January 17, 2018

Breaking News

ಸಾಲ ವಿತರಣೆ ಚೆಕ್ ಗಳ ವಿತರಣೆ

ರೈತರು, ಸಹಕಾರಿ ಬ್ಯಾಂಕುಗಳಲ್ಲಿ ಪಡೆಯುವಂತಹ ಸಾಲಗಳನ್ನು ನಿಗದಿತ ಸಮಯದಲ್ಲಿ ಮರುಫಾವತಿ ಮಾಡುವ ಮೂಲಕ ಬ್ಯಾಂಕುಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಡಿ.ಸಿ.ಸಿ.ಬ್ಯಾಂಕ್ ಜಿಲ್ಲಾ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಹೇಳಿದರು.

ನಗರದ ರೇಷ್ಮೆ ಬೆಳೆಗಾರರು ಸೇವಾ ಸಹಕಾರಿ ಬ್ಯಾಂಕಿನ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಕೆ.ಸಿ.ಸಿ.ಸಾಲ ವಿತರಣೆ, ಹಾಗೂ ಮಹಿಳಾ ಸಂಘಗಳಿಗೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಿವಾಳಿಯಾಗಿದ್ದ ಸಂಘಗಳಿಗೆ ಮರುಜೀವ ನೀಡಿ, ರೈತರು ಹಾಗೂ ಮಹಿಳಾ ಸಂಘಗಳಿಗೆ ಅನುಕೂಲ ಕಲ್ಪಿಸಲು ಕೋಟ್ಯಾಂತರ ರೂಪಾಯಿಗಳ ಸಾಲವನ್ನು ವಿತರಣೆ ಮಾಡಲಾಗುತ್ತಿದೆ. ಈ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ರೈತರಿಗೆ 4.5 ಕೋಟಿ ಕೆ.ಸಿ.ಸಿ.ಸಾಲ ವಿತರಣೆ ಮಾಡಲಾಗುತ್ತಿದೆ. ಮಹಿಳಾ ಸಂಘಗಳು ಸೇರಿದಂತೆ ಎಲ್ಲರೂ ನಿಗದಿತ ಸಮಯದಲ್ಲಿ ಸಾಲದ ಹಣವನ್ನು ಮರುಪಾವತಿ ಮಾಡಬೇಕು. ಬ್ಯಾಂಕಿನ ಸಿಬ್ಬಂದಿಯು ಸಾಲಕ್ಕಾಗಿ ಅರ್ಜಿ ಸಲ್ಲಿಸಿರುವ ಎಲ್ಲಾ ರೈತರಿಗೂ ರಾಜಕೀಯ ರಹಿತವಾಗಿ ಸಾಲ ವಿತರಣೆ ಮಾಡಬೇಕು ಎಂದರು.

ಕಾಂಗ್ರೆಸ್ ನಾಯಕ ವಿ.ಮುನಿಯಪ್ಪ ಮಾತನಾಡಿ, ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಸಾಲಗಳನ್ನು ಈಗಿನ ಸಿದ್ದರಾಮಯ್ಯ ಸರ್ಕಾರ ₨ 50 ಸಾವಿರದ ವರೆಗೂ ಮನ್ನಾ ಮಾಡಿದೆ. ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ರಾಷ್ಟ್ರೀಕೃತ ಬ್ಯಾಂಕುಗಳು ಸೇರಿ ಸುಮಾರು 70 ಸಾವಿರ ಕೋಟಿ ರೂಪಾಯಿಗಳ ಸಾಲ ಮನ್ನಾ ಮಾಡಿದ್ದರ ಪರಿಣಾಮ ದಿವಾಳಿಯಾಗಿದ್ದ ಸಹಕಾರಿ ಬ್ಯಾಂಕುಗಳು ಚೇತರಿಸಿಕೊಂಡು ಕೋಟ್ಯಾಂತರ ರೂಪಾಯಿಗಳ ವಹಿವಾಟು ನಡೆಸುವಂತಾಗಿದ್ದು, ಇಂತಹ ಬ್ಯಾಂಕುಗಳನ್ನು ಉಳಿಸುವಂತಹ ಪ್ರಯತ್ನ ರೈತರು ಮಾಡಬೇಕು ಎಂದರು.

ಡಿ.ಸಿ.ಸಿ.ಬ್ಯಾಂಕ್ ಜಿಲ್ಲಾ ಉಪಾಧ್ಯಕ್ಷ ನಾಗರಾಜು ಮಾತನಾಡಿ, ರೈತರು, ಮಹಿಳೆಯರು ತಾವು ಪಡೆದುಕೊಂಡ ಸಾಲಗಳನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡಿ, ಇತರರಿಗೂ ಅನುಕೂಲ ಮಾಡಿಕೊಡಬೇಕು. ರಾಷ್ಟ್ರೀಕೃತ ಬ್ಯಾಂಕುಗಳ ಬದಲಾಗಿ, ಸಹಕಾರಿ ಬ್ಯಾಂಕುಗಳಲ್ಲೆ ಖಾತೆಗಳನ್ನು ತೆರದು ಠೇವಣಿ ಇಟ್ಟು ವ್ಯವಹರಿಸಿ, ಇಲ್ಲಿನ ಸಿಬ್ಬಂದಿ ರಾಷ್ಟ್ರೀಕೃತ ಬ್ಯಾಂಕುಗಳ ಮಾದರಿಯಲ್ಲಿ ಮಾಹಿತಿಗಳನ್ನು ಒದಗಿಸಬೇಕು ಎಂದರು.

ಕೆ.ಸಿ.ಸಿ.ಸಾಲ ವಿತರಣಾ ಕಾರ್ಯಕ್ರಮಕ್ಕೆ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಪಿ.ವಿ.ನಾಗರಾಜ್ ಅವರನ್ನು ಆಹ್ವಾನಿಸದೆ, ಕೇವಲ ಒಂದು ರಾಜಕೀಯ ಪಕ್ಷದ ಕಾರ್ಯಕ್ರಮದಂತೆ ಬಿಂಬಿಸಲಾಗಿದೆ. ಇಲ್ಲಿನ ಸಿಬ್ಬಂದಿಯು ಹಾಗೇ ನಡೆದುಕೊಳ್ಳುತ್ತಿದ್ದೀರಿ, ಜಿಲ್ಲಾ ಬ್ಯಾಂಕಿನಲ್ಲಿ ಎಲ್ಲಾ ಪಕ್ಷಗಳ ಸದಸ್ಯರುಗಳಿದ್ದರು ರಾಜಕೀಯಕ್ಕೆ ಅವಕಾಶವಿಲ್ಲದೆ ಎಲ್ಲಾ ತಾಲ್ಲೂಕುಗಳಿಗೆ ಸಮಾನವಾಗಿ ಸಾಲಸೌಲಭ್ಯಗಳನ್ನು ವಿತರಣೆ ಮಾಡಲಾಗುತ್ತಿದೆ. 4.5 ಕೋಟಿ ರೂಪಾಯಿಗಳ ಕೆ.ಸಿ.ಸಿ.ಸಾಲ ವಿತರಣೆ ಮಾಡುತ್ತಿದೆ ಬೆರಳೆಣಿಕೆಯಷ್ಟು ರೈತರು ಮಾತ್ರವೇ ಇಲ್ಲಿಗೆ ಬಂದಿದ್ದಾರೆ ಎಂದು ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಪಿ.ಶಿವಾರೆಡ್ಡಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಂತೆ, ಉತ್ತರ ನೀಡಲು ಮುಂದಾದ ಮಾಜಿ ಅಧ್ಯಕ್ಷ ರಾಮಚಂದ್ರ ಅವರ ಬೆನ್ನಲ್ಲೆ ವೇದಿಕೆಯ ಮೇಲಿದ್ದ ಕೆಲವು ಮಂದಿ ಕಾಂಗ್ರೆಸ್ ಮುಖಂಡರು, ಹಾಗೂ ವೇದಿಕೆಯ ಮುಂಭಾಗದಲ್ಲಿ ಕೆಲ ಮುಖಂಡರು ನಿರ್ದೇಶಕರ ವಿರುದ್ಧ ತಿರುಗಿ ಬಿದ್ದರು. ನಾವೇನು ಬ್ಯಾಂಕಿನ ಹಣ ಲೂಟಿ ಹೊಡೆಯುತ್ತಿಲ್ಲ, ರಾಜಕೀಯ ಲಾಭಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲವೆಂದು ಕೆಲಕಾಲ ಮಾತಿನ ಚಕಮಕಿ ನಡೆಯಿತು.

ಈ ವೇಳೆ ನಿರ್ದೇಶಕ ಶಿವಾರೆಡ್ಡಿ ವೇದಿಕೆಯಿಂದ ನಿರ್ಗಮಿಸಲು ಮುಂದಾದರು, ಪಕ್ಕದಲ್ಲಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ ಅವರು, ಶಿವಾರೆಡ್ಡಿ ಅವರನ್ನು ಬಲವಂತಾಗಿ ಕುಳ್ಳಿರಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಚೀಮನಹಳ್ಳಿ ಗೋಪಾಲ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಪಂಕಜ ನಿರಂಜನ್, ಕಾಂಗ್ರೆಸ್ ಮುಖಂಡ ಸೊಣ್ಣೇನಹಳ್ಳಿ ನಾರಾಯಣಸ್ವಾಮಿ, ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ರಾಮಚಂದ್ರಪ್ಪ, ನಿರ್ದೇಶಕ ವೇಣು, ವ್ಯವಸ್ಥಾಪಕ ಆನಂದ್, ಮುಂತಾದವರು ಹಾಜರಿದ್ದರು.

 

About The Author

News, activities, lifestyle, business, culture and amazing people. Sidlaghatta, everything about a small town with a huge presence.

Related posts

Leave a Reply

Your email address will not be published. Required fields are marked *

Time limit is exhausted. Please reload the CAPTCHA.