31.1 C
Sidlaghatta
Saturday, April 20, 2024
Home Blog Page 758

ಪೌರಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು

0

ನಗರದ ಸ್ವಚ್ಛತೆಯನ್ನು ಮತ್ತು ಸಾರ್ವಜನಿಕ ಸ್ವಾಸ್ಥ್ಯವನ್ನು ಕಾಪಾಡುವ ಪೌರಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ಪೌರಸೇವಾ ನೌಕರರ ಸಂಘದ ವತಿಯಿಂದ ಮಂಗಳವಾರ ನಗರದ ನಗರೇಶ್ವರ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ನಾಲ್ಕನೇ ವರ್ಷದ ಪೌರಕಾರ್ಮಿಕ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೌರಕಾರ್ಮಿಕರು ಇತರರಿಗಿಂತ ಬೇಗ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಗಳು ಇವೆ. ಆಧುನಿಕ ಪರಿಕರಗಳು, ವೈದ್ಯಕೀಯ ಸೌಲಭ್ಯ, ಸೂಕ್ತ ವೇತನ ಪೌರಕಾರ್ಮಿಕರಿಗೆ ಅಗತ್ಯವಿದೆ. ಗಾಂಧೀಜಿ ಸ್ವಚ್ಛತೆಗೆ ಪ್ರಾಧಾನ್ಯತೆಯನ್ನು ನೀಡಿದ್ದರು. ಅವರು ಪೌರಕಾರ್ಮಿಕರ ಕೆಲಸವನ್ನು ಗೌರವದಿಂದ ಕಾಣಬೇಕೆಂದು ತಿಳಿಸಿರುವು ಸಾರ್ವಕಾಲಿಕ ಸತ್ಯವಾಗಿದೆ ಎಂದು ಹೇಳಿದರು.
ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಮುರಳಿ ಮಾತನಾಡಿ, ಸರ್ಕಾರದಿಂದ ಪೌರಕಾರ್ಮಿಕರಿಗೆ ವಸತಿಗೃಹಗಳ ನಿರ್ಮಾಣ ಮಾಡಲು ಆದೇಶ ಬಂದಿದ್ದು, ಅದಕ್ಕಾಗಿ ಸ್ಥಳವನ್ನು ಪರಿಶೀಲಿಸಿ ತ್ವರಿತ ಗತಿಯಲ್ಲಿ ಕಾಮಗಾರಿ ನಡೆಸಬೇಕಿದೆ ಎಂದು ಹೇಳಿದರು.
ನಿವೃತ್ತರಾಗಿರುವ ನಗರಸಭೆಯ ಕಂದಾಯ ನಿರೀಕ್ಷಕ ಷಮೀವುಲ್ಲಾ ಅವರನ್ನು ಸನ್ಮಾನಿಸಲಾಯಿತು.
ನಗರಸಭೆ ಅಧ್ಯಕ್ಷೆ ಮುಷ್ಠರಿ ತನ್ವೀರ್, ಜಿಲ್ಲಾ ನಗರ ಯೋಜನಾಧಿಕಾರಿ ನಾಗರಾಜಶೆಟ್ಟಿ, ನಗರಸಭೆ ಪೌರಾಯುಕ್ತ ಹರೀಶ್, ರಾಂಪ್ರಕಾಶ್, ನಗರಸಭೆ ಸದಸ್ಯ ಅಫ್ಸರ್ಪಾಷ, ಶ್ರೀನಾಥ್, ತನ್ವೀರ್ಪಾಷ, ಶಂಕರಪ್ಪ, ಪ್ರಸಾದ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಧ್ವನಿ ಸಂಸ್ಕರಣೆ (Voice Culture) – ಏನು? ಏಕೆ? ಹೇಗೆ?

0

ಎಂ.ಎಸ್. ಸುಬ್ಬಲಕ್ಷ್ಮಿಯವರ ಸಂಗೀತವನ್ನು ಕೇಳಿದವರಿಗೆ ನಮಗೂ ಅಂತಹ ಕಂಠವಿದ್ದಿದ್ದರೆ! ಎಂದೆನಿಸುವುದು ಸಹಜ. ಕಿಶೋರ್ ಕುಮಾರ್ ರವರ ಗಾಯನವನ್ನಾಲಿಸಿದಾಗ ನಾನೂ ಅದೇ ರೀತಿ ಹಾಡುವಂತಿದ್ದಿದ್ದರೆ ಎಂಬಾಸೆಯಾಗುವುದು ಸ್ವಾಭಾವಿಕ. ಧ್ವನಿ ಹುಟ್ಟಿನಿಂದ ಬಂದದ್ದು ಅದನ್ನು ಬದಲಿಸಲಾಗದು ಎಂಬುದು ಸಹಜ ಅಭಿಪ್ರಾಯ. ಆದರೆ ಭಾರತೀಯ ಸಂಸ್ಕøತಿಯಲ್ಲಿ ಧ್ವನಿಯ ಗುಣಮಟ್ಟವನ್ನು ಸುಧಾರಿಸಲು ಅನೇಕ ವಿಧಿ-ವಿಧಾನಗಳು ತಿಳಿಸಲ್ಪಟ್ಟಿವೆ. ಪಾಶ್ಚಾತ್ಯ ದೇಶಗಳಲ್ಲಿ “voice Culture” ಎಂಬಂತಹ ತರಬೇತಿ ಇತ್ತೀಚಿನ ದಿನಗಳಲ್ಲಿ ಆರಂಭವಾಗಿದೆ, ಆದರೆ ಭಾರತೀಯ ವಿಜ್ಞಾನಗಳಾದ ಆಯುರ್ವೇದ, ಯೋಗ ಸಂಗೀತ ಶಾಸ್ತ್ರಗಳಲ್ಲಿ ಸಹಸ್ರಾರು ವರ್ಷಗಳ ಮೊದಲೇ ಧ್ವನಿಯ ಗುಣವಟ್ಟವನ್ನು ಹೆಚ್ಚಿಸಿಕೊಳ್ಳಲು ಅನೇಕ ವೈಜ್ಞಾನಿಕ ಕ್ರಮಗಳು ತಿಳಿಸಲ್ಪಟ್ಟಿವೆ. ‘ಧ್ವನಿ’ ಇದು ಸಂವಹನ ಮಾಧ್ಯಮ, ಕೇವಲ ಗಾಯನಕ್ಕೊಂದೇ ಅಲ್ಲ, ಪರಿಣಾಮಕಾರಿ ಸಂವಹನ (communication) ಕ್ಕೂ ಕೂಡ ಉತ್ತಮ ಧ್ವನಿ ಅಗತ್ಯ. ಪ್ರಜ್ಞಾಪೂರ್ವಕವಾಗಿ ಧ್ವನಿಯನ್ನು ಸಂಸ್ಕರಿಸುವ ವಿಧಾನಕ್ಕೆ ‘ಧ್ವನಿ ಸಂಸ್ಕರಣೆ’ ಎನ್ನುತ್ತಾರೆ. ಅದಕ್ಕೆ ‘ಧ್ವನಿ’ ಹೇಗೆ ಉತ್ಪತ್ತಿ ಆಗುತ್ತದೆ ಎಂಬುದು ತಿಳಿದಿರಬೇಕು. ಗಂಟಲಿನಲ್ಲಿರುವ ಸ್ವರಯಂತ್ರ (Larynx) ದ ಸ್ವರತಂತುಗಳು ಕಂಪಿಸಿದಾಗ ಶಬ್ದ ಉತ್ಪತ್ತಿ ಆಗುತ್ತದೆ ಎಂಬ ಜ್ಞಾನ ನಮಗೆಲ್ಲಾ ಇದೆ. ಆದರೆ ಇದರ ಜೊತೆ ಇನ್ನೆರಡು ಅಂಶಗಳು ಬಹಳ ಮುಖ್ಯ. ಮೆದುಳಿನಿಂದ ಸ್ವರಯಂತ್ರಕ್ಕೆ ಆದೇಶ ಬಂದಾಗ ಉಸಿರಾಟದ ಕ್ರಮದಲ್ಲಿ ಹೊಂದಾಣೀಕೆಯಾಗಿ, ಉಸಿರನ್ನು ಬಿಡುವಾಗ ಸ್ವರತಂತುಗಳು ಕಂಪಿಸಿ ಧ್ವನಿ ಉತ್ಪತ್ತಿಯಾಗುತ್ತದೆ. ಇನ್ನು ಸಂಗೀತಕ್ಕೆ ಸಂಬಂಧ ಪಟ್ಟಂತೆ ‘ನಾದ’ ಉತ್ಪತ್ತಿಯಾಗಬೇಕೆಂದರೆ ಅಲ್ಲಿ ಇನ್ನೂ ಕೆಲವು ಅಂಶಗಳು ಅಗತ್ಯ. ಮೆದುಳಿನ ಬಲಭಾಗದಿಂದ ಭಾವ ಉತ್ಪತ್ತಿಯಾದರೆ, ಮೆದುಳಿನ ಎಡಭಾಗದಿಂದ ಧ್ವನಿಯ ಏರಿಳಿತ ಅಂದರೆ ಪ್ರಮಾಣದ ಜ್ಞಾನ ಉಂಟಾಗುತ್ತದೆ. ಇವುಗಳ ಜೊತೆ ಪೂರ್ವಾನುಭವ ಮನೋಧರ್ಮ, ಸೃಜನ ಶೀಲತೆ, ಉಸಿರಾಟದ ಹೊಂದಾಣಿಕೆ ಇವೆಲ್ಲವೂ ಸೇರಿದಾಗ ಸುಶ್ರಾವ್ಯವಾದ ‘ನಾದ’ ಉಂಟಾಗುತ್ತದೆ. ವಿವಿಧ ಸಂಗೀತ ಪ್ರಾಕಾರಗಳಾದ ಜನಪದ ಸಂಗೀತ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತಗಳಿಗೆ ಧ್ವನಿ ಸಂಸ್ಕರಣ ವಿಧಾನವು ಬೇರೆ ಬೇರೆ ರೀತಿಯಾಗಿರುತ್ತದೆ. ಇನ್ನು ಸರಳೀಕೃತ ‘ಧ್ವನಿ ಸಂಸ್ಕರಣೆ’ ಕುರಿತು ಒಂದೆರಡು ಮಾತು.
ಧ್ವನಿ ಸಂಸ್ಕರಣೆಯ ಮೂಲಭೂತ ಅವಶ್ಯಕತೆಗಳೆಂದರೆ ಉಸಿರಾಟದ ನಿಯಂತ್ರಣೆ, ಸದೃಢ ಆರೋಗ್ಯಪೂರ್ಣ ಶರೀರ ಹಾಗೂ ಶಾಂತವಾದ ಮನಸ್ಸು, ಧನಾತ್ಮಕವಾದ ಆಲೋಚನೆ ಹಾಗೂ ಆತ್ಮವಿಶ್ವಾಸಗಳಿದ್ದಲ್ಲಿ ಧ್ವನಿಯ ಪರಿವರ್ತನೆ ಸಾಧ್ಯ. ಜ್ಞಾನೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ; ಇವುಗಳ ಮೂಲಕ ನಾವು ಬಾಹ್ಯ ಪ್ರಪಂಚದ ಜೊತೆ ಸಂಪರ್ಕವನ್ನು ಹೊಂದುತ್ತೇವೆ. ಜ್ಞಾನೇಂದ್ರಿಯಗಳಿಂದ ಸದಾ ಧನಾತ್ಮಕ ಅಂಶಗಳನ್ನು ಗ್ರಹಿಸಿದಾಗ ಮಾತ್ರ ಮನಸ್ಸು ಧನಾತ್ಮಕವಾಗಿ ಆಲೋಚಿಸಲು ಸಾಧ್ಯ. ಸಂತುಲಿತ ಸಾತ್ವಿಕ ಆಹಾರ ಅಂದರೆ ಹಣ್ಣು, ತರಕಾರಿ, ಹಾಲು, ಸಿಹಿರಸ ಪ್ರಧಾನ ಆಹಾರದ ಸೇವನೆ ಅಗತ್ಯ. ಬೆಚ್ಚಗಿನ ಕಾದಾರಿಸಿದ ನೀರನ ಸೇವನೆ, ಬೆಚ್ಚಗಿನ ನೀರಿನಿಂದ ದಿನಕ್ಕೆರಡು ಬಾರಿ ಬಾಯಿ ಮುಕ್ಕಳಿಸುವುದು ಹಿತಕರ. ದಿನಕ್ಕೊಂದು ಬಾರಿ ಬೆಚ್ಚಗಿನ ಎಳ್ಳೆಣ್ಣೆಯನ್ನು ಎರಡೆರಡು ಹನಿ ಪ್ರತಿಯೊಂದು ಮೂಗಿನ ಹೊಳ್ಳೆಗೂ ಹಾಕಿಕೊಳ್ಳಬೇಕು. ಉಸಿರಾಟದ ನಿಯಂತ್ರಣೆಯನ್ನು ಸರಳವಾದ ಉಸಿರಾಟದ ಮೂಲಕ ಮಾಡಿಕೊಳ್ಳಬೇಕು. ನಿಧಾನಗತಿಯಲ್ಲಿ ಕ್ರಮಬದ್ಧವಾಗಿ ಸಮಪ್ರಮಾಣದಲ್ಲಿ ಉಸಿರನ್ನು ಬಿಡುವುದು ಹಾಗೂ ಉಸಿರನ್ನು ತೆಗೆದುಕೊಳ್ಳುವುದು ಈ ಕ್ರಮವನ್ನು ಅನುಸರಿಸುವುದರಿಂದ ಉಸಿರಾಟದ ನಿಯಂತ್ರಣೆ ಉಂಟಾಗುತ್ತದೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿನ ಅಭ್ಯಾಸ ಗಾನದ ಕಲಿಕೆಯಿರುವುದೂ ಕೂಡ ಧ್ವನಿ ಸಂಸ್ಕರಣೆಗಾಗಿಯೇ. ಶ್ರುತಿಯ ಅಭ್ಯಾಸ, ಸರಳೆ ವರಸೆ, ಜಂಟಿವರಸೆ, ದಾಟುವರಸೆ, ಅಲಂಕಾರ ಹೆಚ್ಚುಸ್ಥಾಯಿ, ತಗ್ಗುಸ್ಥಾಯಿ, ಗೀತೆ, ಸ್ವರಜತಿ, ವರ್ಣ – ಹೀಗೆ.
ಈ ಎಲ್ಲಾ ಪಾಠಗಳಿರುವುದು ಧ್ವನಿ ಸಂಸ್ಕರಣೆಗಾಗಿಯೇ. ಇಷ್ಟೇ ಅಲ್ಲದೇ ಆಯುರ್ವೇದ ಶಾಸ್ತ್ರದಲ್ಲಿ ಧ್ವನಿಯ ವಿವಿಧ ದೋಷಗಳಿಗಾಗಿ ಅನೇಕ ಔಷಧಿಗಳು ಉಲ್ಲೇಖಿಸಲ್ಪಟ್ಟಿವೆ. ಆಚಾರ್ಯ ಚರಕರು “ಕಂಠ್ಯ ಔಷಧಿ” ಗಳ ಪಟ್ಟಿಯನ್ನೇ ನೀಡಿದ್ದಾರೆ. ಧ್ವನಿಯ ದೋಷಕ್ಕೆ ಅನುಸಾರವಾಗಿ ಈ ಔಷಧಿಗಳನ್ನು ಬಳಸಬಹುದು. ಮಾನವ ಉಳಿದೆಲ್ಲಾ ಜೀವಿಗಳಿಗಿಂತ ಭಿನ್ನನಾಗಿರುವುದೇ ಅವನ ಸಂವಹನ ಸಾಮಥ್ರ್ಯವಾದ ಧ್ವನಿಯಿಂದ. ಧ್ವನಿಯೇ ಆಧಾರ ಜೀವನಕೆ, ಧ್ವನಿ ಬೇಕು ಸಂವಹನಕೆ, ಸಂವಹನವೇ ಜೀವಾಳ ಉನ್ನತಿಗೆ, ಅಂತಹ ಉನ್ನತಿಯ ಹೊಂದಲು ಬೇಕು ಧ್ವನಿಯ ಸಂಸ್ಕರಣೆ.
ಡಾ. ಶ್ರೀವತ್ಸ

ಸಮರ್ಪಕ ವಿದ್ಯುತ್ ನೀಡುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

0

ಸಮರ್ಪಕ ವಿದ್ಯುತ್ ನೀಡುವಂತೆ ಒತ್ತಾಯಿಸಿ ಬೆಸ್ಕಾಂ ಕಚೇರಿಗೆ ಬಿಜೆಪಿ ಕಾರ್ಯಕರ್ತರು ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಮೀಣ ಪ್ರದೇಶಗಳಿಗೆ ಅಸಮರ್ಪಕವಾಗಿ ವಿದ್ಯುತ್ ನೀಡಲಾಗುತ್ತಿದೆ. ರಾತ್ರಿ ವೇಳೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ­ಯಾಗುತ್ತಿದೆ. ರೈತರು ಪಂಪ್ಸೆಟ್ ಬಳಸಿ ತೋಟಗಳಿಗೆ ನೀರು ಹಾಯಿಸಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಬೇಸಿಗೆಗೆ ಮೊದಲೇ ವಿದ್ಯುತ್ ಕೊರತೆ ಕಾಣಿಸಿಕೊಂಡಿದೆ. ಬೇಸಿಗೆಯಲ್ಲಿ ರಾಜ್ಯ ಕತ್ತಲೆಯ ಸಾಮ್ರಾಜ್ಯವಾದರೆ ಆಶ್ಚರ್ಯವಿಲ್ಲ. ರಾಜ್ಯ ಸರ್ಕಾರ ಇತ್ತ ಶೀಘ್ರ ಗಮನ ಹರಿಸದಿದ್ದರೆ ಮುಂದಿನ ದಿನಗಳಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಬೆಸ್ಕಾಂ ಕಚೇರಿ ಎದುರು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಬೆಸ್ಕಾಂ ಅಧಿಕಾರಿಗಳ ಮನೆ, ಕಚೇರಿಗೆ ಬೀಗ ಹಾಕಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಬೆಸ್ಕಾಂ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಬಿಜೆಪಿ ಪಕ್ಷದ ತಾಲ್ಲೂಕು ಅಧ್ಯಕ್ಷ ಸುರೇಂದ್ರಗೌಡ, ರಮೇಶ್ಬಾಯಿರಿ, ಶ್ರೀರಾಮರೆಡ್ಡಿ, ಶ್ರೀಧರ್, ಸಿ.ವಿ.ಲೊಕೇಶ್ಗೌಡ, ನಂದೀಶ್, ಶಿವಕುಮಾರಗೌಡ, ಮಂಜುಳಮ್ಮ, ಸುಜಾತಮ್ಮ, ರತ್ನಮ್ಮ, ಶಿವಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಭ್ರಷ್ಟಾಚಾರದ ವಿವಸ್ತ್ರಕ್ಕೆ ಮಾಹಿತಿ ಹಕ್ಕಿನ ಬ್ರಹ್ಮಾಸ್ತ್ರ!

0

ಬ್ರಿಟಿಷರ ಆಡಳಿತದಿಂದ ನಾವು ಸ್ವಾತಂತ್ರ್ಯ ಪಡೆದಿದ್ದೇವೆಂಬುದು ನಾಣ್ಯದ ಒಂದು ಮುಖದ ಸತ್ಯ ಮಾತ್ರ. ಅಧಿಕಾರಿಶಾಹಿಯ ವರ್ತನೆ ಟಿಪಿಕಲ್ ಇಂಗ್ಲೀಷರ ಮಾದರಿಯಲ್ಲಿಯೇ ಇದ್ದಿರುವುದು ಅಕ್ಷರಶಃ ಸತ್ಯ. ಕಾನೂನು ಮಾಡುವ, ಕಾನೂನು ಹೇರುವ ಅಧಿಕಾರವನ್ನು ಅನುಭವಿಸುತ್ತಿರುವ ಅಧಿಕಾರಿ ವರ್ಗದ ಎದುರು ಜನಸಾಮಾನ್ಯರು ಕೈಕಟ್ಟಿ ನಿಲ್ಲಲೇಬೇಕಾದ ಪರಿಸ್ಥಿತಿ. ಅಂದಮೇಲೆ ಬದಲಾದದ್ದು ಏನು?
ಬಹುಷಃ ಇನ್ನು ಐವತ್ತು ವರ್ಷ ಕಳೆದರೂ ವಾತಾವರಣ ಹಾಗೇ ಇರುತ್ತಿತ್ತು. ಆಡಳಿತಶಾಹಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಣಕವಾಡುತ್ತಲೇ ಇರುತ್ತಿತ್ತು. ಇಂತಹ ವೇಳೆ ಮುಚ್ಚಿದ ಬಾಗಿಲ ಸಂದಿನಿಂದ ತೂರಿದ ಬೆಳಕಿನ ಕಿರಣದಂತೆ ಮಾಹಿತಿ ಹಕ್ಕು ಕಾಯ್ದೆ ಚಾಲ್ತಿಗೆ ಬಂದಿದೆ. ಶ್ರೀ ಸಾಮಾನ್ಯ ಅಧಿಕಾರಿಗಳ ವಿರುದ್ಧ ಝಳಪಿಸಲು ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ. ಜಾರಿಗೆ ಬಂದು ಈಗಾಗಲೇ ಎರಡು ವರ್ಷ ಕಳೆದೇಹೋಗಿದೆ ಎಂಬುದು ಒಂದೆಡೆಯಾದರೆ, ಅದರ ಬಳಕೆಯ ಕುರಿತು ಈಗಷ್ಟೇ ಅರಿವು ಮೂಡುತ್ತಿದೆ ಎಂಬುದು ಅನಿವಾರ್ಯ ಸತ್ಯ.
ಪ್ರಶ್ನೆಯೊಂದು ಮೂಡದಿರದು. ಕಾನೂನುಗಳನ್ನು ರೂಪಿಸುವವರೇ ಅಧಿಕಾರಿಗಳು. ಅಂತಹುದರಲ್ಲಿ ತಮ್ಮ ಕೈಯನ್ನು ತಾವೇ ಬಂಧಿಸಿಕೊಳ್ಳಲು ಅವರೇಕೆ ಮಾಹಿತಿ ಕಾಯ್ದೆಗೆ ಅವಕಾಶ ಮಾಡಿಕೊಟ್ಟರು? ಮಾಹಿತಿ ಕಾರ್ಯಕರ್ತರೊಬ್ಬರ ವಿವರಣೆ ಸ್ವಾರಸ್ಯಕರವಾದದ್ದು, ಕೌರವರ ಮಧ್ಯೆಯೂ ಪಾಂಡವರಿರುತ್ತಾರೆ! ಬಹುಷಃ ಐಎಎಸ್ ಅಧಿಕಾರಿ ವಿಜಯ್‍ಕುಮಾರ್ ಅಂತವರು ಈ ವರ್ಗದವರಿರಬೇಕು. ನಾಗರಿಕರಿಗೆಂದು ಕಛೇರಿಯಲ್ಲಿ ವಾರದ ನಿರ್ದಿಷ್ಟ ದಿನ ಫೈಲ್‍ಗಳನ್ನು ನೋಡುವ ಮುಕ್ತ ಅವಕಾಶ ಒದಗಿಸುವ ನಿಯಮ ರೂಪಿಸಿದ ಜನಪರ ಅಧಿಕಾರಿ ಈತ. ಒಂದೇ ಒಂದು ದುರಂತವೆಂದರೆ, ಹಿಂದೆ ನೂರು ಕೌರವರಿದ್ದರೆ ಇಂದು ಆ ಸಂಖ್ಯೆ ಕೋಟಿ ದಾಟಿದೆ. ಪಾಂಡವರ ಸಂಖ್ಯೆ ಅವತ್ತಿನ ಐದಕ್ಕಿಂತ ಹೆಚ್ಚಿರುವುದು ಅನುಮಾನ! ಅಷ್ಟರಮಟ್ಟಿಗೆ ಪ್ರಾಮಾಣಿಕತೆಯ ಹೋರಾಟಕ್ಕೆ ಅಡೆತಡೆ ಜಾಸ್ತಿ.
ವಾಸ್ತವವಾಗಿ ಈ ಕಾಯ್ದೆ ಸಂಕೀರ್ಣ ರೂಪದ್ದಲ್ಲ, ಸುಲಭ ಗ್ರಾಹ್ಯವಾಗುವಂತದು. ಆಸಕ್ತರಿಗೆ ಇದರ ಹೂರಣವನ್ನು ಅರ್ಥೈಸಿಕೊಳ್ಳಲು ಎರಡು ದಿನ ಸಾಕಾದೀತು. ಮಾಹಿತಿ ಕಾಯ್ದೆ ಕುರಿತು ನೂರಾರು ಪುಸ್ತಕಗಳು, ಸಾವಿರಾರು ಲೇಖನಗಳು ಪ್ರಕಟಗೊಂಡಿದ್ದು ಅವು ನೀಡುವ ಮಾಹಿತಿಯೇ ಧಾರಾಳವಾಗಿ ಸಾಕು. ಬೆಂಗಳೂರಿನ ಕ್ರಿಯೇಟ್ ಎಂಬ ಸಂಸ್ಥೆ ಮಾಹಿತಿ ಆಂದೋಲನದ ಮುಂಚೂಣಿಯಲ್ಲಿದೆ. ಇದು ಇಲಾಖೆಗಳ ಮಾಹಿತಿ ಅಧಿಕಾರಿಗಳಿಗೆ ಒಂದೆರಡು ದಿನಗಳ ಮಿತಿಯಲ್ಲೂ ಮಾಹಿತಿ ತರಬೇತಿ ನೀಡುತ್ತಿದೆ. ಅಷ್ಟಕ್ಕೂ ಸರ್ಕಾರಿ ಅಧಿಕಾರಿಗಳು ಬುಡಕ್ಕೆ ಬೆಂಕಿ ಬಿದ್ದರೆ ಮಾತ್ರ ನೀರು ಹುಡುಕುವವರು. ಇಂತವರಿಗೆ ಕಾಯ್ದೆ ಜಾರಿಗೆ ಐದು ವರ್ಷದ ಕಾಲಾವಕಾಶ ನೀಡಬೇಕಿತ್ತು ಎಂದರೆ ಇನ್ನೂ 60 ತಿಂಗಳು ನಿದ್ರಿಸಲು ಅನುವು ಮಾಡಿಕೊಟ್ಟಂತಾದೀತು ಅಷ್ಟೇ!
ಇತ್ತೀಚಿಗೆ ದಾವಣಗೆರೆಯ ನ್ಯಾಯಾಲಯದ ಅಧಿಕಾರಿಯೊಬ್ಬರು ಹೇಳುತ್ತಿದ್ದರು, `ತಮ್ಮ ಜಿಲ್ಲೆಯಲ್ಲಿ ಮೊತ್ತಮೊದಲಾಗಿ ಮಾಹಿತಿ ಕೋರಿ ಅರ್ಜಿ ತಮ್ಮ ಕಛೇರಿಗೇ ಬಂದಿತು. ಏನೇನೂ ಗೊತ್ತಿಲ್ಲದ ವೇಳೆ ತಮಗೇ ಅರ್ಜಿಗೆ ಮಾಹಿತಿ ಒದಗಿಸಲು ಉಳಿದವರು ಜವಾಬ್ದಾರಿ ದಾಟಿಸಿಬಿಟ್ಟರು. ಹಾಗಾಗಿ ಈ ಬಗ್ಗೆ ನಾನು ಪೂರ್ತಿ ಜ್ಞಾನ ಪಡೆಯಲೇಬೇಕಾಯಿತು.’ ಇದು ಸರ್ಕಾರಿ ವ್ಯವಸ್ಥೆಯ ಭಾಗವಾದವರ ನಡವಳಿಕೆ. ಅವರಿಗೆ ಕಾಲಾವಕಾಶ ನೀಡುವ ಮಾತು ಅರ್ಥವಿಲ್ಲದ್ದು. ಅಂದಮೇಲೆ ಮಾಹಿತಿ ಅರ್ಜಿಗಳು ಧಾಳಿ ಇಡಬೇಕು! ಆಗಲೇ ಅಧಿಕಾರಿಗಳು ಚುರುಕಾಗುತ್ತಾರೆ.
ಸದ್ಯ ಅಧಿಕಾರಿಗಳಷ್ಟೇ ಜನರೂ ತಟಸ್ಥರಾಗಿದ್ದಾರೆ. ಖಂಡಿತವಾಗಿಯೂ ಜನ ಮಾಹಿತಿ ಕೇಳಲಾರಂಭಿಸಿದಾಗ ಯೋಜನೆಗಳ ಅನುಷ್ಠಾನ ಹೆಚ್ಚು ಪಾರದರ್ಶಕವಾಗಿರಬೇಕಾಗುತ್ತದೆ, ಪ್ರಾಮಾಣಿಕತೆ ಇಣುಕಲೇಬೇಕಾಗುತ್ತದೆ. ಪ್ರಸ್ತುತ ಖೂಳರಿಗೇ ಈ ಕಾಯ್ದೆ ಹೆಚ್ಚಿನ ಲಾಭ ಒದಗಿಸಿದೆ. ಅಧಿಕಾರಿಗಳನ್ನೇ ಬ್ಲಾಕ್‍ಮೇಲ್ ಮಾಡಲು ಬಳಕೆಯಾಗುತ್ತಿದೆ. ಅಲ್ಲೂ ಒಂದು ಧನಾಂಶವಿದೆ. ಭ್ರಷ್ಟತೆ ಇದ್ದಲ್ಲಿ ಮಾತ್ರ ಬ್ಲಾಕ್‍ಮೇಲ್ ನಡೆದೀತು. ಪ್ರಾಮಾಣಿಕರಾಗಿದ್ದಲ್ಲಿ ಈ ಲಾಭ ಸಿಕ್ಕದು. ಸ್ವಚ್ಛ ಆಡಳಿತಕ್ಕೆ ಇದೇ ನಾಂದಿ ಹಾಡಿದರೆ ಚೆನ್ನ.
ಸಿನಿಕರಂತೆ ನಕಾರಾತ್ಮಕವಾಗಿ ಯೋಚಿಸಬೇಕಾದ ಅಗತ್ಯವಿಲ್ಲ. ಕಾಯ್ದೆಗೆ ಹಲ್ಲಿದೆ. ಬಳಸಲು ಅನುವು ಮಾಡಿಕೊಡುವ ಗ್ರಾಹಕ ಸಂಘಟನೆಗಳಿವೆ. ತುಸು ಕಾಲ ಬೇಕಾದೀತು. ಆದರೆ ಫಲಿತಾಂಶ ನಿಶ್ಚಿತ.
ಇನ್ನಷ್ಟು ಪರಿಣಾಮಕಾರಿಯಾಗಿ ಕಾಯ್ದೆ ಮೂಡಲು ಕೆಲ ತಿದ್ದುಪಡಿ ಅನಿವಾರ್ಯ. ಈಗ ಹಿಂದುಳಿದ ಜಾತಿ ವರ್ಗದವರು ಅರ್ಜಿ ಸಲ್ಲಿಸಿದರೆ ಅವರಿಗೆ ಮೊದಲ ನೂರು ಪುಟಗಳ ಮಾಹಿತಿಯನ್ನು ಉಚಿತವಾಗಿ ಒದಗಿಸುವ ಸೌಲಭ್ಯವಿದೆ. ಇದನ್ನು ಎಲ್ಲ ವರ್ಗಕ್ಕೂ ಅನ್ವಯಿಸಬೇಕು. ಈಗಾಗಲೆ ಅಧಿಕಾರಿಗಳು ಕಾಯ್ದೆಯ ಕಲಂ 8(1)(ಜೆ)ಯನ್ನು ಉಲ್ಲೇಖಿಸಿ ಕೇಳಿದ ಮಾಹಿತಿಯನ್ನು ವೈಯುಕ್ತಿಕ ವಿವರ ಎಂಬ ನೆಪದಲ್ಲಿ ನಿರಾಕರಿಸುತ್ತಿದ್ದಾರೆ. ಬೃಹತ್ ಸಂಖ್ಯೆಯಲ್ಲಿ ಪುಟಗಳ ಮಾಹಿತಿಯಿದೆ ಎಂದು ಹೇಳಿ ದೊಡ್ಡ ಮೊತ್ತ ಕಟ್ಟಿ ಬೇಕಿದ್ದರೆ ಮಾಹಿತಿ ಪಡೆಯಿರಿ ಎಂದು ಹೆದರಿಸಲಾಗುತ್ತಿದೆ. ಹಿನ್ನೆಲೆಯಲ್ಲಿರುವುದು ಮಾಹಿತಿ ಕೊಡದಿರುವ ಷಡ್ಯಂತ್ರ. ಕಲಂ 8(1)(ಜೆ)ಯನ್ನು ಇನ್ನಷ್ಟು ಸ್ಪಷ್ಟೀಕರಿಸಬೇಕು. ಮಾಹಿತಿ ಅರ್ಜಿಯಲ್ಲಿಯೇ ಲೋಪ ಹುಡುಕಿ ಕೋರಿಕೆಯನ್ನು ನಿರಾಕರಿಸುವ ಪ್ರವೃತ್ತಿಗೆ ತಡೆ ಹಾಕಲೇಬೇಕಿದೆ.
ಸದ್ಯ ಸಂಘಟನೆಗಳಿಗೆ ಮಾಹಿತಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಇದು ಕಾಯ್ದೆಯನ್ನು ದುರ್ಬಲಗೊಳಿಸುವ ಹುನ್ನಾರ. ಇದನ್ನು ಹಿಂಪಡೆಯಲೇಬೇಕು. ಶಾಸಕಾಂಗ ಈ ವ್ಯವಸ್ಥೆಗಳನ್ನು ಪುನರಾವಲೋಕಿಸಬೇಕಾದ ಕಾಲವಿದು. ಅಷ್ಟಕ್ಕೂ ತಿದ್ದುಪಡಿಗಳು ಅದರ ಕೈಯಲ್ಲಿದೆ ತಾನೇ?
ನಿಜಕ್ಕೂ ಗ್ರಾಮಾಭಿವೃದ್ಧಿಗೆ, ನಗರಾಭಿವೃದ್ಧಿಗೆ ನಾಗರಿಕರು ತಮ್ಮ ಹಣ, ಶ್ರಮ ಹಾಕಬೇಕಾದುದಿಲ್ಲ. ತಮ್ಮೂರಿನ ಕಾಮಗಾರಿಗಳು ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳಲು ಮಾಹಿತಿ ಹಕ್ಕನ್ನು ಬಳಸಿದರೆ ಬೇಷಾದೀತು. ಮಾಹಿತಿ ಅರ್ಜಿಗಳು ಭರಪೂರವಾಗಿ ದಾಖಲಾಗತೊಡಗಿದರೆ ಕಛೇರಿಗಳು ಇವುಗಳ ವಿಲೇವಾರಿಗೇ ತಮ್ಮೆಲ್ಲ ಸಮಯ ವ್ಯಯಿಸುವ ಆತಂಕ ಇಲ್ಲದಿಲ್ಲ. ವಾಸ್ತವವಾಗಿ ಇದನ್ನು ಸುಲಭದಲ್ಲಿ ಪರಿಹರಿಸಿಕೊಳ್ಳಬಹುದು. ಈ ಕಛೇರಿಗಳು ಯೋಜನೆಗಳ ವಿವರ, ಗುತ್ತಿಗೆ ದಾಖಲೆಗಳು, ಅಧಿಕಾರಿಗಳ ಸಂಬಳ- ಸಾರಿಗೆ ಮುಂತಾದ ಹತ್ತು ಹಲವು ನೇರ ವಿವರಗಳನ್ನು ಸ್ವಯಂಪ್ರೇರಿತವಾಗಿ ಪ್ರಕಟಿಸಬಹುದು, ವೆಬ್‍ಸೈಟ್‍ಗಳಲ್ಲಿ ಅಳವಡಿಸಬಹುದು. ಆಗ ಸಂಕೀರ್ಣ ವಿಚಾರಗಳ ಕುರಿತಾಗಿ ಮಾತ್ರ ಮಾಹಿತಿ ಅರ್ಜಿ ಬಂದೀತು. ಇಂತಹ ವಾತಾವರಣ ಸೃಷ್ಟಿಯಾಗಬೇಕೆನ್ನುವುದೇ ಮಾಹಿತಿ ಆಂದೋಲನದ ಹರಿಕಾರರ ಆಶಯ.
ಕಾಯ್ದೆಯ ಬಗ್ಗೆ ಅಧಿಕಾರಿಗಳಲ್ಲಿ ಸ್ಪಷ್ಟ ಭಯ ಮೂಡಬೇಕು. ಹಾಗಾಗಬೇಕಾದರೆ ರಾಜ್ಯ ಮಾಹಿತಿ ಆಯೋಗಗಳನ್ನು ಲೋಕಾಯುಕ್ತದ ಮಾದರಿಯಲ್ಲಿ ರೂಪಿಸಬೇಕು. ಸದ್ಯ ಈ ರಾಜ್ಯ ಆಯೋಗಗಳಲ್ಲಿ ಕಾರ್ಯ ನಿರ್ವಹಿಸುವವರು ರಾಜ್ಯ ಸರ್ಕಾರದ ಅಧಿಕಾರಿಗಳೇ. ಎಷ್ಟೇ ನಿಷ್ಪಕ್ಷಪಾತವಾಗಿ ಕಾಯ್ದೆಯನ್ವಯ ಕೆಲಸ ಮಾಡುತ್ತೇನೆಂದರೂ, ತಮ್ಮದೇ ಅಧಿಕಾರಿ ವರ್ಗದ ಮೇಲೆ ಇವರ ಕರುಣಾದೃಷ್ಟಿ ಇದ್ದೇ ಇರುತ್ತದೆ. ಇದು ಹತ್ತು ಹಲವು ಬಾರಿ ಶ್ರುತಪಟ್ಟಿದೆ. ಬಹುಷಃ ಲೋಕಾಯುಕ್ತದಂತೆ ಸ್ವಾಯತ್ತ – ನಿವೃತ್ತ ನ್ಯಾಯಾಧೀಶರ ನೇತ್ರತ್ವ ದಕ್ಕಿದರೆ, ಅವರು ಕಾನೂನಿನಂತೆ ನಿರ್ವಹಿಸಿದರೆ ಭ್ರಷ್ಟಾಚಾರದ ಪ್ರಮಾಣದಲ್ಲಿ ಇಳಿಕೆಯಾಗಲೇಬೇಕು.
ಸ್ವಾತಂತ್ರ್ಯ ಬಂದು ಬರೋಬ್ಬರಿ 67 ವರ್ಷ. ಹೆಚ್ಚು ಕಡಿಮೆ ಸಂವತ್ಸರದ ಅಂತರದಲ್ಲಿ ನಾಗರಿಕರಿಗೆ ಒಂದು ಉಸಿರಾಟದ ಅವಕಾಶ ಸಿಕ್ಕಿದೆ. ಇದು ಪೂರ್ಣ ಜನಪರ ಗಾಳಿ. ನಾಗರಿಕರ ಜವಾಬ್ದಾರಿ ದೊಡ್ಡದು. ರಾಮರಾಜ್ಯ ಸೃಷ್ಟಿಸುವುದು ಕಷ್ಟವಿದ್ದೀತು. ಕೊನೆಪಕ್ಷ ಅದರ ನೆರಳನ್ನಾದರೂ ಮೂಡಿಸಲು ಈ ಮಾಹಿತಿ ಹಕ್ಕು ಕಾಯ್ದೆ ಬಳಸಿಕೊಂಡರೆ ಚೆನ್ನ.
– ಮಾ.ವೆಂ.ಸ.ಪ್ರಸಾದ್

ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರಿ

0

ಪಕ್ಷದ ಸಿದ್ಧಾಂತಗಳಂತೆ ನಡೆದುಕೊಳ್ಳದವರಿಗೆ ಬಿಜೆಪಿ ಪಕ್ಷದಲ್ಲಿ ಸ್ಥಾನವಿಲ್ಲ. ಕಟ್ಟಡಗಳನ್ನು ಕಟ್ಟಿ ಫ್ಲೆಕ್ಸಿಗಳಲ್ಲಿ ಭಾವಚಿತ್ರಗಳನ್ನು ಹಾಕಿಸಿಕೊಂಡ ಮಾತ್ರಕ್ಕೆ ಪಕ್ಷ ಸಂಘಟನೆ ಆಗುವುದಿಲ್ಲ ಎಂದು ಬಿ.ಜೆ.ಪಿ.ಜಿಲ್ಲಾಧ್ಯಕ್ಷ ರವಿನಾರಾಯಣರೆಡ್ಡಿ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಆಯೋಜನೆ ಮಾಡಲಾಗಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಘ ಪರಿವಾರದ ಅನೇಕ ಮಂದಿ ನಾಯಕರು ಈ ರಾಷ್ಟ್ರದ ಅಭಿವೃದ್ಧಿಗಾಗಿ ಹುಟ್ಟುಹಾಕಿದ ಬಿ.ಜೆ.ಪಿ. ಪಕ್ಷದಲ್ಲಿ ಯಾವೊಬ್ಬ ನಾಯಕರಿಗೂ ಸ್ಥಾನಮಾನವಿಲ್ಲ, ಯಾರಿಂದಲೂ ಪಕ್ಷವಿಲ್ಲ, ಪಕ್ಷವಿರುವುದು ಕಾರ್ಯಕರ್ತರಿಂದ. ಮೊದಲು ಕಾರ್ಯಕರ್ತರಿಗೆ ಅಧಿಕಾರ ಕೊಟ್ಟರೆ, ಅವರು ನಮಗೆ ಅಧಿಕಾರಗಳನ್ನು ಕೊಡುತ್ತಾರೆ. ಮುಖಂಡರು ಕಚ್ಚಾಡುವುದನ್ನು ಬಿಟ್ಟು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಕಾರ್ಯಕರ್ತರ ಮನದಾಳವನ್ನು ಅರಿತುಕೊಂಡು ಸಂಘಟಿತರಾಗಬೇಕು, ಪಕ್ಷವನ್ನು ಮುನ್ನಡೆಸಬೇಕು ಎಂದರು.
ತಾಲ್ಲೂಕು ಅಧ್ಯಕ್ಷ ಸುರೇಂದ್ರಗೌಡ ಮಾತನಾಡಿ, ಪಂಡಿತ್ದೀನ ದಯಾಳ್ ಉಪಾಧ್ಯಾಯರಲ್ಲಿದ್ದಂತಹ ತುಡಿತ ಪ್ರತಿಯೊಬ್ಬ ಕಾರ್ಯಕರ್ತರಲ್ಲಿರಬೇಕು. ಪಕ್ಷದ ಸಂಘಟನೆಗಾಗಿ ಪ್ರತಿಯೊಬ್ಬ ಕಾರ್ಯಕರ್ತರು ದುಡಿಯಬೇಕು ಎಂದರು.
ಬಿಜೆಪಿ ಪಕ್ಷದ ರಮೇಶ್ಬಾಯಿರಿ, ಶ್ರೀರಾಮರೆಡ್ಡಿ, ಶ್ರೀಧರ್, ಸಿ.ವಿ.ಲೊಕೇಶ್ಗೌಡ, ನಂದೀಶ್, ಶಿವಕುಮಾರಗೌಡ, ಮಂಜುಳಮ್ಮ, ಸುಜಾತಮ್ಮ, ರತ್ನಮ್ಮ, ಶಿವಮ್ಮ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಗಿಡ ನೆಟ್ಟು ಪರಿಸರ ಸಂರಕ್ಷಿಸಿ

0

ಪರಿಸರ ಸಮತೋಲನವನ್ನು ಕಾಪಾಡಲು ಗಿಡ ನೆಟ್ಟು ಬೆಳೆಸುವುದೊಂದೇ ಮಾರ್ಗ ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯ ಮುಂದೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ವತಿಯಿಂದ ಸೋಮವಾರ ಸಾರ್ವಜನಿಕರಿಗೆ ಗಿಡಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಯಲು ಸೀಮೆಯ ಭಾಗಗಳಲ್ಲಿನ ಜನರು, ಹೆಚ್ಚಿನ ಸಂಖ್ಯೆಯಲ್ಲಿ ಗಿಡಮರಗಳನ್ನು ಬೆಳೆಸುವ ಮೂಲಕ ಈ ಭಾಗದಲ್ಲಿ ನೀರಿನ ಅಭಾವವನ್ನು ತಡೆಗಟ್ಟಬಹುದಾಗಿದೆ. ಪರಿಸರ ನಾಶವಾಗಲು ಮಾನವನ ದುರಾಸೆಯೇ ಕಾರಣ. ಕೆರೆಗಳ ಒತ್ತುವರಿ, ಗುಂಡುತೋಪುಗಳ ನಾಶ, ರಾಜಕಾಲುವೆಗಳ ಒತ್ತುವರಿಗಳಿಂದಾಗಿ ಅಂತರ್ಜಲ ಕುಸಿತಗೊಂಡಿದೆ. ಪರಿಸರ ನಾಶದಿಂದಾಗಿ ಮರುಭೂಮಿಯಾಗಲಿದೆ. ಪ್ರತಿಯೊಬ್ಬರೂ ಗಿಡ ನೆಟ್ಟು ಪೋಷಿಸಿ ಮುಂದಿನ ಜನಾಂಗಕ್ಕೆ ಹಸಿರನ್ನು ಉಳಿಸಬೇಕು. ಇದರಿಂದ ಅಂತರ್ಜಲವೂ ವೃದ್ಧಿಸಲಿದೆ ಎಂದು ಹೇಳಿದರು.
ವಲಯ ಅರಣ್ಯಾಧಿಕಾರಿ ಸುಬ್ಬರಾವ್ ಮಾತನಾಡಿ, ರೈತರು ತಮ್ಮ ಜಮೀನುಗಳ ಬದುಗಳಲ್ಲಿ ಮರಗಳನ್ನು ಬೆಳೆಸುವುದರಿಂದ ಆರ್ಥಿಕವಾಗಿ ಸಬಲರಾಗುವುದರ ಜೊತೆಗೆ ಭೂಮಿಗಳಲ್ಲಿ ಫಲವತ್ತತೆಯನ್ನು ಕಾಪಾಡಿಕೊಳ್ಳಬಹುದಾಗಿದೆ. ರೈತರಿಗೆ ಇಲಾಖೆಯ ಮುಖಾಂತರ ಸಸಿಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತದೆ. ಒಂದು ಹೆಕ್ಟರ್ಪ್ರದೇಶಕ್ಕೆ ೪೦೦ ಸಸಿಗಳನ್ನು ನೀಡಲಾಗುತ್ತದೆ. ತಮ್ಮ ಜಮೀನುಗಳಲ್ಲಿ ರೈತರು ನಾಟಿ ಮಾಡಿ ಪೋಷಣೆ ಮಾಡಿದರೆ, ಸರ್ಕಾರದಿಂದ ಮೊದಲ ವರ್ಷದಲ್ಲಿ ಒಂದು ಗಿಡಕ್ಕೆ ೧೦ ರೂಪಾಯಿಗಳು, ೨ ನೇ ವರ್ಷದಲ್ಲಿ ೧೫ ಮೂರನೇ ವರ್ಷದಲ್ಲಿ ೨೦ ರೂಪಾಯಿಗಳಂತೆ ಪ್ರೋತ್ಸಾಹಧನವನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಶ್ರೀಗಂಧದ ಮರಗಳನ್ನೂ ಬೆಳೆಸಬಹುದಾಗಿದ್ದು, ೨೦ ವರ್ಷಗಳ ನಂತರ ಉತ್ತಮವಾಗಿ ಬೆಳೆದಂತಹ ಮರಗಳನ್ನು ಸರ್ಕಾರಿ ಸಾಬೂನು ಕಾರ್ಖಾನೆ, ಕಲ ಕುಶಲ ವಸ್ತು ಅಭಿವೃದ್ದಿ ಮಂಡಳಿಗೆ ರೈತರೇ ನೇರವಾಗಿ ಮಾರಾಟ ಮಾಡಬಹುದಾಗಿದೆ. ಶ್ರೀಗಂಧದ ಮರಗಳನ್ನು ಯಾರು ಬೆಳೆಸುತ್ತಾರೊ ಅವರೇ ಅದರ ಮಾಲೀಕರಾಗಿರುತ್ತಾರೆ ಸರ್ಕಾರಕ್ಕೆ ಯಾವುದೇ ತೆರಿಗೆಯನ್ನು ಕಟ್ಟುವಂತಿಲ್ಲ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ 1000 ಗಿಡಗಳನ್ನು ಸಾರ್ವಜನಿಕರು ಹಾಗೂ ರೈತರಿಗೆ ವಿತರಿಸಲಾಯಿತು.
ಜಿಲ್ಲಾ ಪಂಚಾಯತಿ ಸದಸ್ಯ ಸತೀಶ್, ಕರ್ನಾಟಕ ರಾಜ್ಯ ಪ್ರಾಂತ್ಯ ರೈತ ಸಂಘದ ಜಿಲ್ಲಾ ಸಹಕಾರ್ಯದರ್ಶಿ ಬಿ.ಎನ್.ಮುನಿಕೃಷ್ಣಪ್ಪ, ತಾಲ್ಲೂಕು ಪಂಚಾಯತಿ ಸದಸ್ಯ ಯರ್ರಬಚ್ಚಪ್ಪ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಜಿಲ್ಲಾ ಉಪಾಧ್ಯಕ್ಷರಾದಹುಸೇನ್ಸಾಬ್, ಮೇಲೂರು ನಾಗರಾಜ್, ಮುನಿಕೆಂಪಣ್ಣ, ಪ್ರತೀಶ್, ಬಾಲಮುರಳಿಕೃಷ್ಣ, ನಾಗೇಶ್, ರಾಜಪ್ಪ, ಗುಡಿಹಳ್ಳಿ ನಾರಾಯಣಸ್ವಾಮಿ, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಶಿಡ್ಲಘಟ್ಟದ ಹಿಂದೂ ರುದ್ರಭೂಮಿ

0

ರುದ್ರಭೂಮಿ ಎಂದರೆ ಕೆಲವರಿಗೆ ಅಪಶಕುನ. ಹುಟ್ಟಿದ ಪ್ರತಿಯೊಂದು ಜೀವಿಯೂ ಮರಣಿಸಲೇ ಬೇಕು ಎಂದು ಎಲ್ಲರಿಗೂ ತಿಳಿದ ಸತ್ಯವಾದರೂ ರುದ್ರಭೂಮಿಗೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವವರು ವಿರಳ. ಎಲ್ಲರಿಗೂ ಅವಶ್ಯವಿರುವ ಆದರೆ ಯಾರಿಗೂ ಬೇಡವಾದ ಸ್ಥಳವಿದು.
ನಗರದ ಕೆಲವು ಸಮಾನ ಮನಸ್ಕ ಜನರಿಂದಾಗಿ ಕಳೆ ಗಿಡಗಳ ಕೊಂಪೆಯಾಗಿದ್ದ ಹಿಂದೂ ರುದ್ರ ಭೂಮಿ ಶುಚಿತ್ವವನ್ನು ಕಂಡಿದೆ. ಒಂದು ಪ್ಲಾಟ್ಫಾರಂ ಮತ್ತು ನೆರಳಿಗಾಗಿ ಮಂಟಪವನ್ನು ನಿರ್ಮಿಸಲಾಗಿದೆ. ಇದರ ಜೊತೆಯಲ್ಲಿ ಸುಮಾರು ಒಂದೂವರೆ ಲಕ್ಷ ರೂ ಬೆಲೆಯ ಪರಿಸರ ಸ್ನೇಹಿ ಸಿಲಿಕಾನ್ ಚೇಂಬರನ್ನೂ ಅಳವಡಿಸಲಾಗಿದೆ.
ನಗರದ ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಪವರ್ ಗ್ರಿಡ್ ಬಳಿ ಸುಮಾರು ೨೩ ಗುಂಟೆ ಹಿಂದೂ ರುದ್ರಭೂಮಿಯ ಸ್ಥಳವಿದೆ. ಸುಮಾರು ೨೫ ವರ್ಷಗಳ ಹಿಂದೆ ಇದಕ್ಕೆ ಕಾಂಪೋಂಡ್ ಮತ್ತು ಅಪರಕರ್ಮಕ್ಕೆ ಅವಶ್ಯವಿರುವ ಕಟ್ಟಡವನ್ನು ವಿವಿಧ ಸಂಘಗಳ ಸಹಕಾರದಿಂದ ಕಟ್ಟಲಾಗಿತ್ತು. ಆದರೆ ಅಲ್ಲಿ ಕಳೆಗಿಡಗಳೆಲ್ಲ ಬೆಳೆದು ಅಂತ್ಯಸಂಸ್ಕಾರಕ್ಕೆ ಹೋದವರು ಸಾಕಷ್ಟು ತೊಂದರೆ ಅನುಭವಿಸುವಂತಾಗಿತ್ತು.
ಈಗ ಕೆಲ ಸಮಾನಮನಸ್ಕರ ಸಾಂಘಿಕ ಪ್ರಯತ್ನದಿಂದಾಗಿ ರುದ್ರಭೂಮಿಯಲ್ಲಿ ನೆರಳಿಗಾಗಿ ಮಂಟಪ ಮತ್ತು ಸಿಲಿಕಾನ್ ಚೇಂಬರನ್ನು ಅಳವಡಿಸಲಾಗಿದೆ. ಹಿಂದೆ ಮೃತದೇಹವನ್ನು ಸುಡಲು ಸುಮಾರು ೭೫೦ ಕೆಜಿಗೂ ಹೆಚ್ಚಿನ ಸೌದೆ ಬೇಕಾಗುತ್ತಿತ್ತು. ಮಳೆಗಾಲದಲ್ಲಂತೂ ೧೦ ರಿಂದ ೨೦ ಲೀಟರ್ ಸೀಮೆಎಣ್ಣೆ ಬೇಕಾಗುತ್ತಿತ್ತು. ಆದರೆ ಈಗ ಕಡಿಮೆ ಸೌದೆಯಲ್ಲಿ ಮತ್ತು ಅಲ್ಪ ಪ್ರಮಾಣದ ಸೀಮೆಎಣ್ಣೆಯಲ್ಲಿ ಅಂತಿಮ ಸಂಸ್ಕಾರವನ್ನು ನಡೆಸಬಹುದಾಗಿದೆ. ಬೂದಿ ತೆಗೆದುಕೊಳ್ಳಲೆಂದೇ ಚೇಂಬರಿನಲ್ಲಿ ಅನುಕೂಲ ಕಲ್ಪಿಸಲಾಗಿದೆ. ಶಾಖ ಹೊರ ಹೋಗದಂತೆ, ಹೊಗೆ ಇರದಿರುವಂತೆ ಇದನ್ನು ರೂಪಿಸಲಾಗಿದೆ.
’ಬೆಂಗಳೂರಿನ ಚಾಮರಾಜಪೇಟೆಯಲ್ಲಿನ ರುದ್ರಭೂಮಿಯಲ್ಲಿನ ಸೌಕರ್ಯಗಳನ್ನು ಕಂಡು ನಮ್ಮಲ್ಲೂ ಈ ರೀತಿ ಅನುಕೂಲಗಳನ್ನು ಕಲ್ಪಿಸಬೇಕೆಂದು ಕೆಲ ಸಮಾನ ಮನಸ್ಕರೊಂದಿಗೆ ಚರ್ಚಿಸಿದೆ. ದೇವನಹಳ್ಳಿ ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ನಾಗರಾಜ್ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಗೆ ಕಳುಹಿಸಿದರು. ಅಲ್ಲಿನ ನಿರ್ದೇಶಕ ಜಯರಾಂ ನೆಲ್ಲಿತ್ತಾಯ ಅವರಿಗೆ ಸಿಲಿಕಾನ್ ಚೇಂಬರಿನ ಅವಶ್ಯಕತೆಯನ್ನು ತಿಳಿಸಿ ಮನವಿ ಸಲ್ಲಿಸಿದೆವು. ಅವರು ಇಲ್ಲಿ ಸ್ಥಳ ಪರಿಶೀಲಿಸಿ ಮಂಜೂರು ಮಾಡಿದರು. ಅಷ್ಟರಲ್ಲಿ ಪುರಸಭೆಯ ಎಸ್ಎಫ್ಸಿ ಅನುದಾನದಲ್ಲಿ ೩ ಲಕ್ಷ ರೂ ವೆಚ್ಚದಲ್ಲಿ ಶೆಲ್ಟರ್ ಮತ್ತು ಪ್ಲಾಟ್ಫಾರಂ ನಿರ್ಮಿಸಲು ನಡೆಸಿದ ಪ್ರಯತ್ನದಲ್ಲಿ ಸಫಲರಾಗಿದ್ದೆವು’ ಎಂದು ತಮ್ಮ ಭಗೀರಥ ಪ್ರಯತ್ನದ ಬಗ್ಗೆ ತಾಲ್ಲೂಕು ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
’ರುದ್ರಭೂಮಿಗೆ ಅವಶ್ಯವಿರುವ ರಸ್ತೆ, ನೀರು ಮೊದಲಾದ ಮೂಲಭೂತ ಸೌಕರ್ಯ ಕಲ್ಪಿಸಲು ಪುರಸಭೆಗೆ ಮತ್ತು ಶವಸಾಗಾಣಿಕಾ ವಾಹನಕ್ಕೆ ಆಗ ಶಾಸಕರಾಗಿದ್ದ ವಿ.ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಿದೆವು. ಶಾಸಕರ ಅನುದಾನದಲ್ಲಿ ೧೦ ಲಕ್ಷ ರೂ ಅನುದಾನದ ಪತ್ರವನ್ನು ಶವಸಾಗಾಣಿಕಾ ವಾಹನಕ್ಕೆ ಪಡೆದೆವು. ಪುರಸಭೆಯವರು ರುದ್ರಭೂಮಿ ಆವರಣಕ್ಕೆ ಕಾಂಕ್ರೀಟ್ ಬೆಡ್ ಹಾಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಧರ್ಮಸ್ಥಳದವರು ಸಿಲಿಕಾನ್ ಚೇಂಬರನ್ನು ಉಚಿತವಾಗಿ ನೀಡಿದರೂ ಅದನ್ನು ಸಾಗಿಸಿ ಜೋಡಣೆ ಮಾಡಿಸುವಷ್ಟರಲ್ಲಿ ೪೦ ಸಾವಿರ ರೂಗಳಷ್ಟು ಖರ್ಚಾಯಿತು. ಹಲವಾರು ಸಮಾನಮನಸ್ಕರು ಕೈಜೋಡಿಸಿದ್ದರಿಂದಾಗಿ, ತಮ್ಮ ಕೆಲಸ ಕಾರ್ಯ ಬದಿಗಿಟ್ಟು ಓಡಾಡಿದ್ದರಿಂದಾಗಿ ರುದ್ರಭೂಮಿಯ ಅಭಿವೃದ್ಧಿ ಕೆಲಸ ನಡೆಯಿತು. ಎನ್.ಶ್ರೀಕಾಂತ್, ಎನ್.ಲಕ್ಷ್ಮೀನಾರಾಯಣ, ಎಸ್.ವಿ.ನಾಗರಾಜರಾವ್ ಅವರೊಂದಿಗೆ ಎಂ.ರಾಜಣ್ಣ, ಮಂಜುಳಾಮಣಿ, ಹನುಮಂತೇಗೌಡ, ಬಿ.ಕೃಷ್ಣಮೂರ್ತಿ, ವಿ.ಕೃಷ್ಣ, ಎ.ಜಿ.ನಾಗೇಂದ್ರ, ಸತ್ಯನಾರಾಯಣಶೆಟ್ಟಿ, ಮಧುಸೂದನ್ ಹಾಗೂ ಕೆಲವು ಸಂಘ ಸಂಸ್ಥೆಗಳ ಸದಸ್ಯರು ಸಹಕರಿಸಿದ್ದಾರೆ’ ಎಂದು ಅವರು ವಿವರಿಸಿದರು.
– ಡಿ.ಜಿ.ಮಲ್ಲಿಕಾರ್ಜುನ.

ಕನ್ನಡಿಗರೆಲ್ಲರೂ ಬೇಧಭಾವ ಮರೆತು ಒಂದಾಗಿ

0

ಕನ್ನಡಿಗರೆಲ್ಲರೂ ಜಾತಿ, ಮತ, ರಾಜಕೀಯ, ಮೇಲು ಕೀಳು ಎಂಬ ಭಾವನೆ ತೊರೆದು ಒಂದಾಗಬೇಕು. ಇಂತಹ ಕನ್ನಡ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣಗೌಡರ ಬಣ) ಜಿಲ್ಲಾಧ್ಯಕ್ಷ ಲೋಕೇಶ್ ಹೇಳಿದರು.
ನಗರದ ಪ್ರವಾಸಿಮಂದಿರದ ಆವರಣದಲ್ಲಿನ ಭಾನುವಾರ ನಡೆದ ಕನ್ನಡ ರಕ್ಷಣಾ ವೇದಿಕೆಯ ವೀರಾಪುರ ಮತ್ತು ಬೂದಾಳ ಗ್ರಾಮ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅವರು ಮಾತನಾಡಿದರು.
ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಆಡಳಿತ ಭಾಷೆಯಾಗಬೇಕು. ಕನ್ನಡಿಗರು, ಕನ್ನಡ ಭಾಷೆಯಲ್ಲೆ ವ್ಯವಹರಿಸುವ ಮೂಲಕ ನಾಡು, ನುಡಿ, ಭಾಷೆ, ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿದೆ. ನಮ್ಮದಲ್ಲದ ಭಾಷೆಯ ಮೇಲೆ ಹೆಚ್ಚು ವ್ಯಾಮೋಹಗಳನ್ನು ಬೆಳೆಸಿಕೊಳ್ಳಬಾರದು. ಮನೆಗಳಲ್ಲಿ ತೆಲುಗು, ಹೊರಗೆ ಕನ್ನಡ, ಶಾಲೆಯಲ್ಲಿ ಆಂಗ್ಲಭಾಷೆ ಮತ್ತು ರಾಷ್ಟ್ರದಲ್ಲಿ ವ್ಯವಹಾರಿಕ ಭಾಷೆಯಾಗಿ ಹಿಂದಿ ಭಾಷೆಯನ್ನು ಕಲಿಯುವಂತಹ ಸ್ಥಿತಿ ಮಕ್ಕಳಿಗೆ ಒದಗಿ ಬಂದಿರುವುದರಿಂದ ಮಕ್ಕಳ ಕಲಿಕೆಯ ಮೇಲೆ ಹೆಚ್ಚು ದುಷ್ಪರಿಣಾಮವನ್ನು ಉಂಟು ಮಾಡುತ್ತಿವೆ. ಸಂಪರ್ಕ ಭಾಷೆಯನ್ನಾಗಿ ಆಂಗ್ಲಭಾಷೆಯನ್ನು ಉಳಿಸಿಕೊಂಡರೂ ಕೂಡಾ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಮಾತನಾಡುವ, ವ್ಯವಹರಿಸುವ, ಕಲಿಯುವಂತಹ ಭಾಷೆಯಾಗಿ ಬೆಳೆಸಬೇಕು. ಗ್ರಾಮ ಮಟ್ಟದಲ್ಲಿನ ಶಾಖೆಗಳ ಪದಾಧಿಕಾರಿಗಳು ಕನ್ನಡದ ನೆಲ,ಜಲ, ಭಾಷೆ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ, ಹೋರಾಟ ಮಾಡಬೇಕು. ನಾಡಿನ ವಿಚಾರವಾಗಿ ಧ್ವನಿಯೆತ್ತಬೇಕು ಎಂದರು.
ವೀರಾಪುರ ಮತ್ತು ಬೂದಾಳ ಗ್ರಾಮ ಘಟಕದ ಅಧ್ಯಕ್ಷರಾಗಿ ಎ.ಮಣಿಕಂಠ, ಉಪಾಧ್ಯಕ್ಷರಾಗಿ ಎನ್.ಸುನೀಲ್ಕುಮಾರ್, ಕಾರ್ಯದರ್ಶಿ ಕೆ.ಹರೀಶ್, ಖಜಾಂಚಿ ಆರ್.ಮೂರ್ತಿ, ನಿರ್ದೇಶಕರಾಗಿ ನಾಗೇಶ್ (ಪುಟ್ಟು), ಪಿ.ಚಂದ್ರಶೇಖರ್, ಜಿ.ಮಹೇಶ್, ಪಿ.ಎಂ.ವೆಂಕಟೇಶ್, ಆರ್.ಮಂಜುನಾಥ್, ಡಿ.ರಾಮಕೃಷ್ಣ, ರಾಮಾಂಜಿ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುನಿರಾಜು, ತಾಲ್ಲೂಕು ಅಧ್ಯಕ್ಷ ವೆಂಕಟರವಣಪ್ಪ, ಅಂತರಾಷ್ಟ್ರೀಯ ಕ್ರೀಡಾಪಟು ಮಂಚನಬೆಲೆ ಶ್ರೀನಿವಾಸ್, ಕಬ್ಬಡ್ಡಿ ತೀರ್ಪುಗಾರ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ದೇವರಾಜ್(ದೇವಿ) ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಲೂಕಿನಾದ್ಯಂತ ಯಶಸ್ವಿ ಬಂದ್

0

ಮಹದಾಯಿ -ಕಳಸಾಬಂಡೂರಿ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ಗೆ ತಾಲೂಕಿನಾದ್ಯಂತ ಎಲ್ಲಾ ಕಡೆಗಳಲ್ಲಿ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದ ಬಸ್ನಿಲ್ದಾಣದ ಸಮೀಪದಲ್ಲಿ ಶನಿವಾರ ಮಾನವ ಸರಪಳಿಯನ್ನು ನಿರ್ಮಾಣ ಮಾಡಿದ್ದ ಕರ್ನಾಟಕ ರಕ್ಷಣಾ ವೇದಿಕೆ, ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದಲಿತ ಸೇನೆ ಕಾರ್ಯಕರ್ತರು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಬೆಂಬಲವನ್ನು ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ಹಾಗೂ ಬಯಲು ಸೀಮೆಗಳ ಜನತೆಯ ಕೂಗು ನೀರಿನ ವಿಚಾರದ್ದಾಗಿರುವುದರಿಂದ ಮಹದಾಯಿ- ಕಳಸಾಬಂಡೂರಿ ವಿಚಾರಕ್ಕೆ ಬೆಂಬಲ ನೀಡುತ್ತಿದ್ದೇವೆ. ಬಯಲು ಸೀಮೆ ಭಾಗಗಳಲ್ಲಿನ ಜನರು ಕಳೆದ ೪ ದಶಕಗಳಿಂದ ನೀರಾವರಿ ತಜ್ಞ ಡಾ.ಪರಮಶಿವಯ್ಯ ಅವರ ವರದಿಯಂತೆ ನಮ್ಮ ಭಾಗಗಳಿಗೆ ನೀರಾವರಿ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿರುವ ಹೋರಾಟಗಳಿಗೆ ಇದುವರೆಗೂ ಪ್ರತಿಫಲ ದೊರೆತಿಲ್ಲ. ಆದ್ದರಿಂದ ಮುಂದಿನ ಶಾಶ್ವತ ನೀರಾವರಿ ಹೋರಾಟಕ್ಕೂ ಕೂಡಾ ಉತ್ತರ ಕರ್ನಾಟಕದ ಜನತೆ ಬೆಂಬಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಮಂಗಳೂರು ಭಾಗದಲ್ಲಿನ ಜನತೆಗೆ ತೊಂದರೆಯಾಗುತ್ತದೆ ಎನ್ನುವ ಮೂಲಕ ಬಯಲುಸೀಮೆಯ ಜನರನ್ನು ಕಡೆಗಣಿಸುತ್ತಿರುವ ಮಾಜಿ ಕೆ.ಪಿ.ಸಿ.ಸಿ.ಅಧ್ಯಕ್ಷ ಜನಾರ್ಧನ ಪೂಜಾರಿ ಅವರು ಈ ಭಾಗದ ರೈತರ ಕ್ಷಮೆ ಕೇಳಬೇಕು. ಎತ್ತಿನಹೊಳೆ ಯೋಜನೆಯನ್ನು ತೋರಿಸಿ ಈ ಭಾಗದ ಜನತೆಯನ್ನು ದಿಕ್ಕು ತಪ್ಪಿಸುತ್ತಿರುವ ಸರ್ಕಾರ, ನೆರೆಯ ಆಂದ್ರಪ್ರದೇಶದ ಮಾದರಿಯಲ್ಲಿ ಶಾಶ್ವತವಾಗಿ ನೀರಾವರಿ ಸೌಲಭ್ಯವನ್ನು ಕಲ್ಪಿಸಬೇಕು. ಉತ್ತರ ಕರ್ನಾಟಕದ ಜನತೆ ಬಂದ್ನ ಅಂಗವಾಗಿ ಸರ್ಕಾರಕ್ಕೆ ಸಲ್ಲಿಸುವಂತಹ ಮನವಿಯ ಜೊತೆಯಲ್ಲಿ ಶಾಶ್ವತ ನೀರಾವರಿ ಯೋಜನೆಯ ಅನುಷ್ಠಾನದ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ನಗರದಲ್ಲಿನ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಮುಚ್ಚಿ ಬಂದ್ಗೆ ಬೆಂಬಲ ಸೂಚಿಸಿದ್ದರು. ದೂರದ ಊರುಗಳಿಗೆ ಪ್ರಯಾಣಿಸಬೇಕಿದ್ದ ಪ್ರಯಾಣಿಕರು, ಬಸ್ ಸಂಚಾರವಿಲ್ಲದೆ ಪರದಾಡಬೇಕಾಯಿತು. ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿತ್ತು. ಹೋಟೆಲುಗಳು, ಚಲನಚಿತ್ರಮಂದಿರಗಳು ಬಂದ್ ಆಗಿದ್ದವು, ಸಾರಿಗೆ ಇಲಾಖೆಯ ಬಸ್ಸುಗಳು ಸೇರಿದಂತೆ ಖಾಸಗಿ ಬಸ್ಸುಗಳೂ ರಸ್ತೆಗೆ ಇಳಿಯಲಿಲ್ಲ, ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಗೈರು ಹಾಜರಿ ಎದ್ದುಕಾಣುತ್ತಿತ್ತು. ವಿವಿಧ ವಾಹನಗಳ ಮೂಲಕ ಆಸ್ಪತ್ರೆಗಳಿಗೆ ಬಂದಿದ್ದ ರೋಗಿಗಳು, ಆಸ್ಪತ್ರೆಗೆ ಸೇರಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ನಗರದಲ್ಲಿನ ರೇಷ್ಮೆ ಗೂಡಿನ ಮಾರುಕಟ್ಟೆಗೆ ಬೇರೆ ಬೇರೆ ಕಡೆಗಳಿಂದ ಸುಮಾರು ೯೦೦ ಲಾಟುಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆ ಗೂಡು ಬಂದಿದ್ದರಿಂದ ಗೂಡಿನ ಬೆಲೆಗಳು ೧೫೦ ರೂಪಾಯಿಗಳಿಂದ ಹರಾಜು ಪ್ರಾರಂಭವಾಗಿ, ೨೫೭ ರವರೆಗೆ ಹರಾಜಾಯಿತು.
ಬೆಳಗಿನಿಂದಲೇ ಜಿನುಗುತ್ತಿದ್ದ ಮಳೆಯ ಹನಿಗಳ ನಡುವೆಯೆ ರಸ್ತೆ ತಡೆಯನ್ನು ನಡೆಸಿ, ಮಹಾರಾಷ್ಟ್ರ, ಗೋವಾ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ, ತಮ್ಮ ಆಕ್ರೋಶ ವ್ಯಕ್ತಪಡಿಸಿ, ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿಯವರೆಗೆ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ರೈತ ಸಂಘದ ಮುಖಂಡರಾದ ಎಸ್.ಎಂ.ರವಿಪ್ರಕಾಶ್, ತಾದೂರು ಮಂಜುನಾಥ್, ಭಕ್ತರಹಳ್ಳಿಪ್ರತೀಶ್, ಒಕ್ಕಲಿಗರ ಸಂಘದ ಅಧ್ಯಕ್ಷ ಉಲ್ಲೂರುಪೇಟೆ ನಾರಾಯಣಸ್ವಾಮಿ, ಲಕ್ಕಹಳ್ಳಿ ದೇವರಾಜ್, ಆನೂರು ದೇವರಾಜ್, ಸಮಾನ ಮನಸ್ಕರ ಸಮಿತಿಯ ಅಧ್ಯಕ್ಷ ಜೆ.ವೆಂಕಟಸ್ವಾಮಿ, ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಶ್ರೀಧರ, ರಮೇಶ್, ಪ್ರತಾಪ್, ಮಂಜುನಾಥ್, ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ ಜಿಲ್ಲಾ ಸಂಚಾಲಕ ಶಿವಪ್ರಕಾಶ್, ನಟರಾಜ್, ಮಧುಕುಮಾರ್, ದಲಿತ ಸೇನೆಯ ತಾಲ್ಲೂಕು ಅಧ್ಯಕ್ಷ ಸುರೇಶ್, ಚಂದ್ರು ಮುಂತಾದವರು ಹಾಜರಿದ್ದರು.
ವಕೀಲರ ಸಂಘದ ಬೆಂಬಲ

ಶಿಡ್ಲಘಟ್ಟದ ತಾಲ್ಲೂಕು ವಕೀಲರ ಸಂಘ ಶನಿವಾರ ಮಹದಾಯಿ -ಕಳಸಾಬಂಡೂರಿ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.
ಶಿಡ್ಲಘಟ್ಟದ ತಾಲ್ಲೂಕು ವಕೀಲರ ಸಂಘ ಶನಿವಾರ ಮಹದಾಯಿ -ಕಳಸಾಬಂಡೂರಿ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.
ಕರ್ನಾಟಕದಾದ್ಯಂತ ನಡೆಯುತ್ತಿರುವ ಮಹದಾಯಿ- ಕಳಸಾಬಂಡೂರಿ ಯೋಜನೆ, ಹಾಗೂ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನ ಕುರಿತ ಹೋರಾಟಕ್ಕೆ ತಾಲ್ಲೂಕು ವಕೀಲರ ಸಂಘ ಬೆಂಬಲ ಸೂಚಿಸಿ ಶನಿವಾರ ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ನೂತನ ನ್ಯಾಯಾಲಯ ಸಂಕೀರ್ಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ವಕೀಲರು, ಬಯಲು ಸೀಮೆಯ ಭಾಗಗಳಿಗೆ ನೀರಾವರಿ ಸೌಲಭ್ಯಗಳನ್ನು ಶೀಘ್ರವಾಗಿ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಮಾತನಾಡಿ, ಮಹದಾಯಿ- ಕಳಸಾಬಂಡೂರಿ ಯೋಜನೆ, ಹಾಗೂ ಶಾಶ್ವತ ನೀರಾವರಿ ಹೋರಾಟಗಳು ತುಂಬಾ ಹಳೇಯ ಹೋರಾಟಗಳಾಗಿವೆ. ಉತ್ತರ ಕರ್ನಾಟಕದ ಎರಡು ಮೂರು ತಾಲ್ಲೂಕುಗಳಿಗೆ ಸಂಬಂಧಿಸಿದ ಯೋಜನೆಯಾಗಿದೆ. ಶಾಶ್ವತ ನೀರಾವರಿ ಯೋಜನೆ ೬ ಜಿಲ್ಲೆಗಳಿಗೆ ಸಂಬಂಧಿಸಿದ ಯೋಜನೆಯಾಗಿದೆ. ಈ ಭಾಗದಲ್ಲಿನ ರೈತರು ಬಹಳಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀರು ಕೇಳುವುದು ನಮ್ಮ ಸಂವಿಧಾನ ಬದ್ಧವಾದ ಹಕ್ಕಾಗಿದ್ದು, ಸರ್ಕಾರಗಳು ಅನೇಕ ವರ್ಷಗಳ ಬೇಡಿಕೆಯನ್ನು ಈಡೇರಿಸಬೇಕಾಗಿದೆ. ಆದ್ದರಿಂದ ಬಂದ್ಗೆ ನಮ್ಮ ಬೆಂಬಲ ಸೂಚಿಸಿ ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸದೆ ನೀರಾವರಿ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದೇವೆ ಎಂದರು.
ವಕೀಲರ ಸಂಘದ ಕಾರ್ಯದರ್ಶಿ ವಿ.ಎಂ.ಬೈರಾರೆಡ್ಡಿ, ವಕೀಲರಾದ ಎಂ.ಬಿ.ಲೊಕೇಶ್, ಯಣ್ಣಂಗೂರು ಮಂಜುನಾಥ್, ಮುನೇಗೌಡ, ಕೆಂಪೇಗೌಡ, ನೌಷದ್ಆಲಿ, ಬಾಸ್ಕರ್, ವೇಣುಗೋಪಾಲ್, ರಘು, ಮುಂತಾದವರು ಹಾಜರಿದ್ದರು.
ಜಂಗಮಕೋಟೆ ಕ್ರಾಸ್ನಲ್ಲಿ ಪ್ರತಿಭಟನೆ
ಶಿಡ್ಲಘಟ್ಟದ ತಾಲ್ಲೂಕಿನ ಜಂಗಮಕೋಟೆ ಕ್ರಾಸ್ನಲ್ಲಿ ಶನಿವಾರ ಮಹದಾಯಿ -ಕಳಸಾಬಂಡೂರಿ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು.
ಶಿಡ್ಲಘಟ್ಟದ ತಾಲ್ಲೂಕಿನ ಜಂಗಮಕೋಟೆ ಕ್ರಾಸ್ನಲ್ಲಿ ಶನಿವಾರ ಮಹದಾಯಿ -ಕಳಸಾಬಂಡೂರಿ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಜಂಗಮಕೋಟೆ ಕ್ರಾಸ್ನಲ್ಲಿ ವಿವಿಧ ಸಂಘಟನೆಗಳು ಶನಿವಾರ ಮಹದಾಯಿ- ಕಳಸಾಬಂಡೂರಿ ಯೋಜನೆ, ಹಾಗೂ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನ ಕುರಿತ ಹೋರಾಟಕ್ಕೆ ಬೆಂಬಲಿಸಿ ಬಂದ್ ಆಚರಿಸಿದರು.
ಜಂಗಮಕೋಟೆ ಕ್ರಾಸ್ನ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಸೇನೆ, ರೈತ ಸಂಘ, ಆಟೋ ಚಾಲಕರ ಸಂಘ, ವ್ಯಾಪಾರಿಗಳ ಸಂಘ, ಟೆಂಪೋ ಮಾಲಿಕರ ಸಂಘಟನೆಗಳು ಬಂದ್ಗೆ ಬೆಂಬಲ ವ್ಯಕ್ತಪಡಿಸಿರು.
ಪೆಟ್ರೋಲ್ ಬಂಕ್, ಅಂಗಡಿ ಮುಂಗಟ್ಟುಗಳು, ಹೋಟೆಲ್ ಸ್ವಯಂಪ್ರೇರಿತರಾಗಿ ಮುಚ್ಚಿದ್ದು, ಬಂದ್ ಯಶಸ್ವಿಗೆ ಕಾರಣರಾದರು.
ಕರ್ನಾಟಕ ರಕ್ಷಣಾ ವೇದಿಕೆಯ ಮುನಿರಾಜ್(ಕುಟ್ಟಿ), ಕನ್ನಡ ಸೇನೆಯ ಮುರಳಿ, ರೈತ ಸಂಘದ ಮೂರ್ತಿ, ಸುಗಟೂರು ರಾಜು, ಕೆಂಪೇಗೌಡ, ಮಧು, ಸೂರಿ, ನಾಗೇಶ್, ರಮೇಶ್, ಡಿ.ಸಿ.ಮುನಿರಾಜು, ಸುರೇಶ್, ನರಸಿಂಹ, ಶಿವು, ನಾರಾಯಣ್, ದಿನಕರ, ಪ್ರಕಾಶ್, ಮಂಜುನಾಥ, ನಾರಾಯಣಸ್ವಾಮಿ, ಹರೀಶ್, ಅರುಣ್, ಮಣಿ ಮತ್ತಿತರರು ಹಾಜರಿದ್ದರು.

ಪ್ರೊಜೆಕ್ಟ್ ರಿಪೋರ್ಟ್‍ಗಳೆಂಬ ಹಳವಂಡಗಳು

0

ನಾವು ಚಿಕ್ಕವರಿದ್ದಾಗ ಹೋಗಲಿ, ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿದ್ದ ಕಾಲದಲ್ಲಿ ಅಂದರೆ ಸುಮಾರು ಇಪ್ಪತೈದು, ಮೂವತ್ತು ವರ್ಷಗಳ ಹಿಂದೆ ನಾವು ‘ಪ್ರೊಜೆಕ್ಟ್ ರಿಪೋರ್ಟ್’ (ಯೋಜನಾ ವರದಿ) ಎಂಬ ಶಬ್ದವನ್ನು ಕೇಳಿದ್ದೇ ಇಲ್ಲ. ಆದರೆ ಇತ್ತೀಚಿಗೆ ಪ್ರಾಥಮಿಕ ಶಾಲಾ ಮಕ್ಕಳಿಂದ ಹಿಡಿದು ಸ್ನಾತಕೊತ್ತರ ಶಿಕ್ಷಣ ಪಡೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳ ಬಾಯಲ್ಲೂ ಈ ‘ಪ್ರೊಜೆಕ್ಟ್ ರಿಪೋರ್ಟ್’ ಗಳ ಮಾತುಗಳೇ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬಗೆ ಬಗೆಯ ಹೂವುಗಳು, ಹಣ್ಣುಗಳು, ತರಕಾರಿ, ಹಸುಗಳು ಇನ್ನಿತರೆ ಪ್ರಾಣಿಗಳ ಕುರಿತು ‘ಪ್ರೊಜೆಕ್ಟ್ ರಿಪೋರ್ಟ್’ ತಯಾರಿಸಿಕೊಂಡು ಬರಲು ಕೇಳಿದಾಗ ಅವು ಪಾಲಕರಿಗೆ ಸಾಕಷ್ಟು ಕಷ್ಟಕೊಟ್ಟು, ಕಂಪ್ಯೂಟರ್ ಎದುರು ಕುಳಿತು ಬೇಕಾದ ಚಿತ್ರಗಳನ್ನು ಮಾಹಿತಿಗಳನ್ನು ಅಂತರ್ಜಾಲದಿಂದ ಪಡೆದು ಅವನ್ನು ಮತ್ತೆ ನೀಟಾಗಿ ಜೋಡಿಸಿ, ಪ್ಲಾಸ್ಟಿಕ್ ಹೊದಿಗೆ ಹಾಕಿ ಬದಿಗೊಂದು ಪಟ್ಟಿ ಸಿಕ್ಕಿಸಿ, ಶಿಕ್ಷಕರ ಎದುರು ಇಡುತ್ತವೆ. ಹೀಗೆ ಇಟ್ಟವುಗಳಲ್ಲಿ ಬಹಳಷ್ಟು ಪ್ರಾಜೆಕ್ಟ್ ರಿಪೋರ್ಟ್‍ಗಳ ಮೇಲೆ ಅವು ಬಣ್ಣ, ಬಣ್ಣ ಅಕ್ಷರಗಳಲ್ಲಿ, ಅಷ್ಟಿಷ್ಟು ಅಲಂಕಾರ ಮಾಡಿ, ತಮ್ಮ ಹೆಸರು, ತರಗತಿ, ಪ್ರಾಜೆಕ್ಟಿನ ಶೀರ್ಷಿಕೆ, ಯಾವ ಶೀಕ್ಷಕರಿಗೆ ಒಪ್ಪಿಸುವುದು ಮತ್ತು ತಮ್ಮ ಶಾಲೆಯ ಹೆಸರನ್ನು ಬರೆದದ್ದನ್ನು ಕಾಣಬಹುದೇ ವಿನಃ ಒಳಗಡೆ ಹೂರಣಗಳೇನೂ ಇರುವುದಿಲ್ಲ. ಎಲ್ಲಾ ಒಂದು ರೀತಿಯ ಕತ್ತರಿಸು, ಅಂಟಿಸು ((Cut and Paste) ಸ್ವಂತ ತಲೆ ಖರ್ಚು ಮಾಡುವುದಕ್ಕಲ್ಲ ಆಸ್ಪದವೂ ಇಲ್ಲ, ಅವಕಾಶವು ಇಲ್ಲ ಕಾರಣ ಪ್ರಾಜೆಕ್ಟ್ ಗಳು ಒಂದೆರೆಡೇ ಅಲ್ಲ. ಹಾಗಾಗಿ ಸೃಜನಶೀಲತೆಯ ಲವವೇಶವೂ ಇರದ ಒಣ ಯಾಂತ್ರಿಕ ಬರವಣಿಗೆಗಳು, ಅವುಗಳಿಂದ ಯಾವ ಪ್ರಯೋಜನ ಯಾರಿಗೆ ಸಿಗುತ್ತದೋ ಗೊತ್ತಿಲ್ಲ. ಬಹುಶಃ ಪ್ಲಾಸ್ಟಿಕ್ ಹೊದಿಕೆಯ ಮಾರಾಟಗಾರರಿಗೆ ಒಂದಿಷ್ಟು ಲಾಭವಾಗಬಹುದು! ಅದಕ್ಕಿಂತ ಹೆಚ್ಚಾಗಿ ಅವು ಶಾಲೆಯ ತುಂಬೆಲ್ಲ ಹರಡಿಕೊಂಡು ಬಿದ್ದಂತೆ ಪರಿಸರ ಪ್ಲಾಸ್ಟಿಕ್ ಮಾಯಾವಾಗಬಹುದು! ಯಾಕೆಂದರೆ ಯಾವುದೇ ಶಾಲೆಯಲ್ಲಿ ಅವನ್ನೆಲ್ಲ ಒಂದು ಶಿಸ್ತಿನಲ್ಲಿ ಇಡುವ ವ್ಯವಸ್ಥೆ ಇದೆ ಎಂಬ ಭರವಸೆಯಿಲ್ಲ. ಅದನ್ನಷ್ಟು ನೋಡಿ, ಆ ಪ್ಲಾಸ್ಟಿಕ್ ಹೊದಿಕೆ ಮತ್ತು ಪಟ್ಟಿಯನ್ನು ಪುನರ್ ಬಳಕೆಗೆ ನೀಡಿದರೆ ಪಾಲಕರ ಜೇಬಿಗೆ ಬೀಳಬಹುದಾದ ಕತ್ತರಿ ಕಡಿಮೆಯಾಗಬಹುದು! ಈ ಪ್ರಾಜೆಕ್ಟ್ ರಿಪೋರ್ಟ್ ಎಂಬುದು ಒಂದು ಫ್ಯಾಶನ್ನಾಗಿ ಬೆಳೆಯುತ್ತಿರಬೇಕೆಂಬುದೇ ನಮ್ಮ ಸದ್ಯದ ಗುಮಾನಿ.
ಈ ಪ್ರಾಜೆಕ್ಟ್ ರಿಪೋರ್ಟ್ ಎನ್ನುವುದು, ಮಾಹಿತಿಗಳನ್ನು ಒಂದು ವ್ಯವಸ್ಥಿತ ಕ್ರಮದಲ್ಲಿಡುವುದನ್ನು ಕಲಿಸಬಹುದೆನ್ನುವುದನ್ನು ಒಪ್ಪಬಹುದಾದರೂ, ಅದೇ ನಮ್ಮ ಜ್ಞಾನ ಸಂಪತ್ತನ್ನು ಹೆಚ್ಚಿಸುತ್ತದೆ ಎಂದಾಗಲೀ, ಚಿಂತನಾಶಕ್ತಿಯನ್ನು ಬೆಳೆಸುತ್ತದೆ ಎಂದಾಗಲೀ ಸೃಜನಶೀಲತೆಯನ್ನು ಉತ್ತೇಜಿಸುತ್ತದೆ ಎಂದಾಗಲಿ ಭ್ರಮಿಸುವಂತಿಲ್ಲ. ಕಂಪ್ಯೂಟರ್ ಮತ್ತು ಇಂಟರ್‍ನೆಟ್ ಬಳಕೆಯಿಂದ ಪಡೆದು ಭಟ್ಟಿ ಇಳಿಸಲು ತಿಳಿದವರಿಗೆ ಹೆಚ್ಚು ಅಂಕಗಳೂ ಹಾಗೆ ತಿಳಿಯದೆ ಸ್ವಂತ ಪ್ರತಿಭೆಯಿಂದ ಸೃಷ್ಟಿಸಿದವರಿಗೆ ಕಡಿಮೆ ಅಂಕಗಳೂ ಬರುವ ಸಾಧ್ಯತೆ ಕೂಡ ಇದೆ. ಇದು ಹೇಗೆಂದರೆ ಹಿಂದೆ ಛದ್ಮವೇಷ ಸ್ಫರ್ಧೆಗೆ, ಮಕ್ಕಳೇ ಅಥವಾ ಅವರ ಪಾಲಕರೇ ಅಷ್ಟಿಷ್ಟು ಶ್ರಮವಹಿಸಿ ರಾಮನನ್ನೂ, ಕೃಷ್ಣನನ್ನೂ ರಾಧೆಯನ್ನು, ವಿದೂಷಕರನ್ನು ಮಾಡಿ ತರುತ್ತಿದ್ದರೆ ಇಂದು ಅವುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅದನ್ನೆ ಒಂದು ದಂಧೆಯನ್ನಾಗಿಸಿಕೊಂಡವರು ಬಂದು ಅಚ್ಚುಕಟ್ಟಾಗಿ ಬೇಕಿದ್ದರೆ ಯಕ್ಷಗಾನದ ವೇಷವನ್ನೇ ಮಾಡಿಕೊಡುತ್ತಾರೆ. ಆಗ ಬಹುಮಾನ ದಕ್ಕುವುದು ಧನವುಳ್ಳವರ ಮಕ್ಕಳಿಗೇ ವಿನಃ ಉಳಿದವರಿಗೆ ಅಲ್ಲ. ಈ ಪ್ರಾಜೆಕ್ಟ್ ರಿಪೋರ್ಟ್‍ಗಳೂ ಹಾಗೇ ಅಂದುಕೊಂಡರೆ ಬಹುಶಃ ತಪ್ಪೇನೂ ಇಲ್ಲ. ಇದೇ ಮಾದರಿಯಲ್ಲಿ ವಿಜ್ಞಾನದ ವಿವಿಧ ಮಾದರಿಗಳ ತಯಾರಿಕೆ ಮತ್ತು ಪ್ರದರ್ಶನ ಕೂಡ ನಡೆಯುತ್ತಿದೆ.
ಹೈಸ್ಕೂಲು ಮತ್ತು ಕಾಲೇಜುಗಳಲ್ಲಿ ಕೂಡ ಇಂದು ಇಂಥ ಪ್ರಾಜೆಕ್ಟ್ ರಿಪೋರ್ಟ್‍ಗಳು ಕಡ್ಡಾಯವಾಗಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಬಹುತೇಕ ಸಮಯ ಇವುಗಳ ತಯಾರಿಕೆಗೇ ಸಂದುಹೋಗುತ್ತಿದೆ. ಇವುಗಳ ತಯಾರಿಕೆಗೆ ನಮೂದಿಸುವುದೂ ಸಾಮಾನ್ಯ ಸಂಗತಿ ಪದವಿ ತರಗತಿಗಳಲ್ಲಿ ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳಲ್ಲಿ ಆತಂರಿಕ ಅಂಕ ನೀಡುವಿಕೆಗೂ ಇಂಥದೆ ಸ್ವಲ್ಪ ವಿಸ್ತøತ ಮಾದರಿಯ ಪ್ರಾಜೆಕ್ಟ್ ರಿಪೋರ್ಟ್‍ಗಳನ್ನು ಒಪ್ಪಿಸುವುದು ಕಡ್ಡಾಯವಾಗಿದೆ ಒಂದು ಕಾಲೇಜಿನ ನೂರಾರು ವಿದ್ಯಾರ್ಥಿಗಳು ಬೇರೆ ಬೇರೆ ಕಡೆಗೆ ಹೋಗಿ, ಅಲ್ಲಿನ ಕಾರ್ಖಾನೆಯನ್ನೋ, ವ್ಯಾಪಾರ ವಹಿವಾಟಿನ ಸಂಸ್ಥೆಯನ್ನೂ ಆಮೂಲಾಗ್ರವಾಗಿ ಅಭ್ಯಸಿಸಿ ಆ ಕುರಿತು ಪ್ರಾಜೆಕ್ಟ್ ರಿಪೋರ್ಟ್ ನೀಡುವುದು ಸರಿಯಾದ ಕ್ರಮವೇ ಹೌದಾದರೂ ಅದಕ್ಕೆ ಅಗತ್ಯವಾದ ಸಿದ್ಧತೆಗಳಾಗಲಿ, ಸೌಲಭ್ಯಗಳಾಗಲಿ ಎಲ್ಲರಿಗೂ ಸಿಗುವುದು ಅಸಾಧ್ಯ. ಹಾಗಾಗಿ ಮತ್ತೆ ಈ ವಿದ್ಯಾರ್ಥಿಗಳೆಲ್ಲ ಮೊರೆಹೋಗುವುದು ಸೈಬರ್ ಕೆಫೆಗಳಿಗೆ ಅಲ್ಲಿನವರಿಗೆ ಈ ರೀತಿ ಪ್ರಾಜೆಕ್ಟ್‍ಗಳನ್ನು ರೂಪಿಸಿ ಕೊಡುವುದೇ ಹಣಗಳಿಸುವ ದಂಧೆಯಾಗಿರುತ್ತದೆ. ವಿದ್ಯಾರ್ಥಿಗಳ ಅಗತ್ಯಕ್ಕೆ ಅನುಕೂಲತೆಗೆ ತಕ್ಕಂತೆ ಅವರ ಕೋರಿಕೆಯಷ್ಟು ಪುಟಗಳಲ್ಲಿ ರಿಪೋರ್ಟ್‍ಗಳನ್ನು ಅಂದವಾಗಿ ಡಿ.ಟಿ.ಪಿ ಮಾಡಿ ಅದನ್ನೊಂದು ಮಿನಿ ಪಿ.ಹೆಚ್.ಡಿ. ಪ್ರಬಂಧದಂತೆ ಅಚ್ಚುಕಟ್ಟಾಗಿ ನೀಡುತ್ತಾರೆ. ಅದಕ್ಕೊಂದು ವ್ಯವಸ್ಥಿತ ಜಾಲವೇ ಇರುತ್ತದೆ. ನಾಲ್ಕಾರು ಕಾಲೇಜುಗಳ ವಿದ್ಯಾರ್ಥಿಗಳು ಸಿಕ್ಕರೆ ಇವರ ಪ್ರಾಜೆಕ್ಟ್ ರಿಪೋರ್ಟ್‍ಗಳೆಂದರೆ ಅತ್ತ, ಇತ್ತ ಮಾಡುವುದು ಒಂದು ಕಾಲೇಜಿನ ಕಳೆದ ವರ್ಷದ ಅದರ ಹಿಂದಿನ ವರ್ಷದ ಪ್ರಾಜೆಕ್ಟ್ ರಿಪೋರ್ಟ್‍ಗಳು, ಮತ್ತೊಂದು ಕಾಲೇಜಿನ ಈ ವರ್ಷದ ಪ್ರಾಜೆಕ್ಟ್ ರಿಪೋರ್ಟ್‍ಗಳಾಗಿ ಮಾರ್ಪಟ್ಟರೆ ಅದರಲ್ಲಿ ಆಶ್ವರ್ಯ ಪಡುವಂಥದ್ದೆನಿಲ್ಲ, ಇವೆಲ್ಲ ವ್ಯವಸ್ಥಿತವಾಗಿ ಕತ್ತರಿಸು ಮತ್ತು ತೇಪೆ ಹಚ್ಚು ಎಂಬಂತಾದಾಗ, ಅವು ತಮ್ಮಿಂದ ತಾವೇ ಕೃತಿಚೌರ್ಯಗಳಾಗಲು ಪ್ರಾರಂಭವಾಗುತ್ತದೆ.
ಹೀಗೆ ಪ್ರಾಥಮಿಕ, ಮಾಧ್ಯಮಿಕ ಮತ್ತು ಕಾಲೇಜು ಹಂತಗಳಲ್ಲದೆ, ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳವರೆಗೆ ವ್ಯವಸ್ಥಿತವಾಗಿ ಕಲಿತ ಪ್ರಾಜೆಕ್ಟ್ ರಿಪೋರ್ಟಿನ ಕೈಚಳಕ ಅಥವಾ ವೈಖರಿಯ ಮುಂದುವರಿದ ಭಾಗವಾಗಿ ಪಿ.ಹೆಚ್.ಡಿ ಗ್ರಂಥಗಳು ಬರಲು ಪ್ರಾರಂಭಿಸಿದರೆ ಅದರಲ್ಲಿ ಆಶ್ಚರ್ಯ ಪಡುವಂಥದ್ದೇನೂ ಇರುವುದಿಲ್ಲ. ಇಂದು ನಾವು ಮಾಧ್ಯಮದ ಮೂಲಕ ಪಿ.ಹೆಚ್.ಡಿಯಲ್ಲೂ ಕೃತಿಚೌರ್ಯ ಎಷ್ಟು ವ್ಯವಸ್ಥಿತವಾಗಿ ಜರುಗಿದೆ ಮತ್ತು ಜರುಗುತ್ತಿದೆ ಎಂದು ನೋಡುತ್ತಿದ್ದೇವೆ, ಓದುತ್ತಿದ್ದೇವೆ. ಆದರೆ ಅದರ ಪರಿಹಾರದ ಕುರಿತಾಗಲಿ, ಅದರ ಮೂಲ ಬೇರಿನ ಕುರಿತಾಗಲಿ ಚಿಂತಿಸುತ್ತಿಲ್ಲ. ಯಾವಾಗ ಕಾಲೇಜು ಪ್ರಾಧ್ಯಾಪಕ ಹುದ್ದೆಗೆ ಮತ್ತು ಪದೋನ್ನತಿಗೆ ಪಿ.ಹೆಚ್.ಡಿ ಪಡೆಯುವುದು ಒಂದು ಮಾನದಂಡವಾಗಿ ಪರಿವರ್ತಿತವಾಯಿತೋ ಆವಾಗಿನಿಂದ ಇವುಗಳು ಸಂಖ್ಯೆ ವಿಪರೀತವಾಗುತ್ತ ಹೋದದ್ದು ಎಂಥವರಿಗೂ ಗೋಚರಿಸುವಂಥದ್ದು, ಯಾರು ಯಾರೋ ಯಾವು ಯಾವೂದೋ ವಿಷಯದ ಮೇಲೆ ಪಿ.ಹೆಚ್.ಡಿ.ಗಾಗಿ ಪಿ.ಹೆಚ್.ಡಿ. ಮಾಡಲು ತೊಡಗಿದಂತೆ ಅವುಗಳ ಗುಣಮಟ್ಟ ತನ್ನಿಂದತಾನೆ ಕುಸಿಯುತ್ತ ಸಾಗಿದರೆ ಅದು ಸ್ವಾಭಾವಿಕ ಸಂಗತಿಯೇ ಆಗುತ್ತದೆ. ಅಂಥವುಗಳಿಂದ ಯಾವುದೇ ಸಂಸ್ಥೆಗಳಿಗಾಗಲಿ, ಸಮಾಜಕ್ಕಾಗಲಿ ಪ್ರಯೋಜನವಾಗುವುದು ಅಷ್ಟರಲ್ಲೇ ಇದೆ.
ಹೀಗೆ ಪ್ರಾಜೆಕ್ಟ್ ರಿಪೋರ್ಟ್‍ಗಳೆಂಬ ರಾಶ್ಯುತ್ಪನ್ನಗಳು ಮಾರುಕಟ್ಟೆಯ ಸರಕುಗಳಾಗದಂತೆ ಅಗ್ಗವಾಗದಂತೆ ಎಚ್ಚರವಹಿಸುದಕ್ಕೆ ಬಹುಶಃ ಇದು ಸಕಾಲ. ಈ ಕುರಿತು ಇನ್ನಷ್ಟು ಚಿಂತನ, ಮಂಥನಗಳು ವಿಷಯದ ಮೇಲೆ ಜರುಗಿದರೆ ಜೋಳ್ಳು ಗಟ್ಟಿಗಳ ಆಯ್ಕೆಯು ಕ್ರಿಯೆಗೊಂದು ಅರ್ಥಪೂರ್ಣವಾದ ವೇದಿಕೆ ನಿರ್ಮಾಣವಾಗಲು ಸಾಧ್ಯ ಎನ್ನುವುದು ಸದ್ಯದ ಅನ್ನಿಸಿಕೆ.
ರವೀಂದ್ರ ಭಟ್ ಕುಳಿಬೀಡು.

error: Content is protected !!