ಸಾಮಾನ್ಯ ಪರಿಭಾಷೆಯಲ್ಲಿ ಹೇಳುವುದಾದರೆ ‘ಉತ್ಪಾದನೆ’ ಎಂದರೆ ತಯಾರಿಕೆ ಅಥವಾ ಏನನ್ನಾದರೂ ಬೆಳೆಯುವುದು. ಆದರೆ ಅರ್ಥಶಾಸ್ತ್ರದ ಪರಿಭಾಷೆಯಲ್ಲಿ ಉತ್ಪಾದನೆ ಕೇವಲ ತಯಾರಿಕೆ ಅಷ್ಟೇ ಅಲ್ಲ ಅದು ಬಳಕೆಗೆ ಯೋಗ್ಯವಾಗಿರಬೇಕು. ವಸ್ತುವು ಉಪಯೋಗಕ್ಕೆ ಯೋಗ್ಯವಾಗಿ – ಬಳಕೆ ಹೆಚ್ಚಾದರೆ ಅಂಥ ಉತ್ಪಾದನೆ ಬೆಳೆಯುಳ್ಳದ್ದು. ಜೊತೆಗೆ ಇದು ಕೇವಲ ವಸ್ತುವಿನ ಗುಣಮಟ್ಟಕ್ಕೆ ಮಾತ್ರ ಸೀಮಿತವಾಗಿರದೆ ಸೇವೆಗೂ ಯೋಗ್ಯವಾಗಿರುವಂಥದ್ದಾಗಿರಬೇಕು. “An activity of increasing the utility of goods and services is considered as “Production”.
ಹೀಗೆ ಯಾವುದೇ ಒಂದು ವಸ್ತುವಿನ ಉತ್ಪಾದನೆಯನ್ನು ಮಾಡುವುದು ಅದು ನಮ್ಮ ಬಳಕೆಗೆ ಉಪಯೋಗಕ್ಕೆ ಅನುವಾಗಲೆಂದೇ ವಿನಃ ಕೇವಲ ಉತ್ಪಾದನೆಯ ಚಟಕ್ಕೆ ಖಂಡಿತವಾಗಿಯೂ ಅಲ್ಲ. ನಾಗರೀಕತೆ ಬೆಳೆದಂತೆ ಮನುಷ್ಯ ತನ್ನ ಅಗತ್ಯಗಳಿಗೆ ಅನುಕೂಲವಾಗುವಂತೆ – ತಕ್ಕಂತೆ ಅನೇಕಾನೇಕ ವಸ್ತುಗಳನ್ನು ಬೇರೆ ಬೇರೆ ತರಹದ ಬೆಳೆಯನ್ನು ಉತ್ಪಾದಿಸಲು ಪ್ರಾರಂಭಿಸಿದ್ದು ಇತಿಹಾಸ. ಅದರ ಮುಂದುವರಿಕೆಯ ಭಾಗವಾಗಿ ‘ಉತ್ಪಾದನೆ’ ಯ ನೈಪುಣ್ಯವನ್ನು ಕಲಿಸಿ – ಬೆಳೆಸುವ ಪದ್ಧತಿ ಪ್ರಾರಂಭವಾಯಿತು. ಅಗತ್ಯಕ್ಕೆ ಮತ್ತು ಬೇಡಿಕೆಗೆ ತಕ್ಕಂತೆ ‘ಉತ್ಪಾದನೆ’ ಜರುಗುವುದು ಅನಿವಾರ್ಯವಾಯಿತು. ಕೆಲಸದ ಒತ್ತಡ ಅಧಿಕವಾದಂತೆ ಕೆಲಸಗಾರರಿಗೆ ಬೇಡಿಕೆಯೂ ಅಧಿಕವಾಗುತ್ತದೆ. ಕೆಲಸದ ಒತ್ತಡ ಕಡಿಮೆಯಾದಂತೆ ಕೆಲಸಗಾರರಿಗೆ ಇರುವ ಬೇಡಿಕೆ ಕೂಡ ತಗ್ಗುತ್ತದೆ. ಅತಿಯಾದ ಯಂತ್ರಗಳ ಬಳಕೆಯಿಂದಾಗಿ ದುಡಿಯುವ ಕೈಗಳು ನಿಧಾನವಾಗಿ ಕೆಲಸ ಕಳೆದುಕೊಳ್ಳುವುದು ಸಹಜವೇ. ಯಂತ್ರಗಳನ್ನಷ್ಟು ಬಳಸುವ ಕೌಶಲ್ಯ ಕಲಿತ ಕೆಲವೇ ಕೆಲವು ಮಂದಿ ಬಹಳಷ್ಟು ಜನಗಳಿಗೆ ಬದಲಾಗಿ ಸಾಕಾಗುವಂತಹ ಸ್ಥಿತಿ ನಿರ್ಮಾಣವಾಗುತ್ತ ಸಾಗುತ್ತಿದ್ದುದರ ಅಪಾಯವನ್ನು ಅರಿತ ಮಹಾತ್ಮ ಗಾಂಧಿಯವರು ‘ಗೃಹ ಕೈಗಾರಿಕೆ, ಗುಡಿ ಕೈಗಾರಿಕೆ’ಗೆ ಒತ್ತುಕೊಟ್ಟಿದ್ದೇ ಈ ಕಾರಣಕ್ಕಾಗಿ. ಮನುಷ್ಯನಿಗೆ ಕೆಲಸದ ಅವಶ್ಯಕತೆಯಿದೆ. ಪ್ರತಿಯೊಂದು ಕೈಗೂ ಕೆಲಸ ದಕ್ಕದ ಹೊರತೂ ‘ಅಭಿವೃದ್ಧಿ’ ಅಸಾಧ್ಯ ಸಂಬಳದ ಆದಾಯದ ಪ್ರಶ್ನೆಗಿಂತ ಮುಖ್ಯವಾದದ್ದು ‘ಉದ್ಯೋಗ’ದಲ್ಲಿ ತೊಡಗಿರುವುದು ಹಾಗಲ್ಲದೆ ಹೋದಲ್ಲಿ ‘Idle mind is the workshop of the devil’ ಎಂಬ ಮಾತು ಕೃತಿಯಾಗುತ್ತ ಸಾಗುವ ಅಪಾಯವಂತೂ ಇದ್ದೇ ಇದೆ.
ಉತ್ಪಾದನೆಗೂ ಉಪಯೋಗಕ್ಕೂ ಆಂತರಿಕ ಸಂಬಂಧವಂತೂ ಇದ್ದೇ ಇದೆ. ಉತ್ಪಾದನೆ – ಉಪಯೋಗಕ್ಕೆ – ಉದ್ಯೋಗಕ್ಕೆ ಒದಗುವಂತಿದ್ದರೆ ಮಾತ್ರ ಅದಕ್ಕೊಂದು ‘ಅರ್ಥ’ವಿರುತ್ತದೆ. ಹಾಗಲ್ಲದೇ ಒಟ್ಟಾರೆ ಉತ್ಪಾದನೆಯಷ್ಟೇ ಹೆಚ್ಚಾದರೆ ಬಳಕೆಯಾಗದೆ ವ್ಯರ್ಥವಾಗುವ ಸಾಧ್ಯತೆಯಿದೆ. ರಾಶ್ಯುತ್ಪನ್ನಗಳಿಂದಾಗಿ ಅನೇಕಬಾರಿ ಅವುಗಳಿಗೆ ಗ್ರಾಹಕರೇ ಇರದಿದ್ದಾಗ ಉತ್ಪಾದನಾ ವೆಚ್ಚ ಕೂಡ ಹುಟ್ಟದೆ ಅದು ತನ್ನಿಂದ ತಾನೇ ಮೂಲೆ ಸೇರಬೇಕಾಗುತ್ತದೆ. ವಸ್ತುಗಳ ವಿಚಾರದಲ್ಲಿ ಹೇಗೋ ಹಾಗೆಯೇ ವ್ಯಕ್ತಿಗಳ ವಿಚಾರದಲ್ಲೂ ಮೇಲಿನ ಮಾತುಗಳು ಅನ್ವಯವಾಗುತ್ತವೆ. ಅಗತ್ಯಕ್ಕಿಂತ ಅಧಿಕವಾದ ಉತ್ಪಾದನೆಯಾದಲ್ಲಿ ಅದೆಷ್ಟೇ ಗುಣಮಟ್ಟದಿಂದ ಕೂಡಿದ್ದರೂ (1) ಅದನ್ನು ಹಾಗೇ ಶೇಖರಿಸಿಟ್ಟುಕೊಳ್ಳಬೇಕು, ಮತ್ತೆಂದಾದರೂ ಅಗತ್ಯತೆ ಎದುರಾದಾಗ ಬಳಸಿಕೊಳ್ಳಬೇಕು. (2) ಹುಟ್ಟಿದಷ್ಟಕ್ಕೆ ಯಾ ಬಿಟ್ಟಿಯಾಗಿ ಬೇರೆಯವರಿಗಿತ್ತು ಕೈ ತೊಳೆದುಕೊಳ್ಳಬೇಕು. ವಸ್ತುಗಳಿಗಾದರೆ ಇವೆಲ್ಲ ಸರಿಯೇ ಆದರೆ ತಯಾರಿಸಿದ್ದು ವಸ್ತುವಾಗದೇ ವ್ಯಕ್ತಿಯೇ ಆಗಿದ್ದ ಪಕ್ಷದಲ್ಲಿ?
ಈ ದೃಷ್ಟಿಯಿಂದಲೇ ನಾವಿಂದು ನಮ್ಮ ಶಿಕ್ಷಣ ಪದ್ಧತಿಯನ್ನು ಗಮನಿಸುವ ತುರ್ತು ಹಿಂದೆಂದಿಗಿಂತ ಇಂದು ಅಧಿಕವಾಗಿದೆ ಎನ್ನಿಸುತ್ತದೆ. ಹಿಂದೆ ಜನರಿಗೆ ಬೇರೆ ಬೇರೆ ಕಸುಬುಗಳು ಕೌಟುಂಬಿಕ ಬಳುವಳಿಯಂತೆ ಬರುತ್ತಿದ್ದವು. ಹಾಗೇ ಓದು-ಬರಹ ಕೂಡಾ. ಆದರೆ ಈ ದೇಶಕ್ಕೆ ಬ್ರಿಟಿಷರು ಕಾಲಿಟ್ಟ ಅನಂತರ ಅವರು ಈ ದೇಶದವರ ಅಗತ್ಯಕ್ಕಿಂತಲೂ ಅಧಿಕವಾಗಿ ಅವರ ಅಗತ್ಯವನ್ನರಿತು ಇಲ್ಲಿ ಶೈಕ್ಷಣಿಕ ಪದ್ಧತಿಯನ್ನು ಜಾರಿಗೆ ತಂದದ್ದು ಈಗ ಇತಿಹಾಸ. ಅವರ ಕಛೇರಿ – ಆಡಳಿತವನ್ನಷ್ಟು ಸಮರ್ಥವಾಗಿ ನಡೆಸಿಕೊಂಡು ಹೋಗಲು ಬೇಕಾದ ‘ಗುಮಾಸ್ತ’ರನ್ನು ತಯಾರಿಸಿಕೊಳ್ಳಬೇಕಾದ ಅಗತ್ಯತೆ ಅವರಿಗಿತ್ತು. ಹಾಗಾಗಿ ಒಂದಿಷ್ಟು ಓದಲು ಬರೆಯಲು ಲೆಕ್ಕ ಮಾಡಲು ಲೆಕ್ಕ ಇಡಲು ಕಲಿತುಕೊಳ್ಳುವುದಕ್ಕೆ ಒತ್ತು ನೀಡಿದ ಶಿಕ್ಷಣ ಪ್ರಾರಂಭಿಸಿದರು. ನಾವು ಅವರ ಶಿಕ್ಷಣ ಪದ್ಧತಿಯನ್ನು ‘ಗುಮಾಸ್ತರನ್ನು ಉತ್ಪಾದಿಸುವ ಕಾರ್ಖಾನೆ’ ಎಂದು ಹೀಗಳೆಯುತ್ತಲೇ, ಅದನ್ನೇ ಮುಂದುವರಿಸುವ ಜಾಣತನವನ್ನು ತೋರುತ್ತಿರುವುದು ಪರಿಸ್ಥಿತಿಯ ವಿಪರ್ಯಾಸವೇ ವಿನಃ ಅಗತ್ಯವಂತೂ ಖಂಡಿತವಲ್ಲ.
ಹಾಗಾಗಿ ಇಂದು ಪುನಃ ನಮ್ಮ ಉತ್ಪಾದನೆಯ ಕುರಿತು ತೀವ್ರವಾಗಿ ಚಿಂತಿಸಿ ಕರ್ತವ್ಯಕ್ಕೆ ಒತ್ತುಕೊಡುವುದು ಮೇಲು. ಇಂದು ನಮಗೆ ದಿನನಿತ್ಯ ಅಗತ್ಯವಾದ ಅನೇಕ ರೀತಿಯ ಕೆಲಸಗಳಿಗೆ ಕಾರ್ಮಿಕರೇ ಸಿಗುತ್ತಿಲ್ಲ ಎಂಬ ಮಾತುಗಳು ಚಾಲ್ತಿಯಲ್ಲಿವೆ. ಅಂದರೆ, ಅಗತ್ಯವಾದ ವೃತ್ತಿಗಳಿಗೆ ವ್ಯಕ್ತಿಗಳ ಕೌಶಲ್ಯ ಪಡೆದವರ ಕೊರತೆ ಒಂದೆಡೆಯಿದ್ದರೆ ಇನ್ನೊಂದೆಡೆ ಅನಗತ್ಯವಾಗಿ ‘ವೈಟ್‍ಕಾಲರ್’ ನೌಕರಿಗಾಗಷ್ಟೇ ಕಾಯುವ ಕೌಶಲ್ಯವನ್ನು ಪಡೆದುಕೊಂಡು ಅಲೆಯುತ್ತಿರುವ ಅನೇಕರು. ಅವರು ತಮಗೆ ಬೇಕಾದ ನೌಕರಿ ದೊರಕುತ್ತಿಲ್ಲ ಎಂದು ಗೊಣಗುತ್ತ ಅತೃಪ್ತ ಆತ್ಮಗಳಂತೆ ಅಲೆಯುತ್ತಿರುವ ದೃಶ್ಯ ಸಾಮಾನ್ಯ. ಅಂದರೆ ನಮ್ಮಲ್ಲಿ ‘ಕೆಲಸ’ವಿಲ್ಲ ಎಂದಲ್ಲ. ಬೇಕಾದ ಕೆಲಸವಿಲ್ಲ ಎಂಬುದಷ್ಟೆ. ಬೇಕಾದ ಕೆಲಸ ಬೇಕಾದಷ್ಟು ಲಭ್ಯವಿದ್ದಾಗ ಮಾತ್ರ ಲಭ್ಯ!. ಕೆಲಸಕ್ಕೆ ಅಗತ್ಯವಿದ್ದಷ್ಟು ಮತ್ತು ಆ ಕೆಲಸಕ್ಕೆ ಅಗತ್ಯವಾದ ಶಿಕ್ಷಣ ದೊರಕಿದರೆ ಈ ಪ್ರಶ್ನೆ ಉದ್ಭವಿಸದು. ಹಾಗಾಗಿ ನಾವು ಶಿಕ್ಷಣಕ್ಕೆ ಖರ್ಚು ಮಾಡುವ ಹಣ (ಅದು ಈ ದೇಶದ ಪ್ರಾಮಾಣಿಕ ತೆರಿಗೆದಾರರ ಹಣ)ದ ಪ್ರಯೋಜನಕ್ಕೆ ಬರುವುದು ಯಾವಾಗಲೆಂದರೆ ತಯಾರಿಸಿದ ಉತ್ಪನ್ನ ಮಾರುಕಟ್ಟೆಯಲ್ಲಿ ನ್ಯಾಯಯುತವಾಗಿ ಬಿಕರಿಯಾದಾಗ ಮಾತ್ರ. ಅಂದರೆ ಬಳಕೆಗೆ ಒದಗಿ ಬಂದಾಗ ಮಾತ್ರ. ಹಾಗಾಗಿ ಇಂದಿನ ಅಗತ್ಯ ‘ಉದ್ಯೋಗ ಸೃಷ್ಟಿ’ ಮತ್ತು ಉದ್ಯೋಗಕ್ಕನುಗುಣವಾದ ಶಿಕ್ಷಣ ನೀಡಿಕೆ. ಹಾಗಲ್ಲದೆ ಒಟ್ಟಾರೆ ರಾಶ್ಯುತ್ಪನ್ನಗಳ ತಯಾರಿಕೆ ಶಿಕ್ಷಣದ ನೀತಿಯಾದಲ್ಲಿ ಭವಿಷ್ಯದಲ್ಲಿ ಅದರ ಪರಿಣಾಮವನ್ನು ಈ ದೇಶವೇ ಎದುರಿಸಬೇಕು ಎಂಬ ಎಚ್ಚರಿಕೆ ಅಗತ್ಯ. ಕೇವಲ ಶಾಲೆ – ಕಾಲೇಜುಗಳನ್ನಷ್ಟೇ ಪ್ರಾರಂಭಿಸುತ್ತ, ಅವಕ್ಕೆ ಹಣವನ್ನು ಧಂಡಿಯಾಗಿ ಪೂರೈಸಿದರೆ ಪ್ರಯೋಜನವನ್ನು ಗಮನಿಸಬೇಕು. ಅನಿವಾರ್ಯತೆಗೆ ಖರ್ಚು ಮಾಡುವುದು ಬೇರೆ – ಖರ್ಚು ಮಾಡಲಿಕ್ಕೆ ಇದೆ ಎಂದು ಅನಿವಾರ್ಯವಾಗಿ ಖರ್ಚು ಮಾಡುವುದೇ ಬೇರೆ! ಕೆಲವು ಕಡೆಗಳಲ್ಲಿ ಹಣವಿದೆಯೆಂದು ಖರ್ಚು ತೋರಿಸುವ ಅನಿವಾರ್ಯತೆಯೆಂದು ಬೇಕಾದದ್ದು – ಬೇಡವಾದದ್ದನ್ನೆಲ್ಲ ಖರೀದಿಸಿ, ಕೂಡಿ ಹಾಕಿ, ಹಾಗೇ ಲಡ್ಡು ಹಿಡಿದು ಹೋಗುವಂತೆ ಮಾಡುವುದು ಸೂಕ್ತವಾದ ಆರ್ಥಿಕ ಬಳಕೆಯಾಗದು. ಅಷ್ಟೇ ಅಲ್ಲ ಅದು ನೀತಿಯೂ ಆಗದು. ಯಾವತ್ತೂ ಯಾವುದೇ ಬಗೆಯಾದ ಉತ್ಪಾದನೆಯಾದರೂ ಅದು ಉಪಯೋಗಕ್ಕೊದಗಬೇಕು. ಅದಕ್ಕೊಂದು ಶಕ್ತವಾದ ಮಾರುಕಟ್ಟೆ ಲಭ್ಯವಿರಬೇಕೆಂಬ ಪ್ರಾಥಮಿಕ ಜ್ಞಾನ ಸಾಮಾನ್ಯ ವಿವೇಕವೂ ಹೌದು.
ರವೀಂದ್ರ ಭಟ್ ಕುಳಿಬೀಡು.