ಶಾಲೆಯ ಬಳಿ ಬಣ್ಣದ ಲಂಗ, ಕಿವಿಗೆ ನೇತಾಡುವ ಲೋಲಾಕು, ಕೈಯಲ್ಲಿ ಬಳೆ ತೊಟ್ಟ ಈ ಹುಡುಗಿ ಕೈಯಲ್ಲಿನ ತಾಳದಲ್ಲಿ ಶಬ್ಧವನ್ನು ಹೊಮ್ಮಿಸುತ್ತಿದ್ದರೆ, ಮಕ್ಕಳಿಗೆ ಪಾಠ ಮರೆತು ಇತ್ತ ಗಮನ ಹರಿಯುತ್ತದೆ. ಆ ಬಾಲೆ ಮಕ್ಕಳಿಗೆ ಬಣ್ಣದ ಮಿಠಾಯಿ ಹಂಚಲೆಂದೇ ಬರುತ್ತಾಳೆ. ಅವಳೇ ಬೊಂಬಾಯಿ ಮಿಠಾಯಿ ಹುಡುಗಿ.
ಬೊಂಬಾಯಿ ಮಿಠಾಯಿ ಗೊಂಬೆ ನೋಡುವುದೇ ಚಂದ. ಬಣ್ಣದ ಅಂಗಿ ತೊಟ್ಟು ಅಲಂಕಾರ ಮಾಡಿದ ಮುದ್ದಾದ ಹುಡುಗಿ ಗೊಂಬೆಯನ್ನು ಮಿಠಾಯಿ ಕೋಲಿಗೆ ಸಿಕ್ಕಿಸಿ ಬಹುದೂರದವರೆಗೂ ಕಾಣುವಂತೆ ಮಾಡಿ ಮಕ್ಕಳನ್ನು ಆಕರ್ಷಿಸುವ ಪರಿ ನಿಜಕ್ಕೂ ಖುಷಿ ನೀಡುತ್ತದೆ. ಮಿಠಾಯಿವಾಲಾ ನಗರದ ಕೆಲವು ಶಾಲೆಗಳ ಬಳಿ ತನ್ನ ಗೊಂಬೆ ಹುಡುಗಿಯ ಜೊತೆ ನಿಂತು ಮಕ್ಕಳು ಹೊರ ಬರುವುದನ್ನೇ ಕಾದು ಕುಳಿತಿರುವುದು ನೋಡಿದಾಗ ಬಾಲ್ಯದ ನೆನಪು ಮರುಕಳಿಸುವಂತೆ ಮಾಡುತ್ತಿದೆ.
ನಗರದ ಕೆಲ ಶಾಲೆಗಳ ಮುಂದೆ ಬಣ್ಣದ ಮಿಠಾಯಿ ಹಂಚಲು ಕಾಯುತ್ತಿದ್ದ ಬಸವರಾಜ್ ಮೈಸೂರು ಬಳಿಯ ಮಲೆ ಕ್ಯಾತಮಾರನಹಳ್ಳಿಯವರು. ಸುಮಾರು 15 ವರ್ಷಗಳಿಂದ ರಾಜ್ಯದ ವಿವಿಧ ಊರುಗಳಲ್ಲಿ ಮಿಠಾಯಿ ವ್ಯಾಪಾರ ಮಾಡಿಯೇ ಬದುಕುತ್ತಿದ್ದಾರೆ. ಈಗ ಚಿಕ್ಕಬಳ್ಳಾಪುರದಲ್ಲಿ ಉಳಿದುಕೊಂಡಿದ್ದು, ಜಿಲ್ಲೆಯ ವಿವಿಧ ಊರುಗಳಲ್ಲಿ ಒಂದೊಂದು ವಾರ ತಿರುಗುತ್ತಾ ವ್ಯಾಪಾರ ಮಾಡುತ್ತಿದ್ದಾರೆ.
ನಗರದ ಸಂತೆಬೀದಿ, ತಾಲ್ಲೂಕು ಕಚೇರಿ, ಅಶೋಕ ರಸ್ತೆ, ಪೂಜಮ್ಮನ ದೇವಸ್ಥಾನ ಹೀಗೆ ಅನೇಕ ಕಡೆಗಳಲ್ಲಿ ವ್ಯಾಪಾರ ಮಾಡುತ್ತಾರೆ. ಸಂತೆ, ಜಾತ್ರೆ ಮತ್ತಿತರ ಜನ ಸೇರುವ ಸಂದರ್ಭಗಳು ಸೃಷ್ಟಿಯಾದರೆ ಅಲ್ಲೆಲ್ಲಾ ಇವರು ಆಕರ್ಷಣೆಯ ಕೇಂದ್ರವಾಗುತ್ತಾರೆ. ಗೊಂಬೆಯ ಕೈಯಲ್ಲಿ ತಾಳಗಳಿರುತ್ತವೆ. ಅದರ ಗುಂಡಿ ಒತ್ತಿದೆ ಸಾಕು ಎರಡು ತಾಳ ಸೇರಿ ಸದ್ದಾಗುತ್ತದೆ. ಮಿಠಾಯಿ ಮಾರಬೇಕಾದರೆ ಅವರು ಮಾಡಿಕೊಳ್ಳುವ ಇಂತಹ ಪುಟ್ಟಪುಟ್ಟ ವ್ಯವಸ್ಥೆಗಳೇ ಹೆಚ್ಚು ಆಸಕ್ತಿಕರವೆನಿಸುತ್ತದೆ.
ಬೊಂಬಾಯಿ ಮಿಠಾಯಿ ಮಾರಾಟದ ವೈಖರಿ ನಿಜಕ್ಕೂ ವಿಭಿನ್ನ. ಕೋಲೊಂದಕ್ಕೆ ಮಿಠಾಯಿ ಮತ್ತು ಗೊಂಬೆಯನ್ನು ಜೋಡಿಸಿದ್ದಾರೆ. ಸಕ್ಕರೆ ಪಾಕಕ್ಕೆ ಬಣ್ಣ ಲೇಪಿಸಿದ ಅಂಟಿನ ಮಿಠಾಯಿಯನ್ನು ಕಡ್ಡಿಗೆ ಸುತ್ತಿ ಬೇಕಾದ ಆಕಾರ ಮಾಡಿಕೊಡುವ ರೀತಿಯೂ ಸೃಜನಶೀಲವಾಗಿರುತ್ತದೆ. ನಿಮಿಷ ಮಾತ್ರದಲ್ಲಿ ಬಣ್ಣಬಣ್ಣದ ಹಕ್ಕಿ, ಸೈಕಲ್, ಗುಲಾಬಿ, ವಿಮಾನ, ನಕ್ಷತ್ರ, ನವಿಲು, ವಾಚು, ನೆಕ್ಲೇಸ್ ಮಾಡಿ ಕೊಡುವಾಗ ಅಪ್ಪಟ ಕಲಾವಿದರಂತೆಯೇ ಕಾಣುತ್ತಾರೆ.
‘ಎಲ್ಲೆಲ್ಲಿ ಜಾತ್ರೆ ನಡೆಯುತ್ತದೋ ಅಲ್ಲೆಲ್ಲ ಹೋಗುತ್ತೇನೆ. ಒಮ್ಮೆಲೆ ಐದು ಕೆ.ಜಿ. ಮಿಠಾಯಿ ತಯಾರಿಸುತ್ತೇನೆ. ಐದು ಕೆ.ಜಿ. ಸಕ್ಕರೆ ಪಾಕ ತಯಾರಿಸಿ, ಎರಡು ಅಥವಾ ಮೂರು ಬಣ್ಣಗಳ ಟ್ರೇಗಳಲ್ಲಿ ಪ್ರತ್ಯೇಕ ಪಾಕ ಸುರಿದು ತಣಿದ ನಂತರ ಎಲ್ಲವನ್ನೂ ಒಂದೇ ಸುರುಳಿ ಸುತ್ತಿ ಗೊಂಬೆಯ ಕೋಲಿಗೆ ಅಂಟಿಸಲಾಗುತ್ತದೆ. ಅಡುಗೆಗೆ ಬಳಸುವ ಬಣ್ಣಗಳನ್ನೇ ಬಳಸುತ್ತೇನೆ. ಇದು ಸ್ವಲ್ಪ ದುಬಾರಿಯೇ. ಮಿಠಾಯಿಯನ್ನು ಪುಟ್ಟಮಕ್ಕಳೇ ಇಷ್ಟಪಡುವ ಕಾರಣ ಮಾರುವಾಗ ಇದರ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುತ್ತೇನೆ. ಮೊದಲೆಲ್ಲ ಮಿಠಾಯಿ ಮಾರುವವರ ಸಂಖ್ಯೆ ತುಂಬಾ ಇತ್ತು. ಆದರೆ ಈಗಿನ ಯುವಕರು ಈ ವೃತ್ತಿಯಿಂದ ಹಿಂದೆ ಸರಿದಿದ್ದಾರೆ. ದಿನವೆಲ್ಲಾ ಸುತ್ತಿದರೂ ಐದು ನೂರು ಸಂಪಾದಿಸುವುದು ಕೂಡ ಕಷ್ಟ. ಸಕ್ಕರೆಯ ಬೆಲೆಯೂ ಹೆಚ್ಚಿದ್ದು, ನಮಗೆ ಲಾಭ ಬರುವುದು ಅಷ್ಟಕ್ಕಷ್ಟೆ. ಮುಂದೆ ನಮ್ಮ ಜೊತೆಗೇ ಬೊಂಬಾಯಿ ಮಿಠಾಯಿಯ ಕಾಲ ಕೂಡ ಮುಗಿದು ಹೋಗಲಿದೆ’ ಎಂದು ಹೇಳುವಾಗ ಬಸವರಾಜ್ ಮುಖದಲ್ಲಿ ವಿಷಾದದ ಛಾಯೆ.