Home Education ಮತ್ತೆ ಆಗಸಕ್ಕೇರಿದ ಡಿಸ್ಕವರಿ

ಮತ್ತೆ ಆಗಸಕ್ಕೇರಿದ ಡಿಸ್ಕವರಿ

0

ತನ್ನ ೨೮ನೆಯ ಅಂತರಿಕ್ಷಯಾನದಲ್ಲಿ ದುರಂತಕ್ಕೀಡಾದ ಕೊಲಂಬಿಯಾ ಅಂತರಿಕ್ಷ ನೌಕೆಯ ಘಟನೆ ನಡೆದು ಮೂರು ವರ್ಷಗಳು ಕಳೆದಿವೆ. ಅದಕ್ಕಿಂತ ಮೊದಲು ಏಳು ಮಂದಿ ಗಗನಯಾತ್ರಿಗಳನ್ನೊಳಗೊಂಡ ಚಾಲೆಂಜರ್ ನೌಕೆ ೧೯೮೬ರಲ್ಲಿ ಉರಿದು ಭಸ್ಮವಾಗಿತ್ತು. ಭಾರತದ ಕಲ್ಪನಾ ಚಾವ್ಲಾ ಸೇರಿದಂತೆ ಒಟ್ಟೂ ಏಳು ಗಗನಯಾತ್ರಿಗಳನ್ನು ಹೊತ್ತ ಕೊಲಂಬಿಯಾ ೧೬ ದಿನಗಳ ಯಾತ್ರೆಯನ್ನು ಮುಗಿಸಿ ಮರಳಿ ಭೂಮಿಗೆ ಮರಳುತ್ತಿತ್ತು. ಭೂಮಿಯ ಮೇಲೆ ಸುಮಾರು ೨೦೮ ಅಡಿ ಎತ್ತರದಲ್ಲಿರುವಾಗ ಹಾಗೂ ಕೆನಡಿ ಅಂತರಿಕ್ಷ ಕೇಂದ್ರದ ನಿಗದಿತ ಸ್ಥಳ ಸೇರಲು ಬರೀ ೧೬ ನಿಮಿಷಗಳು ಉಳಿದಿರುವಾಗ, ಘಂಟೆಗೆ ೧೨,೫೦೦ ಮೈಲುಗಳ ವೇಗದಲ್ಲಿ ಧರೆಗಿಳಿಯುತ್ತಿದ್ದ ಕೊಲಂಬಿಯಾದಿಂದ ಬರುತ್ತಿದ್ದ ಸಂದೇಶಗಳು ಥಟ್ಟನೆ ನಿಂತವು. ಟಿವಿ ಪರದೆಯ ಮೇಲೆ ನೋಡುತ್ತಿದ್ದ ತಂತ್ರಜ್ಞರಿಗೆ ಕಂಡಿದ್ದು ಭೂಮಿಯ ವಾತಾವರಣವನ್ನು ಪ್ರವೇಶಿಸುತ್ತಿದ್ದಂತೆ ನೌಕೆಯ ಒಂದು ಭಾಗದಿಂದ ಮೇಲೆದ್ದ ಹೊಗೆ ಹಾಗೂ ಸೀಳು ಸೀಳಾಗುತ್ತ ಅಂತರಿಕ್ಷದಲ್ಲಿ ಹಾರಾಡಿದ ನೌಕೆಯ ಚೂರುಗಳು. ಏಳೂ ಮಂದಿ ಯಾತ್ರಿಗಳು ಕ್ಷಣಮಾತ್ರದಲ್ಲಿ ಅನಂತ ಆಗಸದಲ್ಲಿ ಲೀನವಾಗಿದ್ದರು. ನೌಕೆಯ ಅಂಗಾಂಗ ಅವಶೇಷಗಳು ಅಮೆರಿಕದ ಟೆಕ್ಸಾಸ್ ನಗರದಲ್ಲಿ ಹಲವೆಡೆ ಬಿದ್ದವು. ಇಡೀ ವಿಶ್ವವೇ ಈ ಅವಘಡಕ್ಕೆ ಕಣ್ಣೀರಿಟ್ಟಿತು. ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಕೇಂದ್ರ ’ನಾಸಾ’ದ ಇತಿಹಾಸಕ್ಕೆ ಇದೂ ಒಂದು ಕಪ್ಪು ಕಲೆಯಾಗಿ ಸೇರ್ಪಡೆಯಾಯಿತು.
ಆದರೆ ಛಲಬಿಡದ ತಿವಿಕ್ರಮನಂತೆ ಚೇತರಿಸಿಕೊಂಡ ನಾಸಾ ಮತ್ತೊಮ್ಮೆ ಮಾನವ ಸಹಿತ ಅಂತರಿಕ್ಷನೌಕೆಯನ್ನು ಹಾರಿಬಿಡಲು ಸಜ್ಜಾಯಿತು. ಕಳೆದ ವರ್ಷ ಅತಿ ಮುತುವರ್ಜಿಯಿಂದ ಸಿದ್ಧಗೊಳಿಸಿ, ಹಾರಿಬಿಟ್ಟ ಡಿಸ್ಕವರಿ ನೌಕೆಯನ್ನು ತಾಂತ್ರಿಕ ದೋಷಗಳಿಂದಾಗಿ ಕೆಲವೇ ಕ್ಷಣಗಳಲ್ಲಿ ನೆಲಕ್ಕಿಳಿಸಬೇಕಾಯಿತು. ಈ ಬಾರಿ ಜುಲೈ ನಾಲ್ಕರಂದು ಮತ್ತೊಮ್ಮೆ ನಾಸಾ ತಂಡ ಏಳು ಯಾತ್ರಿಗಳನ್ನು ಹೊತ್ತ ಡಿಸ್ಕವರಿ ನೌಕೆಯನ್ನು ಆಕಾಶಕ್ಕೆ ಕಳಿಸಿತು.
ಡಿಸ್ಕವರಿಯ ಉಡ್ಡಯನ ಜುಲೈ ಒಂದರಂದೇ ನಡೆಯಬೇಕಾಗಿತ್ತು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಎರಡು ಬಾರಿ ಉಡ್ಡಯನವನ್ನು ಮುಂದೂಡಲಾಯಿತು. ಜುಲೈ ನಾಲ್ಕರಂದು ಆಕಾಶಕ್ಕೆ ಹಾರಿದ ಡಿಸ್ಕವರಿಯ ಇಂಧನ ಟ್ಯಾಂಕಿನ ಉಷ್ಣ ನಿರೋಧಕ ಹೊದಿಕೆಯಿಂದ ಹೊರಬಿದ್ದ ಒಂದೆರಡು ಹತ್ತಿಯಂತಹ ಚೂರುಗಳು ಗಾಳಿಯಲ್ಲಿ ಚದುರಿದವು. ಅದರಿಂದ ನೌಕೆಗೆ ಯಾವುದೇ ಅಪಾಯ ಇಲ್ಲವೆಂದು ನಾಸಾದ ತಂತ್ರಜ್ಞರು ಅಭಿಪ್ರಾಯಪಟ್ಟರು. ಅಮೆರಿಕದ ಫ್ಲೋರಿಡಾದ ಕೆನೆಡಿ ಬಾಹ್ಯಾಕಾಶ ಕೇಂದ್ರದಿಂದ ಉಡ್ಡಯನಗೊಂಡ ಡಿಸ್ಕವರಿಯಲ್ಲಿ ಐವರು ಅಮೆರಿಕನ್ನರು ಹಾಗೂ ಒಬ್ಬ ಜರ್ಮನ್ ಗಗನಯಾತ್ರಿಗಳಿದ್ದರು. ಸದಸ್ಯರಲ್ಲಿ ಇಬ್ಬರು ಮಹಿಳೆಯರು. ಆಕಾಶದಿಂದ ನೌಕೆ ಜುಲೈ ೧೬ಕ್ಕೆ ಮರಳಿ ಸುರಕ್ಷಿತವಾಗಿ ಬಂದಿಳಿಯಿತು.
ಈ ಬಾರಿ ಡಿಸ್ಕವರಿ ನೌಕೆಯ ಉಡಾವಣೆ ಹಾಗೂ ನಂತರದ ಕಾರ್ಯಚಟುವಟಿಕೆಗಳ ಸಮಯದಲ್ಲಿ ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ಮುನ್ನೆಚ್ಚರಿಕೆಯ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಆಕಾಶಕ್ಕೆ ಅದು ಹಾರತೊಡಗಿದಂತೆ ನೌಕೆಯ ಮೇಲು ಮತ್ತು ಕೆಳಭಾಗದಲ್ಲಿ ಹಾಗೂ ಇಂಧನ ಟ್ಯಾಂಕಿನ ಬಳಿ ಅಳವಡಿಸಲಾದ ಕ್ಯಾಮೆರಾಗಳು ಚಿತ್ರಗಳನ್ನು ತೆಗೆದು ನಾಸಾದ ಪ್ರಯೋಗಶಾಲೆಯ ತಂತ್ರಜ್ಞರಿಗೆ ರವಾನಿಸತೊಡಗಿದವು. ಇಷ್ಟೇ ಅಲ್ಲ, ನೌಕೆಗೆ ಜೋಡಿಸಲಾದ ಐವತ್ತು ಅಡಿ ಉದ್ದದ ಕೃತಕ ಕೈ(ರೊಬಾಟ್) ಕೂಡ ಅದರೊಳಗಿದ್ದ ಕ್ಯಾಮೆರಾಗಳ ಮೂಲಕ ನೌಕೆಯ ವಿವಿಧ ಕೋನಗಳ ಚಿತ್ರಗಳನ್ನು ಕಳಿಸಲಾರಂಭಿಸಿತು.
ಡಿಸ್ಕವರಿಯನ್ನು ಹಾರಿಬಿಟ್ಟ ಪ್ರಮುಖ ಉದ್ದೇಶವೆಂದರೆ ’ಅಂತಾರ್ರಾಷ್ಟ್ರೀಯ ಬಾಹ್ಯಾಕಾಶ ಅಟ್ಟಣಿಗೆ’* ಯಲ್ಲಿ ವಾಸವಾದ ಗಗನಯಾತ್ರಿಗಳಿಗೆ ಅವಶ್ಯವಿರುವ ಆಹಾರ ಸಾಮಗ್ರಿಗಳ ಹಾಗೂ ಮತ್ತಿತರ ಸಾಮಗ್ರಿಗಳ ಪೂರೈಕೆ. ಬಾಹ್ಯಾಕಾಶ ಅಟ್ಟಣಿಗೆಯನ್ನು ಸಮೀಪಿಸಿದಂತೆ ಡಿಸ್ಕವರಿಯನ್ನೊಮ್ಮೆ ತಲೆ ಕೆಳಗಾಗಿ ನಿಲ್ಲಿಸಲಾಯಿತು. ಅಟ್ಟಣಿಗೆಯಲ್ಲಿದ್ದ ತಂತ್ರಜ್ಞರು ನೌಕೆಯ ಚಿತ್ರಗಳನ್ನು ತೆಗೆದು ನಾಸಾಕ್ಕೆ ಕಳಿಸಿದರು. ಇಂಧನ ಟ್ಯಾಂಕಿರುವ ನೌಕೆಯ ತಳಭಾಗವು ಯಾವುದೇ ಹಾನಿಗೊಳಗಾಗಿಲ್ಲವೆಂಬುದನ್ನು ಖಾತ್ರಿಗೊಳಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿತ್ತು.
ನೌಕೆ ಬಾಹ್ಯಾಕಾಶ ಅಟ್ಟಣಿಗೆಯ ವೇಗಕ್ಕೆ ಸರಿಯಾಗಿ ಅದರ ಪಕ್ಕದಲ್ಲಿ ಹಾರತೊಡಗಿತು. ಕೂಡಲೇ ಎರಡೂ ನೌಕೆಗಳ ನಡುವೆ ಸೇತುವೆಯೊಂದರ ಜೋಡಣೆಯಾಯಿತು. ನೌಕೆಯಿಂದ ಆಹಾರ ಮತ್ತು ಇತರ ಪರಿಕರಗಳನ್ನು ಗಗನ ಯಾತ್ರಿಗಳು ಅಟ್ಟಣಿಗೆಗೆ ದಾಟಿಸಿದರು. ಇದುವರೆಗೆ ಕೈಗೆಟುಕದ ಅಟ್ಟಣಿಗೆಯ ಭಾಗಗಳು ರಿಪೇರಿ ವ್ಯವಸ್ಥೆಗೆ ಲಭ್ಯವಾಗುವಂತೆ ಈಗಿರುವ ರೋಬೊಟ್ ಕೈಯ್ಯನ್ನು ಬಲಪಡಿಸುವ ಪ್ರಯತ್ನಗಳೂ ಮುಂದಿನ ಎರಡು ದಿನಗಳಲ್ಲಿ ನಡೆದವು. ಈ ಎರಡೂ ಕಾರ್ಯಗಳಿಗಾಗಿ ಇಬ್ಬರು ಯಾತ್ರಿಗಳು ನೌಕೆ ಮತ್ತು ಅಟ್ಟಣಿಗೆಯ ಹೊರಗಡೆ ಆಕಾಶನಡಿಗೆಯನ್ನು ಮಾಡಿದ್ದನ್ನು ಬಾಹ್ಯಾಕಾಶ ಆಸಕ್ತರೆಲ್ಲರೂ ಟಿವಿಯಲ್ಲಿ ನೋಡಿದರು. ಪತ್ರಿಕೆಗಳಲ್ಲೂ ಗಗನಯಾತ್ರಿಗಳ ಸಾಹಸ ಕಾರ್ಯಗಳ ಚಿತ್ರಗಳು ಪ್ರಕಟವಾಗತೊಡಗಿದವು.
ಜುಲೈ ೧೭. ಅಂದು ಡಿಸ್ಕವರಿ ಭೂಮಿಗೆ ಮರಳುವ ದಿನ. ನಾಸಾದ ತಂತ್ರಜ್ಞರ ಮನದಲ್ಲಿ ಅದೇನೋ ಆತಂಕ. ಕೊಲಂಬಿಯಾ ದುರಂತದ ಕಹಿ ನೆನಪು ಮನದಲ್ಲಿ. ಆದರೆ ಏಳು ಗಗನಯಾತ್ರಿಗಳನ್ನು ಹೊತ್ತು ೧೩ ದಿನಗಳು ಅಂತರಿಕ್ಷದಲ್ಲಿದ್ದು ೨೦೨ ಭೂಪ್ರದಕ್ಷಿಣೆಗಳನ್ನು ನಡೆಸಿದ ಡಿಸ್ಕವರಿ ಆರು ಮಂದಿಯೊಂದಿಗೆ ಭೂಮಿಗೆ ಸುರಕ್ಷಿತವಾಗಿ ಬಂದಿಳಿದಿದೆ.ಕೊಲಂಬಿಯಾ, ಡಿಸ್ಕವರಿ, ಎಂಡೇವರ್ ಮತ್ತು ಅಟ್ಲಾಂಟಿಸ್ ಈ ನಾಲ್ಕು ಅಂತರಿಕ್ಷ ನೌಕೆಗಳು ಮಾನವಸಹಿತ ಆಗಸಕ್ಕೇರಿ ಅಮೆರಿಕದ ಅಂತರಿಕ್ಷ ಸಾಹಸ ಕಾರ್ಯಗಳಲ್ಲಿ ಮಹತ್ವದ ಪಾತ್ರವಹಿಸಿದ ಒಂದೇ ಪೀಳಿಗೆಯ ನೌಕೆಗಳು. ಈಗ ಉಳಿದಿರುವ ಮೂರೂ ನೌಕೆಗಳು ೨೦೧೦ರಲ್ಲಿ ನಿವೃತ್ತಿ ಹೊಂದಲಿವೆ. ಅಷ್ಟರೊಳಗೆ ಇನ್ನೂ ೧೭ ಬಾರಿ ಅಂತರಿಕ್ಷಯಾನ ನಡೆಸುವ ಯೋಜನೆ ಇದೆ. ಈಗಿನ ಡಿಸ್ಕವರಿಯ ಉಡ್ಡಯನ ಸಫಲಗೊಂಡಿದೆಯಾದ್ದರಿಂದ ಮುಂದಿನ ತಿಂಗಳು ಬಾನಿಗೆ ಹಾರಲು ಅಟ್ಲಾಂಟಿಸ್ ನೌಕೆ ಭಾರೀ ತಯಾರಿ ನಡೆಸಿದೆ. ಡಿಸ್ಕವರಿ ಈಗಾಗಲೇ ೩೨ ಬಾರಿ ಆಕಾಶದಲ್ಲಿ ಹಾರಾಡಿದ್ದು ISS ಗೆ ಭೆಟ್ಟಿ ನೀಡುತ್ತಿರುವ ೧೮ನೇ ನೌಕೆಯಾಗಿದೆ.
ಡಿಸ್ಕವರಿಯಾನ ಯಶಸ್ವಿಯಾಗಿ ಮುಗಿಯುವುದೆಂದು ನಾಸಾ ಮತ್ತು ಜಗತ್ತಿನೆಲ್ಲೆಡೆಯ ಅಂತರಿಕ್ಷ ವಿಜ್ಞಾನಿಗಳು ಆಶಿಸಿದ್ದು ಸುಳ್ಳಾಗಲಿಲ್ಲ. ಅಂತೂ ನಾಸಾದ ಆತ್ಮವಿಶ್ವಾಸ ಹೆಚ್ಚಿದೆ. ಮುಂದಿನ ಬಾಹ್ಯಾಕಾಶ ಯೋಜನೆಗಳಲ್ಲಿ ತೊಡಗಿಕೊಳ್ಳಲು ಡಿಸ್ಕವರಿಯಾನ ಹೊಸಹುಮ್ಮಸ್ಸು ತಂದಿದೆ.
* ಅಮೆರಿಕ, ರಷ್ಯಾ, ಐರೋಪ್ಯ ಬಾಹ್ಯಾಕಾಶ ಸಂಸ್ಥೆ ಹಾಗೂ ಜಪಾನ್ ದೇಶಗಳ ಸಹಯೋಗದಲ್ಲಿ ೧೯೭೨ ರಲ್ಲಿ ನಿರ್ಮಿಸಲಾದ ಬಾಹ್ಯಾಕಾಶ ಅಟ್ಟಣಿಗೆ ನೋಡಲು ಬಾಹ್ಯಾಕಾಶ ನೌಕೆಯಂತೆಯೇ ಇದ್ದು, ಭೂಮಿಯಿಂದ ಸುಮಾರು ೩೬೦ ಕಿಮೀ ಎತ್ತರದಲ್ಲಿ ತನ್ನದೇ ಆದ ಕಕ್ಷೆಯಲ್ಲಿ ಗಸ್ತು ತಿರುಗುತ್ತಿದೆ. ಮೂವರು ಗಗನಯಾತ್ರಿಗಳು ಇರಬಹುದಾದ ಈ ಅಟ್ಟಣಿಗೆಯಲ್ಲಿ ಇಲ್ಲಿಯವರೆಗೆ ಅಮೆರಿಕ ಮತ್ತು ರಷ್ಯಾದ ಬಾಹ್ಯಾಕಾಶ ತಜ್ಞರು ಉಳಿದು ಬಂದಿದ್ದಾರೆ. ಈಗಿರುವ ಅಮೆರಿಕ ಮತ್ತು ರಷ್ಯಾದ ತಜ್ಞರು ತಮ್ಮ ೧೮೦ ದಿನಗಳ ಬಾಹ್ಯಾಕಾಶ ವಾಸದ ಅರ್ಧದಷ್ಟು ಅವಧಿಯನ್ನು ಪೂರೈಸಿದ್ದಾರೆ. ಡಿಸ್ಕವರಿಯಲ್ಲಿ ಹಾರಿಬರುವ ಇನ್ನೊಬ್ಬ ವಿಜ್ಞಾನಿ ಜರ್ಮನ್ನಿನ ಥಾಮಸ್ ರೆಯ್ಟರ್ ಅವರು ಕೂಡ ಈ ಬಾರಿ ಅವರನ್ನು ಸೇರಿಕೊಳ್ಳಲಿದ್ದಾರೆ. ಕೊಲಂಬಿಯಾ ದುರಂತದಿಂದಾಗಿ ಅಮೆರಿಕಾ ಕೆಲಕಾಲ ಮಾನವಸಹಿತ ನೌಕೆಯನ್ನು ಕಳಿಸಲು ಹಿಂದೆಗೆದಿದ್ದರಿಂದ ಅಟ್ಟಣಿಗೆಗೆ ಆಹಾರ ಪದಾರ್ಥಗಳನ್ನು ಪೂರೈಸುವ ಕಾರ್ಯದಲ್ಲಿ ವ್ಯತ್ಯಯ ಉಂಟಾಗಿತ್ತು. ರಷ್ಯಾ ದೇಶ ತನ್ನ ಈ ಕಾರ್ಯಕ್ಕಾಗಿ ಎರಡು ಬಾರಿ ತನ್ನ ನೌಕೆಗಳನ್ನು ಕಳುಹಿಸಿತ್ತು. ಮೂವರಿದ್ದರೆ ಅಟ್ಟಣಿಗೆಯ ಮೇಲುಸ್ತುವಾರಿಯ ಜೊತೆಗೆ ಇತರ ಸಂಶೋಧನೆಗಳನ್ನು ನಡೆಸಬಹುದು, ಅಲ್ಲದೆ ಅಟ್ಟಣಿಗೆಯ ಉಳಿದ ನಿರ್ಮಾಣ ಕಾರ್ಯವನ್ನೂ ಆದಷ್ಟು ಬೇಗನೆ ಮುಗಿಸಬಹುದೆಂಬ ಆಶಯವನ್ನು ವಿಜ್ಞಾನಿಗಳು ಹೊಂದಿದ್ದಾರೆ.
ಸರೋಜ ಪ್ರಕಾಶ್