Home Articles ದ್ರಾಕ್ಷಿಯಲ್ಲಿ ಹೋದ ಹಣ ವಾಪಸ್‌ ತಂದು ಕೊಟ್ಟ ದಾಳಿಂಬೆ

ದ್ರಾಕ್ಷಿಯಲ್ಲಿ ಹೋದ ಹಣ ವಾಪಸ್‌ ತಂದು ಕೊಟ್ಟ ದಾಳಿಂಬೆ

0

‘ದಾಳಿಂಬೆ ನನ್ನ ಅದೃಷ್ಟದ ಬೆಳೆ. ಅದನ್ನು ಸರಿಯಾಗಿ ನೋಡಿಕೊಂಡಲ್ಲಿ ರೈತನನ್ನು ಕೈಬಿಡುವುದಿಲ್ಲ’ ಎಂದು ತಮ್ಮ ಅನುಭವದ ಮಾತನದನಾಡುತ್ತಾರೆ ರೈತ ಮೇಲೂರಿನ ಕೆ.ಎಸ್‌.ನಂಜೇಗೌಡ.
ಕಳೆದ ವರ್ಷ ಆನೆಕಲ್ಲು ಸಹಿತ ಮಳೆ ಬಿದ್ದ ಕಾರಣ ತಾಲ್ಲೂಕಿನ ಮೇಲೂರು, ಅಪ್ಪೇಗೌಡನಹಳ್ಳಿ, ಚೌಡಸಂದ್ರ, ಗಂಗನಹಳ್ಳಿ, ಕಂಬದಹಳ್ಳಿ, ಮುತ್ತೂರು, ಮಳ್ಳೂರು ಮುಂತಾದ ಗ್ರಾಮಗಳಲ್ಲಿದ್ದ ದ್ರಾಕ್ಷಿ ಬೆಳೆ ನೆಲಕಚ್ಚಿತ್ತು. ತಾಲ್ಲೂಕಿನ ಮೇಲೂರಿನ ರೈತ ಕೆ.ಎಸ್‌.ನಂಜೇಗೌಡರೂ ಕೂಡ ಈ ಸಂದರ್ಭದಲ್ಲಿ ದ್ರಾಕ್ಷಿ ಬೆಳೆಯ ನಷ್ಟ ಅನುಭವಿಸಿದರು. ಆದರೆ ತಮ್ಮ ದ್ರಾಕ್ಷಿ ತೋಟದ ಪಕ್ಕದಲ್ಲಿಯೇ ಒಂದೂವರೆ ಎಕರೆಯಲ್ಲಿ ನೆಟ್ಟಿದ್ದ ದಾಳಿಂಬೆ ಗಿಡಗಳು ಮುಳುಗುತ್ತಿದ್ದವರನ್ನು ದಡಕ್ಕೆ ಸೇರಿಸಿತ್ತು.
‘ಕಳೆದ ಮೂರು ವರ್ಷಗಳಿಂದ ಆಲೀಕಲ್ಲು ಸಹಿತ ಮಳೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ರೈತರನ್ನು ಕಂಗೆಡಿಸುತ್ತಿದೆ. ನಾವೂ ಅದಕ್ಕೆ ಹೊರತಾಗಿಲ್ಲ. ಈ ಬಾರಿಯೂ ಬರಬಹುದು. ಆದರೆ ನಮ್ಮ ದಾಳಿಂಬೆ ಗಿಡಗಳು ನಮ್ಮ ಕೈಬಿಡುವುದಿಲ್ಲ. ಕಳೆದ ಬಾರಿ ಆಲಿಕಲ್ಲು ಬಿದ್ದಾಗ ದಾಳಿಂಬೆ ಉದುರಿದ್ದರೂ ನಂತರ ಸೂಕ್ತ ಔಷಧಿ ಸಿಂಪಡಿಸಿದೊಡನೆ ಗಿಡ ಚಿಗುರಿ ಮೊಗ್ಗು ಬಿಟ್ಟು ಕಾಯಿಯಾದವು. ಎರಡು ತಿಂಗಳು ತಡವಾದರೂ 11 ಟನ್‌ ತೂಗಿ 10 ಲಕ್ಷ ಆದಾಯ ತಂದಿತು’ ಎಂದು ವಿವರಿಸುತ್ತಾರೆ ರೈತ ಕೆ.ಎಸ್‌.ನಂಜೇಗೌಡ.

ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನ ರೈತ ಕೆ.ಎಸ್‌.ನಂಜೇಗೌಡ ತಮ್ಮ ಅದೃಷ್ಟದ ಬೆಳೆ ದಾಳಿಂಬೆಯ ಗಿಡಗಳನ್ನು ಪ್ರದರ್ಶಿಸುತ್ತಿರುವುದು.

ದ್ರಾಕ್ಷಿ ಬೆಳೆಯ ಏರುಪೇರು, ಮಾರುಕಟ್ಟೆಯ ಅವ್ಯವಸ್ಥೆಗಳನ್ನು ಕಂಡು ಒಂದೂವರೆ ಎಕರೆ ಜಮೀನಿನಲ್ಲಿ ದ್ರಾಕ್ಷಿ ಬೆಳೆ ತೆಗೆದು ದಾಳಿಂಬೆ ನಾಟಿ ಮಾಡಿದೆವು. ಹೈದರಾಬಾದಿನಿಂದ 600 ಸಸಿಗಳನ್ನು ತಂದು ನಾಟಿ ಮಾಡಿದೆವು. ಮೊದಲ ವರ್ಷ ಖರ್ಚು ಹೆಚ್ಚು. ಸುತ್ತ ಗಾಳಿ ಬೀಸಿ ವೈರಾಣು ತಡೆಯಲು ಪ್ಲಾಸ್ಟಿಕ್‌ ನೆಟ್‌ ಅಳವಡಿಸಬೇಕು. ಭೂಮಿಗೆ ಸಾಕಷ್ಟು ಕೊಟ್ಟಿಗೆ ಗೊಬ್ಬರ, ವಿವಿಧ ಹಿಂಡಿಗಳನ್ನು ಕೊಟ್ಟೆವು. ಮೊದಲ ವರ್ಷ 5 ಟನ್‌, ಎರಡನೇ ವರ್ಷ 8 ಟನ್‌, ಮೂರನೇ ವರ್ಷ ಆಲಿಕಲ್ಲಿನ ಮಳೆಯ ನಂತರವೂ 11 ಟನ್‌ ದಾಳಿಂಬೆ ಸಿಕ್ಕಿದೆ. ಈ ಬಾರಿ ಆಗಸ್ಟ್‌ ತಿಂಗಳಿಗೆ ಫಸಲು ಬರಲಿದ್ದು, 15 ಟನ್‌ ನಿರೀಕ್ಷೆಯಿದೆ ಮತ್ತು ಉತ್ತಮ ಬೆಲೆಯೂ ಇದೆ. ದಾಳಿಂಬೆ ಮಾರಾಟ ಸುಲಭ. ಬೇಡಿಕೆಯಿರುವುದರಿಂದ ಕೊಳ್ಳುವವರು ತೋಟಕ್ಕೇ ಬಂದು ಹಣ ನೀಡಿ ತೂಗಿಕೊಂಡು ಹೋಗುತ್ತಾರೆ. ಇದಕ್ಕೆ ಹೆಚ್ಚಿನ ತೇವಾಂಶ ಬೇಕಿಲ್ಲ. ನಮಗೆ ಒಂದು ಸಾವಿರ ಗ್ಯಾಲನ್‌ ನೀರಿದ್ದು, ಡ್ರಿಪ್‌ ಮೂಲಕ ಹರಿಸುವುದರಿಂದ 600 ದಾಳಿಂಬೆ ಗಿಡಗಳನ್ನು ಚೆನ್ನಾಗಿ ನೋಡಿಕೊಳ್ಳಬಹುದು’ ಎಂದು ಅವರು ವಿವರಿಸಿದರು.
‘ದಾಳಿಂಬೆ ಹಣ್ಣಿನ ಮೇಲೆ ಬೇಸಿಗೆ ನಂತರದ ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ಮೊದಲ ಮಳೆ ಹನಿಗಳು ಬಿದ್ದ ಕೂಡಲೇ ಕಪ್ಪು ಮಚ್ಚೆಗಳು ಕಾಣಲು ಶುರುವಾಗುತ್ತದೆ. ಇದೊಂದು ಶಿಲೀಂಧ್ರದಿಂದ ಬರುವ ರೋಗ. ಕಾಯಿ, ಎಲೆ, ಹಣ್ಣುಗಳ ಮೇಲೆ ಕೆಂಪು ಮತ್ತು ಕಪ್ಪು ಬಣ್ಣದ ಸಣ್ಣ ಮಚ್ಚೆಗಳು ಕಂಡು ಬರುತ್ತವೆ. ಈ ಮಚ್ಚೆಗಳು ಬರು ಬರುತ್ತಾ ದೊಡ್ಡದಾಗುತ್ತಾ ಇಡೀ ಹಣ್ಣು ಕೊಳೆಯಲು ಪ್ರಾರಂಭವಾಗುತ್ತದೆ. ಹಣ್ಣಿನ ಮೇಲೆ ಈ ಕಪ್ಪು ಮಚ್ಚೆಗಳಿದ್ದರೆ ಮಾರುಕಟ್ಟೆಯಲ್ಲಿ ಬೆಲೆ ಸಿಗದು. ಇದಕ್ಕೆ ಮುಂಜಾಗ್ರತಾ ಕ್ರಮವಾಗಿ ರೋಗ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದರಿಂದ ಅಂಥ್ರಾಕ್ನೋಸ್ ರೋಗ ತಡೆಗಟ್ಟಬಹುದಾಗಿದೆ. ಸಮಸ್ಯೆ ಎಂದರೆ ಗಿಡಗಳ ಹಿಮ್ಮುಖ ಒಣಗುವಿಕೆ (ಡೈಬ್ಯಾಕ್‌). ಎಷ್ಟೇ ಔಷಧ ಸಿಂಪಡಿಸಿದರೂ ಪ್ರತಿ ವರ್ಷ ನೂರಾರು ಗಿಡಗಳು ಡೈಬ್ಯಾಕ್‌ ರೋಗಕ್ಕೆ ತುತ್ತಾಗುತ್ತಿವೆ. ಇದಕ್ಕೆ ತಜ್ಞರು ಪರಿಹಾರ ಸೂಚಿಸಬೇಕಿದೆ. ದಾಳಿಂಬೆ ಬೆಳೆಯುವುದು ಎಂದರೆ ತಪಸ್ಸು ಮಾಡಿದಂತೆ, ರೈತ ಗಿಡಗಳ ಆರೋಗ್ಯವನ್ನು ನಿತ್ಯ ವಿಚಾರಿಸುತ್ತಿರಬೇಕು. ಹೆಸರಿಗೆ ಮಾತ್ರ ದಾಳಿಂಬೆ ಬೆಳೆಯಲು ಮುಂದಾದರೆ ಕೈಸುಟ್ಟುಕೊಳ್ಳುವುದು ಖಾತರಿ. ಇಷ್ಟು ಉತ್ತಮ ಬೆಳೆ ತೆಗೆಯುವುದಕ್ಕೆ ತಜ್ಞರಂತಿರುವ ಇತರೆ ದಾಳಿಂಬೆ ಬೆಳೆಗಾರರಲ್ಲಿನ ಅನುಭವ ಹಂಚಿಕೊಂಡಿದ್ದರಿಂದ ಸಾಧ್ಯವಾಗಿದೆ ಎನ್ನುತ್ತಾರೆ ರೈತ ಕೆ.ಎಸ್‌.ನಂಜೇಗೌಡ.
– ಡಿ.ಜಿ. ಮಲ್ಲಿಕಾರ್ಜುನ