Home Articles ನೋವು ಮಡುಗಟ್ಟಿದೆ ಯಣ್ಣಂಗೂರಿನಲ್ಲಿ

ನೋವು ಮಡುಗಟ್ಟಿದೆ ಯಣ್ಣಂಗೂರಿನಲ್ಲಿ

0

ಆ ತಂದೆಯ ಕಣ್ಣುಗಳಲ್ಲಿ ಮಡುಗಟ್ಟಿದ ನೋವು. ಹೇಳಿಕೊಳ್ಳಲಾಗದ ದುಃಖ ಕಾಣಿಸುತ್ತಿತ್ತು. ಕಿರಿಯ ಸಹೋದರ ಯೋಧನಾದರೂ ಸಹ ಒಡಹುಟ್ಟಿದವನ ಅಗಲಿಕೆ, ಒತ್ತರಿಸಿಕೊಂಡು ಬರುತ್ತಿರುವ ನೆನಪುಗಳ ಜೊತೆಗೆ ಅಂತ್ಯಸಂಸ್ಕಾರದ ಜವಾಬ್ದಾರಿ ಜರ್ಜರಿತಗೊಳಿಸಿತ್ತು.
ತಾಲ್ಲೂಕಿನ ಯಣ್ಣಂಗೂರಿನಲ್ಲಿ ಹುತಾತ್ಮ ಯೋಧ ಗಂಗಾಧರ್ ಮನೆಯಲ್ಲಿ ಶುಕ್ರವಾರ ಕಂಡು ಬಂದ ದೃಶ್ಯವಿದು.

ಹುತಾತ್ಮ ಯೋಧ ಗಂಗಾಧರ್ ತಂದೆ ಮುನಿಯಪ್ಪ

ಮಗನ ಸಾವಿನ ವಿಷಯ ತಿಳಿದು ರಕ್ತದೊತ್ತಡ ಏರಿ ಕುಸಿದ ತಾಯಿ ಲಕ್ಷ್ಮಮ್ಮ ಮತ್ತು ಗಂಗಾಧರ್ ಪತ್ನಿ ಹಾಗೂ ಮಗ ವಿಜಯಪುರದಲ್ಲಿದ್ದಾರೆ. ಸೇನೆಯಿಂದ ಮಗ ರಜೆಗಾಗಿ ಬರುತ್ತಾನೆ ಎಂದು ಕಾತುರದಿಂದ ನೋಡುತ್ತಿದ್ದ ಕಣ್ಣುಗಳು ಈಗ ಧ್ವಜವನ್ನು ಸುತ್ತಿಕೊಂಡು ಬರುತ್ತಿರುವ ಮಗನ ದೇಹಕ್ಕೆ ಎದುರು ನೋಡುವಂತಾಗಿದೆ.
ಅಂತಿಮ ಸಂಸ್ಕಾರಕ್ಕೆ ಸಿದ್ಧತೆ:

ಅಂತಿಮ ಸಂಸ್ಕಾರಕ್ಕೆಂದು ಮನೆಯ ಮುಂದಿನ ಹಿಪ್ಪುನೇರಳೆ ಸೊಪ್ಪಿನ ತೋಟದಲ್ಲಿ ಸಿದ್ದಪಡಿಸಿರುವ ಸ್ಥಳ

‘‘ಮಗ ನಮ್ಮ ಮುಂದೆಯೇ ಇರಲಿ’ ಎಂಬ ತಂದೆತಾಯಿರ ಬಯಕೆಯಿಂದ ಮನೆಯ ಮುಂದಿನ ಹಿಪ್ಪುನೇರಳೆ ತೋಟದಲ್ಲಿ ಸೊಪ್ಪನ್ನು ಕತ್ತರಿಸಿ ಸ್ವಲ್ಪ ಭಾಗವನ್ನು ಸಮಗೊಳಿಸಿದ್ದೇವೆ. ಕಣ್ಣ ಮುಂದಿದ್ದರೆ ಸದಾ ನೋವು ಅನುಭವಿಸುತ್ತಿರುತ್ತೀರಾ ಎಂದರೂ ಕೇಳುತ್ತಿಲ್ಲ. ಹಾಗಾಗಿ ಮನೆಯ ಮುಂದಿನ ತೋಟದಲ್ಲಿಯೇ ಶನಿವಾರ ಅಂತಿಮ ಸಂಸ್ಕಾರ ಮಾಡುತ್ತೇವೆ’ ಎಂದು ಗಂಗಾಧರ್ ಅವರ ಸ್ನೇಹಿತ ಕೃಷ್ಣ ತಿಳಿಸಿದರು.
ಮನಸ್ಸು ಮೃದು:
‘ಗಂಗಾಧರ ನೋಡಲು ಗಟ್ಟಿಮುಟ್ಟಾದ ವ್ಯಕ್ತಿಯಾದರೂ ಮನಸ್ಸು ಬಹಳ ಮೃದು. ಅವನ ಸ್ನೇಹ ವಲಯ ಬಹು ದೊಡ್ಡದಾಗಿತ್ತು. ಎಷ್ಟೇ ಕೆಲಸವಿದ್ದರೂ ಸ್ನೇಹಿತರ, ಬಂಧುಗಳ ಮನೆಗಳಿಗೆ ಹೋಗಿ ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುತ್ತಿದ್ದ. ಬಹಳ ಜೀವನಪ್ರೀತಿಯಿತ್ತು. ಸೇನೆಯಲ್ಲಿದ್ದುಕೊಂಡೇ ಮದುವೆಯಾದ ನಂತರ ತನ್ನ ಪತ್ನಿಯನ್ನು ಓದಿಸಿದ್ದಲ್ಲದೆ ತಾನೂ ದೂರಶಿಕ್ಷಣದ ಮೂಲಕ ಪದವಿಯನ್ನು ಪಡೆದಿದ್ದ. ಇನ್ನೊಂದು ವರ್ಷದ ಸೇವೆ ಮುಗಿದ ಮೇಲೆ ಗ್ರಾಮಕ್ಕೆ ಹಿಂದಿರುಗಬೇಕು, ಏನೆಲ್ಲ ಮಾಡಬೇಕು ಎಂಬ ಕನಸುಗಳನ್ನು ಕಾಣುತ್ತಿದ್ದ’ ಎಂದು ಗಂಗಾಧರ್ ಸ್ನೇಹಿತರು ನೆನೆಸಿಕೊಂಡರು.
ಅಣ್ಣನೇ ಪ್ರೇರಣೆ:
‘ನಾನು ಕೂಡ ಸೇನೆಗೆ ಸೇರಲು ಅಣ್ಣನೇ ಪ್ರೇರಣೆ. ಅವನನ್ನು ಕಂಡು ನನಗೂ ದೇಶ ಸೇವೆ ಮಾಡುವ ಆಸೆ ಹುಟ್ಟಿತು’ ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಹೇಳುತ್ತಾರೆ ಗಂಗಾಧರ್ ಅವರ ಕಿರಿಯ ಸಹೋದರ ರವಿಕುಮಾರ್. ರವಿಕುಮಾರ್ ಪ್ರಸ್ತುತ ಬಿಎಸ್ಎಫ್ನಲ್ಲಿ ಯೋಧನಾಗಿದ್ದು ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಜೆಯಿದ್ದುದರಿಂದ ಅವರು ಗ್ರಾಮಕ್ಕೆ ಬಂದಿದ್ದಾರೆ.
ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಲು ಬಂದ ದೇಶಪ್ರೇಮಿ:
ಯೋಧನ ಅಂತಿಮ ದರ್ಶನಕ್ಕೆ ಬಂದ ಯಾದಗಿರಿ ಜಿಲ್ಲೆಯ ಕೂಲಿ ಕಾರ್ಮಿಕ ಈಶ್ವರ್
ಯಾದಗಿರಿ ಜಿಲ್ಲೆಯ ಶಹಪುರ ತಾಲ್ಲೂಕಿನ ತಡಿಬಿಡಿ ಗ್ರಾಮದ ಈಶ್ವರ್ ಟಿವಿಯಲ್ಲಿ ಹುತಾತ್ಮನಾದ ಯೋಧನ ಬಗ್ಗೆ ತಿಳಿಯುತ್ತಿದ್ದಂತೆಯೇ ರೈಲ್ ಹತ್ತಿ ಹೊರಟು ಬಂದಿದ್ದಾರೆ. ರಾಜ್ಯದಲ್ಲಿ ಎಲ್ಲಿಯೇ ಯೋಧ ಹುತಾತ್ಮನಾದನೆಂದು ತಿಳಿದು ಬಂದರೂ ಅಲ್ಲಿಗೆ ಹೋಗಿ ಗೌರವಿಸಿ ಬರುವ ಪರಿಪಾಠವನ್ನು ಇವರು ಹೊಂದಿದ್ದಾರೆ. ಕೂಲಿ ಮಾಡಿ ಜೀವನ ನಡೆಸುವ ಇವರು ದೇಶಕ್ಕಾಗಿ ವೀರಮರಣವನ್ನಪ್ಪಿದ ಯೋಧರಿಗೆ ಗೌರವ ಸೂಚಿಸಲು ಕೂಡಿಟ್ಟ ಹಣವನ್ನು ವೆಚ್ಚ ಮಾಡುತ್ತಾರೆ.
‘ಬಾಯಿ ಮಾತಿನಲ್ಲಿ, ವ್ಯಾಟ್ಸಪ್, ಫೇಸ್ಬುಕ್ ಮೂಲಕ ಎಲ್ಲರೂ ಹುತಾತ್ಮ ಯೋಧನಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾರೆ, ಗೌರವ ಸೂಚಿಸುತ್ತಾರೆ. ಆದರೆ ಯಾದಗಿರಿ ಜಿಲ್ಲೆಯ ಈಶ್ವರ್ ಗಂಗಾಧರ್ ಪಾರ್ಥಿವ ಶರೀರದ ದರ್ಶನಕ್ಕೆಂದು ಬಂದಿದ್ದಾರೆ. ಗಂಗಾಧರ್ ಅವರ ದೇಹವು ಬರುವುದು ಶನಿವಾರ ಎಂದು ಹೇಳಿದರೂ ಇಲ್ಲಿಯೇ ಇದ್ದು ಗೌರವಿಸಿ ಹೋಗುತ್ತೇನೆ ಎನ್ನುತ್ತಾರೆ. ಇವರ ದೇಶಭಕ್ತಿ ಅನುಕರಣೀಯ’ ಎಂದು ಯಣ್ಣಂಗೂರು ಗ್ರಾಮದ ನರಸಿಂಹರಾಜು ತಿಳಿಸಿದರು.
ಯೋಧನ ಸ್ಮರಣಾರ್ಥ ಅರ್ಧಕ್ಕೆ ಹಾರಿದ ರಾಷ್ಟ್ರಧ್ವಜ:
ಯಣ್ಣಂಗೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹುತಾತ್ಮ ಯೋಧ ಗಂಗಾಧರ್ ಭಾವಚಿತ್ರವನ್ನಿಟ್ಟು ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಮೌನಾಚರಣೆ ಮಾಡುವ ಮೂಲಕ ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಿದರು.
ಗಂಗಾಧರ್ ಕುರಿತ ಮಾಹಿತಿ:
ಎಂ.ಗಂಗಾಧರ್ (೩೯), ಬೆಟಾಲಿಯನ್-೬೬, ಬ್ಯಾಡ್ಜ್ ನಂ ೪೯೧.ರೋಲ್ ನಂ ೯೮೦೦೯೩೧೨, ಸಿ ಕಂಪೆನಿ.
ಜನ್ಮ ದಿನಾಂಕ : 1978ರ ಜೂನ್ 10, ಸೇವೆಗೆ ಸೆರಿದ ದಿನಾಂಕ : 1998ರ ಆಗಸ್ಟ್ 20
ರಾಜಾಸ್ಥಾನದ ಜೋಧ್ಪುರದ ಫ್ರಂಟ್ ಏರ್ನಲ್ಲಿ ತರಬೇತಿ ಮುಗಿಸಿ ಜಮ್ಮುವಿನ ಪಲೋಡ, ಅಕ್ಕನೂರು, ಪಂಥಾಚೌಕ್, ಗುಲ್, ಪಂಜಾಬ್, ಕಾಶ್ಮೀರದ ಲೇ, ಪಶ್ಚಿಮಬಂಗಾಲದ ಸಿಲ್ಲಿಗುರಿ ಸೇರಿದಂತೆ ಡಾರ್ಜಲಿಂಗ್ನ ಗಡಿಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಮುಂದಿನ ೨೦೧೮ ನೇ ಸಾಲಿನ ಆಗಸ್ಟ್ ೨೦ ಕ್ಕೆ ತಮ್ಮ ೨೦ ವರ್ಷದ ಸೇವೆ ಪೂರ್ಣಗೊಳಿಸಿ ಊರಿಗೆ ಬಂದು ವ್ಯವಸಾಯ ನೋಡಿಕೊಳ್ಳುತ್ತಾ ತಮ್ಮ ಪತ್ನಿ ನಡೆಸುತ್ತಿರುವ ಖಾಸಗಿ ಕ್ಲಿನಿಕ್ ಬಳಿ ಮೆಡಿಕಲ್ ಸ್ಟೋರ್ ತೆಗೆಯಬೇಕು ಎಂಬ ಆಸೆ ಹೊಂದಿದ್ದರು ಎನ್ನಲಾಗಿದೆ.
ಗಣ್ಯರಿಂದ ಸಾಂತ್ವನ:
ಶಾಸಕ ಎಂ.ರಾಜಣ್ಣ ಶುಕ್ರವಾರ ಹುತಾತ್ಮ ಯೋಧ ಗಂಗಾಧರ್ ಮನೆಗೆ ಭೇಟಿ ನೀಡಿ ಗಂಗಾಧರ್ ತಂದೆ ಮತ್ತು ಸಹೋದರನಿಗೆ ಸಾಂತ್ವನ ಹೇಳಿದರು. ‘ಗಂಗಾಧರ್ ದೇಹವನ್ನು ಜಂಗಮಕೋಟೆಗೆ ನೇರವಾಗಿ ತರುವ ಬದಲು ಮೇಲೂರಿನಿಂದ ಶಿಡ್ಲಘಟ್ಟಕ್ಕೆ ತಂದು ನಂತರ ಜಂಗಮಕೋಟೆಗೆ ತೆಗೆದುಕೊಂಡು ಬನ್ನಿ. ತಾಲ್ಲೂಕು ಆಡಳಿತವನ್ನೂ ಈ ಬಗ್ಗೆ ಸಹಕರಿಸಲು ಕೋರುತ್ತೇನೆ. ನಗರ ಭಾಗದ ಜನರು ಕೂಡ ಹುತಾತ್ಮ ಯೋಧನ ಅಂತಿಮ ದರ್ಶನ ಪಡೆಯಲಿ’ ಎಂದು ಶಾಸಕ ಎಂ.ರಾಜಣ್ಣ ಕೋರಿದರು. ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ತಾಲ್ಲೂಕು ಪಂಚಾಯ್ತಿ ಸದಸ್ಯೆ ಶೋಭಾ ಶಶಿಕುಮಾರ್, ನಂದಿನಿ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಗುಡಿಯಪ್ಪ, ಗ್ರಾಮ ಪಂಚಾಯ್ತಿ ಸದಸ್ಯ ಎ.ಎಂ.ತ್ಯಾಗರಾಜ್, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಭೇಟಿ ನೀಡಿದ್ದರು.
–ಡಿ.ಜಿ.ಮಲ್ಲಿಕಾರ್ಜುನ