Home Education ಕಾಲ ನಿರ್ವಾಹಣಾ ಕೌಶಲ್ಯ

ಕಾಲ ನಿರ್ವಾಹಣಾ ಕೌಶಲ್ಯ

0

ಶ್ರೀ ಬಿ.ಎ. ಸನದಿಯವರ ಒಂದು ಪ್ರಸಿದ್ಧ ಕವಿತೆ ಆದೇಶ ದಲ್ಲಿ ಹೀಗೆ ಹೇಳುತ್ತಾರೆ
‘ಆದೇಶ ಬಂದೊಡನೆ
ಆ! ಎಂದು ಆಕಳಿಸಿ ಮೆರವಣಿಗೆ
ಜೈ! ಎಂದು ಎದ್ದು ಹೊರಡುವವರು
ಯಾ ದೇಶದುದ್ದಾರ ಮಾಡುವರು ಸ್ವಾಮಿ!
ನಿಜ ಯಾವುದಾದರು ಆದೇಶ ಬಂದಾಗ ಇಲ್ಲವೇ ಒತ್ತಡ ಒತ್ತರಸಿ ಬಂದಾಗಲಷ್ಟೆ ಕಾರ್ಯಕ್ಕೆ ಮುಂದಾಗುವ ನಮ್ಮ ಬದುಕಿನ ವಿಡಂಬನೆಯಲ್ಲಡಗಿದೆ. ನಾವು ನಾವಾಗಿಯೇ ತಿಳಿದುಕೊಂಡು ಮಾಡುವುದು ಅಷ್ಟರಲ್ಲೆ ಇದೆ. ಬಹತೇಕ ಸಂದರ್ಭಗಳಲ್ಲಿ ಜನರು ಹೇಳುವ ಮಾತು ನಮಗೀಗ ಪುರುಸೊತ್ತಿಲ್ಲ, ಬಿಡುವಿಲ್ಲ ಕೆಲಸದ ಒತ್ತಡ ಇತ್ಯಾದಿ.
ಆದರೆ ಯಾರಿಗೆ ತಮ್ಮ ಕೆಲಸವನ್ನು ಸರಿಯಾದ ಸಮಯದಲ್ಲಿ ಪೂರೈಸಲು ಕಾಲದ ಹೊಂದಣಿಕೆಯನ್ನು ಸಮರ್ಪಕವಾಗಿ ಮಾಡಿಕೊಳ್ಳಬಲ್ಲರೋ ಅವರಿಗೆ ಪುರುಸೊತ್ತಿನ, ಬಿಡುವಿನ ಕೊರತೆಯಿರುವುದಿಲ್ಲ.
ಆಗಾಗ ನಾನು ಹೇಳುವ ಮಾತೆಂದರೆ ‘You can stop Your Watch but not time’ ಅಂತ ಕಾಲ ಯಾರಿಗೂ ಕಾಯುವುದಿಲ್ಲ ಅದು ಸದಾ ಚಲನಶೀಲ. ಅದಕ್ಕೆ ಸೂರ್ಯನನ್ನು ಕುರಿತು Exact day Labourer ಎಂದು ಕೊಂಡಾಡಿದ್ದು. ಇದನ್ನು ಗಮನಿಸಿಯೆ ಇಂಗ್ಲಿಷನ ಖ್ಯಾತ ಕವಿ ಎಂಡ್ರ್ಯು ಮಾರ್ವೆಲ್ ತನ್ನ ಪ್ರಸಿದ್ಧ ಕವಿತೆ‘ To His Coy Mistress’ ಎಂಬ ಕವಿತೆಯಲ್ಲಿ ‘Time is a Winged Chariot hurrying near’ಎಂದು ತನ್ನ ಪ್ರಿಯತಮೆಗೆ ಹೇಳಿದ್ದು. ಕಾಲಕ್ಕೆ ಕಾಯುವ ಗುಣವಿಲ್ಲ. ನಮಗಾದರೆ ಕಾಯುತ್ತಿರುವುದೆ ಕಾಯಕವಾಗುತ್ತಿದೆ. ಹಾಗೇ ಕಾಯುತ್ತಲೆ ಕಾಲ ಸರಿಯುತ್ತಿರುತ್ತದೆ. ಏನನ್ನು ಸಾಧಿಸದೆ ವೃದ್ಧಾಪ್ಯ ಸಮೀಪಿಸುತ್ತದೆ. ಮತ್ತೆ ಹಿಂದೆ ಕಳೆದ ಕಾಲದ ಕುರಿತು ಹಳಹಳಿಕೆ ಪ್ರಾರಂಭವಾಗುತ್ತದೆ. ಕೊನೆಗೆ ‘ಕಾಲಾಯ ತಸ್ಮಯೇ ನಮಃ’ ಎಂದು ಸುಮ್ಮನಾಗುವುದೆ ಅಧಿಕ. ಬದುಕಿನಲ್ಲಿ ಬೇಕಾದದ್ದನ್ನು ಖರೀದಿಸಬಹುದು. ಆದರೆ ಕಾಲ ಖರೀದಿಗೆ ಸಿಗುವಂಥದ್ದಲ್ಲ. ಹಾಗಾಗಿ ಅದರ ಬಳಕೆ ನಿರ್ವಹಣೆಯ ಕೌಶಲ್ಯವನ್ನು ರೂಢಿಸಿಕೊಳ್ಳುವುದು ಇಂದಿನ ಅಗತ್ಯಗಳಲ್ಲೊಂದು.
ಕಾಲಾ ನಿರ್ವಹಣಾ ಕೌಶಲ್ಯದ ಕುರಿತು ಆನೇಕಾನೇಕ ರೀತಿಯ ತರಬೇತಿಗಳಿವೆ ಆದರೆ ತರಗತಿಗಳಿಗೆ ಸೀಮಿತವಾದದ್ದೆಲ್ಲ ಬದುಕಿಗೂ ಬರುತ್ತದೆ ಎಂಬ ಕುರಿತು ಯಾವುದೇ ಗ್ಯಾರಂಟಿಯಿಲ್ಲ. ಕಾಲ ನಿರ್ವಹಣೆಯ ಕುರಿತು ಪ್ರತಿಯೊಬ್ಬರು ತಮ್ಮ ದಿನಚರಿಯನ್ನು ಮಾಡಿಟ್ಟುಕೊಂಡು ಕರಾರುವಕ್ಕಾಗಿ ಅದನ್ನು ಪಾಲಿಸಬೇಕೆಂಬ ವಾದವು ನನ್ನದಲ್ಲ. ಯಾಕೆಂದರೆ ಹಾಗೇನಾದರು ಆದರೆ ನಾವು ನಾವಾಗಿರುವ ಬದಲಿಗೆ ಯಂತ್ರಗಳಾಗಿ ಬಿಡುವ ಆಪಾಯವೇ ಹೆಚ್ಚು. ದಿನಚರಿ ಸ್ಥೂಲವಾಗಿರಬೇಕೆ ವಿನಃ ಸೂಕ್ಷ ಅನುಕರಣೆಯಲ್ಲ್ಲ.
ಸಮಯಕ್ಕೆ ಬೆಲೆ ನೀಡುವುದನ್ನು ನಾವು ಕಲಿತರೆ, ನಮಗೂ ಬೆಲೆ ಬರಲೂ ಸಾಧ್ಯ. ಯಾವುದೇ ಸಭೆ ಸಮಾರಂಭಗಳನ್ನು ಗಮನಿಸಿ ಸಕಾಲಕ್ಕೆ ಪ್ರಾರಂಭವಾಗುವುದು ಇಲ್ಲ. ಮುಗಿಯುವುದು ಇಲ್ಲ. ಅಲ್ಲಿನ ಕಾರ್ಯಕ್ರಮಗಳಿಗೂ ವೇಳೆ ನಿಗದಿಯಾಗಿರುವುದಿಲ್ಲ. ಮಾತನಾಡುವ ಮಹಾನೀಯರಿಗಂತು ಮೈಕೊಂದು ಮುಂದಿದ್ದರೆ ಅವರು ಅವರನ್ನೆ ಮರೆಯುತ್ತಾರೆ. ಕುಳಿತ ಜನ ಆಕಳಿಸುತ್ತಾರೆ, ಬಯ್ಯುತ್ತಿರುತ್ತಾರೆ. ಹಾಗೇ ಹಲವರು ಎದ್ದು ಹೋಗುತ್ತಿರುತ್ತಾರೆ. ಕಾರಣವೆಂದರೆ ಕಾಲದ ಮಿತಿಗೆ ಒಳಪಡದ ಸಭೆ ಸಮಾರಂಭಗಳ ಆಯೋಜಕರು ಅದನ್ನು ಗಮನಿಸಿ ಅದಷ್ಟು ಸಮಯಪಾಲನೆಗೆ ಮಹತ್ವ ನೀಡುವುದರಿಂದ ಅವರಿಗೂ ಸಮಯದ ಉಳಿತಾಯವಾಗುತ್ತದೆ. ಬಂದ ಜನರಿಗೂ ಅವರವರ ಸಮಯ ಉಳಿದರೆ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಳ್ಳಲು ಅನುಕೂಲವಾಗುತ್ತದೆ. ಅದಕ್ಕೆ ಬೇಕಾದರೆ ಒಂದು ಸಭಾ ಸಂಸ್ಕಾರ ಪಡೆದುಕೊಳ್ಳುವುದು ಒಳ್ಳೆಯದು. ಶಾಲೆ, ಕಾಲೇಜುಗಳ ವಾರ್ಷಿಕೋತ್ಸವಗಳಲ್ಲಿ ಕೂಡ ಇಂಥ ಪಿಡುಗುಗಳು ಕಾಣಿಸಿಕೊಳ್ಳುತ್ತಲೆ ಇರುತ್ತವೆ. ಮಕ್ಕಳ ಮನೋರಂಜನೆ ವೀಕ್ಷಿಸಲು ಬಂದ ಪಾಲಕರು ಮತ್ತಿತರರಿಗೆ, ಅತಿಥಿಗಳ ಉದ್ದುದ್ದ ಭಾಷಣಗಳೆ ಸಮಯ ತಿನ್ನುತ್ತಿದ್ದರೆ ಸಹಜವಾಗಿಯೆ ಕಿರಿಕಿರಿಯುಂಟಾಗುತ್ತದೆ. ಪ್ರದರ್ಶನ ನೀಡಲು ಸಿದ್ಧವಾಗಿ ನಿಂತ ಮಕ್ಕಳಿಗಂತೂ ಹಿಂಸೆಯೆ ಸರಿ. ಹಾಗಾಗಿ ಕಾ¯ದ ಚೌಕಟ್ಟು ಇಂಥಲ್ಲೆಲ್ಲ ಅಗತ್ಯ. ನಾವು ಬಿಡುವು ಮಾಡಿಕೊಂಡು ಬಂದದ್ದರ ಉದ್ದೇಶವೇ ವಿಫಲವಾದರೆ ಬಿಡುವು ಮಾಡಿಕೊಂಡದ್ದರ ಔಚಿತ್ಯವೇ ನಾಪತ್ತೆಯಾಗಿ ಬಿಡುತ್ತದೆ.
ದಿನನಿತ್ಯದ ಬದುಕಿನಲ್ಲೂ ಕಾಲದ ಬಳಕೆಯ ಕುರಿತು ಒಂದಿಷ್ಟು ತಿಳಿವಳಿಕೆ ಇರುವುದು ಒಳಿತು. ಹೇಳಿದ ಸಮಯಕ್ಕೆ ಹೇಳಿದಲ್ಲಿಗೆ ಹೋಗುವುದರಿಂದ ಹಿಡಿದು ಇಷ್ಟು ಹೊತ್ತಿಗೆ ಅಥವಾ ಇಂಥ ದಿನಕ್ಕೆ ಮುಗಿಸಿ ಕೊಡುತ್ತೇನೆಂದ ಕೆಲಸವನ್ನು ಅಷ್ಟು ಹೊತ್ತಿಗೆ ಮತ್ತು ಅಂಥ ದಿನಕ್ಕೆ ಮುಗಿಸಿ ಕೊಡುವ ಜವಾಬ್ದಾರಿ ಇರಬೇಕಾಗುತ್ತದೆ. ಹಾಗಲ್ಲದೇ ಸುಮ್ಮನೆ ಕಾಯಿಸುವ, ಸತಾಯಿಸುವ ಗುಣ ಬೆಳಸಿಕೊಂಡರೆ ನಾವು ಹಾಗೆ ಕಾಯುವ ಸತಾಯಿಸಿಕೊಳುವುದನ್ನು ತಾಳಿಕೊಳ್ಳಬೇಕಾಗುತ್ತದೆ. ಯಾರಾದರೂ ಬರುತ್ತೇನೆ, ಭೇಟಿಯಾಗುತ್ತೇನೆ ಎಂದು ತಿಳಿಸಿದಾಗ ಸಮಯವನ್ನು ತಿಳಿದುಕೊಳ್ಳುವುದು ಒಳ್ಳೆಯದು. ಆ ಸಮಯಕ್ಕೆ ಅವರು ಬಾರದಿದ್ದರೆ ನಾವು ನಮ್ಮ ಕೆಲಸಕ್ಕೆ ತೆರಳಿಬಿಡಬೇಕೇ ವಿನಃ ಅವರಿಗಾಗಿ ಅನವಶ್ಯಕವಾಗಿ ಕಾಯುತ್ತಾ ಕೂಡ್ರುವುದು ಯುಕ್ತವಲ್ಲ. ಅವರಿಗೇನೋ ಅವರ ಸಮಯಕ್ಕೆ ಬೆಲೆಯಿಲ್ಲದಿರಬಹುದು ಆದರೆ ನಮಗೆ ನಮ್ಮ ಸಮಯಕ್ಕೆ ಬೆಲೆಯಿದೆಯೆಂಬ ಎಂಬ ಪ್ರಜ್ಞೆ ಜಾಗೃತವಾಗಿದ್ದರೆ ಸಾಕು. ಒಮ್ಮೆ ನಮ್ಮ ಗುಣ ತಿಳಿದಾದ ಮೇಲೆ ಮತ್ತವರು ಅಂಥ ತಪ್ಪುಗಳನ್ನು ಬಹುಶಃ ಮಾಡಲು ಮುಂದಾಗುವುದಿಲ್ಲ.
ಕಾಲದ ಸದ್ಭಳಕೆಗೆ ಆದ್ಯತೆ ನೀಡಲು, ಆ ಬಳಕೆಯ ಕೌಶಲ್ಯ ಅಗತ್ಯ. ಯಾವ ಯಾವುದಕ್ಕೆ ಎಷ್ಟೆಷ್ಟು ಸಮಯವನ್ನು ಮೀಸಲಿಡಬಹುದೆಂದು ನಾವೇ ಗುರಿಯೊಂದನ್ನು ನಿಗದಿಪಡಿಸಿಕೊಳ್ಳುವುದು ಸರಿಯಾದ ಮಾರ್ಗ. ಬೇರೆಯವರು ನಿಗದಿಪಡಿಸಿಕೊಟ್ಟರೆ ಅದೆಂದೂ ನಮಗೆ ಹೊಂದಲಾರದು. ವಿದ್ಯಾರ್ಥಿಗಳಿಗಾದರೆ ಪ್ರತಿನಿತ್ಯ ಓದುವ ಅವಧಿ, ಆಟವಾಡುವ ಅವಧಿ ಹೀಗೆ ಒಂದು ನಿಗದಿ ಇರುವುದು ಒಳ್ಳೆಯದು. ಹಾಗಲ್ಲದೇ ಕೇವಲ ಪರೀಕ್ಷಾ ಸಮಯದಲ್ಲಿ ಸಂಪೂರ್ಣವಾಗಿ ಓದುವುದಕ್ಕೆ ಮಾತ್ರ ಸಮಯ ನಿಗದಿಯಾದರೆ ಆಟೋಟಗಳೇ ಆಗ ಇಲ್ಲದಂತಾದರೆ, ಒಂದು ರೀತಿಯ ಏಕತಾನತೆಯಿಂದ ಮಾನಸಿಕ ಒತ್ತಡಗಳಿಗೆ ತುತ್ತಾಗುವ ಸಂಭವವಿರುತ್ತದೆ. ಹಾಗಾಗಿ ಒತ್ತಡ ಮುಕ್ತವಾಗಿರಲು ವರ್ಷ ಪೂರ್ಣ ಒಂದು ನಿರ್ಧಿಷ್ಟ ಕಾಲ ಚೌಕಟ್ಟನ್ನು ಹಾಕಿ ಕೊಂಡಲ್ಲಿ ಸಾಧ್ಯ. ಶಿಕ್ಷಕರಿಗೂ ಇದನ್ನೆ ಅನ್ವಯಿಸುವುದಾದಲ್ಲಿ ಇಂತಿಷ್ಟು ಇಂತಿಷ್ಟು ತರಗತಿಗಳಲ್ಲಿ ಇಷ್ಟಿಷ್ಟು ಪಠ್ಯ ಮುಗಿಯಬೇಕೆಂಬ ನಿಯೋಜಕವಿದ್ದಲ್ಲಿ, ಕೊನೆಯಲ್ಲಿ ಒಟ್ಟಾರೆ ಮುಗಿಯಿತೆಂದು ಮುಗಿಸುವ ಅವಸರದ ಅಧ್ವಾನ ತಪ್ಪುತ್ತದೆ. ವಿದ್ಯಾóರ್ಥಿಗಳಿಗೂ ಒತ್ತಡ ತಪ್ಪುತ್ತದೆ. ಕೊನೆ ಘಳಿಗೆಯಲ್ಲಿ ಅವಸರ ಅವಸರವಾಗಿ ತುರುಕಿದ್ದು ಜೀರ್ಣವಾಗುವ ಸಂಭವವೇ ಕಡಿಮೆ.
ಕಾಲವನ್ನು ಗ್ರಹಿಸಿಯೇ ಊಟ, ತಿಂಡಿ, ನಿದ್ದೆ ಸಾಮಾನ್ಯ ಆದರೆ ಅನಿವಾರ್ಯವಾದ ಸಂಗತಿಗಳು ಜರುಗುವುದು ಆರೋಗ್ಯದ ದೃಷ್ಟಿಯಿಂದಲೂ ಉಪಯುಕ್ತವಾಗಬಲ್ಲದು. ‘ಊಟ ಬಲ್ಲವನಿಗೆ ರೋಗವಿಲ್ಲ. ಎಂಬ ನಾಣ್ನುಡಿಯನ್ನು ಸ್ವಲ್ಪ ಮಾರ್ಪಡಿಸಿ ಹೇಳುವುದಾದರೆ ಊಟದ ವೇಳೆ ಬಲ್ಲವನಿಗೆ ಗ್ಯಾಸ್ಟ್ರಿಕ್ ರೋಗವಲ್ಲ. ಯಾವುದು ಯಾವ ಯಾವ ಕಾಲದಲ್ಲಿ ಜರುಗಬೇಕೋ ಅದು ಅದೇ ಕಾಲದಲ್ಲಿ ಜರುಗುವಂತೆ ನೋಡಿಕೊಳ್ಳಬೇಕಾದದ್ದು ಜವಾಬ್ದಾರಿಯಾಗಬೇಕು. ಕಲಿಕೆಯ ಕಾಲದಲ್ಲಿ ಕಲಿಕೆ ಕೆಲಸದ ಕಾಲದಲ್ಲಿ ಕೆಲಸ, ವಿಶ್ರಾಂತಿಯ ಅವಧಿಯಲ್ಲಿ ವಿಶ್ರಾಂತಿ ಸಮಯವನ್ನು ಹೊಂದಿಸಿಕೊಳ್ಳಬೇಕಾದದ್ದು ನಾವೇ ವಿನಃ ಸಮಯವಲ್ಲ. ಒತ್ತಡ ಮುಕ್ತ ಬದುಕಿಗೆ ಇದು ಸೂಕ್ತ. ಇಂದಿನ ಯಾಂತ್ರೀಕೃತ ಬದುಕಲ್ಲಿ ಪ್ರತಿಯೊಂದಕ್ಕೂ ಧಾವಂತವಿರುವಾಗ, ಸುಧಾರಿಸಿಕೊಳ್ಳುವುದು ಕೂಡ ಸೂಕ್ತವಾದ ಸಂಗತಿ. ನಿರ್ಲಕ್ಷ್ಯ ತೋರಿದರೆ ಭವಿಷ್ಯದಲ್ಲಿ ಅದರ ಅಡ್ಡಪರಿಣಾಮಗಳನ್ನು ಎದುರಿಸಬೇಕಾದವರು ನಾವೇ ವಿನಃ ಬೇರೆಯವರಲ್ಲ, ಅದರ ನಿರ್ವಹಣೆಯ ಕೌಶಲ್ಯ ಕೂಡ ಕಲಿಯಬೇಕಾದ ಸಂಗತಿ.
ಎಲ್ಲಾ ವ್ಯಕ್ತಿಗಳೆದುರು ಇರುವ ಕಾಲ ಒಂದೇ, ಆದರೆ ಅದನ್ನು ಬಳಸುವ ಕ್ರಮದಲ್ಲಿನ ವ್ಯತ್ಯಾಸದಿಂದಾಗಿ ಅವರವರ ನಡುವೆ ಏರಳಿತಗಳು ಉಂಟಾಗುತ್ತವೆ ಎನ್ನಬಹುದು. ಸೋಮಾರಿತನವೆನ್ನುವುದು ಜಾಡ್ಯ. ಈ ಜಾಡ್ಯಕ್ಕೆ ಬಲಿಯಾದವರು ಸದಾ ಗೊಣಗುತ್ತಿರುವುದು ಸಾಮಾನ್ಯ. ಯಾವುದಕ್ಕು ಸಮಯವೇ ಅವರಿಗೆ ಹೊಂದಣಿಕೆಯಾಗುವುದಿಲ್ಲ. ಕಿಂಚಿತ್ತೂ ಪರಿಶ್ರಮ ಪಡದೆ ಕಾಲದ ಕೌಶಲ್ಯ ಕರಗತವಾಗುವುದಿಲ್ಲ. ಪ್ರತಿಯೊಂದುರಲ್ಲೂ ವಿಳಂಬ. ವಿಳಂಬ ನೀತಿಗೆ ಒಳಪಟ್ಟ ವ್ಯಕ್ತಿಯಾಗಲಿ ಸಂಸ್ಥೆಯಾಗಲಿ, ಸಮಾಜವಾಗಲಿ ಉದ್ಧಾರವಾಗುವುದಿಲ್ಲ. ಆದಕ್ಕೆ ಒಂದು ಮಾತಿದೆ ‘Justice Delayed is justice denied’ ಅಂತ ನಮ್ಮ ನಡುವಿನ ಕಾನೂನು ವ್ಯವಸ್ಥೆಯಲ್ಲಿನ ವಿಳಂಬ ನೀತಿಯನ್ನು ನೋಡಿಯೆ ಈ ಮಾತು ಹುಟ್ಟಿದೆನಿಸುತ್ತದೆ. ಕಾಲಾದ ಬಳಕೆಯಲ್ಲಿ ಕೌಶಲ್ಯ ಹೊಂದಿದ್ದಲ್ಲಿ ಕೇಸುಗಳ ಇತ್ಯರ್ಥ ತ್ವರಿತವಾಗಲು ಸಾಧ್ಯ. ಹಾಗಾಲ್ಲದೆ ನ್ಯಾಯಕ್ಕಾಗಿ ಅಲೆದಾಡುವುದರಿಂದ ಕಕ್ಷಿದಾರರ ಕಾಲ, ಶ್ರಮ, ಹಣ ಎಲ್ಲವೂ ವ್ಯರ್ಥವಾಗುತ್ತದೆ. ಅದೇ ಕಾಲ, ಶ್ರಮ, ಹಣದ, ಉಳಿಕೆಯಾದಷ್ಟು ಅದನ್ನು ಬೇರೆಡೆಗೆ ಬಳಕೆ ಮಾಡಿ ಕಳುಹಿಸಬಹುದಾಗಿದೆ. ಕೆಲವೂಮ್ಮೆ ಕೇಸನ್ನು ಗೆದ್ದು ಪಡೆಯುವ ಪರಿಹಾರಕ್ಕಿಂತ ಕೇಸನ್ನೆ ಹಾಕದೇ ಉಳಿಸಿಕೊಳ್ಳುವ ಕಾಲ, ಶ್ರಮ, ಹಣವನ್ನು ಬೇರೆಯದರಲ್ಲಿ ತೊಡಗಿಸಿದ್ದರೆ ಹೆಚ್ಚಿನದನ್ನು ಪಡೆಯಬಹುದಾದ ಸಾಧ್ಯತೆಯನ್ನು ಕೂಡ ತಳ್ಳಿಹಾಕಲಾಗದು.
ನಾವು ಹಣವನ್ನು ಯಾವುದಕ್ಕಾದರು ಬಳಸುವಾಗ ಬಹಳ ಲೆಕ್ಕಾಚಾರ ಹಾಕುತ್ತವೆ. ಹಾಗಾದಾಗ ತಿರುಗಿ ಬಾರದ ಕಾಲದ ಬಳಕೆಯ ಕುರಿತು ದಿವ್ಯ ನಿರ್ಲಕ್ಷ ತಾಳುವುದು ಎಷ್ಟರ ಮಟ್ಟಿಗೆ ಸರಿ?
ಮತ್ತೆ ಈ ಕುರಿತು ಬರಿದೇ ಚಿಂತಿಸುತ್ತಿದ್ದರೆ ಕಳೆಯುತ್ತಿರುವ ಅಷ್ಟಷ್ಟೂ ಕಾಲ, ಕಾಲವಶರಾಗುವುದಕ್ಕೆ ಹತ್ತಿರ ಸರಿಯುತ್ತಿದ್ದಂತೆ. ‘ತೆಪ್ಪಾರ ಗೌಡ್ರು ಮುಂಡಾಸು ಸುತ್ತ ತನಕ ಮಂಜುಗುಣಿ ತೇರು ನೆಲೆನಿಂತಿತ್ತು’ ಎಂದು ನಮ್ಮ ಕಡೆ ಚಾಲ್ತಿಯಲ್ಲಿರುವ ಮಾತು. ಕಾಲದ ನಿರ್ವಹಣಾ ಕೌಶಲ್ಯದ ಕೊರತೆಯನ್ನು ಸಮರ್ಥವಾಗಿ ಹೇಳುವಂತದ್ದು ಇಂತಹ ಕೊರತೆಯ ನಿವಾರಣೆ ಸಾಧ್ಯವಾದರೆ ತೇರು ನೆಲೆ ನಿಲ್ಲುವುದರೊಳಗೆ ಹಗ್ಗಕ್ಕೆ ಕೈ ಹಚ್ಚಲು ಸಾದ್ಯವಾಗಬಹುದು!
ರವೀಂದ್ರ ಭಟ್ ಕುಳಿಬೀಡು