ಭೂಮಿಯ ಪುತ್ರ ಮಂಗಳ ಉಗ್ರಸ್ವಭಾವದ ಕ್ರೂರ ಗ್ರಹ, ತಮೋ ಪಿತ್ತಕಾರಕ… ಎಂಬಿತ್ಯಾದಿ ಮಾನವಗುಣಗಳುಳ್ಳ ಬಿಂಬವೆಂದು ಭಾರತೀಯ ಜ್ಯೋತಿಷ್ಯಶಾಸ್ತ್ರದ ನಂಬಿಕೆ. ಆದರೆ ಆಧುನಿಕ ವಿಜ್ಞಾನಕ್ಷೇತ್ರ ಮಂಗಳನಂಗಳದ ಆಳ ಅಗಲಗಳನ್ನು ಅಳೆದು ಅಲ್ಲಿಗೆ ಮಾನವನನ್ನು ಕಳಿಸಲು ಸಜ್ಜಾಗುತ್ತಿದೆ.
ಚಿತ್ರ ನೋಡಿ, ಫಕ್ಕನೆ ಏನನಿಸುತ್ತದೆ? ನಿಮ್ಮೂರಿನ ಶಾಲಾಮೈದಾನವೇ? ಕಬ್ಬಿಣದ ಗಣಿಯೊಂದರ ವಿಸ್ತøತ ನೋಟವೇ? ಇರಬಹುದು, ಏಕೆಂದರೆ ನಮ್ಮಲ್ಲಿಯ ಗಣಿಪ್ರದೇಶದಂತೆ ಇಲ್ಲೂ ಹಸಿರಿನ ಉಸಿರಿಲ್ಲ, ಎಲ್ಲೆಲ್ಲೂ ಕಂದು ಬಣ್ಣದ ಮಣ್ಣು.
ಇದು ಭೂಮಿಯ ಸೋದರ ಗ್ರಹವಾದ ಮಂಗಳನ ಬರಡು ನೆಲದ ಚಿತ್ರ. ನೋಡಿದರೆ ನಮಗೆ ಅತಿ ಪರಿಚಿತ ಸ್ಥಳವೇನೋ ಎಂದು ಭಾಸವಾಗುತ್ತಿರುವ ಚಿತ್ರ.
ಆದರೆ……
ಇಂಥ ಮಂಗಳನನ್ನು ಕೈವಶ ಮಾಡಿಕೊಂಡು ಮುಂದೊಂದು ದಿನ ಅಲ್ಲಿ ಮಾನವ ವಸಾಹತು ಮಾಡಬೇಕೆಂಬುದು ಆಧುನಿಕ ಮಾನವನ ಕನಸು. ಹಾಗೆ ನೋಡಿದರೆ ಇದು ತಂತ್ರಜ್ಞಾನದ ಹುಚ್ಚು ಕನಸು ಎಂದರೇ ಸರಿಯಾಗಬಹುದೇನೋ.
ಕೋಟಿ ವರ್ಷಗಳ ಹಿಂದೆ ಹಸಿಯಾಗಿ ಬೆಚ್ಚಗಿದ್ದ ಮಂಗಳನ ವಾತಾವರಣದಲ್ಲಿ ಕಬ್ಬಿಣದ ಅದಿರು ತುಕ್ಕು ಹಿಡಿದು ಕೆಂಪನೆಯ ಬಣ್ಣಗಟ್ಟಿದೆಯೆಂಬ ವಾದವಿದೆ. ಮಂಗಳನ ವಾತಾವರಣ ಹೇಗೆ ಬದಲಾಗುತ್ತಿದೆ ಎಂಬ ಅಧ್ಯಯನವಂತೂ ಹತ್ತಿಪ್ಪತ್ತು ವರ್ಷಗಳಿಂದ ಸತತವಾಗಿ ನಡೆಯುತ್ತಲೇ ಇದೆ. ಅಲ್ಲಿ ಹಿಂದೊಮ್ಮೆ ನೀರಿದ್ದ ಕುರುಹುಗಳು ಕಂಡಿವೆ, ಜೀವಿಗಳಿಗೆ ಬೇಕಾದ ರಾಸಾಯನಿಕಗಳ ಪತ್ತೆಯಾಗಿದೆ, ಈಗಲೂ ಹುಡುಕಿದರೆ ಎಲ್ಲೋ ಸಂದಿಮೂಲೆಯಲ್ಲಿ ಸೂಕ್ಷ್ಮಾತಿಸೂಕ್ಷ್ಮ ಜೀವಿಗಳು ಇರಬಹುದೇ ಎಂಬ ಹುಡುಕಾಟವೂ ಸಾಗಿದೆ.
ಕೆಂಪುಗ್ರಹ ಮಂಗಳನ ಬಗ್ಗೆ ಭೂ ಮತ್ತು ಹಾರಾಡುವ ದೂರದರ್ಶಕಗಳು ಹಾಗೂ ಆ ಗ್ರಹದ ಸುತ್ತಲೂ ಹಾರಾಡುವ ಒಡಿಸ್ಸಿ, ರಿಕನಸನ್ಸ್, ಗ್ಲೋಬಲ್ ಸರ್ವೆಯರ್ ಗಗನನೌಕೆಗಳು ಅಪಾರವಾದ ಮಾಹಿತಿಗಳನ್ನು ಒದಗಿಸಿಕೊಟ್ಟಿವೆ. ಆ ಮಾಹಿತಿಗಳನ್ನು ಅರಗಿಸಿಕೊಂಡು, ಎವರೆಸ್ಟ್‍ಗಿಂತ ಎತ್ತರದ ಶೃಂಗವಿರುವ, 43 ಸಾವಿರಕ್ಕಿಂತ ಅಧಿಕ ಒಣಕೊಳ್ಳಗಳಿರುವ ಮಂಗಳನ ನೆಲನಕ್ಷೆಯನ್ನೂ ತಯಾರಿಸಿ ಶೋಧಕಾರ್ಯದ ಇನ್ನೂ ಮುಂದಿನ ಹೆಜ್ಜೆಯಾಗಿ ಕುಜನೆಲವನ್ನು ತಟ್ಟಿ, ಮುಟ್ಟಿ ಪರೀಕ್ಷಿಸಲೆಂದು ರೊಬಾಟ್ ಯಂತ್ರಗಳನ್ನು ಕಳಿಸಲಾಗುತ್ತಿದೆ.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹಮ್ಮಿಕೊಂಡ ಆ ಯೋಜನೆ ‘ಮಾರ್ಸ್ ಎಕ್ಸ್‍ಪ್ಲೋರೇಶನ್ ರೋವರ್’. ಏಳು ತಿಂಗಳ ಪಯಣದಲ್ಲಿ ಸೂರ್ಯ ಮತ್ತು ಭೂಮಿಯಿಂದ ದೂರದಿಕ್ಕಿಗೆ ರೋವರುಗಳ ಹಾರಾಟ. ಮಂಗಳನನ್ನು ಬೆನ್ನಟ್ಟಿ, ಅದರ ಕಕ್ಷೆಯಲ್ಲಿ ಒಂದಿಷ್ಟು ಹಾರಿ ಆ ನಂತರ ಮಂಗಳನೊಳಕ್ಕೆ ಇಳಿದ ರೋವರುಗಳು ನೌಕೆಯೊಳಗಿಂದ ಪ್ಯಾರಾಚ್ಯೂಟ್ ಮತ್ತಿತರ ರಕ್ಷಣಾ ಕವಚಗಳನ್ನು ಕಳಚಿ ಹೊರಗಿಣುಕಿದವು. ಆಗ ಸ್ಪಿರಿಟ್ ರೊಬಾಟ್ ಕಳಿಸಿದ ಮಂಗಳನ ಚಿತ್ರ ಇದುವರೆಗಿನ ಅನ್ಯಗ್ರಹಗಳ ಚಿತ್ರದಲ್ಲೇ ಅತ್ಯಂತ ಮನೋಹರವಾದ ಮತ್ತು ವಿಹಂಗಮವಾದ ಚಿತ್ರ ಎನ್ನುತ್ತಾರೆ ವಿಜ್ಞಾನಿಗಳು.
ಸ್ಪಿರಿಟ್ ಮಂಗಳನ ನೆಲದ ಒಣಗಿದ ಕೆರೆಯ ಮಡಿಲಾಗಿರಬಹುದೆಂದು ಗುರುತಿಸಲ್ಪಟ್ಟ ‘ಗುಸೆವ್’ ಗುಂಡಿಯಲ್ಲೂ, ಅಪಾರ್ಚುನಿಟಿ ಹೆಮಟೈಟ್ ಕಲ್ಲುಗಳು ಹೆಚ್ಚಿರುವ ಅಂದರೆ ಹಿಂದೊಮ್ಮೆ ಹಸಿನೆಲವಿತ್ತೆಂಬುದನ್ನು ಊಹೆಮಾಡಬಹುದಾದ ‘ಮೆರಿಡಿಯನ್ ಪ್ಲೇನಂ’ ಬಯಲು ಪ್ರದೇಶದಲ್ಲೂ ಮೂರು ವಾರಗಳ ಅಂತರದಲ್ಲಿ ಬಂದಿಳಿದವು. ಅಂದ ಹಾಗೆ, ಬಾಹ್ಯ ಬ್ರಹ್ಮಾಂಡದ ಯಾವುದೇ ಹೊಸ ಅನ್ವೇಷಣೆಗೆ ಹೆಸರನ್ನಿಡುವ ಹೊಣೆಯನ್ನು ‘ಅಂತಾರಾಷ್ಟ್ರೀಯ ಖಗೋಳಶಾಸ್ತ್ರ ಸಂಘಟನೆ’ ವಹಿಸಿಕೊಂಡಿದೆ. ಖ್ಯಾತನಾಮ ಗಳಿಸಿದ ವಿಜ್ಞಾನಿಗಳು ಅಥವಾ ಸ್ಥಳಗಳ ಹೆಸರುಗಳನ್ನು ಇದಕ್ಕಾಗಿ ಆಯ್ಕೆ ಮಾಡಲಾಗುತ್ತದೆ.
ಮಂಗಳ ಗ್ರಹಕ್ಕೆಂದೇ ವಿಶೇಷವಾಗಿ ತಯಾರಾದ ಸ್ಪಿರಿಟ್ ಮತ್ತು ಅಪಾರ್ಚುನಿಟಿ ಈ ಎರಡೂ ರೊಬಾಟುಗಳ ರಚನೆ ಒಂದೇ. ಇವುಗಳ ರೂಪ, ಕೆಲಸದ ವಿಧಾನ ಎಲ್ಲವೂ ಅತ್ಯದ್ಭುತವಾದುದು. 180 ಕೆ.ಜಿ. ತೂಕದ, ಕೈಗಾಡಿಯಂತಿರುವ ಇವುಗಳಿಗೆ ಮೈಯ್ಯಿಡೀ ಇಲೆಕ್ಟ್ರಾನಿಕ್ ಅಂಗಾಂಗಗಳು. ಒತ್ತಾಗಿ ಅಚ್ಚುಕಟ್ಟಾಗಿ ಜೋಡಿಸಲಾದ ವೈಜ್ಞಾನಿಕ ಉಪಕರಣಗಳೆಲ್ಲವೂ ಕನಿಷ್ಟ ಗಾತ್ರ, ತೂಕವುಳ್ಳವು ಹಾಗೂ ಅತ್ಯಲ್ಪ ವಿದ್ಯುತ್ ಬಳಸುವಂಥವು. ಓಡಾಡಲೆಂದು ಆರು ಗಾಲಿಗಳು, ನಟ್ಟನಡುವೆ ಒಂದೂವರೆ ಮೀಟರ್ ಎತ್ತರಕ್ಕೆ ಏರಿದ ಕವೆಗೋಲಿನ ತುದಿಯಲ್ಲಿ ಆ ಬೋಳು ಗ್ರಹದ ಮೇಲ್ನೋಟವನ್ನು ವಿಸ್ತಾರವಾಗಿ ಸೆರೆಹಿಡಿಯಬಲ್ಲ ಪಾನ್‍ಕ್ಯಾಮ್, ಮುಂದಕ್ಕೆ ಹೆಜ್ಜೆಯಿಡುವ ಮುನ್ನ ನೆಲದ ಚಿತ್ರ ತೆಗೆದು ಪರೀಕ್ಷಿಸುವ ನೇವ್‍ಕ್ಯಾಮ್, ರೋಬಾಟಿನ ಮುಂದೆ ಹಾಗೂ ಹಿಂದೆ ಜೋಡಿಸಲಾಗಿರುವ 120 ಡಿಗ್ರಿ ಕೋನದವರೆಗೆ ಚಿತ್ರ ತೆಗೆಯಬಲ್ಲ ಜೋಡಿ ಹಾಝ್‍ಕ್ಯಾಮ್ ಈ ಮೂರೂ ಪ್ರಮುಖ ಕ್ಯಾಮೆರಾಗಳು. ರೊಬಾಟಿಗೆ ಬಂಡೆಗಳ ಹೆಪ್ಪಳಿಕೆ ಕೆರೆದು ಒಳಪದರವನ್ನು ಕ್ಯಾಮೆರಾದೆದುರು ತೋರಿಸುವ, ಅಲ್ಲೇ ಕೆರೆದ ಭಾಗವನ್ನು ಪರೀಕ್ಷಿಸುವ ಸಾಧನವನ್ನು ಅಂಟಿಸಿದ ತೋಳೂ ಕೂಡ ಇದೆ. ಥರ್ಮಲ್ ಎಮಿಶನ್ ಸ್ಪೆಕ್ಟ್ರೋಮೀಟರ್ ಅಂದರೆ ಕಲ್ಲು, ಬಂಡೆಗಳ ಚೂರುಗಳು ಹೊರಸೂಸುವ ಬಿಸಿಯನ್ನು ಪರೀಕ್ಷಿಸುವ, ಶಕ್ತಿಯುತವಾದ ಎಕ್ಸ್‍ರೇ ಮತ್ತು ಗಾಮಾ ಕಿರಣಗಳನ್ನು ಬಂಡೆಗಳಿಗೆ ಹಾಯಿಸಿ ಅವು ವಿಸರ್ಜಿಸುವ ರಾಸಾಯನಿಕಗಳನ್ನು ಪರೀಕ್ಷಿಸುವ ಸಾಧನಗಳಿವೆ. ಆಯಸ್ಕಾಂತೀಯ ಗುಣದ ವಸ್ತುಗಳೇನಾದರೂ ಇದ್ದಲ್ಲಿ ಅವುಗಳನ್ನು ಆಕರ್ಷಿಸಲೆಂದು ಪುಟ್ಟಪುಟ್ಟ ಮ್ಯಾಗ್ನೆಟ್‍ಗಳನ್ನೂ ಅಲ್ಲಿ ಜೋಡಿಸಿಡಲಾಗಿದೆ. ಎಲ್ಲ ಅಂಗಗಳನ್ನು ಬೆಸೆದಿಡುವ ಅತಿ ವೇಗದ ಕಂಪ್ಯೂಟರ್ ಈ ರೋವರುಗಳ ಹೃದಯಭಾಗ.
ಭೂಮಿಯ ಹಾಗೂ ಮಂಗಳನ ಆಗಸದಲ್ಲಿ ಗಸ್ತು ಹೊಡೆಯುತ್ತಿರುವ ಗಗನನೌಕೆಗಳ ಜೊತೆ ಸಂಪರ್ಕಕ್ಕೆಂದು ಎರಡು ಅಂಟೆನಾಗಳಿವೆ. ಹೈ ಗೇನ್ ಅಥವಾ ಶಕ್ತಿಯುತ ಅಂಟೆನಾ ರೊಬಾಟು ಅತ್ತಿತ್ತ ಅಡ್ಡಾಡುವಾಗ ಭೂಮಿಯತ್ತಲೇ ಮುಖವೊಡ್ಡುತ್ತ ರೇಡಿಯೋ ಅಲೆಗಳ ಮೂಲಕ ಸಂದೇಶಗಳನ್ನು ರವಾನೆ ಮಾಡುತ್ತಿರುತ್ತದೆ. ಲೋಗೇನ್ ಅಂಟೆನಾ ಏಕಮುಖಿಯಾಗಿದ್ದು ಮಂಗಳಾಕಾಶದ ಉಪಗ್ರಹ ನೌಕೆಗಳು ಎದುರಾದಾಗಲೆಲ್ಲ ಸಂದೇಶ ಪಡೆಯುತ್ತವೆ. ರೋವರುಗಳು ಹಗಲು ಹೊತ್ತು ಸೂರ್ಯ ಶಾಖದಿಂದ ವಿದ್ಯುತ್ ಪಡೆದರೆ, ರಾತ್ರಿ ಚಳಿಯಲ್ಲಿ ಉಪಕರಣಗಳನ್ನು ಬೆಚ್ಚಗಿಡಲೆಂದು ಲೀಥಿಯಂ ಬ್ಯಾಟರಿಗಳಿವೆ. ಈ ಎಲ್ಲಾ ಉಪಕರಣಗಳು ಮಂಗಳನ ತಾಪಮಾನದ ಏರಿಳಿತವನ್ನು ತಡೆದುಕೊಳ್ಳ್ಳಬಲ್ಲವು.
ರೋವರುಗಳಿಗೆ ಹಗಲಿಡೀ ಕೈಮೈತುಂಬ ಕೆಲಸ, ಗಾಲಿಗಳು ಉರುಳಿದಂತೆ ಆಸುಪಾಸಿನ ವಿವರಗಳನ್ನು ಚಾಚೂ ತಪ್ಪದೆ ಗಮನಿಸಬೇಕು, ತನ್ನಲ್ಲಿರುವ ಸಲಕರಣೆಗಳನ್ನು ಬಳಸಿ ಅಗೆದೋ, ಕೆರೆದೋ ಪರೀಕ್ಷಿಸಬೇಕು, ಕ್ಯಾಮೆರಾಗಳಲ್ಲಿ ದಾಖಲಿಸಬೇಕು, ಅಂಟೆನಾ ಮೂಲಕ ಆ ಮಾಹಿತಿಗಳನ್ನೆಲ್ಲ ಭೂಮಿಗೆ ವರ್ಗಾಯಿಸಬೇಕು. ಹಾಗಾಗಿ ಯಾವುದೇ ಗಡಿಬಿಡಿಯಿಲ್ಲದೆ ದಿನಕ್ಕೆ ನೂರು ಮೀಟರ್ ಮಾತ್ರ ಚಲಿಸುವಂತೆ ಅವುಗಳಿಗೆ ಆದೇಶ. ಮಂಗಳನಲ್ಲಿ ಸೂರ್ಯ ಕಂತಿದ ಕೂಡಲೇ ಇವುಗಳಿಗೂ ರೆಸ್ಟ್.
2004 ರ ಜನೆವರಿ ತಿಂಗಳಲ್ಲಿ ಆರಂಭಗೊಂಡ ಸ್ಪಿರಿಟ್ ಮತ್ತು ಅಪಾರ್ಚುನಿಟಿಗಳ ಅವ್ಯಾಹತ ಪಯಣ ಮಂಗಳನ ಒಂದೊಂದೇ ರಹಸ್ಯವನ್ನು ಮಾನವಜಗತ್ತಿಗೆ ತಿಳಿಯಪಡಿಸುತ್ತ ಸಾಗಿತು. ಆಗಾಗ ಆ ಕೆಂಪು ನೆಲದಲ್ಲೆದ್ದ ಗಾಳಿ ಹುಡಿಮಣ್ಣನ್ನು ಎರಚಿ ಸೌರಪಟ್ಟಿಯ ಮೇಲೆ ತೆರೆಯೆಳೆದಾಗ ಅಥವಾ ಹುಡಿಮಣ್ಣಿನಲ್ಲಿ ಗಾಲಿ ಹುಗಿದಾಗ ಮಾತ್ರವೇ ಅವುಗಳ ನಿತ್ಯವಿಧಿಯಲ್ಲಿ ಅಡಚಣೆ ಉಂಟಾಗುತ್ತದೆ. 2009ರ ವೇಳೆಗೆ ಈ ಎರಡೂ ರೊಬಾಟು ಗಾಡಿಗಳು 21 ಕಿಮೀ ಪಯಣಿಸಿ ಎರಡೂವರೆ ಲಕ್ಷದಷ್ಟು ಚಿತ್ರಗಳನ್ನು ತೆಗೆದಿದ್ದವು.
ಈ ಜೋಡಿ ರೋವರುಗಳು ಇದುವರೆಗೆ ಬಾನನೌಕೆಗಳು ಕಂಡುಹಿಡಿದಿದ್ದನ್ನು ಪ್ರಮಾಣಿಸಿ ತೋರಿಸಿವೆ. ಹರಿಯುವ ನೀರು ತಿಕ್ಕಿ ಸವೆದು ತಯಾರಿಸಿರಬಹುದಾದ ಉರುಟುರುಟು ಕಲ್ಲುಗಳು, ನೀರಿನ ಹೂಳು ಮಣ್ಣಿನಲ್ಲಿರುವಂಥ ಸಲ್ಫೇಟುಗಳು, ಕಾರ್ಬೋನೇಟುಗಳು, ಓಡುವ ನೀರು ಕೊರೆದ ಹಳ್ಳಕೊಳ್ಳಗಳ ಮಾರ್ಗ, ಮುಂಚಾಚಿದ ಬಂಡೆಗಲ್ಲುಗಳು ಇವೆಲ್ಲವನ್ನೂ ರೋವರುಗಳು ಅತಿ ಹತ್ತಿರದಿಂದ ಚಿತ್ರ ತೆಗೆದು ತೋರಿಸಿವೆ. ಹಿಂದೊಮ್ಮೆ ಜ್ವಾಲಾಮುಖಿ ಸಿಡಿದಿತ್ತೆಂದು ಸೂಚಿಸುವ ಬಸಾಲ್ಟ್ ಹಾಗೂ ಹೆಮಟೈಟ್ ಕಲ್ಲುಗಳನ್ನು ರೋವರುಗಳು ಗುರುತಿಸಿವೆ. ಹೆಮಟೈಟ್ ಕಲ್ಲುಗಳು ನೀರಿದ್ದಲ್ಲಿ ಉಂಟಾಗುವ ಸಾಧ್ಯತೆಯೂ ಇದೆ.
ಒಮ್ಮೆ ಅಪಾರ್ಚುನಿಟಿಯ ಗಾಲಿಯೊಂದು ಕಲ್ಲುಗಳೆಡೆಯಲ್ಲಿ ಸಿಕ್ಕಿಹಾಕಿಕೊಂಡು ಐದು ವಾರಗಳವರೆಗೆ ಅಲುಗಾಡಲು ಸಾಧ್ಯವಾಗಿರಲಿಲ್ಲ, ನಾಸಾದ ಕೃತ್ರಿಮವಾಗಿ ನಿರ್ಮಿಸಿದ ‘ಮಂಗಳ ಮರಳು’ ನೆಲದಲ್ಲಿ ಮತ್ತೆಮತ್ತೆ ಪ್ರಯೋಗಗಳನ್ನು ನಡೆಸಿದ ತಜ್ಞರು ಐದು ವಾರಗಳ ಕೊನೆಗೆ ಸೂಕ್ತ ಆದೇಶ ಕೊಟ್ಟಾಗ ರೋವರ್ ಗಾಲಿಕಾಲನ್ನು ಎತ್ತಿಹಾಕಲು ಸಾಧ್ಯವಾಗಿತ್ತು.
ಈ ಅವಳಿ ರೊಬಾಟುಗಳು 90 ಮಂಗಳ ದಿನಗಳವರೆಗೆ ಸಮರ್ಥ ಕೆಲಸ ಮಾಡಬಹುದೆಂದು ಊಹಿಸಲಾಗಿತ್ತು. ಆದರೆ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗೆ ಮಾಡಿ ಸ್ಪಿರಿಟ್ ಆರು ವರ್ಷಕಾಲ ಓಡಾಡಿ ಆನಂತರ ಮರಳಮಣ್ಣಿನಲ್ಲಿ ಗಾಲಿ ಹೂತು ಸ್ತಬ್ಧಗೊಂಡರೆ, 42 ಕಿಮೀ ಕ್ರಮಿಸಿದ ಅಪಾರ್ಚುನಿಟಿ 11 ವರ್ಷಗಳಾದರೂ, ಇನ್ನೂ ಬಸವಳಿಯದ ಬಸವನಂತೆ ಅಡ್ಡಾಡುತ್ತಲೇ ಇದೆ! ಎರಡೂ ಹತ್ತಾರು ದಾಖಲೆಗಳನ್ನು ಹುಟ್ಟುಹಾಕಿವೆ.
ಈ ಜೋಡಿ ರೋವರುಗಳ ನಂತರ ನಾಸಾ ಫೀನಿಕ್ಸ್ ಹಾಗೂ ಕ್ಯೂರಿಯಾಸಿಟಿ ಎಂಬ ಮತ್ತೂ ಅತ್ಯಾಧುನಿಕ ರೊಬಾಟುಗಳನ್ನು ಮಂಗಳನಲ್ಲಿಗೆ ಕಳಿಸಿದೆ. ಫೀನಿಕ್ಸ್ ಅತ್ಯಮೂಲ್ಯ ಸಂಶೋಧನೆಗಳನ್ನೇನೋ ಮಾಡಿತು, ಆದರೆ ಹಾರಿದ ಆರು ತಿಂಗಳಿಗೇ ಮಂಗಳನ ದೂಳಿಗೆ ಬಲಿಯಾಗಿ ವಿಫಲಗೊಂಡಿತು. ಕ್ಯೂರಿಯಾಸಿಟಿ ಈಗಲೂ ಮಂಗಳ ನೆಲವನ್ನು ಕೆದಕುತ್ತ, ಚಿತ್ರ ತೆಗೆಯುತ್ತ ಹೊಸ ದಾಖಲೆಗಳನ್ನು ಬರೆಯುತ್ತ ಸಾಗಿದೆ.
ಆದರೆ ಸ್ಪಿರಿಟ್ ಮತ್ತು ಅಪಾರ್ಚುನಿಟಿ ಜೋಡಿಗೆ ಬಹಳಷ್ಟು ಅಭಿಮಾನಿಗಳಿದ್ದಾರೆ. ಅಪಾರ್ಚುನಿಟಿಯ ದೂರಚಾಲಕರಲ್ಲೊಬ್ಬರಾದ ಸ್ಕಾಟ್ ಮಾಕ್ಸ್‍ವೆಲ್ ಹೇಳುವಂತೆ ‘ಹೊಸ ಕಾರು ತಗೊಂಡಿರಬಹುದು, ಆದರೆ ಮೊದಲು ಕೊಂಡ ಕಾರಂದ್ರೆ ನಮ್ಗೆ ಅದೇನೋ ಪ್ರೀತಿ..’
ಮುಂದುವರೆಯುವುದು…
ಸರೋಜಾ ಪ್ರಕಾಶ.