Home Articles ಅತ್ತೆ ಸೊಸೆಯರ ಒಗ್ಗಟ್ಟು ಮತ್ತು ಒಬ್ಬಟ್ಟು

ಅತ್ತೆ ಸೊಸೆಯರ ಒಗ್ಗಟ್ಟು ಮತ್ತು ಒಬ್ಬಟ್ಟು

0

ಅತ್ತೆ ಸೊಸೆ ಎಂಬ ನುಡಿಗಟ್ಟು ಜಗಳ, ಮುನಿಸಿಗೆ ಪರ್ಯಾಯವಾಗಿ ಬಳಸಲಾಗುತ್ತದೆ. ಆದರೆ ಶಿಡ್ಲಘಟ್ಟದ ವಾಸವಿ ರಸ್ತೆಯ ಎರಡನೇ ಕ್ರಾಸ್ನಲ್ಲಿರುವ ಅತ್ತೆ ಸೊಸೆಯರಾದ ಮನ್ಮಥಮ್ಮ ಮತ್ತು ರಾಧಾ ತಮ್ಮ ಒಗ್ಗಟ್ಟು ಮತ್ತು ಒಬ್ಬಟ್ಟಿನಿಂದಾಗಿ ತಾಲ್ಲೂಕು, ಜಿಲ್ಲೆಯಷ್ಟೇ ಅಲ್ಲದೆ ವಿದೇಶಗಳಲ್ಲೂ ಪರಿಚಿತರಾಗಿದ್ದಾರೆ.
ಈ ಅತ್ತೆ ಸೊಸೆಯರು ತಯಾರಿಸುವ ಒಬ್ಬಟ್ಟು ಅಥವ ಹೋಳಿಗೆ ಲಂಡನ್ ಮತ್ತು ಅಮೆರಿಕಾ ದೇಶಗಳಿಗೂ ಪ್ರಯಾಣ ಬೆಳೆಸಿವೆ. ದೇವನಹಳ್ಳಿ, ಬೆಂಗಳೂರು, ವಿಜಯಪುರ ಮುಂತಾದೆಡೆಗಳಿಂದ ಯಾರೇ ವಿದೇಶಕ್ಕೆ ತೆರಳಿದರೂ ಇವರಿಗೆ ತಿಳಿಸಿ ಒಬ್ಬಟ್ಟನ್ನು ಕಟ್ಟಿಸಿಕೊಂಡು ಹೋಗುವುದು ಮಾತ್ರ ಮರೆಯುವುದಿಲ್ಲ.
12jul2ಶಿಡ್ಲಘಟ್ಟ ತಾಲ್ಲೂಕಿನಲ್ಲೂ ಅನೇಕರು ಹಬ್ಬ-ಹರಿದಿನಗಳಲ್ಲಿ, ನೆಂಟರು ಬಂದಾಗ, ವಿಶೇಷ ದಿನಗಳಲ್ಲಿ, ಔತಣಕೂಟ ಏರ್ಪಡಿಸಿದಾಗ ಎಲ್ಲರೂ ಇಷ್ಟಪಡುವ ಒಬ್ಬಟ್ಟನ್ನು ಇವರಿಂದ ಮಾಡಿಸಿಕೊಳ್ಳುವುದು ರೂಢಿಯಾಗಿದೆ.
ಒಬ್ಬಟ್ಟು ಅಥವ ಹೋಳಿಗೆ ಕರ್ನಾಟಕದ ವಿಶಿಷ್ಠ ರುಚಿಕರ ಸಿಹಿ ತಿಂಡಿ. ಒಬ್ಬಟ್ಟನ್ನು ಪ್ರಮುಖವಾಗಿ ದೀಪಾವಳಿ, ಯುಗಾದಿ ಹಬ್ಬಗಳಲ್ಲಿ ಮತ್ತು ಮದುವೆ ಮುಂತಾದ ಸಮಾರಂಭಗಳಲ್ಲಿ ಹಿಂದೆ ಮಾಡುತ್ತಿದ್ದರು. ಒಬ್ಬಟ್ಟನ್ನು ಎರಡು ರೀತಿಯಲ್ಲಿ ತಯಾರಿಸಬಹುದು. ಒಂದು ತೆಂಗಿನಕಾಯಿಯಿಂದ, ಇನ್ನೊಂದು ತೊಗರಿಬೇಳೆಯಿಂದ. ಒಬ್ಬಟ್ಟನ್ನು ತುಪ್ಪದ ಜೊತೆ ಅಥವಾ ಬಿಸಿ ಹಾಲಿನೊಂದಿಗೆ ತಿಂದರೆ ಬಹಳ ಚೆನ್ನಾಗಿರುತ್ತದೆ. ಮಾವಿನ ಹಣ್ಣಿನ ಕಾಲದಲ್ಲಿ ಹಣ್ಣಾದ ಮಾವಿನಿಂದ ಸೀಕರಣೆ ತಯಾರಿಸಿ ಒಬ್ಬಟ್ಟಿನೊಂದಿಗೆ ಸವಿಯುವ ರೂಢಿಯೂ ಇದೆ.
‘ಈ ಹೋಳಿಗೆ ತಯಾರಿ ಸ್ವಲ್ಪ ಕಷ್ಟ ಸಾಧ್ಯವೇ ಆದರೂ ರುಚಿಯಂತು ತುಂಬಾ ಚೆನ್ನಾಗಿರುತ್ತದೆ. ಹಾಗಾಗಿ ಇದನ್ನು ಎಲ್ಲರೂ ಇಷ್ಟಪಡುತ್ತಾರೆ. ಮನೆಯಲ್ಲಿ ಯಾವುದೇ ಶುಭ ಕಾರ್ಯ ಚಿಕ್ಕಮಟ್ಟದಲ್ಲಿ ನಡೆಸಿದರೂ ನಾವು ರಾಧಮ್ಮ ಅವರಿಗೆ ಹೋಳಿಗೆ ಮಾಡಿಕೊಡಲು ಕೇಳುತ್ತೇವೆ. ನನ್ನ ಮುಸಲ್ಮಾನ್ ಸ್ನೇಹಿತರಿಗಂತೂ ಹೋಳಿಗೆ ಅಂದರೆ ಪಂಚಪ್ರಾಣ. ಇವರು ತಯಾರಿಸುವ ಹೋಳಿಗೆ ಬಹಳ ರುಚಿಯಾಗಿರುತ್ತದೆ. ಒಂದೇ ಹದವಾಗಿ ತಯಾರಿಸುವ ಇವರ ಒಬ್ಬಟ್ಟನ್ನು ನಾವು ಮೂರ್ನಾಕು ದಿನ ಇಟ್ಟುಕೊಂಡು ತಿನ್ನುತ್ತೇವೆ. ಒಬ್ಬಟ್ಟಿನೊಂದಿಗೆ ರಸವನ್ನೂ ಪಾತ್ರೆಯೊಂದರಲ್ಲಿ ತಂದು ನಾವು ಒಬ್ಬಟ್ಟಿನ ಸಾರು ಮಾಡಿಕೊಂಡು ವಾರಗಟ್ಟಲೆ ಬಳಸುತ್ತೇವೆ’ ಎನ್ನುತ್ತಾರೆ ಎಲ್.ಸುರೇಶ್.
‘ಸುಮಾರು ಇಪ್ಪತ್ತು ವರ್ಷಗಳಿಂದ ನಾನು ಮತ್ತು ನಮ್ಮ ಅತ್ತೆ ಹೋಳಿಗೆಯನ್ನು ಮಾಡುತ್ತಿದ್ದೇವೆ. ನಮ್ಮತ್ತೆ ಒಬ್ಬಟ್ಟನ್ನು ಬಹಳ ರುಚಿಯಾಗಿ ತಯಾರಿಸುತ್ತಿದ್ದುದನ್ನು ಕಂಡು ಕೆಲವರು ಕೇಳುತ್ತಿದ್ದರು. ಹಾಗೆಯೇ ಒಬ್ಬರಿಂದೊಬ್ಬರಿಗೆ ವಿಷಯ ತಿಳಿಯುವ ಮೂಲಕ ನಾವು ಹೆಚ್ಚಿನ ಸಂಖ್ಯೆಯಲ್ಲಿ ಒಬ್ಬಟ್ಟನ್ನು ತಯಾರಿಸಿಕೊಡಲು ಪ್ರಾರಂಭಿಸಿದೆವು. ದಿನಕ್ಕೆ ಹೆಚ್ಚೆಂದರೆ 200 ಹೋಳಿಗೆಯನ್ನು ಮಾಡುತ್ತೇವೆ. ಹಲವಾರು ಮುಸ್ಲೀಮರೂ ಹೋಳಿಗೆ ಕೇಳಿ ಮಾಡಿಸಿಕೊಳ್ಳುತ್ತಾರೆ. ವಿದೇಶಕ್ಕೆ ಹೋಗುವವರು ಕೇಳಿದಾಗ ವಿಶೇಷವಾಗಿ ಪ್ಯಾಕ್ ಮಾಡಿಕೊಡುತ್ತೇವೆ’ ಎನ್ನುತ್ತಾರೆ ರಾಧಮ್ಮ.
ರಾಧಮ್ಮ ಅವರ ದೂರವಾಣಿ ಸಂಖ್ಯೆ: 9035871987
–ಡಿ.ಜಿ.ಮಲ್ಲಿಕಾರ್ಜುನ