Home Articles ಸ್ವರ್ಣಪುಷ್ಪ ದರ್ಶನ

ಸ್ವರ್ಣಪುಷ್ಪ ದರ್ಶನ

0

ತಾಲ್ಲೂಕಿನಲ್ಲಿ ಬಿದ್ದ ಮಳೆರಾಯ ಕಕ್ಕೆ ಹೂವನ್ನು ಅರಳಿಸಿದ್ದಾನೆ. ಅಲ್ಲಲ್ಲಿ ಬೆಳೆದ ಕಕ್ಕೆ ಗಿಡ ಮರಗಳು ಹೂಬಿಟ್ಟು ಕಂಗೊಳಿಸುತ್ತಿವೆ. ಕಾಡು ಹೂವಿನ ಸೊಬಗು ಮತ್ತು ಗಮಲು ಆವರಿಸಿದೆ.
ಗೊಂಚಲುಗೊಂಚಲಾಗಿ ಬಿಡುವ ಕಕ್ಕೆಯ ಸೊಬಗು ಸಾಮಾನ್ಯವಾಗಿ ಮಾರ್ಚ್ನಿಂದ ಮೇ ತಿಂಗಳಿನಲ್ಲಿ ಕಂಡು ಬರುತ್ತದೆ. ಆದರೆ ಜುಲೈ ತಿಂಗಳಲ್ಲಿ ತಾಲ್ಲೂಕಿನಲ್ಲಿ ಕಂಡು ಬರುತ್ತಿರುವ ಕಕ್ಕೆಯ ಸೊಬಗಿಗೆ ಕೆಲವರು ಮಳೆಯ ಪ್ರಭಾವವೆಂದರೆ, ಇನ್ನು ಕೆಲವರು ಹವಾಮಾನ ವೈಪರೀತ್ಯದ ಸೂಚನೆ ಎನ್ನುತ್ತಾರೆ.
ಕಕ್ಕೆಯನ್ನು ಸ್ವರ್ಣಪುಷ್ಪ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಇದು ಹಳದಿ ಬಣ್ಣದ ಹೂವನ್ನು ಗೊಂಚಲು ಗೊಂಚಲಾಗಿ ಮರ ತುಂಬಾ ಬಿಟ್ಟು ಅತ್ಯಂತ ಸುಂದರವಾಗಿ ಕಾಣುವುದರಿಂದ ಇದನ್ನು ಇಂಗ್ಲೀಷ್ ಭಾಷೆಯಲ್ಲಿ ಗೋಲ್ಡನ್ ಶವರ್ ಟ್ರೀ ಎಂದು ಕರೆಯುತ್ತಾರೆ. ಇದು ಥೈಲ್ಯಾಂಡ್ ದೇಶದ ರಾಷ್ಟ್ರೀಯ ಪುಷ್ಪ ಮತ್ತು ಕೇರಳದ ರಾಜ್ಯ ಪುಷ್ಪವಾಗಿದೆ. ಇದು ಶಿವನಿಗೆ ತುಂಬಾ ಪ್ರಿಯವಾದ ಹೂವೆನ್ನುತ್ತಾರೆ.
ಕಕ್ಕೆ ಎಲ್ಲಾ ಕಡೆ ಬೆಳೆಯುವ ಒಂದು ಸಾಮಾನ್ಯ ಮರ. ಹಿಂದೆ ಎಲ್ಲೆಲ್ಲೂ ಕಕ್ಕೆ ಮರಗಳು ಕಾಣಿಸುತ್ತಿದ್ದವು. ಕಾಲದ ಬದಲಾವಣೆಗೆ ಸಿಕ್ಕು ಅವು ಕೊಡಲಿಗೆ ಆಹುತಿಯಾದವು. ಆದರೂ ಈಗ ಸರ್ಕಾರಿ ಜಮೀನು ಹಾಗೂ ರಸ್ತೆ ಬದಿಗಳಲ್ಲಿ ಮಾತ್ರ ಈ ಮರಗಳನ್ನು ಕಾಣಲು ಸಾಧ್ಯ.
ಈಚೆಗೆ ಮಳೆಯಾದ ಪರಿಣಾಮವಾಗಿ ಕಕ್ಕೆ ಮರಗಳು ಹಳದಿ ಬಣ್ಣದ ಹೂವನ್ನು ಮುಡಿಗೇರಿಸಿಕೊಂಡು ಸಂಭ್ರಮಿಸುತ್ತಿವೆ. ಯಾವುದೋ ಸುಂದರ ಆಭರಣದಂತೆ ಕಾಣುವ ಹೂ ಗೊಂಚಲುಗಳು ಕಣ್ಸೆಳೆಯುತ್ತವೆ. ಕಕ್ಕೆ ಮರ ತನ್ನ ಹೂವಿನ ವಾಸನೆಯಿಂದಲೇ ತನ್ನ ಇರುವಿಕೆಯನ್ನು ಸಾರುತ್ತದೆ.
ಕಕ್ಕೆ ಒಂದು ಮೂಲಿಕಾ ಸಸ್ಯವೂ ಹೌದು. ದನಕರುಗಳಿಗೆ ಕಾಲು ಬಾಯಿ ಜ್ವರಕ್ಕೆ ರೈತರು ಕಕ್ಕೆ ಎಲೆಯನ್ನು ತಂದು ಕೆಂಡದ ಮೇಲೆ ಹಾಕಿ ಹೊಗೆ ಹಾಕುತ್ತಾರೆ. ಕೆಲವು ಕಾಯಿಲೆಗಳಿಗೆ ಅದರ ತೊಗಟೆಯನ್ನು ಬಳಸುತ್ತಾರೆ. ಅದರ ಉದ್ದನೆಯ ಕಾಯಿಗಳು ನೋಡಲು ಸುಂದರವಾಗಿರುತ್ತವೆ.
ವಾತಾವರಣ ವೈಪರೀತ್ಯವೋ ಅಥವಾ ತಡವಾಗಿ ಅರಳುವ ಪ್ರಕೃತಿಯ ರೀತಿಯೋ ಅಂತೂ ಕಕ್ಕೆಯ ಹೂಗಳ ಗೊಂಚಲು ಜೇನು ದುಂಬಿಗಳಿಗೆ ಮಕರಂದವನ್ನು ನೋಡುಗರಿಗೆ ಆನಂದವನ್ನೂ ನೀಡುತ್ತಿರುವುದಂತೂ ಸತ್ಯ.