Home Articles ನಾರಾಯಣದಾಸರಹಳ್ಳಿಯಲ್ಲಿ ರೂಪುಗೊಳ್ಳುತ್ತಿರುವ ಗಾಂಧೀಜಿ ಪ್ರತಿಮೆಗಳು

ನಾರಾಯಣದಾಸರಹಳ್ಳಿಯಲ್ಲಿ ರೂಪುಗೊಳ್ಳುತ್ತಿರುವ ಗಾಂಧೀಜಿ ಪ್ರತಿಮೆಗಳು

0

ಕೋಲನ್ನಿಡಿದು ಮುನ್ನಡಿಗೆಯಲ್ಲಿರುವ ಗಾಂಧೀಜಿಯ ನೂರಕ್ಕೂ ಹೆಚ್ಚು ಪ್ರತಿಮೆಗಳ ನೆನಪಿನ ಕಾಣಿಕೆಯನ್ನು ಕಳೆದ ಗಾಂಧಿ ಜಯಂತಿಯ ಸಂದರ್ಭದಲ್ಲಿ ಗಣ್ಯರಿಗೆಲ್ಲಾ ಗಾಂಧಿ ಭವನದ ವತಿಯಿಂದ ವಿತರಿಸಲಾಯಿತು. ಈ ಗಾಂಧಿ ಪ್ರತಿಮೆಗಳು ರೂಪುಗೊಂಡದ್ದು ತಾಲ್ಲೂಕಿನ ನಾರಾಯಣದಾಸರಹಳ್ಳಿಯಲ್ಲಿ.
ತಾಲ್ಲೂಕಿನ ನಾರಾಯಣದಾಸರಹಳ್ಳಿ ಗ್ರಾಮದ ಪುರುಷೋತ್ತಮ್ ಎಂಬ ಕಲಾವಿದನಿಂದ ರೂಪುಗೊಂಡ ನೂರಾರು ಗಾಂಧಿ ಪ್ರತಿಮೆಗಳು ನೆನಪಿನ ಕಾಣಿಕೆಗಳ ರೂಪದಲ್ಲಿ ವಿವಿದೆಡೆಗೆ ಸಾಗಿವೆ. ಕೆಂಪೇಗೌಡನ ಪ್ರತಿಮೆ, ಡಾ.ರಾಜ್ಕುಮಾರ್ ಪ್ರತಿಮೆ, ಬಸವಣ್ಣ, ಸರ್ವಜ್ಞ, ದಸರಾ ಮೆರವಣಿಕೆಯ ಪ್ರತಿಕೃತಿ ಮುಂತಾದವುಗಳಲ್ಲಿ ಪುರುಷೋತ್ತಮ್ ಅವರ ಕಲೆಯ ಕಾಣಿಕೆಯಿದೆ.

ಗಾಂಧೀಜಿ ಮೂರ್ತಿಗಳು.
ಗಾಂಧೀಜಿ ಮೂರ್ತಿಗಳು.
ತಾಲ್ಲೂಕಿನ ಚೀಮಂಗಲದಲ್ಲಿ ಎಸ್ಎಸ್ಎಲ್ಸಿ ವರೆಗೂ ಓದಿದ ಪುರುಷೋತ್ತಮ್ ಕಲಾವಿದನಾಗಿ ರೂಪುಗೊಂಡಿದ್ದು ಬಿಡದಿಯ ಕರಕುಶಲ ತರಬೇತಿ ಕೇಂದ್ರದಲ್ಲಿ. ಧಾರವಾಡ, ಚಾಮರಾಜನಗರ, ಕೊಪ್ಪಳ, ಲೇಪಾಕ್ಷಿ, ದೆಹಲಿ ಮುಂತಾದೆಡೆ ಹಿರಿಯ ಶಿಲ್ಪಕಲಾವಿದರೊಂದಿಗೆ ಕೆಲಸ ಮಾಡಿ ಈಗ ಗ್ರಾಮದಲ್ಲೇ ಉಳಿದು ಕಲಾಪರಿಶ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ.
ಚಿತ್ರವನ್ನು ರಚಿಸಿಕೊಂಡು ಅದಕ್ಕೆ ತಕ್ಕಂತೆ ಮಣ್ಣಿನಲ್ಲಿ ಕಲಾಕೃತಿಯನ್ನು ತಯಾರಿಸಿ, ಪ್ಲಾಸ್ಟರ್ ಆಫ್ ಪ್ಯಾರಿಸ್ ಅಥವಾ ರಬ್ಬರಿನ ಎರಕವನ್ನು ತಯಾರಿಸಿಕೊಳ್ಳುತ್ತಾರೆ. ನಂತರ ಫೈಬರ್, ಹಿತ್ತಾಳೆ, ಅಲ್ಯೂಮಿನಿಯಂ ಮುಂತಾದ ಅಗತ್ಯಕ್ಕನುಸಾರವಾಗಿ ಮೂರ್ತಿಗಳ ತಯಾರಿ ನಡೆಸುತ್ತಾರೆ.
ದೆಹಲಿ ಕರ್ನಾಟಕ ಸಂಘ, ಕರ್ನಾಟಕ ಶಿಲ್ಪ ಅಕಾಡೆಮಿ ವತಿಯಿಂದ ನಡೆದ ವಿವಿಧ ಜಿಲ್ಲೆಗಳ ಕಾರ್ಯಾಗಾರಗಳ ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಸಂದಿವೆ.
‘ಸುಮಾರು ಹತ್ತು ವರ್ಷಗಳಿಂದ ಕಲಾಕೃತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಕಲೆಯನ್ನು ಒಲಿಸಿಕೊಳ್ಳಲು ಗುರುಗಳಾದ ಬನಶಂಕರಿಯ ವೆಂಕಟಾಚಲಪತಿಯವರು ನನ್ನನ್ನು ಪ್ರೋತ್ಸಾಹಿಸಿದ್ದೇ ಕಾರಣ. ಅವರೇ ನನ್ನನ್ನು ಕರಕುಶಲ ತರಬೇತಿ ಕೇಂದ್ರಕ್ಕೆ ಸೇರಿಸಿದ್ದರು. ದೊಡ್ಡ ದೊಡ್ಡ ಪ್ರತಿಮೆಗಳ ನಿರ್ಮಾಣವಾಗುವಾಗ ಸಾಂಘಿಕ ಕೆಲಸವಿರುವುದರಿಂದ ನನ್ನ ಕಲೆಯೂ ಅದರಲ್ಲಿ ಸೇರುತ್ತದೆ. ಈಚೆಗೆ ಗಾಂಧಿ ಭವನದವರಿಗೆಂದು ನೂರು ಗಾಂಧೀಜಿ ಮೂರ್ತಿಗಳನ್ನು ತಯಾರಿಸಿ ಕೊಟ್ಟೆ. ಅವನ್ನು ಅವರು ನೆನಪಿನ ಕಾಣಿಕೆಗಳಾಗಿ ಗಣ್ಯರಿಗೆ ನೀಡಿದರು. ನನ್ನ ಕೆಲಸವನ್ನು ಮೆಚ್ಚಿ ಅವರು ಇನ್ನೂ ಐವತ್ತು ಗಾಂಧಿ ಮೂರ್ತಿಗಳನ್ನು ಕೇಳಿದ್ದಾರೆ’ ಎನ್ನುತ್ತಾರೆ ಪುರುಷೋತ್ತಮ್.
ಪುರುಷೋತ್ತಮ್ ಮೊಬೈಲ್ ಸಂಖ್ಯೆ: 9611288202
–ಡಿ.ಜಿ.ಮಲ್ಲಿಕಾರ್ಜುನ.