February 26, 2018

Breaking News

ಬಾಲಕನನ್ನು ರಕ್ಷಿಸಿದ್ದ ಬಾಲೆಯರಿಗೆ ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿ

ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರಾದ ಎಚ್.ಕೆ.ದೀಕ್ಷಿತಾ ಮತ್ತು ಎಚ್.ಕೆ.ಅಂಬಿಕಾ ಅವರು ಈ ಬಾರಿಯ ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ದೀಕ್ಷಿತಾ ಆರನೇ ತರಗತಿಯಲ್ಲಿ ಮತ್ತು ಅಂಬಿಕಾ ಏಳನೆಯ ತರಗತಿಯಲ್ಲಿ ಓದುತ್ತಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ರಂಜಾನ್ ಹಬ್ಬದ ರಜಾ ದಿನದಂದು ತಾಲ್ಲೂಕಿನ ಹನುಮಂತಪುರ ಗ್ರಾಮದಲ್ಲಿ ಗೋಬರ್ ಗ್ಯಾಸ್ನ ಸ್ಲರ್ರಿಗೆ ಬಿದ್ದು ಪ್ರಾಣಾಪಾಯದಲ್ಲಿದ್ದ ಮನೋಜ ಎಂಬ ಬಾಲಕನನ್ನು ಈ ಇಬ್ಬರು ಬಾಲಕಿಯರು ರಕ್ಷಿಸಿದ್ದರು. ಈ ಬಗ್ಗೆ ಜುಲೈ 4 ರಂದು ‘ಪ್ರಜಾವಾಣಿ’ಯಲ್ಲಿ ‘ಬಾಲಕನನ್ನು ರಕ್ಷಿಸಿದ ಬಾಲೆಯರು’ ಎಂದು ವರದಿ ಪ್ರಕಟವಾಗಿತ್ತು.

ನವೆಂಬರ್ 14 ರಂದು ಬೆಂಗಳೂರಿನ ಕಬ್ಬನ್ ಉದ್ಯಾನವನದ ಜವಾಹರ ಬಾಲ ಭವನದಲ್ಲಿ ನಡೆಯುವ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯಪಾಲರಿಂದ ಈ ಮಕ್ಕಳು ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿಯನ್ನು ಹಾಗೂ 10 ಸಾವಿರ ರೂ ನಗದು ಬಹುಮಾನವನ್ನು ಸ್ವೀಕರಿಸಲಿದ್ದಾರೆ.

ಶಾಲೆಗೆ ರಜೆ ಇದ್ದ ಕಾರಣ ಮನೋಜ ಆಟವಾಡುತ್ತಾ ಗೋಬರ್ ಗ್ಯಾಸ್ ಸ್ಲರ್ರಿಯ ಬಳಿ ಚಿಟ್ಟೆ ಹಿಡಿಯಲು ಹೋಗಿ ಕಾಲು ಜಾರಿ ಮುಗ್ಗರಿಸಿ ಬಿದ್ದಿದ್ದಾನೆ. ಅದೇ ಸಮಯದಲ್ಲಿ ಹತ್ತಿರದಲ್ಲೇ ಆಟವಾಡುತ್ತಿದ್ದ ದೀಕ್ಷಿತಾ ಮತ್ತು ಅಂಬಿಕಾ ಮನೋಜ ಬಿದ್ದದ್ದನ್ನು ಕಂಡಿದ್ದಾರೆ. ಅವರು ಹತ್ತಿರ ಹೋಗುವಷ್ಟರಲ್ಲಿ ಬೋರಲಾಗಿ ಬಿದ್ದು ಸಗಣಿಯ ಕೆಸರಿನಲ್ಲಿ ಮುಳುಗಿದ್ದ ಮನೋಜನ ಒಂದು ಕಾಲು ಮಾತ್ರ ಮೇಲೆ ಕಂಡಿದೆ. ಇಬ್ಬರು ಹುಡುಗಿಯರೂ ಬಲವಾಗಿ ಕಾಲನ್ನು ಹಿಡಿದು ಮನೋಜನನ್ನು ಹೊರಕ್ಕೆ ಎಳೆದು ಹಾಕಿ ಅವನನ್ನು ರಕ್ಷಿಸಿದ್ದರು. ಈ ಮೂವರೂ ಮಕ್ಕಳು ಹನುಮಂತಪುರ ವಾಸಿಗಳಾದರೂ ಓದುತ್ತಿರುವುದು ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ.

ವಿಷಯ ತಿಳಿದ ನಂತರ ಶಿಕ್ಷಕರು ಈ ಇಬ್ಬರು ಹೆಣ್ಣುಮಕ್ಕಳ ಸಮಸ್ಫೂರ್ತಿ ಮತ್ತು ಧೈರ್ಯ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಶೌರ್ಯ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಹಾಗೂ ಪರಿವೀಕ್ಷಣಾ ಅಧಿಕಾರಿ ರಾಮೇಗೌಡರ ನೆರವಿನಿಂದ ಅಗತ್ಯ ದಾಖಲಾತಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಉಪನಿರ್ದೇಶಕರ ಅನುಮೋದನೆಯೊಂದಿಗೆ ಮಕ್ಕಳ ರಕ್ಷಣಾ ಇಲಾಖೆಗೆ ನೀಡಿದ್ದಾರೆ.

‘ನಮ್ಮ ಶಾಲೆಯ ಹೆಣ್ಣು ಮಕ್ಕಳಿಗೆ ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿ ಬಂದಿರುವುದು ನಮಗೆಲ್ಲಾ ಹೆಮ್ಮೆ ತಂದಿದೆ. ಇದು ಸರ್ಕಾರಿ ಶಾಲೆಯ ಮಕ್ಕಳಿಗೆ ಧೈರ್ಯ, ಸ್ಫೂರ್ತಿ, ಉತ್ಸಾಹ, ಪ್ರೋತ್ಸಾಹ ನೀಡಲಿದೆ. ಮಕ್ಕಳ ಭವಿಷ್ಯಕ್ಕೆ ಈ ಪ್ರಶಸ್ತಿ ನಬೆರವಾಗಲಿದೆ’ ಎಂದು ಶಿಕ್ಷಕರು ತಿಳಿಸಿದರು.

‘‘ನಮಗೆ ಖುಷಿಯಾಗಿದೆ. ಆ ದಿನ ಗೋಬರ್ ಗ್ಯಾಸ್ ಸ್ಲರ್ರಿಯಲ್ಲಿ ಮನೋಜನ ಒಂದು ಕಾಲನ್ನು ಕಂಡು, ಅದನ್ನು ಹಿಡಿದು ಇಬ್ಬರೂ ಎಳೆದೆವು. ಅವನ ಮೈಯೆಲ್ಲಾ ಸಗಣಿಯಾಗಿತ್ತು. ಅದನ್ನು ಶಿಕ್ಷಕರಿಗೆ ತಡವಾಗಿ ತಿಳಿಸಿದೆವು. ಅವರು ಮೆಚ್ಚಿ ನಮ್ಮೆಲ್ಲಾ ದಾಖಲಾತಿಗಳನ್ನು ಪಡೆದು ಇಲಾಖೆಗೆ, ಪತ್ರಿಕೆಗೆ ತಿಳಿಸಿ ಪ್ರಶಸ್ತಿ ಕೊಡಿಸಿದ್ದಾರೆ. ಅವರಿಗೆ ಕೃತಜ್ಞತೆಗಳು’ ಎನ್ನುತ್ತಾರೆ ಎಚ್.ಕೆ.ದೀಕ್ಷಿತಾ ಮತ್ತು ಎಚ್.ಕೆ.ಅಂಬಿಕಾ.

About The Author

News, activities, lifestyle, business, culture and amazing people. Sidlaghatta, everything about a small town with a huge presence.

Related posts

Leave a Reply

Your email address will not be published. Required fields are marked *

Time limit is exhausted. Please reload the CAPTCHA.