31.9 C
Sidlaghatta
Thursday, March 28, 2024
Home Blog Page 742

ಬಿಸಿಯೂಟ ಆಹಾರಧಾನ್ಯಗಳ ಅಕ್ರಮ ಸಾಗಾಣಿಕೆಯ ತಡೆ

0

ಶಾಲಾ ಮಕ್ಕಳಿಗೆ ಮದ್ಯಾಹ್ನದ ಬಿಸಿಯೂಟಕ್ಕೆ ಸರಬರಾಜು ಮಾಡಿರುವ ಆಹಾರಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಅನುದಾನಿತ ಶಾಲೆಯೊಂದರ ವಾಹನವನ್ನು ನಾಗರಿಕರು ಗುರುವಾರ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
6nov3ತಾಲ್ಲೂಕಿನ ವೈ.ಹುಣಸೇನಹಳ್ಳಿ ಗೇಟ್ನಲ್ಲಿರುವ ಎಸ್.ಆರ್.ಇ.ಟಿ. ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಶಾಲಾ ಮಕ್ಕಳಿಗೆ ಬಿಸಿಯೂಟಕ್ಕೆಂದು ಅಕ್ಷರದಾಸೋಹ ಇಲಾಖೆಯಿಂದ ಸರಬರಾಜು ಮಾಡಿದ್ದ ಆಹಾರ ಧಾನ್ಯಗಳಲ್ಲಿ ೧೧ ಮೂಟೆ ಗೋದಿ ೦೩ ಮೂಟೆ ತೊಗರಿಬೆಳೆ ಹಾಗೂ ೫೦ ಕೆ.ಜಿ. ಎಣ್ಣೆಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಸ್ಥಳೀಯ ನಾಗರಿಕರು ಕೊತ್ತನೂರು ಗೇಟ್ನಲ್ಲಿ ವಾಹನವನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಬಗ್ಗೆ ತಾಲ್ಲೂಕಿನ ಅಕ್ಷರದಾಸೋಹ ಇಲಾಖೆಯ ಸಹಾಯಕ ನಿರ್ದೇಶಕ ರಂಗಪ್ಪ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಾಲಾ ವಾಹನ ಹಾಗೂ ಚಾಲಕನನ್ನು ವಶಕ್ಕೆ ಪಡೆದುಕೊಂಡಿರುವ ಗ್ರಾಮಾಂತರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪರಭಾಷೆ ಚಿತ್ರವನ್ನು ಪ್ರದರ್ಶಿಸುತ್ತಿರುವ ಚಿತ್ರಮಂದಿರಗಳ ವಿರುದ್ಧ ಕ್ರಮಕ್ಕೆ ಆಗ್ರಹ

0

ನವೆಂಬರ್ ತಿಂಗಳಿನಲ್ಲಿ ಖಡ್ಡಾಯವಾಗಿ ತಾಲ್ಲೂಕಿನ ಎಲ್ಲಾ ಚಿತ್ರಮಂದಿರಗಳಲ್ಲೂ ಕನ್ನಡ ಚಲನಚಿತ್ರ ಪ್ರದರ್ಶಿಸುವ ಮೂಲಕ ನಾಡು ಮತ್ತು ನುಡಿಗೆ ಗೌರವ ಸಲ್ಲಿಸಬೇಕು. ಪರಭಾಷೆ ಚಿತ್ರವನ್ನು ಪ್ರದರ್ಶಿಸುತ್ತಿರುವ ಚಿತ್ರಮಂದಿರಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಮಾನ ಮನಸ್ಕರ ಹೋರಾಟ ಸಮಿತಿಯ ಸದಸ್ಯರು ಒತ್ತಾಯಿಸಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರಿಗೆ ಬುಧವಾರ ಮನವಿಯನ್ನು ಸಲ್ಲಿಸಿದ ಸಮಾನ ಮನಸ್ಕರ ಹೋರಾಟ ಸಮಿತಿಯ ಸದಸ್ಯರು, ಕನ್ನಡದ ಬಗ್ಗೆ ಗೌರವವಿಲ್ಲದೆ ಈಗಾಗಲೇ ಹಲವು ಚಿತ್ರಮಂದಿರಗಳಲ್ಲಿ ತೆಲುಗು ಚಿತ್ರವನ್ನು ಪ್ರದರ್ಶಿಸುತ್ತಿದ್ದರೂ ನೀವು ಕ್ರಮ ಕೈಗೊಂಡಿಲ್ಲ. ನವೆಂಬರ್ ತಿಂಗಳಿನಲ್ಲಿ ಪರಭಾಷೆ ಚಿತ್ರವನ್ನು ಪ್ರದರ್ಶಿಸದಂತೆ ಸೂಚನೆ ನೀಡಿ. ತಾಲ್ಲೂಕಿನ ಎಲ್ಲಾ ಖಾಸಗಿ ಅಂಗಡಿ ಮುಂಗಟ್ಟುಗಳು, ಕಚೇರಿಗಳ ಮೇಲೆ ಕನ್ನಡದ ಅಕ್ಷರದಲ್ಲಿ ನಾಮಫಲಕ ಹಾಕುವಂತೆ ಆದೇಶ ನೀಡಬೇಕೆಂದು ಮನವಿ ಮಾಡಿದರು.
ತಾಲ್ಲೂಕಿನ ಚಿತ್ರಮಂದಿರಗಳಲ್ಲಿ ಪರಭಾಷೆ ಚಿತ್ರಗಳನ್ನು ಪ್ರದರ್ಶನ ಮಾಡಿದ್ದಲ್ಲಿ ತಾಲ್ಲೂಕಿನ ಎಲ್ಲಾ ಕನ್ನಡಪರ, ರೈತಪರ, ದಲಿತಪರ, ಅಲ್ಪಸಂಖ್ಯಾತರ ಪರ ಸಂಘಟನೆಗಳು ಒಗ್ಗೂಡಿ ಆ ಚಿತ್ರಮಂದಿರಕ್ಕೆ ಮುತ್ತಿಗೆ ಹಾಕುತ್ತೇವೆ. ಅದಕ್ಕೆ ನೇರ ಹೊಣೆ ತಾಲ್ಲೂಕು ಆಡಳಿತವಾಗಿರುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಮಾನ ಮನಸ್ಕರ ಹೋರಾಟ ಸಮಿತಿಯ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹುಸೇನ್ಸಾಬ್, ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಭಕ್ತರಹಳ್ಳಿ ಪ್ರತೀಶ್, ಟಿಪ್ಪುಸುಲ್ತಾನ್ ಸಂಘದ ತಾಲ್ಲೂಕು ಅಧ್ಯಕ್ಷ ಅಫ್ಜಲ್ ಪಾಷ, ಮಹಮ್ಮದ್ ಅಸಾದ್, ಅಪ್ಪೇಗೌಡನಹಳ್ಳಿ ತ್ಯಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಮದಗಜಗಳ ಕುಸ್ತಿ, ರೋಚಕತೆಗೆ ಸಾಕ್ಷಿಯಾದ ಜನತೆ

0

ಪಟ್ಟಣದ ಅಮೀರ್ ಭಾಬಾ ದರ್ಗಾ ಹತ್ತಿರ ಬುಧವಾರ ಹೈದರಾಲಿ ಗರಡಿ ವತಿಯಿಂದ ನಡೆಸಿದ ಐದನೇ ವರ್ಷದ ಕುಸ್ತಿ ಪಂದ್ಯಾವಳಿಯು ರೋಚಕವಾಗಿದ್ದು ಜನರು ಉತ್ಸಾಹದಿಂದ ವೀಕ್ಷಿಸಿದರು.
ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಹಾಸನ, ಮೈಸೂರು, ಹುಬ್ಬಳ್ಳಿ, ಚಿತ್ರದುರ್ಗ, ದಾವಣಗೆರೆ, ಬೀದರ್, ಗುಲ್ಬರ್ಗಾ, ಕೋಲಾರ, ಹರಿಹರ, ಬೆಂಗಳೂರು ಮುಂತಾದೆಡೆಗಳಿಂದ ಪೈಲ್ವಾನರು ಆಗಮಿಸಿದ್ದರು.

 ಕುಸ್ತಿ ಪೈಲ್ವಾನ್ ತರಬೇತುದಾರರನ್ನು, ಗರಡಿ ಮನೆಯ ಗುರುಗಳನ್ನು ಹೈದರಾಲಿ ಗರಡಿ ವತಿಯಿಂದ ಗೌರವಿಸಲಾಯಿತು
ಕುಸ್ತಿ ಪೈಲ್ವಾನ್ ತರಬೇತುದಾರರನ್ನು, ಗರಡಿ ಮನೆಯ ಗುರುಗಳನ್ನು ಹೈದರಾಲಿ ಗರಡಿ ವತಿಯಿಂದ ಗೌರವಿಸಲಾಯಿತು
ಕುಸ್ತಿ ಪಂದ್ಯಾವಳಿಯನ್ನು ಪ್ರೋತ್ಸಾಹಿಸಲು ಈ ಬಾರಿ ವಿವಿದೆಡೆಯಿಂದ ಕುಸ್ತಿ ಪೈಲ್ವಾನ್ ತರಬೇತುದಾರರನ್ನು, ಗರಡಿ ಮನೆಯ ಗುರುಗಳನ್ನು ಕರೆಸಲಾಗಿತ್ತು. ಅವರನ್ನು ಹೈದರಾಲಿ ಗರಡಿ ವತಿಯಿಂದ ಮೈಸೂರುಪೇಟ ತೊಡಿಸಿ ಸನ್ಮಾನಿಸಲಾಯಿತು.
ಮರಿ ಪೈಲ್ವಾನರು ಒಂದೆಡೆ ಸೆಣಸಿ ಜನರಿಂದ ಮೆಚ್ಚುಗೆ ಪಡೆದರೆ, ಮದಗಜಗಳಂತಿದ್ದ ಪೈಲ್ವಾನರು ಮಾರ್ಪೀಟ್ ನಡೆಸಿ ಜನರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದರು.
ಕುಸ್ತಿ ನಡೆಯುವ ಸ್ಥಳದಲ್ಲಿ ಜನರು ಕಿಕ್ಕಿರಿದು ನಿಂತಿದ್ದಲ್ಲದೆ, ಸುತ್ತಮುತ್ತಲಿನ ಕಟ್ಟಡಗಳು ಹಾಗೂ ಮರದ ಮೇಲೆಲ್ಲಾ ಜನರಿದ್ದು ಕುಸ್ತಿಯನ್ನು ಆಸ್ವಾದಿಸಿದರು. ಚಪ್ಪಾಳೆ, ಶಿಳ್ಳೆ ಹೊಡೆದು ಹುರಿದುಂಬಿಸಿದರು. ಗೆದ್ದವರನ್ನು ಅಭಿನಂದಿಸಿದರು. ವಿಜೇತರಿಗೆ ಪ್ರೋತ್ಸಾಹಿಸಲು ಕೆಲವರು ಬಹುಮಾನ ಹಣವನ್ನು ಘೋಷಿಸುತ್ತಿದ್ದರು. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ ಕುಸ್ತಿ ಪಟುಗಳು ವಿವಿಧ ಕಸರತ್ತು ಹಾಗೂ ಕೈ ಚಳಕದೊಂದಿಗೆ ಸ್ಥಳೀಯ ಕುಸ್ತಿ ಪಟುಗಳೊಂದಿಗೆ ಕುಸ್ತಿ ನಡೆಸಿದರು. ಪರಸ್ಪರರು ಬಗ್ಗಿಸಲು ಮತ್ತು ಹೆಣೆಯಲು ನಡೆಸಿದ ತಂತ್ರ ಮತ್ತು ಪ್ರತಿ ತಂತ್ರದ ಕುಸ್ತಿ ಪಟುಗಳು ನೋಡುಗರ ಮೈನವಿರೇಳಿಸಿದವು. ಸೂಕ್ಷ್ಮ ಹೋರಾಟದ ಕ್ಷಣಗಳಲ್ಲಿ ಉತ್ತೇಜಿಸುವ ಜೈಕಾರ ಕೇಳಿ ಬಂದಿತು. ವಿಜೇತರಾದಾಗ ಅಭಿಮಾನಿಗಳು ಸಂತಸದಿಂದ ಕೇಕೆ ಹಾಕಿ ಕೂಗಿ ಕುಣಿದಾಡಿದ ದೃಶ್ಯ ಸಹ ಕಂಡುಬಂತು.
ಕೆಮ್ಮಣ್ಣಿನಿಂದ ನಿರ್ಮಿಸಿದ್ದ ಎತ್ತರದ ಕುಸ್ತಿ ಅಖಾಡದ ಸುತ್ತಲೂ ನೆರೆದಿದ್ದ ನೂರಾರು ಜನರು ಕುಸ್ತಿ ಪಟುಗಳ ಪ್ರತಿಯೊಂದು ಪಟ್ಟನ್ನೂ ಕಣ್ಣು ಮಿಟುಕಿಸದೆ ಕಣ್ತುಂಬಿಕೊಂಡು ರೋಮಾಂಚನಗೊಂಡರು. ಆಹ್ವಾನಿತ ಪೈಲ್ವಾನರಿಗಿಂತ ತಾವೇನೂ ಕಡಿಮೆಯಿಲ್ಲ ಎಂಬಂತೆ ಸ್ಥಳೀಯ ಪೈಲ್ವಾನರು ಕೂಡ ಸೆಣಸಿ ಸೈ ಎನಿಸಿಕೊಂಡರು.
ಭಾಗವಹಿಸಿದ್ದ ಎಲ್ಲಾ ಪೈಲ್ವಾನರಿಗೂ ಪದಕ ಹಾಗೂ ಹೂವಿನ ಹಾರವನ್ನು ಹಾಕಿ ಹೈದರಾಲಿ ಗರಡಿ ವತಿಯಿಂದ ಅಭಿನಂದಿಸಿದ್ದಲ್ಲದೆ, ವಿಶೇಷ ಮಾರ್ಪೀಟ್ನಲ್ಲಿ ಗೆದ್ದವರಿಗೆ ನಗದು ಹಣ ಮತ್ತು ಟ್ರೋಫಿ ನೀಡಿದರು.
ಗೌಸ್ಪೀರ್ಸಾಬ್, ಎಂ.ಡಿ.ಮೌಲ, ಮುಕ್ತಿಯಾರ್ ಪಾಷ, ತಮೀಮ್, ಅಫ್ಜಲ್, ಅಮ್ಜು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಟಿಪ್ಪುಸುಲ್ತಾನ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳ ಖಂಡನೆ

0

ದೇಶ ಪ್ರೇಮಿ ಟಿಪ್ಪುಸುಲ್ತಾನ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಹಾಗೂ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಕರ್ನಾಟಕ ಟಿಪ್ಪುಸುಲ್ತಾನ್ ಕಮಿಟಿಯ ತಾಲ್ಲೂಕು ಘಟಕದ ಪದಾಧಿಕಾರಿಗಳು ಬುಧವಾರ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಸೇರಿದಂತೆ ವಿಶ್ವ ಹಿಂದೂ ಪರಿಷತ್ನ ಗೋಪಾಲಜಿ ಮತ್ತಿತರರು ದೇಶಪ್ರೇಮಿ ಟಿಪ್ಪುಸುಲ್ತಾನದ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುವುದರೊಂದಿಗೆ ಇತಿಹಾಸ ತಿರುಚಿ ಹೇಳಿಕೆ ನೀಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ಅಲ್ಪಸಂಖ್ಯಾತ ಎಂಬ ಒಂದೇ ಕಾರಣಕ್ಕೆ ಟಿಪ್ಪುಸುಲ್ತಾನ್ರ ಬಗ್ಗೆ ಅವಹೇಳಿನಕಾರಿ ಮಾತುಗಳನ್ನಾಡುತ್ತಿದ್ದಾರೆ. ಟಿಪ್ಪು ದೇಶಕ್ಕಾಗಿ ತನ್ನಿಬ್ಬರ ಮಕ್ಕಳನ್ನು ಒತ್ತೆಯಾಗಿಟ್ಟಿದ್ದ ಹಾಗು ಮೈಸೂರು ರಾಜ್ಯ ಪರಕೀಯರ ಪಾಲಾಗಬಾರದು ಎಂಬ ಉದ್ದೇಶದಿಂದ ಯುದ್ಧದಲ್ಲಿ ವೀರ ಮರಣವನ್ನು ಅಪ್ಪಿದ. ಅಪ್ಪಟ ದೇಶಭಕ್ತನ ಬಗ್ಗೆ ಕೀಳಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಟಿಪ್ಪುಸುಲ್ತಾನ್ ಕಮಿಟಿಯ ತಾಲ್ಲೂಕು ಅಧ್ಯಕ್ಷ ಅಫ್ಜಲ್ಪಾಷ, ಪದಾಧಿಕಾರಿಗಳಾದ ಶಬ್ಬೀರ್ಪಾಷ, ಆರಿಫ್ಖಾನ್, ನವಾಜ್, ಇಮ್ರಾನ್ಖಾನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಬೆಸ್ತರ ಸಂಘದಿಂದ ಬೈಕ್ ರ್ಯಾಲಿ

0

ತಾಲ್ಲೂಕಿನ ಬೆಸ್ತರ ಸಂಘದಿಂದ ಬುಧವಾರ ಶಾಶ್ವತ ಹೋರಾಟಕ್ಕೆ ಬೆಂಬಲಿಸಿ ಬೈಕ್ ರ್ಯಾಲಿ ನಡೆಸಿ ತಹಶೀಲ್ದಾರರಿಗೆ ಮನವಿಯನ್ನು ಸಲ್ಲಿಸಲಾಯಿತು.
ಚಿಕ್ಕಬಳ್ಳಾಪುರದ ಚದಲಪುರದ ಬಳಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಶಾಶ್ವತ ನೀರಾವರಿ ಹೋರಾಟಕ್ಕೆ ಬೆಂಬಲಿಸಿ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಬಯಲುಸೀಮೆಯ ನಮ್ಮ ಭಾಗದ ಜನರಿಗೆ ನೀರಿನ ಅಭಾವ ಬಹಳಷ್ಟಿದ್ದು, ಸಾವಿರಾರು ಅಡಿ ಕೊಳವೆ ಬಾವಿಯನ್ನು ಕೊರೆದರೂ ನೀರು ಸಿಗದಂತಾಗಿದೆ. ಶಾಶ್ವತ ನೀರಾವರಿ ಜಾರಿಯಾಗದಿದ್ದಲ್ಲಿ ಜನರು ಹಾಗೂ ಜಾನುವಾರುಗಳು ಸಂಕಷ್ಟವನ್ನೆದುರಿಸಲಿದ್ದಾರೆ. ಈ ಕೂಡಲೇ ಸರ್ಕಾರ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಬೆಸ್ತರ ಸಂಘದ ವತಿಯಿಂದ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿ, ಚಿಕ್ಕಬಳ್ಳಾಪುರದ ಚದಲಪುರದ ಬಳಿಗೆ ಬೈಕ್ ರ್ಯಾಲಿ ಮೂಲಕ ತೆರಳಿದರು.
ಬೆಸ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ಜಯರಾಮ್, ತಾಲ್ಲೂಕು ಅಧ್ಯಕ್ಷ ಬಾಲಾಜಿ ಕೃಷ್ಣಮೂರ್ತಿ, ಲಕ್ಷ್ಮೀನಾರಾಯಣ, ನ್ಯಾತಪ್ಪ, ಮುರಳಿ, ಎಚ್.ಎನ್.ಗೋಪಾಲ್, ಮೋಹನ್ಕುಮಾರ್, ನಾರಾಯಣಸ್ವಾಮಿ, ವೆಂಕಟರಾಯಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ನಗರದ ನಾಲ್ವರು ಕರಾಟೆಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

0

ನಗರದ ನಾಲ್ವರು ವಿದ್ಯಾರ್ಥಿಗಳು ಗುಜರಾತ್ನ ಸೂರತ್ನಲ್ಲಿ ನಡೆಯಲಿರುವ ಏಳನೇ ಅಕ್ಷಯ್ಕುಮಾರ್ ಇನ್ವಿಟೇಷನಲ್ ಕೂಡೋ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿದ್ದಾರೆ.
ಜಯಸಿಂಹ, ಟಿ.ಎನ್.ಹೇಮಂತ್, ಓಂ ದೇಶಮುದ್ರೆ ಮತ್ತು ಸಮೀರ್ಪಾಷ ರಾಷ್ಟ್ರಮಟ್ಟದಲ್ಲಿ ನಡೆಯುವ ಕೂಡೋ ಚಾಂಪಿಯನ್ಶಿಪ್ಗೆ ಆಯ್ಕೆಯಾದ ಕರಾಟೆಪಟುಗಳಾಗಿದ್ದಾರೆ ಎಂದು ಕೂಡೋ ಅಸೋಸಿಯೇಷನ್ ಆಫ್ ಕರ್ನಾಟಕದ ರಾಜ್ಯ ಅಧ್ಯಕ್ಷ ಜಬೀವುಲ್ಲಾ ತಿಳಿಸಿದ್ದಾರೆ.
ಸೂರತ್ನ ಎ ಸಿ ಡೋಮ್ನಲ್ಲಿ ನವೆಂಬರ್ 5 ರಿಂದ 8 ರವರೆಗೂ ನಡೆಯುವ ಕೂಡೋ ಚಾಂಪಿಯನ್ಶಿಪ್ಗೆ ಜಿಲ್ಲೆಯಿಂದ ಇಬ್ಬರು ತರಬೇತುದಾರರೂ ಸೇರಿದಂತೆ 18 ಮಂದಿ ತೆರಳುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಬಸವ ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆಯಲ್ಲಿ ರಾಜಕೀಯ

0

ತಾಲ್ಲೂಕಿನ ಬಹುತೇಕ ಕಾಂಗ್ರೆಸ್ ಆಡಳಿತವಿರುವ ಗ್ರಾಮ ಪಂಚಾಯತಿಗಳಲ್ಲಿ ಬಸವ ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆಯು ಏಕಪಕ್ಷೀಯವಾಗಿ ನಡೆದಿದೆ. ಬಡವರಿಗೆ ಅನ್ಯಾಯವಾಗಿದೆ ಎಂದು ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ ನೇತೃತ್ವದಲ್ಲಿ ಕಾರ್ಯಕರ್ತರು ಮಂಗಳವಾರ ತಾಲ್ಲೂಕು ಪಂಚಾಯತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಬಸವ ವಸತಿ ಯೋಜನೆಯಡಿ 49 ಮನೆಗಳು ಮಂಜೂರಾಗಿವೆ. ಶಾಸಕರ ಅನುದಾನದಲ್ಲಿ 30 ಮನೆ ಮತ್ತು ಇಂದಿರಾ ಆವಾಸ್ ಯೋಜನೆಯಡಿ 19 ಮನೆಗಳು ಮಂಜೂರಾಗಿವೆ. ಯಾವುದೇ ವಾರ್ಡ್ ಸಭೆ ನಡೆಸದೆ ಏಕಪಕ್ಷೀಯವಾಗಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ತೀರ್ಮಾನಿಸಿ ಫಲಾನುಭವಿಗಳ ಆಯ್ಕೆ ಮಾಡಿದ್ದಾರೆ. ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೆಸ್ ಬೆಂಬಲಿತ 8 ಸ್ಥಾನಗಳು, ಜೆಡಿಎಸ್ ಬೆಂಬಲಿತ 7 ಸ್ಥಾನಗಳಿವೆ. ಜೆಡಿಎಸ್ ಬೆಂಬಲಿತ ಸದಸ್ಯರನ್ನು ಪರಿಗಣನೆಗೆ ತೆಗೆದುಕೊಳ್ಳದೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಹೆಚ್ಚು ಮನೆಗಳನ್ನು ಮಂಜೂರು ಮಾಡುವ ಮೂಲಕ ಪಕ್ಷಪಾತ ಧೋರಣೆಯನ್ನು ಅನುಸರಿಸಿದ್ದಾರೆ. ನಿಜವಾದ ನಿವೇಶನ ರಹಿತ ಫಲಾನುಭವಿಗಳಿಗೆ ಸಿಗಬೇಕಾದ ಉದ್ದೇಶವಿರುವ ಸರ್ಕಾರದ ಯೋಜನೆಯನ್ನು ರಾಜಕೀಯ ದುರುದ್ದೇಶಕ್ಕೆ ಬಲಿಯಾಗಿರುವುದು ದುರ್ಧೈವ ಎಂದು ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ ದೂರಿದರು.
ವಸತಿ ಯೋಜನೆಯ ಜಾಗೃತಿ ಸಮಿತಿ ಸಭೆಯನ್ನು ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಶಾಸಕ ಎಂ.ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಬೇಕಿತ್ತು. ಆದರೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ ನೇತೃತ್ವದಲ್ಲಿ ಕಾರ್ಯಕರ್ತರು ತಾಲ್ಲೂಕು ಪಂಚಾಯತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರಿಂದಾಗಿ ಸಭೆಯು ಮುಂದೂಡಲ್ಪಟ್ಟಿತು.
ಗ್ರಾಮ ಪಂಚಾಯತಿ ಅಧ್ಯಕ್ಷ ಸುಬ್ಬಣ್ಣ ರಾಜೀನಾಮೆ ನೀಡಬೇಕು. ಕಾರ್ಯದರ್ಶಿ ನಾಗರಾಜಯ್ಯ ಅವರನ್ನು ಅಮಾನತ್ತು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಂಗೀತ ಚಿಕಿತ್ಸೆ – ಒಂದು ಪರಿಚಯ

0

‘ಸಂಗೀತ’ ಎಂಬುದು ಎಲ್ಲರಿಗೂ ಆಹ್ಲಾದಕರವೆಂದೆನಿಸುವ ಧ್ವನಿ ವಿಶೇಷ ಹಾಗೂ ವಿದ್ಯೆ, ಸಂಗೀತ ಕಲೆ ಕೂಡ. ಎಲ್ಲಾ ಭಾರತೀಯ ಕಲೆ/ವಿದ್ಯೆಗಳಿಗೆ ತಮ್ಮದೇ ಆದಂತಹ ವ್ಯಾಪ್ತಿ (Dimensions) ಇದೆ. ಎಲ್ಲಾ ಕಲೆಗಳೂ ಕೂಡ ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆ ಜೊತೆಗೇ ಸಾಮಾಜಿಕ ಹಿತ ಎರಡನ್ನೂ ಉಂಟು ಮಾಡುತ್ತದೆ. ಚಿತ್ರಗಾರನಿಂದ ರೂಪಿತವಾದಂತಹ ಚಿತ್ರ ಅವನ ಸೃಜನಶೀಲತೆ, ಬೌದ್ಧಿಕ ವಿಕಾಸ, ಆತ್ಮ ಸಂತೃಪ್ತಿಗಳನ್ನು ಉದ್ದೀಪನಗೊಳಿಸಿದರೆ ಅದೇ ಚಿತ್ರವು ನೋಡುಗನಿಗೆ ಸ್ಫೂರ್ತಿದಾಯಕ, ಮನೋಲ್ಲಾಸಕರ ಹಾಗೂ ರಂಜಕ. ಅಂತೆಯೇ ಸಂಗೀತ ಶಾಸ್ತ್ರವೂ ಕೂಡ ಹಾಡುಗ ಕೇಳುಗರ ಮೇಲೆ ತನ್ನದೇ ಆದಂತಹ ಪ್ರಭಾವವನ್ನು ಬೀರುತ್ತದೆ.
ಸಂಗೀತಕ್ಕೆ ಸಾಮಾಜಿಕ, ಧಾರ್ಮಿಕ, ಸಾಂಸ್ಕøತಿಕ, ಆಧ್ಯಾತ್ಮಿಕ ಮೌಲ್ಯಗಳಿರುವಂತೆಯೇ ಚಿಕಿತ್ಸಾ ಮೌಲ್ಯ ಕೂಡ ಇದೆ. ಮನುಷ್ಯನ ವಿವಿಧ ಘಟಕಗಳಾದ ಶರೀರ ಇಂದ್ರಿಯ ಮನಸ್ಸು, ಆತ್ಮಗಳಲ್ಲಿ ಸಮತೆಯನ್ನು ಕಾಪಾಡುವ ವಿಧಾನಕ್ಕೆ ‘ಚಿಕಿತ್ಸೆ’ ಎಂಬುದಾಗಿ ಆಯುರ್ವೇದ ಶಾಸ್ತ್ರದಲ್ಲಿ ಹೇಳಲಾಗಿದೆ. ಚಿಕಿತ್ಸೆ ಎಂದರೆ ಕೇವಲ ರೋಗವನ್ನು ನಿವಾರಣೆ ಮಾಡುವುದಷ್ಟೇ ಅಲ್ಲ, ರೋಗ ನಿವಾರಣೆಯ ನಂತರ ಮನುಷ್ಯನ ಉಳಿದೆಲ್ಲಾ ಘಟಕಗಳನ್ನೂ ಸುಸ್ಥಿತಿಯಲ್ಲಿಡುವ ವೈಜ್ಞಾನಿಕವಾದ ವಿಧಾನವೇ ‘ಚಿಕಿತ್ಸೆ’. ಸಂಗೀತವೆಂಬುದು ಮನುಜನ ಎಲ್ಲಾ ಘಟಕಗಳ ಮೇಲೆಯೂ ಪ್ರಭಾವವನ್ನು ಬೀರಿ ಶರೀರ, ಇಂದ್ರಿಯ, ಮನಸ್ಸು, ಆತ್ಮಗಳ ಕ್ರಿಯಾ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ. ಸಂಗೀತದಲ್ಲಿರುವ ಸಪ್ತಸ್ವರಗಳಾದ ‘ಸರಿಗಮಪದನಿ’ ಎಂಬುದು ನಮಗೆಲ್ಲಾ ತಿಳಿದ ವಿಚಾರವೇ. ‘ಸರಿ’ ಎಂದರೆ ದೋಣಿ; ‘ಗಮ’ ಎಂದರೆ ಕೊಡುವುದು ಎಂಬುದಾಗಿ ಉಪನಿಷತ್ ಗಳಲ್ಲಿ ಹೇಳಲ್ಪಟ್ಟಿದೆ. ಮನುಷ್ಯನ ವಿಕಾಸಕ್ಕೆ ಎಲ್ಲೆಯಿಲ್ಲ. ‘ಜೀವನದಲ್ಲಿ ಅತ್ಯುನ್ನತ ಸ್ಥಾನವನ್ನು ಪಡೆಯುವಂತಾಗಲಿ’ ಎಂಬಂತಹ ಆಶಯ ಈ ಸಪ್ತಸ್ವರಗಳಲ್ಲಿ ಬಿಂಬಿತವಾಗಿದೆ. ಧನಾತ್ಮಕವಾದಂತಹ ಆಲೋಚನೆಯನ್ನು ಸಪ್ತಸ್ವರಗಳು ಮೂಡಿಸುತ್ತವೆ. ಇಂತಹ ಧನಾತ್ಮಕವಾದಂತಹ ಆಲೋಚನೆಯೇ ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆ ಹಾಗೂ ಆರೋಗ್ಯಕ್ಕೆ ಮೂಲಾಧಾರ.
ಆಯುರ್ವೇದದ ಗ್ರಂಥವಾದ ಚರಕ ಸಂಹಿತೆಯಲ್ಲಿ ‘ಗೀತವಾದಿತ್ರ ಶ್ರವಣ’ ಅಂದರೆ ಸುಮಧುರ ಗಾಯನ ಶ್ರವಣ, ಆಹ್ಲಾದಕರ ಸಂಗೀತ ವಾದ್ಯ ಶ್ರವಣವೆಂಬುದು ಒಂದು ಚಿಕಿತ್ಸಾ ವಿಧಾನವಾಗಿ ಉಲ್ಲೇಖಿಸಲ್ಪಟ್ಟಿದೆ. ಆಚಾರ್ಯ ಚರಕರು “ಸತ್ವಾವಜಯ” ಎಂಬಂತಹ ವಿಶೇಷವಾದ ಚಿಕಿತ್ಸಾ ಕ್ರಮವನ್ನು ಉಲ್ಲೇಖಿಸಿದ್ದಾರೆ. ಮನಸ್ಸಿಗೆ ಅಹಿತಕರವೆಂದೆನಿಸುವ ಪರಿಸ್ಥಿತಿಯನ್ನು ಎದುರಿಸಿ ಮಾನಸಿಕ ಸ್ವಾಸ್ಥ್ಯತೆಯನ್ನು ಕಾಪಾಡಿಕೊಳ್ಳುವಲ್ಲಿ ಸಹಾಯಕವಾಗುವ ಚಿಕಿತ್ಸಾ ಕ್ರಮವು ‘ಸತ್ವಾವಜಯ ಚಿಕಿತ್ಸೆ’ ಎಂದೆನಿಸಿದೆ. ವ್ಯಕ್ತಿಯ ಮನೋಬಲವನ್ನು ಹೆಚ್ಚಿಸುವಲ್ಲಿ ಇದು ಸಹಕಾರಿ. ಸಂಗೀತ ಚಿಕಿತ್ಸೆಯೂ ಕೂಡ ಮನೋಬಲವನ್ನು ಹೆಚ್ಚಿಸುವಲ್ಲಿ ಸಹಕಾರಿ.
“ಗೀತಂ ವಾದ್ಯಂ ತಥಾನೃತ್ತಂ ತ್ರಯಂ ಸಂಗೀತಮುಚ್ಯತೆ||” ಎಂಬುದಾಗಿ ಸಂಗೀತ ಗ್ರಂಥವಾದ ಸಂಗೀತ ರತ್ನಾಕರದಲ್ಲಿ ಉಲ್ಲೇಖಿಸಲ್ಪಟ್ಟಿದೆ. ರಾಗ, ತಾಳ, ಭಾವ, ಸಾಹಿತ್ಯಗಳ ಸಂಗಮವೇ ಸಂಗೀತ. ತಾಳವು ಶರೀರದ ಎಲ್ಲಾ ಅವಯವಗಳ ಸ್ಪಂದನವನ್ನು ಸರಿಗೊಳಿಸಿದರೆ, ರಾಗ, ಭಾವಗಳು ಮನಸ್ಸನ್ನು ಶಾಂತಗೊಳಿಸುತ್ತವೆ. ಸಾಹಿತ್ಯವು ಧನಾತ್ಮಕ ಬುದ್ಧಿಯನ್ನು ಪ್ರಚೋದಿಸುತ್ತದೆ.
ಸಂಗೀತ ಚಿಕಿತ್ಸೆಯ ಮೂಲ ಸಿದ್ಧಾಂತವೆಂದರೆ ‘ಇಂತಹ ರೋಗಿಗೆ ಇಂತಹ ರಾಗ’ ಎಂದೇ ಹೊರತು ‘ಇಂತಹ ರೋಗಕ್ಕೆ ಇಂತಹ ರಾಗ’ ವೆಂದಲ್ಲ. ಎಲ್ಲಾ ಭಾರತೀಯ ವೈದ್ಯ ಸಿದ್ಧಾಂತಗಳು ‘ವ್ಯಕ್ತಿನಿಷ್ಠ’ ಒಂದೇ ವ್ಯಾಧಿ ಅನೇಕ ಮಂದಿಯಲ್ಲಿ ಅನೇಕ ರೀತಿಯಲ್ಲಿ ವ್ಯಕ್ತವಾಗುತ್ತದೆ. ರೋಗದ ತೀವ್ರತೆಯೂ ಭಿನ್ನ, ಅಂತೆಯೇ ಚಿಕಿತ್ಸೆಯನ್ನೂ ರೋಗಿಗೆ ನೀಡಬೇಕೇ ವಿನ: ರೋಗಕ್ಕಲ್ಲ. ಹಾಗಾಗಿ ರೋಗಿಯಲ್ಲಿ ರೋಗದ ಕಾರಣಗಳನ್ನು ಹುಡುಕಿ ರೋಗದ ತೀವ್ರತೆಯನ್ನು ಅರಿತು, ರೋಗಿಗೆ ಹೊಂದುವಂತಹ ರಾಗ, ಸಂಗೀತ ವಿಧಾನದ ಮೂಲಕ ಚಿಕಿತ್ಸೆ ಮಾಡಬೇಕಾಗುತ್ತದೆ. ಇಂದಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿರುವ ಹಾಗೂ 75% ಜನ ಅನುಭವಿಸುತ್ತಿರುವ ಮನೋ ಶಾರೀರಿಕ ವ್ಯಾಧಿಗಳು (Psychosomatic Diseases) ಹಾಗೂ ಮಾನಸಿಕ ಒತ್ತಡ (Tension) ಗಳಂತಹ ತೊಂದರೆಗಳಲ್ಲಿ ಖಂಡಿತವಾಗಿಯೂ ಸಂಗೀತ ಚಿಕಿತ್ಸೆಯು ರಾಮಬಾಣವೇ ಸರಿ.
ಪ್ರಾಚೀನ ಕಾಲದಲ್ಲಿ ಕುಟುಂಬದವರೆಲ್ಲಾ ಸೇರಿ ಮುಸ್ಸಂಜೆಯ ಸಮಯದಲ್ಲಿ ಭಜನೆ ಮಾಡುವ ಪರಿಪಾಠವಿತ್ತು. ಭಜನೆಯೆಂಬುದು ತಾಳ, ರಾಗ ಪ್ರಧಾನವಾದ ಸಂಗೀತ ವಿಧಾನವಾಗಿದ್ದು ಮೆದುಳಿನ ಬೆಳವಣಿಗೆಗೆ ಸಹಕಾರಿ. ತಾಳವನ್ನು ನಿಯಂತ್ರಿಸುವ ಮೆದುಳಿನ ಎಡಭಾಗ, ರಾಗದ ಭಾವವನ್ನು ನಿಯಂತ್ರಿಸುವ ಮೆದುಳಿನ ಬಲಭಾಗಗಳು ಭಜನಾ ವಿಧಾನದಿಂದ ಉತ್ತೇಜನ ಹೊಂದಿ, ತನ್ಮೂಲಕ ವ್ಯಕ್ತಿಯ ವಿಕಾಸಕ್ಕೆ ಸಹಕಾರಿಯಾಗುತ್ತದೆ.
ಇಂತಹ ‘ಪರಿಪೂರ್ಣತೆ’ ಗೆ ಪೂರಕವಾಗಿರುವ ಸಂಗೀತವನ್ನು ನಾವು ಅರಿಯೋಣ, ಕಲಿಯೋಣ, ಅದರಿಂದ ಆರೋಗ್ಯದ ಮಟ್ಟವನ್ನೂ ಹೆಚ್ಚಿಸಿಕೊಳ್ಳೋಣ, ಸುಧಾರಿಸಿಕೊಳ್ಳೋಣ, ರೋಗವನ್ನೂ ನಿವಾರಣೆ ಮಾಡಿಕೊಳ್ಳೋಣ, ವಿಕಾಸದ ಉತ್ತುಂಗಕ್ಕೇರೋಣ ||ಸರ್ವೇ ಜನಾ: ಸುಖಿನೋ ಭವಂತು||
ಡಾ. ಶ್ರೀವತ್ಸ.

ಜತ್ರೋಫಾ – ಸೋತಿತು ಏಕೆ?

0

ಆಗಷ್ಟೇ ವೆನಿಲ್ಲಾ ರೈತರನ್ನು ನಿರಾಶೆಗೊಳಿಸಿತ್ತು. ಒಂದೆಡೆ ಅದರ ಬೆಲೆ ಮೂರೂವರೆ ಸಾವಿರದಿಂದ ನೂರಾ ಹತ್ತು-ಇಪ್ಪತ್ತಕ್ಕೆ ಇಳಿದಿತ್ತು. ಜೊತೆಗೆ ಗುಣಪಡಿಸಲಾಗದ ವಿಲ್ಟ್ ಯಾ ಕೊಳೆ ರೋಗವೊಂದು ವೆನಿಲ್ಲಾ ಬಳ್ಳಿಗಳನ್ನು ನಾಶಪಡಿಸತೊಡಗಿತ್ತು. ಆಗ ಅಬ್ಬರದೊಂದಿಗೆ ಆಗಮಿಸಿದ ಜತ್ರೋಫಾ ರೈತರಲ್ಲಿ ಮತ್ತೆ ಹೊಸ ಆಸೆ ಹುಟ್ಟಿಸಿತ್ತು. ಆ ಮಟ್ಟಿಗಾದರೂ ಜತ್ರೋಫಾಗೆ ಥ್ಯಾಂಕ್ಸ್ ಹೇಳಬೇಕು. ರೈತರ ಆತ್ಮಹತ್ಯೆಗಳ ಸಂಖ್ಯೆಯನ್ನು ಅದು ಕಡಿಮೆಗೊಳಿಸಿರಲೇಬೇಕು!
ಬಹುಸಂಖ್ಯಾತ ರೈತರಿಗೆ ಜತ್ರೋಫಾ ಹೆಸರು ಹೊಸದಾದರೂ ಗಿಡ ಚಿರಪರಿಚಿತವಾಗಿತ್ತು. ಮಲೆನಾಡು ಭಾಗದಲ್ಲಿ ಕಳ್ಳಿ ಎಂಬ ಬೇಲಿಸಾಲಿನ ಈ ಗಿಡ ಬೆಳೆಸುವುದು ಸುಲಭ ಎನ್ನಿಸಿತ್ತು. ಪೂರಕವಾಗಿ ಜತ್ರೋಫಾಗೆ ಸಿಕ್ಕ ಪ್ರಚಾರವೂ ಅದೇ ನಿಟ್ಟಿನಲ್ಲಿತ್ತು. ಎಲ್ಲ ಮಾದರಿಯ ಭೂಮಿಯಲ್ಲಿ ಬೆಳೆಯಲು ಯೋಗ್ಯ, ಬದುಕಲು ಬೆಳೆಯಲು ಬಾಹ್ಯ ನೀರೇ ಬೇಡ. ನೆಟ್ಟರೆ ಸಾಕು, ಆರೈಕೆ ಬೇಡ ಎಂದೇ ವ್ಯಾಖ್ಯಾನಿಸಲಾಗಿತ್ತು. ನಿಜಕ್ಕಾದರೆ, ಈ ಮಾತು ಬೀಜಕ್ಕೆ ಮಾತ್ರ ಅನ್ವಯವಾಗುತ್ತಿತ್ತು!
ಜತ್ರೋಫಾದ್ದು ಮೃದು ಕಾಂಡ. ಇದು ಭರ್ಜರಿ ಮಳೆಯನ್ನಾಗಲೀ, ಬಿರು ಬೇಸಿಗೆಯನ್ನಾಗಲಿ ತಾಳುವಂತದಲ್ಲ. ಮೊದಲ ನಾಲ್ಕು ವರ್ಷವಂತೂ ನೀರಿನ ಒತ್ತಾಯ ಬೇಕೇ ಬೇಕು. ರಕ್ಷಣೆ ಬೇಕು. ಜಾನುವಾರುಗಳು ತಿನ್ನಲಾರವು ಎಂಬುದು ಸತ್ಯವಾದರೂ ಅವುಗಳ ಓಡಾಟಕ್ಕೆ ಸಿಕ್ಕ ಗಿಡಗಳು ನಲುಗಿದ ಉದಾಹರಣೆ ಹಲವು. ಹಾಗಾಗಿ ಬೇಲಿ ಅನಿವಾರ್ಯ. ಜತ್ರೋಫಾದಿಂದ ಕೂಡ ಸೂಚಿತ ಮಟ್ಟದ ಇಳುವರಿ ಪಡೆಯಲು ಗೊಬ್ಬರದ ಬೆಂಬಲವೂ ಬೇಕು. ಅಂದ ಮೇಲೆ ಖರ್ಚೇ ಇಲ್ಲದ ಬೆಳೆ ಎಂಬ ಮಾತು ಮಿಥ್ಯೆಯಾಗಿ ಜತ್ರೋಫಾ ಕೃಷಿಯೂ ಬಂಡವಾಳ ಬಯಸುತ್ತದೆ ಎಂದಾಯಿತು. ರೈತ ಮುನ್ನುಗ್ಗಲು ಹೆದರುವಂತಾಯಿತು. ಅಷ್ಟಕ್ಕೂ ಜತ್ರೋಫಾ ಬೀಜದ ಮಾರುಕಟ್ಟೆ ದರ ಇವತ್ತಿಗೂ ನಿಗದಿಯಾಗಿಲ್ಲ!
ಸುಮ್ಮನೆ ಇನ್ನೊಂದು ಅಂಕಿಅಂಶವನ್ನು ಪರಿಶೀಲಿಸಿ. 2006-07ರ ಸಾಲಿನಲ್ಲಿ ಸರಿಸುಮಾರು 52.33 ಮಿಲಿಯನ್ ಮೆಟ್ರಿಕ್ ಟನ್ ಪೆಟ್ರೋ-ಡೀಸೆಲ್ ದೇಶದಲ್ಲಿ ಬಳಕೆಯಾಗಿದೆ. ಇದರೊಂದಿಗೆ ಶೇಕಡಾ ಒಂದರಷ್ಟು ಜತ್ರೋಫಾ ತೈಲವನ್ನು ಬೆರೆಸಬೇಕೆಂದರೂ 6,27,960 ಎಕರೆ ಭೂಪ್ರದೇಶದ ಜತ್ರೋಫಾ ಇಳುವರಿಯ ಅಗತ್ಯವಿದೆ!
ಜತ್ರೋಫಾ ತನ್ನ ಮೂರನೇ ವರ್ಷದಿಂದ ಪರಮಾವಧಿ ಬೆಳೆ ಅರ್ಥಾತ್ ಎಕರೆಗೆ 2,500 ಕೆ.ಜಿ. ದೊರಕಿಸಿಕೊಡುತ್ತದೆ ಎಂಬುದು ಒಂದು ಅಂದಾಜು. ಆದರೆ ಈ ಮೂರು ವರ್ಷಕ್ಕೆ ಶೇ. ಒಂದರ ಪ್ರಮಾಣದ ತೈಲಕ್ಕಾಗಿ ಜತ್ರೋಫಾ ಕೃಷಿಗೆ ತೊಡಗಿಸಬೇಕಾದ ಬಂಡವಾಳ ರೂ.628 ಕೋಟಿ! ಮುಖ್ಯವಾಗಿ ಗಮನಿಸಬೇಕಾದುದೆಂದರೆ, ಇದು ತೈಲ ಬೀಜ ತೆಗೆಯಲು ಮಾಡುವ ಖರ್ಚು. ಸಂಸ್ಕರಣೆಯ ಬಾಬತ್ತಿನದೇ ಬೇರೆಯ ಲೆಕ್ಕ.
ಬಯೋ ಪೆಟ್ರೋ-ಡೀಸೆಲ್‍ಗಳನ್ನು ಉತ್ತೇಜಿಸಬೇಕಿರುವುದು ಖರೆ. ಅಷ್ಟು ಮಾತ್ರಕ್ಕೆ ಜತ್ರೋಫಾವನ್ನು ಪರ್ಯಾಯ ಪೆಟ್ರೋಲ್, ಪುನಃ ಸೃಷ್ಟಿಸಬಲ್ಲ ಶಕ್ತಿಮೂಲ, ಗ್ರಾಮೀಣ ಕೃಷಿಯಲ್ಲಿ ಕ್ರ್ರಾಂತಿಕಾರಕ ಹೆಜ್ಜೆ, ಶುಷ್ಕ ಭೂಮಿ ಬೆಳೆ, ಅಭಿವೃದ್ಧಿ ತಂತ್ರ, ವಿದೇಶಿ ವಿನಿಮಯ ಉಳಿತಾಯ ಕ್ರಮ…. ಈ ಪ್ರಮಾಣದಲ್ಲಿ ವಿಶೇಷಣಗಳನ್ನು ಬಳಸಿದರೆ ಅತಿರಂಜಿತ ಎನ್ನಿಸೀತು. ವಾಸ್ತವ ಅದಲ್ಲ. ಸಾಕ್ಷಿ ಎಂಬಂತೆ, ಕೃಷಿಕರ ಬಾಯಲ್ಲಿ ನಲಿದ ಮೂರು ವರ್ಷಗಳ ನಂತರ ಜತ್ರೋಫಾ ಈಗೆಲ್ಲಿದೆ?
ಆಗಿದ್ದೇನು? ಇದ್ದಕ್ಕಿದ್ದಂತೆ ಸರ್ಕಾರಕ್ಕೆ ಪರ್ಯಾಯ ಪೆಟ್ರೋಲ್‍ನ ಚಿಂತನೆ ಮೂಡಿತು. ಬಯೋ ಇಂಧನದ ಕೃಷಿಯನ್ನು ಉತ್ತೇಜಿಸಲು ಕೋಟಿಗಳ ಲೆಕ್ಕದಲ್ಲಿ ಹಣ ತೆಗೆದಿಟ್ಟಿತು. ವಿದೇಶಿ ಸಹಾಯಧನ ಹಾಗೂ ಸರ್ಕಾರದ ಬಜೆಟ್‍ನ್ನು ನುಂಗಿ ಹಾಕುವ ಏಕೈಕ ಉದ್ದೇಶದಿಂದ ಕೆಲವು ಸರ್ಕಾರೇತರ ಸಂಘಟನೆಗಳು ಜತ್ರೋಫಾ ಕೃಷಿಯ ಮುಂಚೂಣಿಯಲ್ಲಿ ನಿಂತವು. ಉಚಿತ ಬೀಜ ಹಂಚಿದವು. ದುಡ್ಡು ತಾವೆಣಿಸಿದವು. ಅವುಗಳ ಪ್ರಚಾರದಿಂದ ರೈತರು ಮತ್ತೆ ದಿಕ್ಕು ತಪ್ಪಿದರು. ಇತ್ತ ಮೀಸಲಿಟ್ಟ ಹಣ ಖರ್ಚಾಗುತ್ತಿದ್ದಂತೆ ಎನ್‍ಜಿಓಗಳು ಮಾಯವಾಗಿಬಿಟ್ಟಿವೆ!
ಸಸ್ಯಜನ್ಯ ಇಂಧನ ಪಡೆಯುವುದು ಸುಲಭದ ಮಾತಲ್ಲ. ಜತ್ರೋಫಾದಂತೆಯೇ ಪ್ರಚಾರದಲ್ಲಿರುವ ಹೊಂಗೆ ತಟಕ್ಕನೆ ತೈಲವಿರುವ ಬೀಜ ಕೊಡುವುದಿಲ್ಲ. ಇದು ಬಹು ವಾರ್ಷಿಕ ಬೆಳೆ. ಬೆಳವಣಿಗೆ ನಿಧಾನ. ಈ ಮಧ್ಯೆ ಜನ, ಸರ್ಕಾರ ಸೇರಿ ಯಾವ ಪರಿ ಅರಣ್ಯನಾಶ ಮಾಡಿದ್ದೇವೆಂದರೆ ಕಾಡುಪ್ರಾಣಿಗಳು ಊರಲ್ಲಿಯೇ ವಾಸಿಸುವ ಅನಿವಾರ್ಯತೆ. ಇಂತಹ ವೇಳೆ ಪ್ರಾಣಿಗಳ ಕಾಟ ತಪ್ಪಿಸಿ ಎಕರೆಗಟ್ಟಲೆ ಜತ್ರೋಫಾ, ಹೊಂಗೆ ಕೃಷಿ ದಕ್ಕೀತೆ? ಸಾಗರ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆ ಹೊಂಗೆ ಬೆಳೆಯಲು ಮಾಡಿದ ಪ್ರಯತ್ನ ಕಾಡೆಮ್ಮೆ, ಕೋಣಗಳ ಲೂಟಿಗೆ ತುತ್ತಾಗಿರುವುದು ನೆನಪಾಗುತ್ತದೆ.
ನಾಲ್ಕು ವರ್ಷಗಳ ನಂತರವೂ ಪರಿಸ್ಥಿತಿ ಬದಲಾಗಿಲ್ಲ. ಇನ್ನು 20 ವರ್ಷ ಹೋದರೂ ಇದೇ ಪರಿಸ್ಥಿತಿಯೇ. ಜತ್ರೋಫಾ ಕೆ.ಜಿ. ಬೀಜಕ್ಕೆಷ್ಟು ದರ ಎಂಬುದು ನಿಗದಿಯಾಗಿಲ್ಲ. ಖರೀದಿಸುವ ಕಂಪನಿಗಳು ಹುಟ್ಟಿದಂತಿಲ್ಲ. ತೈಲ ತೆಗೆಯುವ ತಂತ್ರಜ್ಞಾನ, ಯಾಂತ್ರಿಕತೆ, ಪೆಟ್ರೋಲ್ ಜೊತೆ ಬೆರೆಸುವ ವ್ಯವಸ್ಥೆಗಳು ಸಿದ್ಧಗೊಂಡಿರುವುದು ಅನುಮಾನ. ಹಿಂದೊಮ್ಮೆ ಕೋಕೋ ಬೆಳೆಯ ವಿಚಾರದಲ್ಲೂ ಇಂತದ್ದೇ ಘಟಿಸಿತ್ತು. ಸರ್ಕಾರೀ ವ್ಯವಸ್ಥೆಯ ಪ್ರಚಾರಕ್ಕೆ ಮರುಳಾದ ರೈತರು ಕೃಷಿ ಇಲಾಖೆ ಒದಗಿಸಿದ ಕೋಕೋ ಗಿಡ ನೆಟ್ಟರು. ಬೀಜ ಕೊಳ್ಳುವವರಾರು? ನಿಕ್ಕಿಯಾಗಲೇ ಇಲ್ಲ. ಅದೃಷ್ಟಕ್ಕೆ ಕ್ಯಾಂಪ್ಕೋ ಖರೀದಿಸುತ್ತಿರುವುದರಿಂದ ಕೋಕೋ ಉಳಿದಿದೆ. ಆದರೆ ಕ್ಯಾಂಪ್ಕೋ ಒಂದೇ ಖರೀದಿದಾರ ಎಂಬುದು ಯಾವತ್ತೂ ರೈತನ ತಲೆ ಮೇಲೆ ತೂಗುತ್ತಿರುವ ಕತ್ತಿ ಎಂಬುದೂ ನಿಜ. ಹಾಗೆ ನೋಡಿದರೆ ತಾಳೆ ಕೃಷಿಯದ್ದೂ ಯಥಾವತ್ ಇದೇ ಕತೆ. ಸರ್ಕಾರವೂ ಬದಲಿಸಿಲ್ಲ, ರೈತರೂ!
ಜತ್ರೋಫಾ ವಾಣಿಜ್ಯ ಬೆಳೆಯಾಗಿ ಅಭಿವೃದ್ಧಿಗೊಳ್ಳುವುದು ಕಷ್ಟ. ಒಂದು ಹೆಕ್ಟೇರ್‍ಗಿಂತ ಕಡಿಮೆ ಭೂಮಿಯ ಒಡೆಯ ಜತ್ರೋಫಾ ಬೆಳೆದು ಲಾಭ ಮಾಡಲಿಕ್ಕಾಗದು. ಸಾಮೂಹಿಕವಾಗಿ ಬೆಳೆ ಬೆಳೆದಲ್ಲಿ ಮಾತ್ರ ಮಾರುಕಟ್ಟೆ ಸುಲಭವಾದೀತು. ಈ ಕ್ಷಣದಲ್ಲಂತೂ ಅದಕ್ಕೊದಗಬಹುದಾದ ರೋಗಗಳು ಗೊತ್ತಾಗಿಲ್ಲ. ರೈತನ ಗೊಂದಲ ಅಕ್ಷರಶಃ ಹೆಚ್ಚುತ್ತಿದೆ.
ನಿಜಕ್ಕೂ ಆ ಕಳ್ಳೀ ಗಿಡ ಜೀವಂತ ಬೇಲಿಯ ವಿಧಾನವಾಗಿ ನಿರುಮ್ಮಳವಾಗಿತ್ತು. ಒಮ್ಮೆ ಬದುಕಿಸಿ, ಬೆಳೆಸಿ ಬಿಟ್ಟರೆ ವರ್ಷಕ್ಕೊಮ್ಮೆ ಟ್ರಿಮ್ ಮಾಡಿದರೆ ಸಾಕು. ಅಂತಹ ಕಳ್ಳಿಯನ್ನು ಜತ್ರೋಫಾವಾಗಿ ಪುನರ್ನಾಮಕರಣ ಮಾಡಿ ಬೇಲಿಯ ಒಳಗೆ ಕರೆಸಿದ್ದು ವ್ಯರ್ಥ. ಮತ್ತೆ ಕಳ್ಳಿ ಬೇಲಿಯ ಸದಸ್ಯನಾಗಿ ತನ್ನ ಗಾರ್ಡ್ ಕೆಲಸ ಮುಂದುವರೆಸಿದೆ. ಇನ್ನೇನು ಆದೀತು?
– ಮಾ.ವೆಂ.ಸ.ಪ್ರಸಾದ್

ಒತ್ತಡದ ಜೀವನದಿಂದ ಅನಾರೋಗ್ಯ

0

ಒತ್ತಡದ ಜೀವನ ಕ್ರಮ ಹಾಗು ಆಹಾರ ಪದ್ಧತಿಯಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು ಎಲ್ಲರೂ ಜೀವನಕ್ರಮವನ್ನು ಬದಲಾಯಿಸಿಕೊಳ್ಳಬೇಕು ಎಂದು ನಗರದ ಮಾನಸ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಮೋಹನ್ಭಾರ್ಗವ್ ಹೇಳಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಭಾನುವಾರ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ, ಟಿಪ್ಪು ಸುಲ್ತಾನ್ ಸಂಘ ಹಾಗು ಮಾನಸ ಆಸ್ಪತ್ರೆಯ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ನಮ್ಮ ಹಿರಿಯರು ಅವರ ಆಹಾರ ಪದ್ಧತಿಯಲ್ಲಿ ತರಕಾರಿ, ಸೊಪ್ಪು, ಹಣ್ಣು ಹಂಪಲುಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಇದರಿಂದ ಆವರು ಶಾರೀರಕವಾಗಿ ಸದೃಢರಾಗಿರುವುದರೊಂದಿಗೆ ಉತ್ತಮ ಆರೋಗ್ಯದಿಂದ ದೀರ್ಘಕಾಲ ಜೀವಿಸುತ್ತಿದ್ದರು. ಆದರೆ ಇಂದು ಬಹಳಷ್ಟು ಫಾಸ್ಟ್ಫುಡ್, ಜಂಕ್ಫುಡ್ ಸೇವಿಸುವುದರಿಂದ ದೇಹಕ್ಕೆ ಅವಶ್ಯಕವಾಗಿರುವ ಪೌಷ್ಠಿಕಾಂಶಗಳು ಸಿಗದೇ ಅನಾರೋಗ್ಯದಿಂದ ಬಳಲುತ್ತಿದ್ದೇವೆ.
ಹೆಚ್ಚು ಸೊಪ್ಪು, ಹಸಿ ತರಕಾರಿ ಹಣ್ಣು ಹಂಪಲು ಸೇವಿಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ನಗರದ ಬಹುತೇಕ ಜನತೆ ರೇಷ್ಮೆಯನ್ನೇ ನಂಬಿ ಜೀವಿಸಬೇಕಾದ ಅನಿವಾರ್ಯವಿರುವುದರಿಂದ ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ನೀಡುವುದಿಲ್ಲ. ಸಂಘ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸುವ ಇಂತಹ ಉಚಿತ ಆರೋಗ್ಯ ಶಿಬಿರಗಳ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.
ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ ಎಂ.ವಿ.ಶಿವಪ್ರಕಾಶ್, ಕರ್ನಾಟಕ ಟಿಪ್ಪು ಸುಲ್ತಾನ್ ಸಂಘದ ತಾಲ್ಲೂಕು ಅಧ್ಯಕ್ಷ ಅಫ್ಜಲ್ಪಾಷ, ಆರ್.ಸುರೇಶ್ ಮತ್ತಿತರರು ಹಾಜರಿದ್ದರು.

error: Content is protected !!