Home Articles ಮಾರುಕಟ್ಟೆ ತಜ್ಞರಂತೆ ಯೋಚಿಸುವ ರೈತ

ಮಾರುಕಟ್ಟೆ ತಜ್ಞರಂತೆ ಯೋಚಿಸುವ ರೈತ

0

‘ರೈತನ್ನು ಅನ್ನದಾತರೆನ್ನುತ್ತಾರೆ. ಪರರಿಗೆ ನೀಡುವ ಶಕ್ತಿ ಇರುವವರನ್ನು ಬೇಡುವವರನ್ನಾಗಿ ಮಾಡಬಾರದು. ಸರ್ಕಾರ ನಮಗೆ ಸಹಾಯಧನ ನೀಡುವ ಅಗತ್ಯವಿಲ್ಲ. ಆದರೆ ಸರ್ಕಾರ ರೈತರಿಗೆ ಸಹಕಾರ ನೀಡಲಿ, ದಾರಿಯನ್ನು ತೋರಿಸಲಿ ಸಾಕು’ ಎನ್ನುತ್ತಾರೆ ರೈತ ಮೇಲೂರು ಬಿ.ಎನ್‌.ಧರ್ಮೇಂದ್ರ.
ರೈತರು ತಮ್ಮ ಅನುಭವದಿಂದ ವಿಜ್ಞಾನಿಗಳಂತೆ, ಮಾರುಕಟ್ಟೆ ತಜ್ಞರಂತೆ ಯೋಚಿಸುತ್ತಾರೆ. ತಮ್ಮ ಅಗತ್ಯಕ್ಕೆ ತಕ್ಕಂತೆ ಅವನ್ನು ಅಳವಡಿಸಿಕೊಳ್ಳುತ್ತಾ ಇತರರಿಗೂ ಮಾರ್ಗದರ್ಶನ ನೀಡುತ್ತಿರುತ್ತಾರೆ. ಅಂಥಹ ರೈತರಲ್ಲೊಬ್ಬರಾದ ಬಿ.ಎನ್‌.ಧರ್ಮೇಂದ್ರ, ಕೇವಲ ಎರಡೂವರೆ ಇಂಚು ಪೈಪಿನಲ್ಲಿ ಬರುವ ಅತ್ಯಲ್ಪ ನೀರಿನಲ್ಲಿಯೇ 25 ಎಕರೆ ವ್ಯವಸಾಯವನ್ನು ನಡೆಸುತ್ತಾ ಏಳು ಎಕರೆಯಲ್ಲಿ ಟೊಮೇಟೋ ಬೆಳೆಯನ್ನು ಉತ್ತಮ ಗುಣಮಟ್ಟದಲ್ಲಿ ಬೆಳೆದಿದ್ದಾರೆ. ನೀರಿನ ಸಮಸ್ಯೆ, ಬೆಲೆ ಕುಸಿತದ ನಡುವೆಯೂ ಹಚ್ಚ ಹಸುರಾಗಿರುವ ಬೆಳೆಯಲ್ಲಿ ಆರು ಟನ್‌ ಟೊಮೇಟೋ ಕಿತ್ತು ಮಾರಿದ್ದು, ಇನ್ನೂ 70 ಟನ್‌ ಬೆಳೆಯ ನಿರೀಕ್ಷೆಯಲ್ಲಿದ್ದಾರೆ.
‘ಎಂಬತ್ತು ದಿನಗಳಾದವು ನಾಟಿ ಮಾಡಿ. ಅಲ್ಪ ನೀರು, ಬಿದ್ದ ಮಳೆ ನೀರನ್ನು ಕುಡಿದು ಗಿಡಗಳು ಸೊಂಪಾಗಿ ಬೆಳೆದಿವೆ. ಫಸಲನ್ನೂ ಕೊಡುತ್ತಿದೆ. ನಾವು ಬೆಳೆದ ಟೊಮೇಟೋ ಐದು ರೀತಿಯ ಗುಣಮಟ್ಟದವುಗಳಾಗಿ ವಿಂಗಡಿಸುತ್ತೇವೆ. ಮೊದಲ ಗುಣಮಟ್ಟದ್ದು ಬಂಗಾಲ, ಬಾಂಗ್ಲಾದೇಶದವರೆಗೆ ಹೋಗುತ್ತದೆ. ಕಳೆದ ವರ್ಷ ಒಂದು ಕೆಜಿಗೆ 60 ರೂ ಇದ್ದದ್ದು, ಈ ವರ್ಷ 6 ರೂಗೆ ಇಳಿದಿದೆ. ನಮ್ಮ ಶ್ರಮಕ್ಕೆ ತಕ್ಕ ಹಣ ಸಿಗುತ್ತಿಲ್ಲ. ಪ್ರತಿ ಒಂದು ಕೆಜಿ ಟೊಮೆಟೋ ಬೆಳೆಯಲು 10 ರೂ ಖರ್ಚಾಗುತ್ತದೆ. ಅದರ ಮೇಲೆ ಎಷ್ಟು ಹಣ ಬಂದರೂ ಲಾಭವೇ. ಆದರೆ ಬೆಲೆ ಇದೆಯೆಂದು ಅನೇಕರು ಒಂದೇ ಬೆಳೆ ಬೆಳೆಯುವ ಕಾರಣ ಬೆಲೆ ಕುಸಿಯುತ್ತದೆ. ಭೂಮಿ ಫಲವತ್ತಾಗಿದ್ದಷ್ಟೂ ಬೆಳೆ ಉತ್ತಮ. ಅದಕ್ಕಾಗಿ ಭೂಮಿಗೆ ವಿಷವುಣಿಸಬಾರದು. ನಮ್ಮ ಕುರಿಗೊಬ್ಬರ, ಕೊಟ್ಟಿಗೆ ಗೊಬ್ಬರ, ಹಿಂಡಿಗಳು ನಮ್ಮ ಬೆಳೆಯ ಗುಣಮಟ್ಟಕ್ಕೆ ಕಾರಣ’ ಎಂದು ತಮ್ಮ ಅನುಭವವನ್ನು ಬಿ.ಎನ್‌.ಧರ್ಮೇಂದ್ರ ವಿವರಿಸಿದರು.
‘ಪ್ರತಿಯೊಂದು ಗ್ರಾಮ ಪಂಚಾಯ್ತಿಯಲ್ಲೂ ಆಯಾ ವ್ಯಾಪ್ತಿಯ ರೈತರು ತಾವು ಬೆಳೆಯುವ ಬೆಳೆಯನ್ನು ಧೃಡೀಕರಿಸಿ ಧೃಡೀಕರಣ ಪತ್ರವನ್ನು ಪಡೆಯುವಂತಾಗಬೇಕು. ಪ್ರತಿಯೊಂದು ಪಂಚಾಯ್ತಿಯ ಮಾಹಿತಿ ಪಡೆಯುವ ಮೂಲಕ ತಾಲ್ಲೂಕು ಮತ್ತು ಜಿಲ್ಲೆಗಳಲ್ಲಿ ಯಾವ ಯಾವ ಬೆಳೆ ಎಷ್ಟೆಷ್ಟು ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಇದರಿಂದ ಬಹಳಷ್ಟು ಜನ ಒಂದೇ ಬೆಳೆ ಬೆಳೆದು ಹಣ ಕಳೆದುಕೊಳ್ಳುವುದು ತಪ್ಪುತ್ತದೆ. ಹೊಸದಾಗಿ ಬೆಳೆ ಬೆಳೆಯುವವರಿಗೆ ಈ ಮಾಹಿತಿಯಿಂದ ಬೆಳೆಯ ಆಯ್ಕೆ ಸುಲಭವಾಗುತ್ತದೆ. ಈ ಕೆಲಸ ಸರ್ಕಾರದಿಂದ ಆದಾಗ ಬೆಳೆ ಕುಸಿಯುವುದು ತಪ್ಪುತ್ತದೆ. ತಂತ್ರಜ್ಞಾನ ಬಳಸಿ ಮೊಬೈಲ್‌ ಮೂಲಕವೂ ಮಾಹಿತಿ ನೀಡಬಹುದು. ಸರ್ಕಾರ ನಿಗದಿತ ಬೆಲೆಗೆ ರೈತರ ಉತ್ಪನ್ನ ಖರೀದಿಸಿ ಮಾರುವ ಮೂಲಕ ಆದಾಯ ಗಳಿಕೆ, ಉದ್ಯೋಗ ನೀಡುವುದು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಬಹುದು’ ಎಂದು ಅವರು ಹೇಳಿದರು.
– ಡಿ.ಜಿ.ಮಲ್ಲಿಕಾರ್ಜುನ