನ್ನು ಸ್ವಲ್ಪವೂ ತ್ಯಾಗಮಾಡುವುದಿಲ್ಲ. ನಿಮಗೆ ನಮ್ಮ ನೆಮ್ಮದಿಯಷ್ಟೆ ಮುಖ್ಯ ಎಂದು ಶಿಕ್ಷಕ ಸಮೂದಾಯ ಭಾವಿಸಿದರೆ, ವಿದ್ಯಾರ್ಥಿಗಳನ್ನು ಕಾಪಾಡುವವರು ಯಾರು? ಹೀಗಾಗಿ ಯಾರು ಯಾರಿಂದಲೋ, ಯಾವ ಯಾವೂದೋ ಕಾರಣಕ್ಕಾಗಿ ಮುಂದೂಡುತ್ತ ಬಂದಿರುವ ತಪ್ಪಿಗೆ, ಕಾರಣಗಳನ್ನು ಈಗ ಹುಡುಕುತ್ತ ಕುಳಿತುಕೊಳ್ಳುವುದು ಮತ್ತಷ್ಟು ಅಪಾಯಗಳಿಗೆ ಎಡೆಮಾಡಿ ಕೊಡಬಲ್ಲದು ಅಷ್ಟೆ.
ಕನಿಷ್ಠ ಎಂಟನೆಯ ತರಗತಿಯಿಂದಲೇ ವಿದ್ಯಾರ್ಥಿಗಳಿಗೆ ಕೇಂದ್ರಿಯ ಮಾದರಿಯ ಪಠ್ಯಕ್ರಮ ಜಾರಿಯಾಗಿ, ಅವರು ಅದೇ ಕ್ರಮದಲ್ಲಿ ಅಭ್ಯಸಿಸುತ್ತ ಬಂದಲ್ಲಿ ಕೇಂದ್ರಿಯ ಸಾಮಾನ್ಯ ಪ್ರವೇಶ ಪರೀಕ್ಷೆ ಅವರಿಗೆ ಕಷ್ಟವೆನ್ನಿಸಲಾರದು ಎಂಬುದು ಸತ್ಯ. ಆದರೆ ಈಗ ಪಿಯುಸಿ ದ್ವಿತೀಯ ವರ್ಷದಲ್ಲಿರುವ ವಿದ್ಯಾರ್ಥಿಗಳನ್ನು ಹಿಂದೆ ಕಳುಹಿಸಲಾಗುವುದಿಲ್ಲವಲ್ಲ, ಹಾಗಾಗಿ ಪಿಯುಸಿ ಮಂಡಳಿ ಕೇಂದ್ರಿಯ ಪಠ್ಯಕ್ರಮವನ್ನು ಹೆಚ್ಚುವರಿಯಾಗಿ ವಿದ್ಯಾರ್ಥಿಗಳಿಗೆ ಬೋಧಿಸಲು ಉಪನ್ಯಾಸಕರುಗಳಿಗೆ ತಿಳಿಸಿದೆ ಎಂದು ತಿಳಿದು ಬಂದಿದೆ. ಆದರೆ ಅದಕ್ಕೆ ಬೇಕಾಗುವ ಅವಧಿಯ ಹೊಂದಣಿಕೆಯೇ ಕಷ್ಟದ ಕೆಲಸ ಎಂದು ಬಹಳಷ್ಟು ಕಾಲೇಜುಗಳ ಉಪನ್ಯಾಸಕರು ಅಭಿಪ್ರಾಯ ಪಡುತ್ತಾರೆ. ಇದು ಸ್ವಲ್ಪಮಟ್ಟಿಗೆ ನಿಜವೂ ಹೌದು, ಆದರೆ ವಿದ್ಯಾರ್ಥಿಗಳ ಭವಿಷ್ಯದೆದುರು ಇದೆಲ್ಲ ಗೌಣವಾಗಬೇಕಿದೆ. ಹೆಚ್ಚಿನ ಅವಧಿಯ ಬೋಧನೆ ಅಗತ್ಯವಾಗಿರುವುದರಿಂದ ಕಾಲೇಜಿನ ಬೋದನಾವಧಿಯನ್ನು ಹೆಚ್ಚಿಸುವ ಮತ್ತು ಈ ವರ್ಷದ ತುರ್ತು ಎಂಬ ಕಾರಣಕ್ಕಾಗಿ ರಜಾದಿನಗಳನ್ನು ಪಾಠದ ದಿನಗಳನ್ನಾಗಿಸಿ ಸರಕಾರ ಸುತ್ತೋಲೆ ಹೊರಡಿಸುವುದು ಅಗತ್ಯವೇನೋ ಬೇಕಿದ್ದರೆ ಹೆಚ್ಚುವರಿ ಬೋಧನಗೆ ಬೇಕಿದ್ದರೆ ಭತ್ಯೆಯನ್ನು ನೀಡಿದರೂ ತಪ್ಪಿಲ್ಲ. ಯಾಕೆಂದರೆ ನಮ್ಮ ವಿದ್ಯಾರ್ಥಿಗಳಿಗೆ ಒಳ್ಳೆಯ ಕಡೆ ಭವಿಷ್ಯ ದೊರಬೇಕೆಂಬುದು ಮುಖ್ಯ ಗುರಿಯಾಗಿರಬೇಕಾದ್ದು ಇಂದಿನ ಅಗತ್ಯ.
ವಿದ್ಯಾರ್ಥಿಗಳು ಕೂಡ ಏನಾದರೂ ಪವಾಡ ನಡೆಯುತ್ತದೆ ಎಂದು ಭಾವಿಸಿದರೆ, ಪ್ರತಿಭಟನೆ ಇತ್ಯಾದಿಗಳಲ್ಲಿ ಕಾಲಹರಣ ಮಾಡದೆ ಪರೀಕ್ಷೆಗೆ ನಿಗದಿಗೊಳಿಸಿಲಾದ ಪಠ್ಯಕ್ರಮವನ್ನು ಶ್ರದ್ಧೆಯಿಂದ ಅಭ್ಯಸಿಸುವವರಾಗಬೇಕಿದೆ, ಕಷ್ಟವಾಗುವುದು ನಿಜ, ಹಾಗಂತ ಸುಮ್ಮನೆ ಕುಳಿತರೆ ಕಷ್ಟ ಇನ್ನಷ್ಟು ಅಧಿಕವಾಗುತ್ತದೆ. ಪರಿಹಾರಕ್ಕೆ ಪ್ರಯತ್ನಿಸುವುದು ಸೂಕ್ತವಾದ ಮಾರ್ಗ, ಹಾಗಾಗಿ ಇನ್ನು ಇರುವ ಸೀಮಿತ ಅವಧಿಯೊಳಗೆ ಸಾಧ್ಯವಾದಷ್ಟು ಹೆಚ್ಚು ಹೆಚ್ಚು ಜ್ಞಾನಗಳಿಸುವ ದೃಷ್ಟಿಯಿಂದ ತಮ್ಮ ತಮ್ಮ ಕಾಲೇಜಿನ ಉಪನ್ಯಾಸಕ ವೃಂದವನ್ನು ಒತ್ತಾಯಪೂರ್ವಕವಾಗಿಯಾದರೂ ಬಳಸಿಕೊಳ್ಳಬೇಕು. ‘ತಾಯಿಯೇ ಆದರೂ ಮಗು ಅಳದಿದ್ದರೆ ಎದೆಹಾಲನ್ನು ನೀಡುವುದಿಲ್ಲವಂತೆ’ ಹಾಗೇ ನೀವೂ ಈಗ ನಿಮ್ಮ ಅಳಲನ್ನೂ ಅವÀರುಗಳ ಮುಂದಿಟ್ಟು ಪಾಠ ಹೇಳಿಸಿಕೊಳ್ಳಬೇಕು, ಸಂಜೆಯಾದರೂ ಸರಿ, ರಜಾದಿನಗಳಾದರೂ ಸರಿ ನಾವು ಪಾಠ ಕೇಳಲು ಸಿದ್ಧರಿದ್ದೇವೆ, ನಮ್ಮ ಕುರಿತು ಕರುಣೆ ತೋರಿ ನಮಗೆ ಪಾಠ ಹೇಳಿ, ನಮಗಾಗಿ ನಿಮ್ಮ ವಿರಾಮವನ್ನಷ್ಟು ತ್ಯಾಗಮಾಡಿ ಎಂದು ದುಂಬಾಲು ಬಿದ್ದರೆ ಪರಿಸ್ಥಿತಿ ತಕ್ಕಮಟ್ಟಿಗಾದರೂ ಸುಧಾರಿಸಲೂ ಸಾಧ್ಯ. ಹೆಜ್ಜೆಯನ್ನು ಹಿಂದಿಕ್ಕಿಡಲಂತೂ ಸಾಧ್ಯವೇ ಇಲ್ಲ ಮುಂದುಕ್ಕಿಡುವುದು ಅನಿವಾರ್ಯವೂ ಹೌದು ಅಗತ್ಯವೂ ಹೌದು, ಅದಕ್ಕೆ ತಕ್ಕಂತೆ ಮಾರ್ಗ ನಿರ್ಮಿಸಿಕೊಳ್ಳುತ್ತ ಸಾಗುವುದೇ ಸದ್ಯದ ಜಾಣ್ಮೆ.
ಇನ್ನು ಕೇಂದ್ರಿಯ ಪಠ್ಯಕ್ರಮವೆಂಬುದೇನೂ ಅರ್ಥವಾಗದ ಭಯಂಕರ ಕಷ್ಟದ ಭೂತವಲ್ಲ, ಯಾಕೆಂದರೆ ಈ ಕ್ರಮ ಈಗಾಗಲೇ ಉಳಿದಡೆಯಲ್ಲಿ ಯಶಸ್ವಿಯಾಗಿದೆ, ಅಲ್ಲಿನ ವಿದ್ಯಾರ್ಥಿಗಳು ಅದಕ್ಕೆ ಒಪ್ಪಿಕೊಂಡಿದ್ದಾರೆ, ನಮ್ಮವರೇನೂ ಅದಕ್ಕೆ ಒಗ್ಗಿಕೊಳ್ಳಲಾಗದವರಲ್ಲ ಅದಕ್ಕೆ ಸದ್ಯಕ್ಕೆ ಒಂದಿಷ್ಟು ತರಬೇತಿಯ ಅವಶ್ಯಕತೆಯಿದೆ ಅಷ್ಟೆ. ಹೀಗಾಗಿ ಮುಂಬರುವ ವರ್ಷಗಳಲ್ಲಿ ವಿದ್ಯಾರ್ಥಿಗಳನ್ನು ಕೇಂದ್ರಿಯ ಪ್ರವೇಶ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ಅಗತ್ಯವಾಗಿ ಮೊದಲಿಗೆ ಇಲ್ಲಿನ ಉಪನ್ಯಾಸಕರುಗಳಿಗೂ ಬೇಕಿದ್ದರೆ ಸೂಕ್ತ ತರಬೇತಿಗಳನ್ನು (ರಜಾ ಅವಧಿಯಲ್ಲಿ) ನೀಡುವುದು ಒಳ್ಳೆಯದು. ಇಡೀ ರಾಷ್ಟದಲ್ಲಿ ಏಕರೂಪದ ವ್ಯವಸ್ಥೆ ಜಾರಿಗೊಳ್ಳುತ್ತಿರುವಾಗ ಅದರಿಂದ ಕರ್ನಾಟಕ ಹೊರಗುಳಿಯಲು ಸಾಧ್ಯವೇ ಇಲ್ಲ, ಹೊಂದಿಕೊಳ್ಳುವುದನ್ನು ಕಲಿಯುವುದು ಕಡ್ಡಾಯ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಧ್ಯದ ಪರಿಸ್ಥಿತಿಯಲ್ಲಿ ತಮ್ಮ ತಮ್ಮ ಆರಾಮನ್ನಷ್ಟು ತ್ಯಾಗಮಾಡದೇ ವಿಧಿಯಿಲ್ಲ, ತಮ್ಮ ತಮ್ಮ ಆರಾಮವನ್ನಷ್ಟೇ ಗಮನಿಸಿಕೊಳ್ಳುವುದಾದ ಪಕ್ಷದಲ್ಲಿ ಸುಧಾರಣೆಯ ಕುರಿತು ಮಾತನಾಡುವುದು ಅಪರಾಧವಾಗಬಹುದು ಎನ್ನಿಸುತ್ತದೆ, ಪ್ರಯತ್ನಿಸದೆ ಫಲಿತಾಂಶವನ್ನು ಪ್ರತಿಭಟನೆಗಳಿಂದ ಪಡೆದುಕೊಳ್ಳಲೆತ್ನಿಸುವುದು ಎಂದಿದ್ದರೂ ಅಪಾಯಕ್ಕೆ ಆಹ್ವಾನ ನೀಡಿದಂತೆ!
ರವೀಂದ್ರ ಭಟ್ ಕುಳಿಬೀಡು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!