February 26, 2018

Breaking News

ವರ್ಷಾ ಋತು (ಮಳೆಗಾಲ)

“ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಲ್ಲ. ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ”….. ಮಳೆಯ ಈ ಹಾಡು ಬಾಲ್ಯದ ಮಳೆಗಾಲದ ದಿನಗಳನ್ನು ನೆನಪಿಸುತ್ತದೆ. ಮಳೆಗಾಲ ಬಂತೆಂದರೆ ಸಾಕು ಏನೋ ಅರಿಯದ ಅವ್ಯಕ್ತ ಸಂತೋಷ. ಪ್ರಾರಂಭದ ಮಳೆಗೆ ಒದ್ದೆಯಾದ ಮಣ್ಣಿನ ಘಮ, ಹರಿಯುವ ನೀರಿನಲ್ಲಿ ಕಾಗದದ ದೋಣಿಗಳನ್ನು ಮಾಡಿ ಬಿಡುವ ಸಂಭ್ರಮ, ಸಣ್ಣ ತುಂತುರು ಮಳೆಯಲ್ಲಿ ನೆನೆಯುವ ಆನಂದ, ಇವೆಲ್ಲವುಗಳನ್ನೂ ಮೆಲುಕು ಹಾಕುತ್ತಿದ್ದಂತೆಯೇ ಬೇಸಿಗೆ ಕಳೆದು ಮಳೆಗಾಲದ ಆಗಮನವಾಗಿರುತ್ತದೆ.

ಬೇಸಿಗೆಯ ಬಿಸಿಲಿನ ಧಗೆ, ಬೆವರು, ಸುಸ್ತು, ಆಯಾಸ ಇವೆಲ್ಲವುಗಳಿಗೆ ಮುಕ್ತಿಯೆಂಬಂತೆ ಬರುವುದು ಈ ಮಳೆಗಾಲ. ಮೈ ಮನಗಳಿಗೆ ತಂಪನ್ನೆರೆಯುವುದು. ರೈತರಿಗೆ ಮಳೆಗಾಲ ಎಂಬುದು ಸುಗ್ಗಿಯ ಕಾಲ, ಬೇಸಾಯ ಮಾಡಲು ಅನುಕೂಲಕರ ವಾತಾವರಣ.

ಈ ಋತುವಿನಲ್ಲಿ ವಾತ, ಪಿತ್ತ ಹಾಗೂ ಕಫ ಈ ಮೂರೂ ದೋಷಗಳು ದೇಹದಲ್ಲಿ ಹೆಚ್ಚಾಗಿರುತ್ತವೆ. ಜೀರ್ಣಶಕ್ತಿಯು ಕಡಿಮೆ ಇರುತ್ತದೆ. ವಾತಾವರಣದಲ್ಲಿ ಕ್ಲೇದಾಂಶ (ಆದ್ರ್ರತೆ) ಹೆಚ್ಚಾಗಿರುತ್ತದೆ. ಇದು ದೇಹದ ಮೇಲೂ ಪರಿಣಾಮ ಬೀರುವುದುರಿಂದ ದೇಹದಲ್ಲಿಯೂ ಕ್ಲೇದತೆ ಹೆಚ್ಚಾಗುತ್ತದೆ. ನೆಗಡಿ ಜ್ವರ, ಕೆಮ್ಮು ಹಾಗೂ ಇನ್ನಿತರೇ ಶ್ವಾಸಕೋಶದ ಸೋಂಕುಗಳು ಹೆಚ್ಚಾಗಿ ಕಂಡು ಬರುತ್ತವೆ.

ಆಹಾರ: 1. ಈ ಋತುನಲ್ಲಿ ಪ್ರಧಾನವಾಗಿ ಬಿಸಿ ಇರುವ, ಜಿಡ್ಡಿನಿಂದ ಕೂಡಿದ, ಹುಳಿ, ಸಿಹಿ, ಉಪ್ಪು ರಸಗಳನ್ನೊಳಗೊಂಡ ಆಹಾರ ಸೇವನೆ ಮಾಡುವುದು ಹಿತಕರ.
2. ಮಳೆ ಬರುತ್ತಿರುವ ಸಮಯದಲ್ಲಿ ಮಾವಿನ ಹುಳಿ (ಬೇಸಿಗೆಯಲ್ಲಿಯೇ ಸಿದ್ಧಪಡಿಸಿಟ್ಟುಕೊಂಡಿರುವ) ಚಿತ್ರಾನ್ನ ಲಿಂಬೇ ಹುಳಿ ಅಥವಾ ಹಂಚೀಕಾಯಿ ಹುಳಿ ಚಿತ್ರಾನ್ನವನ್ನು ಸಿದ್ಧಪಡಿಸಿ ಸೇವಿಸುವುದು ಉತ್ತಮ.
3. ಈ ಋತುವಿನಲ್ಲಿ ಜೀರ್ಣಶಕ್ತಿ ಕಡಿಮೆ ಇರುವುದರಿಂದ ಗಡ್ಡೆ, ಗೆಣಸುಗಳು, ಬೀಟ್ರೂಟ್, ಆಲೂಗಡ್ಡೆ ಇತ್ಯಾದಿಗಳ ಸೇವನೆ ಅಷ್ಟಾಗಿ ಸೂಕ್ತವಲ್ಲ.
4. ಹೀರೇಕಾಯಿ, ಪಡುವಲಕಾಯಿ, ಮೂಲಂಗಿ ಕ್ಯಾರಟ್, ಸೀಮೆ ಬದನೆಕಾಯಿ, ಸೊಪ್ಪುಗಳು (ಬಸಳೆ, ಪಾಲಕ್ ಮೆಂತ್ಯ, ಹರಿವೆ.), ನುಗ್ಗೇಕಾಯಿ, ಇತ್ಯಾದಿ ತರಕಾರಿಗಳು ಹಿತಕರ.
5. ಹಳೆಯ ಅಕ್ಕಿ, ಗೋಧಿ ಬಾರ್ಲಿ, ಜವೆಗೋಧಿ ಇತ್ಯಾದಿಗಳನ್ನು ಬಳಸಬೇಕು.
6. ದೇಹದಲ್ಲಿ ಕ್ಲೇದಾಂಶ ಹೆಚ್ಚಾಗುವುದರಿಂದ ಕುಡಿಯುವ ನೀರಿಗೆ ಜೇನುತುಪ್ಪವನ್ನು ಬೆರೆಸಿ ಸೇವಿಸುವುದು ಉತ್ತಮ. ಅಲ್ಲದೆ ಕೆಲವೊಂದು ಆಹಾರ ಪದಾರ್ಥಗಳೊಡನೆ ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವಿಸುವುದೂ ಕೂಡ ಆರೋಗ್ಯಕರ.
7. ಕಾಳು ಮೆಣಸು, ಶುಂಠಿ, ಹಿಪ್ಪಲಿ, ಬೆಳ್ಳುಳ್ಳಿ, ಈರುಳ್ಳಿ ಇತ್ಯಾದಿಗಳನ್ನು ಬೇರೆ ಬೇರೆ ಆಹಾರ ಪದಾರ್ಥಗಳ ರೂಪದಲ್ಲಿ (ಉದಾ: ಸಾರು, ಚಟ್ನಿ, ಗೊಜ್ಜು ಇತ್ಯಾದಿ) ಅಥವಾ ಆಹಾರ ಪದಾರ್ಥಗಳ ಸಂಸ್ಕಾರಕ್ಕೆ (ಉದಾ: ಒಗ್ಗರಣೆಗೆ) ಬಳಸಬಹುದು.
8. ಮೊಸರಿನ ಮೇಲ್ಭಾಗದ ತಿಳಿಗೆ ಹಿಪ್ಪಲಿ, ಹಿಪ್ಪಲಿಮೂಲ, ಶುಂಠಿ, ಕಾಳು ಮೆಣಸಿನ ಪುಡಿಗಳನ್ನು ಬೆರೆಸಿ ಸೇವಿಸುವುದೂ ಕೂಡ ಈ ಋತುವಿನಲ್ಲಿ ಹಿತಕರ.

ವಿಹಾರ: 1. ಸ್ನಾನ, ಶೌಚ ಹಾಗೂ ಕುಡಿಯಲು ಬಿಸಿ ನೀರಿನ ಬಳಕೆ ಸೂಕ್ತ.
2. ಬೆಚ್ಚಗಿನ ಹತ್ತಿ ಅಥವಾ ಉಣ್ಣೆಯ ಬಟ್ಟೆಗಳನ್ನು ಧರಿಸುವುದು ಅನುಕೂಲಕರ.
3. ಆದಷ್ಟು ಮನೆಯಲ್ಲಿ ಕೆಂಡದ ಒಲೆ, ಅಗ್ಗಿಷ್ಠಿಕೆಗಳನ್ನು ಉರಿಸಿ ಬೆಚ್ಚನೆಯ ವಾತಾವರಣವನ್ನು ನಿರ್ಮಿಸಿಕೊಂಡರೆ ಒಳ್ಳೆಯದು.
4. ವೈದ್ಯರ ಸಲಹೆಯ ಮೇರಗೆ ಆಸ್ಥಾಪನಾ ಬಸ್ತಿ (ಗುದದ್ವಾರದ ಮೂಲಕ ಔಷಧೀಯ ದ್ರವ್ಯಗಳನ್ನು ಸೇರಿಸುವುದು) ತೆಗೆದುಕೊಳ್ಳಬಹುದು.
5. ಅತಿಯಾದ ವ್ಯಾಯಾಮ ಮಳೆಯಲ್ಲಿ ಅಡ್ಡಾಡುವುದು ಹಾಗೂ ಹಗಲು ನಿದ್ದೆ ಈ ಋತುವಿನಲ್ಲಿ ನಿಷಿದ್ಧ.
6. ಹೊರಗಡೆ ವಿಹರಿಸುವಾಗ ಪಾದರಕ್ಷೆ, ಛತ್ರಿಗಳನ್ನು ಬಳಸಬೇಕು.

ಶರದ್ ಋತು: ವರ್ಷಾ ಋತುವಿನ (ಮಳೆಗಾಲದ) ನಂತರ ಬರುವುದೇ ಶರದ್ ಋತು ಈ ಋತುವಿನಲ್ಲಿ ಪಿತ್ತ ಪ್ರಕೋಪದ ಲಕ್ಷಣಗಳು ಕಂಡು ಬರುತ್ತವೆ. ಮಳೆಗಾಲದ ನಂತರದ ಹಾಗೂ ಚಳಿಗಾಲ ಆರಂಭವಾಗುವ ಮೊದಲಿನ ಅವಧಿಯೇ ಈ ಶರದ್ ಋತು.

ಆಹಾರ: 1. ಈ ಋತುವಿನಲಿ ಒಣಗಿದ, ಜೀರ್ಣಕ್ಕೆ ಹಗುರವಾದಂಥಹ ಹಾಗೂ ತಂಪಾದ ಆಹಾರ ಪದಾರ್ಥಗಳ ಸೇವನೆ ಹಿತಕರ.
2. ಪ್ರಧಾನವಾಗಿ ಸಿಹಿ, ಕಹಿ ಹಾಗೂ ಒಗರು ರಸಗಳನ್ನು ಹೊಂದಿರುವ ಆಹಾರ ಪದಾರ್ಥಗಳ ಸೇವನೆ ಅತ್ಯಗತ್ಯ.
3. ಖಾರ, ಉಪ್ಪು ಹಾಗೂ ಕ್ಷಾರ ರಸ ಪ್ರಧಾನ ಆಹಾರಗಳ ಅತಿಯಾದ ಸೇವನೆ ಈ ಋತುವಿನಲ್ಲಿ ನಿಷಿದ್ಧ.
4. ಅಕ್ಕಿ ಹೆಸರು ಬೇಳೆ, ಗೋಧಿ ಬಾರ್ಲಿ ಇತ್ಯಾದಿಗಳಿಂದ ಸಿದ್ಧಪಡಿಸಿದ ಆಹಾರ ಉತ್ತಮ.
5. ಅಕ್ಕಿಹಿಟ್ಟು, ಗೋಧಿ ಹಿಟ್ಟು ಬಾರ್ಲಿ ಹಿಟ್ಟು ಇತ್ಯಾದಿಗಳಿಂದ ರೊಟ್ಟಿ ದೋಸೆ ಇತರೇ ಖಾದ್ಯ ಪದಾರ್ಥಗಳನ್ನು ತಯಾರಿಸಿ ಸೇವಿಸುವುದು ಹಿತಕರ.
6. ಹೆಸರು ಬೇಳೆಯಿಂದ ತಯಾರಿಸಿದ ತೊವ್ವೆ ಮತ್ತು ಹೆಸರು ಬೇಳೆಯಿಂದ ತಯಾರಿಸಿದ ದೋಸೆ, ಹಲ್ವಾಗಳೂ ಕೂಡ ಈ ಋತುವಿನಲ್ಲಿ ಹಿತಕರ.
7. ಪಡುವಲಕಾಯಿ, ಹಾಗಲಕಾಯಿ, ಹೀರೇಕಾಯಿ, ಸೌತಗೆಕಾಯಿ, ಕಂಬಳಕಾಯಿ, ಸೀಮೆ ಬದನೆಕಾಯಿ, ತೊಂಡೆಕಾಯಿ ಇತ್ಯಾದಿ ತರಕಾರಿಗಳ ಬಳಕೆ ಈ ಋತುವಿನಲ್ಲಿ ಹಿತಕರ.
8. ಮೊಸರು ಹಾಗೂ ಮೊಸರಿನಿಂದ ತಯಾರಿಸಿದ ಪದಾರ್ಥಗಳ ಸೇವನೆ ಈ ಋತುವಿನಲ್ಲಿ ಅಹಿತಕರ.
9. ಲಾವಂಚವನ್ನು ಕುದಿಯುವ ನೀರಿಗೆ ಸೇರಿಸಿ ತಣ್ಣಗಾದ ನೀರನ್ನು ಕುಡಿಯುವುದು ಉತ್ತಮ.

ವಿಹಾರ: 1. ಇಬ್ಬನಿಯಲ್ಲಿ ಓಡಾಡುವುದು, ಗಾಳಿ ಬೀಸುತ್ತಿರುವಾಗ ಓಡಾಡುವುದು, ಹಗಲುನಿದ್ದೆ, ಅತಿಯಾದ ವ್ಯಾಯಾಮ ಈ ಋತುವಿನಲ್ಲಿ ನಿಷಿದ್ಧ.
2. ತಜ್ಞ ವೈದ್ಯರ ಸಲಹೆಯ ಮೇರೆಗೆ ಹಾಗೂ ಅವರ ನೇರ ನಿಗಾವಣೆಯಲ್ಲಿ ಪಂಚಕರ್ಮ ಚಿಕಿತ್ಸೆಗಳದ ವರೇಚನ ಹಾಗು ರಕ್ತಮೋಕ್ಷಣ ಚಿಕಿತ್ಸೆಯನ್ನು ಮಾಡಿಸಿಕೊಳ್ಳಬಹುದು.
3. ಕರ್ಪೂರ, ಚಂದನ ಲಾವಂಚ ಇತ್ಯಾದಿಗಳನ್ನು ಸ್ನಾನದ ನಂತರ ಮೈಗೆ ಲೇಪಸಿಕೊಳ್ಳಬಹುದು.
4. ಮುತ್ತಿನ ಹಾರವನ್ನು ಧರಿಸುವುದೂ ಕೂಡ ಈ ಋತುವಿನಲ್ಲಿ ಹಿತಕರ.

ಡಾ. ನಾಗಶ್ರೀ. ಕೆ.ಎಸ್.

About The Author

News, activities, lifestyle, business, culture and amazing people. Sidlaghatta, everything about a small town with a huge presence.

Related posts

Leave a Reply

Your email address will not be published. Required fields are marked *

Time limit is exhausted. Please reload the CAPTCHA.