ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರ 154 ನೇ ಜನ್ಮದಿನವಿಂದು. ದೇಶದೆಲ್ಲೆಡೆ ಅವರ ಜನ್ಮದಿನವನ್ನು ಎಂಜಿನಿಯರ್ ದಿನವೆಂದೇ ಆಚರಿಸಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಜನಿಸಿದ್ದ ಸರ್.ಎಂ.ವಿ ಅವರಿಗೆ ಗ್ರಾಮೀಣರಿಗೆ ಉದ್ಯೋಗ ಸಿಗುವಂತಹ ಕಾರ್ಖಾನೆಯೊಂದನ್ನು ಸ್ಥಾಪಿಸುವ ಕನಸಿತ್ತು. ಅದಕ್ಕೆಂದೇ 1952ರಲ್ಲಿ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಕಿಸಾನ್ ಸಿಲ್ಕ್ ಇಂಡಸ್ಟ್ರಿ ಎಂಬ ರೇಷ್ಮೆಯ ಕಾರ್ಖಾನೆಯನ್ನು ಸ್ಥಾಪಿಸಿದ್ದಲ್ಲದೆ ಅದನ್ನು ಸರ್.ಎಂ.ವಿ ಅವರೇ ಆಗಮಿಸಿ ಉದ್ಘಾಟಿಸಿದ್ದರು.
ಸುಮಾರು 60 ವರ್ಷಗಳ ಹಿಂದೆಯೇ ದೂರದೃಷ್ಟಿಯುಳ್ಳ ಗ್ರಾಮೀಣ ಪ್ರಗತಿಯ ಯೋಜನೆಯನ್ನು ಸರ್.ಎಂ.ವಿ ಅವರು ರೂಪಿಸಿದ್ದರು. ಇಲ್ಲಿನ ಭೂಮಿ, ಹವಾಗುಣ ರೇಷ್ಮೆ ಗೂಡು ಹಾಗೂ ನೂಲು ತಯಾರಿಕೆಗೆ ಸೂಕ್ತವಾದುದು. ಇಲ್ಲಿನ ಜನರು ಇದರಿಂದ ಆರ್ಥಿಕ ಪ್ರಗತಿ ಕಾಣುವಂತಾಗಲೆಂದು ಅವರು ಕಿಸಾನ್ ಸಿಲ್ಕ್ ಇಂಡಸ್ಟ್ರಿಯನ್ನು ಪ್ರಾರಂಭಿಸಿದ್ದರು.
ಮೇಲೂರಿನಿಂದ ಕಂಬದಹಳ್ಳಿಗೆ ಹೋಗುವ ರಸ್ತೆಯಲ್ಲಿ ಪ್ರಾರಂಭವಾದ ಕಿಸಾನ್ ಸಿಲ್ಕ್ ಇಂಡಸ್ಟ್ರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಪ್ರಾರಂಭವಾದ ಮೊಟ್ಟಮೊದಲ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
‘ಆಗ ಗ್ರಾಮವನ್ನೆಲ್ಲಾ ಸಿಂಗರಿಸಿದ್ದೆವು. ದಿವಾನರಾದ ವಿಶ್ವೇಶ್ವರಯ್ಯನವರು ಬರುತ್ತಾರೆಂದರೆ ಸುಮ್ಮನೆ ಮಾತೇ. ಮನೆಗಳ ಮುಂದೆಲ್ಲಾ ರಂಗೋಲಿ ಹಾಕಿ, ತಳಿರು ತೋರಣಗಳಿಂದ ಅಲಂಕರಿಸಿದ್ದೆವು. ಗ್ರಾಮವೆಲ್ಲಾ ಹಬ್ಬದ ಸಡಗರದಿಂದ ಸಂಭ್ರಮಪಟ್ಟಿತ್ತು. ನಾನು ಚಪ್ಪರ ಹಾಕುವುದರಿಂದ ಹಿಡಿದು ತೋರಣ ಕಟ್ಟುವುದರೊಂದಿಗೆ ವೇದಿಕೆಯನ್ನು ಸಿಂಗರಿಸುವಲ್ಲಿ ತೊಡಗಿಸಿಕೊಂಡಿದ್ದೆ. ಅವರ ಮೆರವಣಿಗೆ, ಸಭೆ, ಭಾಷಣ ನೆನೆದರೆ ರೋಮಾಂಚನವಾಗುತ್ತದೆ. ನಮ್ಮ ಗ್ರಾಮದಲ್ಲಿ ಕಾರ್ಖಾನೆಯೊಂದನ್ನು ಸ್ಥಾಪಿಸಿ ನಮಗೆಲ್ಲಾ ಶ್ರಮಜೀವಿಗಳಾಗುವಂತೆ ಕರೆ ಕೊಟ್ಟ ಆ ಮಹಾನುಭಾವರ ಚಿತ್ರ ಇನ್ನೂ ಕಣ್ಣಮುಂದಿದೆ’ ಎಂದು ಹಳೆಯ ದಿನಗಳನ್ನು ಮೆಲುಕು ಹಾಕುತ್ತಾರೆ 92 ವರ್ಷದ ಇಳಿವಯಸ್ಸಿನ ನಿವೃತ್ತ ಉಪಾಧ್ಯಾಯ ಎಂ.ರಾಮಯ್ಯ.
–ಡಿ.ಜಿ.ಮಲ್ಲಿಕಾರ್ಜುನ