January 21, 2018

Breaking News

ಕೊಡಮೆಯಲ್ಲಿ ಬಿದ್ದ ಮೀನು ಬಲು ರುಚಿ

‘ಕೊಡಮೆಯಲ್ಲಿ ಬಿದ್ದ ಮೀನು ಬಲು ರುಚಿ’ ಎಂಬ ಮಾತು ಗ್ರಾಮೀಣರಲ್ಲಿ ಜನಜನಿತ. ಈ ಮಾತಿಗೆ ನಿದರ್ಶನದಂತೆ ಈಚೆಗೆ ಬಿದ್ದ ಮಳೆಗೆ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿನ ಕುಂಟೆಯ ಬಳಿ ಗ್ರಾಮದ ಯುವಜನರು ನೆರೆದಿದ್ದರು. ಕುಂಟೆಗೆ ಹರಿದು ಬರುವ ಸಿಹಿನೀರಿನ ಕಾಲುವೆಗೆ ಅಡ್ಡಲಾಗಿ ಕೊಡಮೆ ಹಾಕಿ ಮೀನುಗಳನ್ನು ಹಿಡಿದಿಡಿದು ತುಂಬಿಕೊಳ್ಳುತ್ತಿದ್ದರು.

4oct2ಕೊಡಮೆ, ಬಯಲು ಸೀಮೆಯ ಮೀನು ಬೇಟೆಯ ಪ್ರಧಾನ ಸಾಧನ. ಕೆರೆ ಕೋಡಿ ಅಥವಾ ಕುಂಟೆಗಳ ಕೋಡಿ ಬಿದ್ದಾಗ ಈ ಕೊಡಮೆಗಳನ್ನು ಹಾಕುತ್ತಾರೆ. ಕೆರೆಗೆ ನೀರು ಬರುವ ಹೊಳೆ ಅಥವಾ ಹಳ್ಳಗಳಿಂದ ಹೊಸ ನೀರು ಕೆರೆಗೆ ಬಂದು ತಕ್ಷಣ, ಕೆರೆಯಲ್ಲಿರುವ ಮೀನುಗಳಿಗೆ ಪುಳಕವುಂಟಾಗಿ, ಹರೆಯದ ಹೆಣ್ಣು ಗಂಡು ಅಪಾಯ ಲೆಕ್ಕಸದೆ ಮುನ್ನುಗ್ಗುವಂತೆ, ಹೊಸ ನೀರಿನ ಎದುರು ಈಜುತ್ತಾ ಹೋಗುತ್ತವೆ. ಇವುಗಳಿಗೆ ‘ಹತ್ತು ಮೀನು’ ಎನ್ನುತ್ತಾರೆ. ಹೊಸ ನೀರಿನ ಗಾತ್ರ ಕಡಮೆಯಾಗಿಯೋ ಅಥವಾ ತವರು ಮನೆ ಬಿಟ್ಟು ಬಂದು ತಪ್ಪು ಮಾಡಿದೆವು ಎಂಬ ಭಯದಿಂದಲೋ ಅವು ಮತ್ತೆ ಕೆರೆಯತ್ತ ಬರತೊಡಗುತ್ತವೆ ಅವುಗಳಿಗೆ ‘ಇಳಿಮೀನು’ ಎನ್ನುತ್ತಾರೆ. ಆಗ ರೈತರು ನೀರು ಹರಿದು ಬರುವ ಹಳ್ಳಕ್ಕೆ ಅಡ್ಡಗಟ್ಟೆ ಹಾಕಿ ಮಧ್ಯೆ ಕೊಡಮೆಯನ್ನು ನೆಟ್ಟು, ನೀರೆಲ್ಲ ಕೊಡಮೆಯ ಮೂಲಕ ಹಾದು ಹೋಗುವಂತೆ ಮಾಡುವುದರಿಂದ, ನೀರು ಕೊಡಮೆಯಿಂದ ಹಾದು ಹೋದಾಗ ಮೀನುಗಳು ಕೊಡಮೆಯಲ್ಲಿ ಬಂಧಿತವಾಗುತ್ತವೆ. ಹರಿಯುವ ನೀರನ್ನರಸಿ ಮೀನು ಬಂದಾಗ ಬೇಟೆಯಾಗುವೆನೆಂಬ ಪ್ರಜ್ಞೆ ಇಲ್ಲದೆ, ಕೊಡಮೆಯನ್ನು ಪ್ರವೇಶಿಸಿ ಕೊಡಮೆಯ ಬಂಧೀಖಾನೆ(ಚಿಕ್ಕ ಚೇಂಬರ್)ಗೆ ಬಿದ್ದು ಸೆರೆಯಾಗುತ್ತದೆ.

ಕೊಡಮೆಗಳನ್ನು ಮೀನು ಹಿಡಿಯುವ ಕಾಯಷುದಾರರು ತಮ್ಮ ಬಿಡುವಿನ ವೇಳೆಯಲ್ಲಿ ಬಿದುರು ಮತ್ತು ಮೇಣ ಮೆತ್ತಿದ ಚಕ್ಕೆದಾರ ಬಳಸಿ ಕೊಡಮೆಗಳನ್ನು ತಯಾರಿಸಿಕೊಳ್ಳುತ್ತಾರೆ.

ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯಲ್ಲಿ ಮೀನು ಹಿಡಿಯುವುದು ಪ್ರಾರಂಭವಾಗುವುದು ಚೆನ್ನಾಗಿ ಮುಂಗಾರು ಮಳೆಯಾಗಿ ಕೆರೆಗಳಿಗೆ ನೀರು ಹರಿದು ಬರುವಾಗ, ಇಲ್ಲವೇ ಬೇಸಿಗೆಯಲ್ಲಿ ಕೆರೆಯ ನೀರು ಕಡಿಮೆಯಾಗಿ ಟಾಕುಗಳಲ್ಲಿ (ಚೌಕಾಕಾರದ ಮಡಿ) ತಪ್ಪಿಸಿಕೊಂಡ ಮೀನುಗಳನ್ನು ಹಿಡಿಯಲೂ ಕೊಡಮೆ ಬಳಸುತ್ತಾರೆ. ಈ ಕ್ರಿಯೆಯನ್ನು ಕೊಡಮೆ ಹಾಕುವುದು, ಕೊಡಮೆ ಇಕ್ಕುವುದು ಎನ್ನುತ್ತಾರೆ. ಕೊಡಮೆ ಕಟ್ಟುವುದು ಒಂದು ಕುಶಲತೆಯಿಂದ ಕೂಡಿದ ಕೆಲಸ. ಬಹುಶಃ ಇದು ಮೀನು ಹಿಡಿಯುವ ಸಾಧನಗಳಲ್ಲಿಯೇ ಅತ್ಯಂತ ಸುಂದರವಾದುದು.

4oct3‘ಮೀನುಗಾರರಿಗೆ ಮೀನಿನ ಚಲನೆ ಮತ್ತು ಕೊಡಮೆಯಲ್ಲಿ ತುಂಬಿಕೊಳ್ಳುವ ಸಮಯ ಗೊತ್ತಿರುವುದರಿಂದ ಆ ವೇಳೆಗೆ ಸರಿಯಾಗಿ ಹೋಗಿ ಕೊಡಮೆಯನ್ನೆತ್ತಿ ಮೀನುಗಳನ್ನು ತೆಗೆದುಕೊಳ್ಳುತ್ತಾರೆ. ಬಲೆಯಲ್ಲಿ ಮೀನು ಹಿಡಿಯುವುದು ಕೆರೆ ಕುಂಟೆಗಳಲ್ಲೇ ಇದ್ದು ಮಾಡಬೇಕಾದ ಕೆಲಸವಾದರೆ, ಕೊಡಮೆಯನ್ನಾದರೆ ಹಾಕಿ ಬೇರೊಂದು ಕೆಲಸಕ್ಕೆ ಹೋಗಬಹುದಾಗಿದೆ. ಬಲೆಯಲ್ಲಿ ಮೀನುಗಳು ತಪ್ಪಿಸಿಕೊಳ್ಳಬಹುದು, ಆದರೆ ಕೊಡಮೆಗೆ ಬಿದ್ದ ಮೀನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದರೊಳಗಿನ ನೀರನ್ನು ಯಾವ ಹಕ್ಕಿಪಕ್ಷಿಗಳೂ ಲಪಟಾಯಿಸಲಾರದು. ಮೀನುಗಳ್ಳರು ಅಷ್ಟು ಬೇಗನೆ ಕದಿಯಲಾಗದಿದ್ದರೂ ಕೆಲವು ಚತುರರು ತಮ್ಮ ಕೈಚಳಕವನ್ನು ತೋರಿಸಿ ಮೀನು ಕದ್ದು ಕೊಡಮೆ ಹಾಕಿದವರ ಹಿಡಿಹಿಡಿಶಾಪಕ್ಕೆ ಗುರಿಯಾಗುತ್ತಾರೆ.

ಕೊಡಮೆಯಲ್ಲಿ ಇಂದಿನ ಕ್ಯಾಟ್ಲಾಕ್ ನಂತಹ ಮೀನನ್ನು ಹಿಡಿಯಲಾಗುವುದಿಲ್ಲ. ಅತ್ಯಂತ ರುಚಿಕರವಾದ ಪಕ್ಕೆಗಳು, ಗಿರ್ಲು, ಕೊರದನ, ಉಣಿಸೆ ಮುಂತಾದ ಸ್ಥಳೀಯ ಮೀನಿನ ಪ್ರಬೇಧಗಳನ್ನಷ್ಟೆ ಬೇಟೆಯಾಡಬಹುದು. ಹೀಗೆ ಕೊಡಮೆಯಲ್ಲಿ ಹಿಡಿದ ಗಿರ್ಲು, ಕೊರದನ, ಉಣಿಸೆ ಮೀನುಗಳಿಗೆ ಹೆಚ್ಚು ಬೇಡಿಕೆಯೂ ಇದೆ. ಅದರಲ್ಲೂ ಉಣಿಸೆ ಮೀನುಗಳೆಂದರೆ ಸಸ್ಯಾಹಾರಿಗಳಿಗೆ ಹುರುಳಿ ಎಷ್ಟು ಪ್ರಿಯವೋ ಬಯಲು ಸೀಮೆಯ ಮೀನು ಪ್ರಿಯರಿಗೆ ಉಣಿಸೆ ಮೀನುಗಳು ಅಷ್ಟೊಂದು ಪ್ರಿಯ. ಆದರೆ ಕೆರೆ ಹೂಳೆತ್ತುವ ಯೋಜನೆಯಲ್ಲಿ ಮತ್ತು ಅನಾವೃಷ್ಠಿಯ ಕಾರಣದಿಂದ ಕೆರೆಗಳಿಗೆ ನೀರಿಲ್ಲದೆ ಈ ಸಾಂಪ್ರದಾಯಿಕ ಜಾನಪದ ರುಚಿಯುಳ್ಳ ಮೀನುಗಳನ್ನು ಅವುಗಳ ವಂಶವನ್ನು ಕಳೆದುಕೊಳ್ಳುತ್ತಿದ್ದೇವೆ. ಇವುಗಳನ್ನು ಮೀನುಗಾರಿಕೆ ಇಲಾಖೆ ಪ್ರತ್ಯೇಕ ಸಾಕಣೆ ಪದ್ಧತಿಯ ಮೂಲಕ ಉಳಿಸಿಕೊಳ್ಳಬೇಕಿದೆ’ ಎನ್ನುತ್ತಾರೆ ಅಪ್ಪೇಗೌಡನಹಳ್ಳಿಯ ಎ.ಎಂ.ತ್ಯಾಗರಾಜ್.

–ಡಿ.ಜಿ.ಮಲ್ಲಿಕಾರ್ಜುನ

About The Author

News, activities, lifestyle, business, culture and amazing people. Sidlaghatta, everything about a small town with a huge presence.

Related posts

Leave a Reply

Your email address will not be published. Required fields are marked *

Time limit is exhausted. Please reload the CAPTCHA.