Home Education ಬೇಸಿಗೆ ಶಿಬಿರಗಳೆಂಬ ಭ್ರಮಾ ಲೋಕ

ಬೇಸಿಗೆ ಶಿಬಿರಗಳೆಂಬ ಭ್ರಮಾ ಲೋಕ

0

ಒಂದು ಹಂತದ ಪ್ರಾಥಮಿಕ ಮಾಧ್ಯಮಿಕ ಪರೀಕ್ಷೆಗಳೆಲ್ಲಾ ಮುಗಿದು ವಿದ್ಯಾರ್ಥಿಗಳೆಲ್ಲಾ ವರ್ಷದ ಓದಿನ ಚಿಂತೆ ಬಿಟ್ಟು ಹೋಂವರ್ಕ್ ಚಿಂತೆ ಬಿಟ್ಟು ಯೂನಿಫಾರಂ ಚಿಂತೆ ಬಿಟ್ಟು ಖುಷಿಯಿಂದ ಮನೆ ತುಂಬಾ ಹಿತ್ತಲು ತುಂಬಾ ಅಥವಾ ಹಳ್ಳಿಗಳಲ್ಲಿ ಯಾ ಪಟ್ಟಣಗಳಲ್ಲಿರುವ ಅಜ್ಜ-ಅಜ್ಜಿ ಅಥವಾ ಹತ್ತಿರದ ಸಂಬಂಧಿಕರ ಮನೆಗಳಿಗೆ ಓಡಾಡಿ ಬರುವ ಕಾಲವಿದು ಎಂದು ಯಾರಾದರೂ ಭಾವಿಸಿದರೆ ತಪ್ಪಾಗುತ್ತದೆ. ಎಲ್.ಕೆ.ಜಿ. ಯಿಂದ ಹಿಡಿದು ಪಿಯೂಸಿ ವರೆಗಿನ ಮಕ್ಕಳಿಗೆ ಪರೀಕ್ಷೆಗಳು ಮುಗಿದರೂ ಪಾಠದ ಕಾಟ ತಪ್ಪುವುದಿಲ್ಲ. ಆಟೋಟಕ್ಕೆ ಅವಕಾಶಗಳೇ ಇಲ್ಲದಾಗಿದೆ.
ಪ್ರತಿಯೊಬ್ಬ ಪಾಲಕರಿಗೂ ಅವರದ್ದೇ ಆದ ಚಿಂತೆ-ಕಾರಣಗಳು. ನೌಕರಿಗೆ ಹೋಗುವ ದಂಪತಿಗಳಿಗೆ ಹಗಲು ಹೊತ್ತಿನಲ್ಲಿ ತಮ್ಮ ಮಕ್ಕಳನ್ನು ಎಲ್ಲಿ ಬಿಡಬೇಕೆಂಬ ಚಿಂತೆ. ಕೆಲವರಿಗೆ ತಮ್ಮ ಮಕ್ಕಳು ಮುಂದಿನ ತರಗತಿಗಳಿಗೆ ಈಗಲೇ ಸಿದ್ಧರಾಗಿರಬೇಕೆಂಬ ಚಿಂತೆ. ಇನ್ನು ಕೆಲವರಿಗೆ ತಮ್ಮ ಮಕ್ಕಳು ಒಂದಿಷ್ಟು ಕಲೆ, ಸಾಹಿತ್ಯ, ಆಟೋಟಗಳನ್ನು ಪಡೆಯಲಿ ಎಂಬ ಕಳಕಳಿ. ಹೀಗೆ ಹಲವರ ಹಲವು ಬಗೆಯಾದ ತುರ್ತುಗಳನ್ನು ನಗದೀಕರಸಿಕೊಳ್ಳಲು ಇಂದು ಎಲ್ಲೆಂದರಲ್ಲಿ ಬಗೆ ಬಗೆಯ ಬೇಸಿಗೆ ಶಿಬಿರಗಳು ಹುಟ್ಟಿಕೊಳ್ಳುತ್ತಿದೆ.
ಚಿಕ್ಕ ಚಿಕ್ಕ ಮಕ್ಕಳಿಗೆ ಹಾಡು ನೃತ್ಯ ಕಲಿಸುತ್ತೇವೆ, ಚಿತ್ರಕಲೆ ಕಲಿಸುತ್ತೇವೆ, ಬೇರೆ ಬೇರೆ ವಿಷಯ ತಜ್ಞರಿಂದ ಅವರಿಗೆ ತಿಳುವಳಿಕೆ ಮಾರ್ಗದರ್ಶನ ನೀಡುತ್ತೇವೆ, ಇಂತಿಷ್ಟು ದಿನಗಳ ಶಿಬಿರ. ಇಂತಿಷ್ಟು ಹಣ. ಇತ್ಯಾದಿ ಆಕರ್ಷಕ ಜಾಹೀರಾತುಗಳು, ಕರಪತ್ರಗಳು, ಜನರನ್ನು ಆಕರ್ಷಿಸುತ್ತಿವೆ. ಜನಗಳಿಗೋ ಏನಾದರೂ ಕಲಿಯಲಿ ಹಾದಿ ಬೀದಿ ಸುತ್ತದಿರಲಿ ಮೂರೂ ಹೊತ್ತು ಟಿ.ವಿ. ಮುಂದೆ ಕೂತಿರುವುದು ತಪ್ಪಲಿ. ಅದಕ್ಕಿಂತ ಹೆಚ್ಚಾಗಿ ಬೆಳಿಗ್ಗೆಯಿಂದ ಸಂಜೆ ತನಕ ಮಕ್ಕಳು ಸುರಕ್ಷಿತರಾಗಿ ಒಂದೆಡೆ ಇರುವುದು ಮುಖ್ಯವಾಗಿದೆ.
ಬದಲಾಗುತ್ತಿರುವ ವರ್ತಮಾನದ ಅಗತ್ಯ ಇದಾಗಿರಬಹುದು. ಇಂಥ ಶಿಬಿರಗಳಿಂದ ಮಕ್ಕಳು ಜ್ಞಾನ ಸಂಪಾದನೆ ಕೌಶಲ್ಯ ಸಂಪಾದನೆ ಮಾಡಿಕೊಳ್ಳಬಹುದು. ಆದರೆ ಇಂಥ ಸಂಪಾದನೆಗಳ ಕಾರಣದಿಂದಾಗಿ ಕಳೆದುಕೊಳ್ಳುತ್ತಿರುವುದರ ಕುರಿತು ಕಲ್ಪನೆ ಏನಾದರೂ ನಮಗಿದೆಯೇ?.
ಚಿಕ್ಕ ಮಕ್ಕಳು ಬೇಸಿಗೆ ರಜೆಯೆಂದಾಕ್ಷಣ ಖುಷಿಯಿಂದ ಅಜ್ಜ ಅಜ್ಜಿಯ ಅಥವಾ ನೆಂಟರಿಷ್ಟರ ಮನೆಗಳಿಗೆ ತೆರಳುವುದು ಹಳ್ಳಿಗಳಿಗೆ ತೆರಳಿದ ಮಕ್ಕಳು ಅಲ್ಲಿನ ತೋಟ ಗದ್ದೆ ಬೆಟ್ಟ, ಕಾಡು ಮೇಡುಗಳನ್ನು ಸುತ್ತುವುದು ಹೊಳೆ ಹಳ್ಳಗಳಲ್ಲಿ ಸಂಭ್ರಮಿಸುವುದು. ಹಾಗಲ್ಲದೇ ನೆಂಟರಿಷ್ಟರ ಮನೆಗಳಲ್ಲಿ ಜರುಗುವ ಮದುವೆ ಮುಂಜಿ ಇತ್ಯಾದಿ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು. ಹಿಂದೆ ಸಾಮಾನ್ಯ ಸಂಗತಿಯಾಗಿತ್ತು. ಆದರೆ ಇಂದಿನ ಮಕ್ಕಳಿಗೆ ಇವುಗಳಿಗೆಲ್ಲಾ ಬಿಡುವಿಲ್ಲ. ಬೇಸಿಗೆ ಶಿಬಿರಗಳಲ್ಲಿ ಪಾಲ್ಗೊಳ್ಳುವುದೇ ದೊಡ್ಡ ಸಾಧನೆಯಾಗುತ್ತಿದೆ. ಖುದ್ದಾಗಿ ಅನುಭವಿಸುವುದಕ್ಕಿಂತ ಹೆಚ್ಚಾಗಿ ಚಿತ್ರಗಳಲ್ಲಿ ತೋರಿಸಿದ್ದನ್ನೇ ಅನುಭವ ಎಂದುಕೊಳ್ಳುವ ಹುಂಬತನವನ್ನು ಬೆಳೆಸುತ್ತಿರುವಂತೆ ಭಾಸವಾಗುತ್ತದೆ. ಸಹಜವಾಗಿ ಅರಳುವುದಕ್ಕೇ ಬದಲಾಗಿ ನಿರ್ದಿಷ್ಟ ಚಪ್ಪರಹಾಕಿ ಬೆಳೆಸುವ ಬಳ್ಳಿಯಂತೆ ಮಕ್ಕಳಾಗುತ್ತಿದ್ದಾರೆ. ನಮ್ಮ ಬೌದ್ಧಿಕ ಜಗತ್ತಿಗೆ ಒತ್ತು ನೀಡುತ್ತಿರುವ ಸಂದರ್ಭದಲ್ಲಿ ನಾವು ನಮ್ಮ ಭಾವ ಪ್ರಪಂಚವನ್ನೇ ಮರೆಯುತ್ತಿದ್ದೇವೆ. ಹೀಗಾದಾಗ ಮಕ್ಕಳು ಮನುಷ್ಯರಾಗಿ ಬೆಳೆಯುವುದು ಕಷ್ಟ. ಒಂದು ಬಗೆಯಾದ ಯಂತ್ರಗಳಾಗುತ್ತ ಪರಸ್ಪರರ ಸಂಬಂಧಗಳ ಕೊಂಡಿಯೇ ದಿನಕಳೆದಂತೆ ಕಳಚಿ ಹೋಗುತ್ತಿದೆ. ಹಾಗೇ ರಜಾ ಅವಧಿ ಕೂಡಾ ಕಳೆದು ಮತ್ತೆ ಮೊದಲಿನ ಅದೇ ಶಾಲಾ ಕಾಲೇಜುಗಳ ಪಾಠ ಪ್ರವಚನಕ್ಕೆ ತಿರುಗಿ ಹೋಗುವಂತಾಗುತ್ತದೆ. ಹಾಗಾದರೆ ನೀಡುವ ರಜೆ ಮಕ್ಕಳನ್ನು ಶಿಬಿರಗಳಿಗೆ ಕಳಿಸಲು ಮಾಡಿಕೊಟ್ಟ ಬಿಡುವೇ ಅನುಮಾನ ಹುಟ್ಟುತ್ತದೆ.
ಅಜ್ಜ ಅಜ್ಜಿ ಹೇಳುತ್ತಿದ್ದ ಕಥೆಗಳು ಹಾಡುಗಳೆಲ್ಲಾ ಇಂದು ಕ್ಯಾಸೆಟ್ ಮುಖಾಂತರ ಮಕ್ಕಳನ್ನು ತಲುಪುವಂತಾಗಿದೆ. ಮಣ್ಣನ್ನು ಮಕ್ಕಳು ಕೈಯಿಂದ ಅಥವಾ ಬರಿಗಾಲಿನಿಂದಲೂ ಮುಟ್ಟುವುದಿಲ್ಲ. ಎಲ್ಲಾ ಬಗೆಯ ನಾಜೂಕನ್ನು, ಶಿಸ್ತು-ಸಂಸ್ಕøತಿಯ ಹೆಸರಿನಲ್ಲಿ ಕಲಿಸುತ್ತಾ ಅವರಲ್ಲಿನ ನೈಜತೆಯನ್ನು, ಅಪ್ಪಟ ದೇಸೀ ಗುಣಗಳನ್ನು ನಾಶಪಡಿಸುತ್ತಾ, ಬಂದು ಮುಂದೆ ದೇಶದ ತುಂಬಾ ಇರುವ ಮಕ್ಕಳೆಲ್ಲಾ ಒಂದೇ ಅಚ್ಚಿನಲ್ಲಿ ಎರಕ ಹೊಯ್ದು ಬಂದಂತೆ ಕಾಣ ಹತ್ತಿದರೂ ಆಶ್ಚರ್ಯವೇನಿಲ್ಲ.
ಬೇಸಿಗೆ ಶಿಬಿರಗಳನ್ನು ಏರ್ಪಡಿಸುವ ವ್ಯಕ್ತಿ ಅಥವಾ ಸಂಸ್ಥೆಗಳು ಎಲ್ಲವೂ ಮಕ್ಕಳಿಗೆ ಅನುಕೂಲವಾಗಲೆಂಬ ಉದಾತ್ತ ಉದ್ದೇಶವನ್ನಷ್ಟೇ ಹೊಂದಿರುತ್ತವೆಂದು ಭಾವಿಸುವುದು ತಪ್ಪು. ಬಹಳಷ್ಟು ಸಂದರ್ಭಗಳಲ್ಲಿ ಇಂಥ ಶಿಬಿರಗಳನ್ನು ಏರ್ಪಡಿಸುವ ಹಿಂದೆ ಹಣಗಳಿಸುವ ಉದ್ದೇಶ ಕೂಡಾ ಇರುವುದನ್ನು ಅಲ್ಲಗೆಳೆಯಲಾಗುಯವುದಿಲ್ಲ. ದೇವರು ಬಾಳಲಿ ಎಂದು ಪುಷ್ಟಾರ್ಚನೆ ಮಾಡುವುದಕ್ಕೆ ಬದಲಾಗಿ ನಾವು ಬಾಳಲಿ ಎಂದು ಪುಷ್ಪಾರ್ಜನೆ ಮಾಡುತ್ತೇವೆ ಎಂಬುದೇ ಹೆಚ್ಚು ಸರಿ. ಹೇಳಿಕೇಳಿ ಬೇಸಿಗೆಯಲ್ಲಿ ಒಳ್ಳೆಯ ನೀರಿಗೂ ತತ್ವಾರ. ನೆರಳಿಗೂ ತತ್ವಾರ. ಇಂಥ ಹೊತ್ತಲ್ಲಿ ಏರ್ಪಡಿಸುವ ಶಿಬಿರಗಳಲ್ಲಿ ಶುದ್ಧ ನೀರು ಸ್ವಚ್ಛ ಪರಿಸರ ಶುಚಿಯಾದ ರುಚಿಯಾದ ಆಹಾರ ಮಗುವಿನ ಬೆಳವಣಿಗೆಗೆ ಅಗತ್ಯ. ಆದರೆ ಇಂಥ ಅಗತ್ಯಗಳ ಪೂರೈಕೆ ಶಿಬಿರಗಳಲ್ಲಾಗುತ್ತಿದೆಯೇ ಎಂದು ಪಾಲಕರಾದವರು ಪರಿಶೀಲಿಸುವುದು ಕೂಡಾ ಅಗತ್ಯ. ಹಣ ಕೊಡುವುದು ಎಷ್ಟು ಮುಖ್ಯವೋ, ಕೊಟ್ಟ ಹಣಕ್ಕೆ ತಕ್ಕ ಪ್ರತಿಫಲದ ಅಪೇಕ್ಷೆ ಕೂಡಾ ಅಷ್ಟೇ ಮುಖ್ಯ. ಅಂಥ ಪ್ರತಿಫಲ ಸಿಗುವುದರ ಕುರಿತು ಖಾತ್ರಿ ಪಡಿಸಿಕೊಳ್ಳಬೇಕಾದ್ದೂ ನಮ್ಮ ಜವಾಬ್ದಾರಿ. ಹಾಗಲ್ಲದೇ ಹೋದಲ್ಲಿ ಬೇಸಿಗೆ ಶಿಬಿರಗಳು ಬೇಕಾಬಿಟ್ಟಿ ಶೋಷಣೆಯ ಕೇಂದ್ರಗಳಾಗಬಹುದು. ನಡೆಸುವ ವ್ಯಕ್ತಿ ಮತ್ತು ಸಂಸ್ಥೆಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ, ಅವುಗಳಿಗೆ ಮಕ್ಕಳು ತೆರಳಿದಾಗ ಅಪಾಯಗಳಾಗುವುದು ವಿರಳ.
ಪಾಲಕರಿಗೆ ಒತ್ತಡಗಳಿರುವುದು ಸಹಜ. ಹಾಗಂತ ತಮ್ಮ ಒತ್ತಡಗಳಿಗೆ ಉತ್ತರವಾಗಿ ಬೇಸಿಗೆ ಶಿಬಿರಗಳನ್ನು ಬಳಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂಬ ಆತ್ಮಾವಲೋಕನ ಮಾಡಿಕೊಳ್ಳಬೇಕಾದದ್ದೂ ಅಗತ್ಯ. ಪಾಲಕರ ಒತ್ತಡ ಮಕ್ಕಳಿಗೆ ಹೊರೆಯಾಗುವುದು ಸಾಧುವಾದ ಮಾರ್ಗವಲ್ಲ. ಚಿಕ್ಕ ಚಿಕ್ಕ ಮಕ್ಕಳ ಉತ್ಸಾಹ ನಗುವನ್ನು ಬತ್ತಿಸುವುದು ಸಲ್ಲದು. ಅದೇ ರಜಾ ಸಂಭ್ರಮವನ್ನು ಅನುಭವಿಸುವ ಅನುಕೂಲತೆಯಿರುವ ವ್ಯವಸ್ಥೆ ದೊರಕಿದರೆ ಸಂತೋಷ.
ಚಿಕ್ಕ ಮಕ್ಕಳಾದಾಗಿನಿಂದ ಇಂಥ ಶಿಬಿರಗಳಿಗೆ ತೆರಳಿ ತೆರಳಿ ಅಭ್ಯಾಸವಾದ ಮಕ್ಕಳು ಪ್ರತೀ ವರ್ಷ ಅದನ್ನು ಒಂದು ವೃತ್ತದಂತೆ ಆಚರಿಸಲು ತೊಡಗುವ ಪರಿ ಬೆರಗನ್ನಷ್ಟೇ ಅಲ್ಲ ಗಾಬರಿಯನ್ನು ಹುಟ್ಟಿಸುವಂತಹದ್ದು. ಇವರು ಬೆಳೆದಂತೆ ಎಸ್.ಎಸ್.ಎಲ್.ಸಿ. ಮತ್ತು ಪಿಯೂಸಿ ಹಂತಕ್ಕೆ ಬಂದಾಗ ಬೇಸಿಗೆಯ ಶಿಬಿರಗಳ ಬದಲಾಗಿ ಬೇರೆ ಬೇರೆ ರೀತಿಯ ತರಬೇತಿ ಕೇಂದ್ರಗಳಿಗೆ ತೆರಳಲು ತೊಡಗುತ್ತಿದ್ದಾರೆ. ಬಗೆ ಬಗೆಯ ಕೋರ್ಸ್ ಸೆಂಟರ್‍ಗಳು ಇದರ ಲಾಭ ಪಡೆಯುತ್ತಿವೆ. ಹೊಸ ಹೊಸ ಬಗೆಯ ಬಣ್ಣ ಬಣ್ಣದ ಜಾಹೀರಾತುಗಳು ಭಿತ್ತಿ ಪತ್ರಗಳು ಪತ್ರಿಕೆಗಳೊಳಗೆ ಕರ ಪತ್ರಗಳು ದಿನ ನಿತ್ಯ ಎಲ್ಲೆಂದರಲ್ಲಿ ರಾರಾಜಿಸುತ್ತಿವೆ. ಇದಕ್ಕೆಲ್ಲಾ ವೆಚ್ಚ ಮಾಡುವ ಹಣ ಮರಳಿ ಬರಬೇಕೆಂದೇ ವಿನ: ಕಳೆದುಕೊಳ್ಳಲೆಂದಲ್ಲ. ಎಂಬ ಸತ್ಯ ಅರ್ಥವಾದರೆ ಸಾಕು.
ನಮ್ಮ ಮಕ್ಕಳು ಬುಧ್ಧಿವಂತರಾಗಬೇಕು. ವಿವಿಧ ರೀತಿಯ ಕಲಾ ಪ್ರಕಾರಗಳಲ್ಲಿ ಪ್ರಾಥಮಿಕ ಪ್ರಜ್ಞೆಯನ್ನಾದರೂ ಹೊಂದಿರಬೇಕು ಎಂದು ಬಯಸುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಅಂಥ ಪ್ರಯತ್ನಗಳನ್ನು ಒತ್ತಾಯದಿಂದಾಗಲೀ ಒತ್ತಡದಿಂದಾಗಲೀ ಮಾಡುವುದು ಸರಿಯಾಗಲಿಕ್ಕಿಲ್ಲ. ಮಕ್ಕಳು ಕೂಡಾ ಜೀವಂತ ವ್ಯಕ್ತಿಗಳು. ಅವುಗಳಿಗೆ ಕೂಡಾ ಅವುಗಳದ್ದೇ ಆದ ಭಾವ ಪ್ರಪಂಚವೊಂದಿದೆ. ಅದನ್ನು ರಕ್ಷಿಸುವುದು ಕೂಡಾ ನಮ್ಮ ಜವಾಬ್ದಾರಿ. ಅನಿವಾರ್ಯವಾದಲ್ಲಿ ಮಾತ್ರ ಶಿಬಿರಗಳಿರಲಿ ಇಲ್ಲವಾದಲ್ಲಿ ಮಕ್ಕಳು ಅವರಷ್ಟಕ್ಕೇ ಅವರು ಅರಳಲಿ. ಅವರವರ ಅಜ್ಜ-ಅಜ್ಜಿ ನೆಂಟರಿಷ್ಟರ ಮನೆಗೆ ತೆರಳಲಿ. ಅವರ ಮುಖದಲ್ಲೂ ಒಂದಿಷ್ಟು ಮಂದಹಾಸ ಮೂಡಲಿ.
ರವೀಂದ್ರ ಭಟ್ ಕುಳಿಬೀಡು.