February 26, 2018

Breaking News

ಬರಹ ಚುಟುಕಾಗಿರಲಿ, ಮನಸ್ಸನ್ನು ಕುಟುಕುವಂತಿರಲಿ

ಬರಹವು ಸರಳ ಭಾಷೆಯಲ್ಲಿರಬೇಕು, ಚುಟುಕಾಗಿರಬೇಕು, ಜನರ ಮನಸ್ಸನ್ನು ಕುಟುಕುವಂತೆ ಚಿಂತನೆಗೆ ಹಚ್ಚವಂತಿರಬೇಕು ಎಂದು ಸಾಹಿತಿ ಕೆ.ಬಾಲಾಜಿ ತಿಳಿಸಿದರು.

ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ಕನ್ನಡ ಸಾರಸ್ವತ ಪರಿಚಾರಿಕೆ ಮತ್ತು ಕೇಂದ್ರ ಗ್ರಂಥಾಲಯದ ಸಹಯೋಗದೊಂದಿಗೆ ನಡೆದ ‘ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ’ 8 ನೇ ತಿಂಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮನುಷ್ಯತ್ವವು ಬೆಳಗುವುದು ನಾವು ಭಾವನಾತ್ಮಕವಾಗಿ ನಮ್ಮ ಸಮಾಜಕ್ಕೆ ಸ್ಪಂದಿಸಿದಾಗ ಮಾತ್ರ. ಪ್ರತಿಯೊಂದು ಜೀವಿಯೆಡೆಗೂ ಭಾವನಾತ್ಮಕ ಬೆಸುಗೆಯನ್ನು ಹೊಂದಿದಾಗ, ಸಾಹಿತ್ಯದ ಹಿನ್ನೆಲೆಯ ಸಹಾಯದಿಂದ ಮನದಾಳದ ಚಿಂತನೆಗಳು ಪದಗಳಾಗಿ ಮೂಡುತ್ತವೆ. ಓದುವುದು ನಮ್ಮ ಹವ್ಯಾಸವಾಗಬೇಕು. ನಮ್ಮ ಅನುಭವಕ್ಕೆ ದಕ್ಕಿದ್ದು ಸಾಹಿತ್ಯವಾದಾಗ ಮೌಲಿಕವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಸಾಹಿತಿ ಕೆ.ಬಾಲಾಜಿ, ತಾವು ರಚಿಸಿರುವ ಕೃತಿಗಳಾದ ‘ಅಪ್ಪನಿಂದ ಕಲಿತ ಪಾಠಗಳು’, ‘ದಾರಿ ದೀಪ’ ಮತ್ತು ‘ಅನ್ನದಾತನ ಆಕ್ರಂದನ’ ಬಗ್ಗೆ ಮಾತನಾಡಿ, ಪುಸ್ತಕ ಬರೆಯಲು ಪ್ರೇರಣೆ, ರೂಪುಗೊಂಡ ಬಗೆಯನ್ನು ವಿವರಿಸಿದರು.

ಪರಿಸರದ ಮೇಲೆ ವಿಶೇಷ ಕಾಳಜಿ ಹೊಂದಿದ್ದು, ಮಣ್ಣಿನ ಸಂಬಂಧ ಹೊಂದಿದ್ದ ಕಾರಣ ರೈತನಿಗಾಗಿ ಸಮಾಜಕ್ಕೆ ಕೇಳಿರುವ ಹಲವು ಪ್ರಶ್ನೆಗಳು ‘ಅನ್ನದಾತನ ಆಕ್ರಂದನ’ ಕವನ ಸಂಕಲನವಾಗಿದೆ. ಅತ್ಯಂತ ಕಷ್ಟದಿಂದ ಬೆಳೆದು ಬಂದ ನನ್ನ ಅಪ್ಪನಿಂದ ಕಲಿತ ಜೀವನದ ಪಾಠಗಳು ‘ಅಪ್ಪನಿಂದ ಕಲಿತ ಪಾಠಗಳು’ ಕಥಾಸಂಕಲನವಾಗಿದೆ. ‘ದಾರಿ ದೀಪ’ವು 40 ಕವನಗಳ ಸಂಕಲನವಾಗಿದೆ ಎಂದು ನುಡಿದರು.

ಕನ್ನಡ ಸಾಹಿತ್ಯದಲ್ಲಿ ಕೃಷಿ ಮಾಡುತ್ತಿರುವ ಜಿಲ್ಲೆಯ ಹೊಸ ಪ್ರತಿಭೆಗಳನ್ನು ಓದುಗರಿಗೆ ಪರಿಚಯಿಸುವ ವಿನೂತನ ಕಾರ್ಯಕ್ರಮಗಳ ಮೂಲಕ ಕನ್ನಡ ಸಾರಸ್ವತ ಪರಿಚಾರಿಕೆ ಕನ್ನಡ ಸೇವೆ ಮಾಡುತ್ತಿರುವುದು ಇತರರಿಗೆ ಪ್ರೇರಣೆಯಾಗಿದೆ ಎಂದರು.

ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಚಿಂತಾಮಣಿ ತಾಲ್ಲೂಕಿನ ಕೆ.ಬಾಲಾಜಿ ವೃತ್ತಿಯಲ್ಲಿ ಶಿಕ್ಷಕ ಹಾಗೂ ಪ್ರವೃತ್ತಿಯಲ್ಲಿ ಕವಿ, ಸಾಹಿತಿಯಾಗಿ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ದಿನಪತ್ರಿಕೆಗಳಲ್ಲಿ ಲೇಖನ ಬರೆಯುವುದರ ಜೊತೆಗೆ ತಾಲ್ಲೂಕು, ಜಿಲ್ಲಾ, ಹಾಗೂ ರಾಜ್ಯ ಮಟ್ಟದ ಕವನ ಸ್ಪರ್ಧೆ, ಪ್ರಬಂಧ ಸ್ಪರ್ಧೆಯಲ್ಲಿ ಮತ್ತು ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಕವನ ವಾಚನ ಮಾಡಿದ್ದಾರೆ. ಇವರಿಗೆ ಮಂಡ್ಯದ ಕನ್ನಂಬಾಡಿ ದಿನಪತ್ರಿಕೆಯವರು ರಾಜ್ಯ ಮಟ್ಟದ ‘ಕಾವ್ಯ ಶ್ರೀ’ ಪ್ರಶಸ್ತಿ ನೀಡಿದ್ದಾರೆ ಎಂದು ಪರಿಚಯ ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಸಾಹಿತಿ ಕೆ.ಬಾಲಾಜಿ, ತಾವು ರಚಿಸಿರುವ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.

ನಿವೃತ್ತ ಶಿಕ್ಷಕ ಸುಂದರನ್, ಗ್ರಂಥಪಾಲಕ ಶ್ರೀನಿವಾಸ್, ಸತೀಶ್, ನೃತ್ಯ ಕಲಾವಿದ ಸಿ.ಎನ್. ಮುನಿರಾಜು, ಅಜಿತ್ ಕೌಂಡಿನ್ಯ, ಕರವೇ ದೇವನಹಳ್ಳಿ ತಾಲ್ಲೂಕು ಅಧ್ಯಕ್ಷ ರಾಮಮೂರ್ತಿ ಉದಯ್, ಚಿತ್ರ ನಿರ್ದೇಶಕ ಮೇಲೂರು ರಂಗ, ಬಾಂಧವ್ಯ, ಕಲಾವಿದೆ ಗಂಭೀರನಹಳ್ಳಿ ರೇಣುಕ, ಚೇತನ್ ಗೌಡ, ನಟ ನಾಗೇಂದ್ರಬಾಬು, ರಾಹುಲ್, ನೃತ್ಯ ನಿರ್ದೇಶಕ ಬಶೆಟ್ಟಹಳ್ಳಿ ದೇವು, ವೃಷಭೇಂದ್ರಪ್ಪ ಹಾಜರಿದ್ದರು.

About The Author

News, activities, lifestyle, business, culture and amazing people. Sidlaghatta, everything about a small town with a huge presence.

Related posts

Leave a Reply

Your email address will not be published. Required fields are marked *

Time limit is exhausted. Please reload the CAPTCHA.