ಕೆಲವು ದಿನಗಳ ಹಿಂದೆ ಅಮೆರಿಕದ ‘ಡಿಸ್ಕವರಿ’ ಹೆಸರಿನ ಸ್ಪೇಸ್ ಶಟ್ಲ್ ಅಥವಾ ಗಗನನೌಕೆ ‘ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ’ ಕ್ಕೆಂದು ಸಾಮಾನು ಸರಂಜಾಮುಗಳೊಡನೆ ಬಾನಿಗೆ ಜಿಗಿದ ವರದಿಯಾಗಿತ್ತಷ್ಟೆ. ನಮ್ಮ ರಸ್ತೆ ಸಾರಿಗೆಯ ‘ರಾಜಹಂಸ’ ಅಥವಾ ‘ವೇಗದೂತ’ ಬಸ್ಸುಗಳ ಹಾಗೆ ‘ಡಿಸ್ಕವರಿ’, ‘ಅಟ್ಲಾಂಟಿಸ್’ , ‘ಎಂಡೆವರ್’, ‘ಕೊಲಂಬಿಯಾ’ ಮತ್ತು ‘ಚಾಲೆಂಜರ್’ ಇವೆಲ್ಲವೂ ವಿವಿಧ ಹೆಸರುಗಳ ಆದರೆ ಒಂದೇ ರಚನೆಯುಳ್ಳ ಬಾನನೌಕೆಗಳು. ಇವನ್ನು ಸ್ಪೇಸ್ ಶಟ್ಲ್ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಇವುಗಳಲ್ಲಿ ಕೊಲಂಬಿಯಾ ಮತ್ತು ಚಾಲೆಂಜರ್ ಅಪಘಾತಕ್ಕೀಡಾಗಿ ಬಾನಲ್ಲೇ ಭಸ್ಮಗೊಂಡಿವೆ. ನೂರಾರು ಬಾರಿ ಅಂತರಿಕ್ಷಯಾನಗೈದ ಉಳಿದ ಮೂರೂ ಬಾನಾಡಿಗಳು ಸಧ್ಯದಲ್ಲಿಯೇ ಬಾನ ಆಖಾಡದಿಂದ ಹೊರಬೀಳಲಿವೆ.
ಇಂದು ಅಮೆರಿಕಾ ದೇಶ ಬಾಹ್ಯಾಕಾಶ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವುದು ನಿಜವಾದರೂ ಅಂತರಿಕ್ಷ ಸಾಹಸಗಳ ಇತಿಹಾಸದಲ್ಲಿ ಮೊದಲ ಸ್ಥಾನ ಅಮೆರಿಕಕ್ಕಲ್ಲ, ಬದಲಾಗಿ ಹಿಂದಿನ ಸೋವಿಯೆತ್ ರಷ್ಯಾಕ್ಕೆ ಸೇರುತ್ತದೆ. ತಂತ್ರಜ್ಞಾನದ ಯುಗ ಇನ್ನೂ ಅಂಬೆಗಾಲಿಕ್ಕುತ್ತಿದ್ದ ಕಾಲದಲ್ಲೇ ರಷ್ಯಾದ ಗಗನಯಾತ್ರಿ ಯೂರಿ ಗ್ಯಾಗರಿನ್ ಅವರು ಬಾಹ್ಯ ಆಕಾಶಕ್ಕೆ ಹಾರಿ ಅಲ್ಲಿಂದ ಕಾಣುವ ಭೂಗ್ರಹವನ್ನು ‘ನೀಲಿ ಗೋಲ ನನ್ನ ತಾಯ್ನೆಲ’ ಎಂದು ಉದ್ಗಾರವೆತ್ತಿದ್ದರು. ಸ್ಪುಟ್ನಿಕ್ ಹೆಸರಿನ ಕೃತಕ ಉಪಗ್ರಹವನ್ನೂ ರಷ್ಯಾ ದೇಶ ಆಗಸಕ್ಕೆ ಹಾರಿಬಿಟ್ಟಿತ್ತು.
ಅಪೋಲೋ, ಸ್ಕೈಲಾಬ್ ಉಡ್ಡಯನದ ನಂತರ ನಾಸಾದ ಇಂಜಿನಿಯರುಗಳು ಭೂಸಮೀಪದ ಕಕ್ಷೆಗೆ ವಿವಿಧ ಉದ್ದೇಶಗಳ ಉಪಗ್ರಹಗಳನ್ನು ಹಾರಿಸಲು ಮರುಬಳಕೆಯ ಮತ್ತು ಬಹುಬಳಕೆಯ ಗಗನವಾಹನಗಳನ್ನು ನಿರ್ಮಿಸುವ ಬಗ್ಗೆ ನೀಲನಕ್ಷೆ ತಯಾರಿಸಿದ್ದರು. ವಿಯೆಟ್ನಾಮ್ ಯುದ್ಧದಿಂದ ಸಾಕಷ್ಟು ಕಷ್ಟನಷ್ಟ ಅನುಭವಿಸಿದ್ದ ಜನತೆ ಬಾಹ್ಯಾಕಾಶ ಸಾಹಸಗಳಿಗೆ ಹಣ ಸುರಿಯುವ ವಿಚಾರದಲ್ಲಿ ಸಹಮತ ತೋರಿರಲಿಲ್ಲ.
ನಾಸಾಕ್ಕೆ ಸರಕಾರದ ಮನವೊಲಿಸಬೇಕಾಗಿತ್ತು. ಕ್ಷಿಪಣಿಗಳನ್ನೂ, ರಾಕೆಟ್ಟುಗಳನ್ನೂ ಬಳಸುತ್ತಿದ್ದ ರಕ್ಷಣಾ ಇಲಾಖೆಯೊಂದಿಗೆ ಕೈಜೋಡಿಸಿ ಅವರ ಬೇಹುಗಾರಿಕಾ ಉಪಗ್ರಹಗಳನ್ನು ಮತ್ತು ಇತರ ಸಂಪರ್ಕ ಉಪಗ್ರಹಗಳನ್ನು ಭೂಬಳಿಯ ಕಕ್ಷೆಗೆ ಹಾರಿ ಬಿಡುತ್ತೇವೆಂಬ ಆಶ್ವಾಸನೆ ಕೊಟ್ಟು ಅವರ ಬೆಂಬಲ ಪಡೆಯಲಾಯಿತು. ಆ ಮೂಲಕ ಅಮೆರಿಕ ಸರಕಾರವೂ ಅಪಾರ ಹಣಕಾಸಿನ ನೆರವು ನೀಡಿ ಬಾಹ್ಯಾಕಾಶ ಸಂಶೋಧನೆಗೆ ಉನ್ನತ ಮಟ್ಟದ ತಂತ್ರಜ್ಞಾನವನ್ನು ಬಳಸಲು ಸಂಪೂರ್ಣ ಒಪ್ಪಿಗೆ ನೀಡಿತು
ಆಗ ಸುಮಾರು ಇಪ್ಪತ್ತು ವರ್ಷಗಳ ಅವಧಿಯಲ್ಲಿ ನಾಸಾ ಹಾಗೂ ಇನ್ನನೇಕ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು, ಸಂಶೋಧಕರು ಮತ್ತು ತಂತ್ರಜ್ಞರು ರಚಿಸಿ, ಸಿದ್ಧಪಡಿಸಿದ ಮರುಬಳಕೆಯ ಉಪಗ್ರಹ ವ್ಯವಸ್ಥೆಯೇ ಸ್ಪೇಸ್ ಶಟ್ಲ್. ಅತಿ ಕ್ಲಿಷ್ಟವಾದ ವಿನ್ಯಾಸದ ಸ್ಪೇಸ್ ಶಟ್ಲ್ ನ ಸಾವಿರಾರು ಬಿಡಿ ಭಾಗಗಳನ್ನು ಬೇರೆ ಬೇರೆ ಕೇಂದ್ರಗಳಲ್ಲಿ ಸಿದ್ಧಪಡಿಸಿ ನಂತರ ಅವನ್ನು ಒಂದಾಗಿ ಜೋಡಿಸಿ ಮತ್ತೆ ಮತ್ತೆ ಪರೀಕ್ಷೆಗೊಳಪಡಿಸಲಾಯಿತು. ಸ್ಪೇಸ್ ಶಟ್ಲ್ ನ ಹೊರಕವಚದ ನಿರ್ಮಾಣ ಅತಿ ದೊಡ್ಡ ಸವಾಲಾಗಿತ್ತು. ಅಂತರಿಕ್ಷದ ನಿರ್ವಾತ ಪ್ರದೇಶದಲ್ಲಿ ಹಾಗೂ ಭೂಮಿಯ ವಾತಾವರಣದ ವಿವಿಧ ಉಷ್ಣತೆಯನ್ನು ಸಹಿಸಿಕೊಳ್ಳುವಂಥಹ ಕವಚ ಅದಾಗಬೇಕಾಗಿತ್ತು.
ಎಪ್ರಿಲ್ 12, 1981 ರಂದು, ಅಂದರೆ ಮಾನವನಿರ್ಮಿತ ಮೊದಲ ಬಾನನೌಕೆ ಚಂದ್ರನನ್ನು ತಲುಪಿದ್ದ ಇಪ್ಪತ್ತು ವರ್ಷಗಳ ನಂತರ ಮೊದಲ ಸ್ಪೇಸ್ ಶಟಲ್ ಬಾನಿಗೆ ಹಾರಿತು. ಅದುವರೆಗಿನ ಅಪೋಲೋ, ಮಕ್ರ್ಯುರಿ ನೌಕೆಗಳು ಸಮುದ್ರದಲ್ಲಿ ಇಳಿದಿದ್ದರೆ ಸ್ಪೇಸ್ ಶಟ್ಲ್ ಅನ್ನು ವಾತಾವರಣದಲ್ಲಿ ಸುತ್ತಿ ಬಳಸಿ, ತೇಲಿಕೊಂಡು ವಿಮಾನದಂತೆ ರನ್ ವೇಯಲ್ಲಿ ಓಡುತ್ತ, ತೆವಳುತ್ತ ಆನಂತರ ನಿಲ್ಲುವಂತೆ ರಚಿಸಲಾಗಿತ್ತು.
ಮೂವತ್ತು ವರ್ಷಗಳ ಅವಧಿಯಲ್ಲಿ ಮರುಬಳಕೆಯ ಬಾನವಾಹನ ಈ ಸ್ಪೇಸ್ ಶಟ್ಲ್ ಗಳು ಅನೇಕ ಉಪಗ್ರಹಗಳನ್ನು ಮಡಿಲಲ್ಲಿಟ್ಟುಕೊಂಡು ಆಗಸಕ್ಕೆ ಹಾರಿ ಅವನ್ನು ನಿಗದಿತ ಕಕ್ಷೆಗಳಿಗೆ ತೇಲಿಬಿಟ್ಟಿವೆ. ‘ಬಾಹ್ಯಾಕಾಶ ನಿಲ್ದಾಣ’ ವಾಗಿರುವ ISS ಗೆ ವೈಜ್ಞಾನಿಕ ಉಪಕರಣಗಳನ್ನೂ ಗಗನಯಾತ್ರಿಗಳನ್ನೂ ಹೊತ್ತೊಯ್ದು ನೂರಾರು ಬಾರಿ ಭೆಟ್ಟಿ ಇತ್ತಿವೆ. ಒಮ್ಮೆ ಬೃಹತ್ ರೊಬಾಟ್ ಕೈ, ಮತ್ತೊಮ್ಮೆ ಬೃಹತ್ ಸೌರ ಫಲಕಗಳನ್ನು ಹೊತ್ತು ಯಶಸ್ವಿಯಾಗಿ ISS ಗೆ ಹಾರಿ ಮರಳಿ ಬಂದ ಹೆಗ್ಗಳಿಕೆ ಸ್ಪೇಸ್ ಶಟ್ಲ್ ಗಳದ್ದು. ಸ್ಪೇಸ್ ಶಟ್ಲ್ ಮತ್ತು ISS ಒಂದರ ಪಕ್ಕ ಹಾರುತ್ತ ಗಗನಯಾತ್ರಿಗಳು ನೌಕೆಯಿಂದ ISS ಗೆ ದಾಟಿದ್ದು, ಅಲ್ಲಿಂದ ಹೊರಬಿದ್ದು ಉಪಗ್ರಹದ ರಿಪೇರಿ, ಉಪಕರಣಗಳ ಜೋಡಣೆ ಇತ್ಯಾದಿಗಳನ್ನು ಗಗನನಡಿಗೆಯ ಮೂಲಕ ನಡೆಸಿದ್ದು ಇವೆಲ್ಲ ಭೂಮಿಯಲ್ಲಿರುವವರಿಗೆ ರೋಚಕ ಕ್ಷಣಗಳಾಗಿದ್ದವು.
ತಂತ್ರಜ್ಞಾನ ಉತ್ತುಂಗಕ್ಕೇರಿದ ಇಂದಿನ ದಿನಗಳಲ್ಲಿ ಸ್ಪೇಸ್ ಶಟ್ಲ್ ಕೂಡ ಸಾಕಷ್ಟು ಬದಲಾವಣೆಗೊಳಗಾಗುತ್ತಿರುತ್ತವೆ. ಹೊರಮೈ ವಿನ್ಯಾಸ ಅದೇ ಇದ್ದರೂ ಮತ್ತೆ ಮತ್ತೆ ಮೇಲ್ವಿಚಾರಣೆಗೊಳಗಾಗುತ್ತಿರುತ್ತವೆ. ಒಳಾಂಗಣದ ಬಿಡಿಭಾಗಗಳು ಸುಧಾರಣೆಗೊಳಗಾಗುತ್ತಿರುತ್ತವೆ. ಪ್ರತಿ ಹಾರಾಟದ ನಂತರವೂ ಇಂಜಿನ್ನುಗಳನ್ನು ಕಳಚಿ ಪರೀಕ್ಷೆಗೊಳಪಡಿಸಲಾಗುತ್ತದೆ. ಆದರೂ, ಎರಡು ಬಾರಿ, ಒಮ್ಮೆ ಚಾಲೆಂಜರ್ ಹಾಗೂ ಇನ್ನೊಮ್ಮೆ ಕೊಲಂಬಿಯಾ ಬಾನನೌಕೆಗಳು ಬಾನಲ್ಲೇ ಭಸ್ಮವಾದ ಘಟನೆಗಳಿಂದಾಗಿ ನಾಸಾ ತಾನಿಟ್ಟ ಹೆಜ್ಜೆಗಳನ್ನು ಮತ್ತೊಮ್ಮೆ ಪರೀಕ್ಷಿಸುವಂತಾಯಿತು.
ಅತಿ ಹೆಚ್ಚಿನ ಹಾರಾಟ ನಡೆಸಿದ ಡಿಸ್ಕವರಿ ಕೊನೆಯ ಬಾರಿ ಬಾನಿಗೇರುವ ಸ್ಪೇಸ್ ಶಟ್ಲ್ ಕೂಡ. ಈ ಗಗನ ವಾಹನಗಳಿಗೆ 2010 ರಲ್ಲಿ ನಿವೃತ್ತಿ ನೀಡಬೇಕೆಂದು ಅಮೆರಿಕದ ಹಿಂದಿನ ಅಧ್ಯಕ್ಷ ಜಾರ್ಜ್ ಬುಶ್ ತಾಕೀತು ಪಡಿಸಿದ್ದು ಇದಕ್ಕೆ ಕಾರಣವೊಂದಾದರೆ ಗಗನಯಾನವನ್ನು ವ್ಯಾಪಾರೀಕರಣಗೊಳಿಸುವ ನಿಟ್ಟಿನಲ್ಲಿ ಇವಿನ್ನು ಬೇಡ ಎಂದು ಈಗಿನ ಅಧ್ಯಕ್ಷ ಒಬಾಮಾ ನೀಡಿರುವ ಆದೇಶ ಇನ್ನೊಂದು ಕಾರಣ.
ಮುಂದಿನ ದಿನಗಳಲ್ಲಿ ಅಮೆರಿಕದ ವಸ್ತುಸಂಗ್ರಹಾಲಯಗಳಲ್ಲಿ ಆ ದೇಶದ ಬಾಹ್ಯಾಕಾಶ ಸಾಧನೆಯನ್ನು ಬಣ್ಣಿಸುವ ಪರಿಕರಗಳಾಗಿ ಬೃಹದಾಕಾರದ ಯಂತ್ರಗಳಾದ ಡಿಸ್ಕವರಿ, ಎಂಡೇವರ್, ಅಟ್ಲಾಂಟಿಸ್ ಸ್ಪೇಸ್ ಶಟ್ಲ್ ಗಳು ಸಾರ್ವಜನಿಕರ ಆಕರ್ಷಣಾ ಕೇಂದ್ರವಾಗಲಿವೆ.
ಭೂಮಿಯ ಆಚಿನ ಲೋಕ
ಉಪಗ್ರಹಗಳು ಬೀಳುವುದಿಲ್ಲವೇಕೆ?
ಎತ್ತರಪ್ರದೇಶದಲ್ಲಿ ನಿಂತು ಕಲ್ಲೊಂದನ್ನು ವೇಗವಾಗಿ ಎಸೆದರೆ ಏನಾಗುತ್ತದೆ? ಅದು ಒಂದಿಷ್ಟು ಎತ್ತರಕ್ಕೆ ಹಾರಿ ಮರಳಿ ಕೆಳಕ್ಕೆ ಬೀಳುತ್ತದೆ ತಾನೇ? ಇನ್ನೂ, ಮತ್ತೂ, ವೇಗವನ್ನು ಏರಿಸಿದರೆ ಒಂದು ಹಂತದಲ್ಲಿ ಅದು ಭೂವಾತಾವರಣದ ಆಚೆ ಹೋಗಬಹುದಲ್ಲವೆ? ಸೆಕೆಂಡಿಗೆ 11 ಕಿಮೀ ವೇಗವಾಗಿ ಓಡುವಂತೆ ಕಲ್ಲನ್ನು ಎಸೆದರೆ ಅದು 100 ಕಿಮೀ ಆಚೆ ಹಾರುತ್ತದೆ. ಅಲ್ಲಿಯೂ ತೆಳುವಾದ ಗುರುತ್ವದಿಂದಾಗಿ ಅದು ಭೂಮಿಯತ್ತ ಬೀಳತೊಡಗುತ್ತದೆ, ಆದರೆ ಅದೇ ವೇಳೆಗೆ ಭೂಮಿಯ ಮೇಲ್ಮೈ ಕೂಡ ತಿರುಗುತ್ತಿರುವುದರಿಂದ ನಮ್ಮ ಈ ಕಲ್ಲು ಬೀಳುತ್ತಲೇ ಇರುತ್ತದೆ ಅಥವಾ ಭೂಸುತ್ತ ತಿರುಗುತ್ತಲೇ ಇರುತ್ತದೆ. ಇದೇ ಉಪಗ್ರಹ ಹಾರಾಟದ ಮೂಲ ತತ್ವ.
ರಷ್ಯಾ ದೇಶದ ಬಾನಭವಿಷ್ಯ
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ
ಪ್ರಮುಖವಾಗಿ ಅಮೆರಿಕ ಇದರ ಉಸ್ತುವಾರಿಯನ್ನು ಹೊಂದಿದೆ. ಮೊದಲು ಪುಟ್ಟ ಉಪಗ್ರಹವಾಗಿ ಹಾರಿದ ISS (international space centre) ಗೆ ಕಾಲಕಾಲಕ್ಕೆ ಸ್ಪೇಸ್ ಶಟ್ಲ್ ಮೂಲಕ ಮತ್ತಷ್ಟು ಉಪಕರಣಗಳನ್ನು ಜೋಡಿಸುತ್ತಿರುವುದರಿಂದ ಇಂದು ಭೂಮಿಯನ್ನು ಪ್ರದಕ್ಷಿಣೆ ಹಾಕುತ್ತಿರುವ ಕೃತಕ ಉಪಗ್ರಹಗಳಲ್ಲಿ ISS ಅತಿ ದೊಡ್ಡದೆನಿಸಿದೆ. ISS ನ ಪ್ರಯೋಗಾಲಯದಲ್ಲಿ ಕಿರುಗುರುತ್ವವನ್ನು ಕಲ್ಪಿಸಿ ಆ ವಾತಾವರಣದಲ್ಲಿ ತಂತ್ರಜ್ಞರು ಹಲವಾರು ವಿಷಯಗಳ ಮೇಲೆ ಸಂಶೋಧನೆ ನಡೆಸುತ್ತಿದ್ದಾರೆ. ಕಳೆದ 9 ವರ್ಷಗಳಿಂದ ISS ನಲ್ಲಿ ಸತತವಾಗಿ ತಂತ್ರಜ್ಞರು ವಾಸಿಸುತ್ತಿದ್ದಾರೆ.
ಸರೋಜಾ ಪ್ರಕಾಶ,