Home Health ಕಲಿಕೆ – ಆರೋಗ್ಯಕ್ಕಾಗಿ

ಕಲಿಕೆ – ಆರೋಗ್ಯಕ್ಕಾಗಿ

0

“ಕಲಿಕೆ” ಮನುಕುಲದ ವಿಶಿಷ್ಟ ಗುಣ. ಅನ್ಯಜೀವಿಗಳಿಗಿಂತ ಮಾನವ ಭಿನ್ನ. ಅವನ ಕಲಿಕಾ ಗುಣದಿಂದಾಗಿ, ಆರೋಗ್ಯ ಪೂರ್ಣ ಕಲಿಕಾ ವಿಧಾನಗಳು ಭಾರತೀಯ ಸಂಸ್ಕøತಿಯಲ್ಲಿ ಹಾಸುಹೊಕ್ಕಾಗಿವೆ. ದುರಂತವೆಂದರೆ ಮಾನಸಿಕ ಒತ್ತಡ ಶಾರೀರಿಕ ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ಕಲಿಕಾ ವಿಧಾನಗಳನ್ನು ನಾವು ಇಂದು ನಮ್ಮದಾಗಿಸಿಕೊಳ್ಳುತ್ತಿದ್ದೇವೆ. “ಕಲಿಕೆ” ಎಂಬುದು ಮಾನವನ ವಿಕಾಸಕ್ಕೆ ಪೂರಕವಾಗಬೇಕೇ ಹೊರತು ಅದು ಮನುಜನ ವಿಕಾಸಕ್ಕೆ ಮಾರಕವಾಗಬಾರದು. ಹಾಗಿದ್ದಲ್ಲಿ ಅಂತಹ ಕಲಿಕಾ ವಿಧಾನಗಲಾವುವು ಎಂಬ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ.
ಅದಕ್ಕೆ ಉತ್ತರ ಆಯುರ್ವೇದ ಗ್ರಂಥವಾದ ಚರಕ ಸಂಹಿತೆಯಲ್ಲಿ ಲಭ್ಯ. ಜೀವನದ ವಿವಿಧ ಹಂತಗಳಲ್ಲಿ ಆರೋಗ್ಯ ರಕ್ಷಣೋಪಾಯ ಹಾಗೂ ರೋಗ ನಿವಾರಣೋಪಾಯಗಳನ್ನು ತಿಳಿಸುವ ಈ ಆಯುರ್ವೇದ ಶಾಸ್ತ್ರದಲ್ಲಿ ಕಲಿಕೆಯೂ ಕೂಡ ವಿಕಾಸ ಮಾರ್ಗ ಎಂದು ಹೇಳಲ್ಪಟ್ಟಿದೆ.
“ಕಲಿಕೆ” ಎಂಬುದು ಯಾವಾಗಲೂ ಜ್ಞಾನೇಂದಿಯಗಳ ಮೂಲಕ ಆಗುವಂತಹ ಒಂದು ಪ್ರಕ್ರಿಯೆ. ಕಣ್ಣು, ಕಿವಿ, ಮೂಗು, ನಾಲಿಗೆ ಧರ್ಮ ಇವುಗಳ ಮುಖಾಂತರ ಮನುಜನು ಹೊರಗಿನ ವಾತಾವರಣದ ಜೊತೆ ಸಂಪರ್ಕ ಹೊಂದುತ್ತಾನೆ. ಹಾಗೇ ಪ್ರಪಂಚದ ಜ್ಞಾನವನ್ನು ಹೊಂದುತ್ತಾನೆ. ಈ ಇಂದ್ರಿಯಗಳ ದುರ್ಬಳಕೆ ಆರೋಗ್ಯಕ್ಕೆ ಮಾರಕ.
ಅತಿಯಾದ ದೂರದರ್ಶನ ವೀಕ್ಷಣೆ ನಿಯಂತ್ರಣೆಯೇ ಇಲ್ಲದೇ ಆಹಾರ ಸೇವಿಸುವಿಕೆ ಮುಂತಾದುವುಗಳಿಂದ ಇಂದಿನ ದಿನಗಳಲ್ಲಿ ಆರೋಗ್ಯ ಎಂಬುದು ಮರೀಚಿಕೆಯೇ ಆಗಿದೆ. ಇಂದ್ರಿಯಗಳನ್ನು ಹದವರಿತು ಬಳಸಿದಲ್ಲಿ ನಮಗೆ ಜ್ಞಾನ ಭಂಡಾರವೇ ಲಭ್ಯವಾಗುತ್ತದೆ.
ಪ್ರಾಚೀನ ಭಾರತೀಯ ಸಂಸ್ಕøತಿಯಲ್ಲಿ ‘ಶ್ರುತಿ’ ಎಂದರೆ ‘ಕೇಳುವಿಕೆ’ ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿತ್ತು. ‘ಕಲಿಕೆ’ ಎಂಬುದು ‘ಶ್ರವಣ ಮಾಧ್ಯಮ’ ದ ಮೂಲಕ ನಡೆಯುತ್ತಿತ್ತು. ಶ್ರವಣ ಮಾಧ್ಯವವು ಅತ್ಯಂತ ಪ್ರಭಲ ಮಾಧ್ಯಮ. ಹಾಗಾಗಿಯೇ ಎಂದೋ ಕೇಳಿದ ಹಾಡೂ ಕತೆ ನಮಗೆ ಇಂದಿಗೂ ನೆನಪಿರುತ್ತದೆ. ನೋಡಿದ ದೃಶ್ಯಗಳ ನೆನಪು ಕ್ಷಣಿಕ. ಕೇಳಿದ ಮಾತುಗಳ ನೆನಪು ಚಿರಕಾಲದ್ದು.
ಈ ರೀತಿ ಕೇಳ್ಮೆಯಿಂದ ಕಲಿತರಷ್ಟೇ ಸಾಲದು. ಅದನ್ನು ಪುನ: ಹೇಳುವ ಸಾಮಥ್ರ್ಯ ಬರಬೇಕು. ಇದು ಕಲಿಕೆಯ ಎರಡನೇ ವಿಧಾನ. “ಅಧ್ಯಾಪನ” ಎಂದು ಕರೆಸಿಕೊಳ್ಳಲ್ಪಡುವ ಈ ಕ್ರಮದಿಂದ ಪಡೆದ ಜ್ಞಾನವು ಇನ್ನೂ ಸ್ಪಷ್ಟವಾಗುತ್ತದೆ. ಜೊತೆಗೆ ಸಂವಹನ ಕಲೆಯಾದ ಮಾತುಗಾರಿಗೆ ಕರಗತವಾಗುತ್ತದೆ. ಕಲಿತದ್ದನ್ನು ತಿಳಿಸಿ ಹೇಳಲು ಪ್ರಯತ್ನಿಸಿದಾಗ ಮಾತ್ರ ಕಲಿತ ವಿಷಯ ಇನ್ನಿಷ್ಟು ಸ್ಪಷ್ಟವಾಗುತ್ತದೆ.
ಮುಂದಿನ ಹಂತ ಕಲಿಕೆಯಲ್ಲಿ ‘ತದ್ವಿದ್ಯಾ ಸಂಭಾಷಾ”, ಅಂದರೆ ಕಲಿತ ವಿಷಯದ ಬಗ್ಗೆ ತಿಳಿದವರ ಜೊತೆ ಚರ್ಚಿಸಿ ಆ ವಿಷಯದಲ್ಲಿ ಹೆಚ್ಚಿನ ಪ್ರಾವಿಣ್ಯತೆಯನ್ನು ಪಡೆಯುವುದು. ಇಂದಿನ ವಿದ್ಯಾಭ್ಯಾಸದಲ್ಲಿ ಕಲಿತಿರುವ, ಕಲಿಯುತ್ತಿರುವ ವಿಷಯಗಳ ಬಗ್ಗೆ ಚರ್ಚಿಸುವಂತಹ ಕ್ರಮವೇ ಮಕ್ಕಳಲ್ಲಿ ವಿರಳವಾಗಿದೆ. ತದ್ವಿದ್ಯಾ ಸಂಭಾಷಾ ಎಂಬ ಈ ಕ್ರಮದಿಂದ ಮಕ್ಕಳಲ್ಲಿ ತರ್ಕಬದ್ಧವಾಗಿ ಆಲೋಚಿಸುವ ಶಕ್ತಿ ಜೊತೆ ಜೊತೆಗೇ ಸಹಬಾಳ್ವೆಯ ಗುಣ, ಹೊಂದಿಕೊಳ್ಳುವ ಗುಣಗಳೂ ಬೆಳೆಯುತ್ತವೆ.
ಕೇವಲ ‘ಬುದ್ಧಿಶಕ್ತಿ’ ಯನ್ನು ಹೆಚ್ಚಿಸುವ ಇಂದಿನ ಕಲಿಕಾ ವಿಧಾನಗಳು ಮನುಷ್ಯನ ಪರಿಪೂರ್ಣ ವಿಕಾಸಕ್ಕೆ ಸಹಕಾರಿಯಾಗದು. “ಅಧ್ಯಯನ, ಅಧ್ಯಾಪನ ಹಾಗೂ ತದ್ವಿದ್ಯಾ ಸಂಭಾಷಾ” ಎಂಬ ಈ ಮೂರೂ ಕಲಿಕಾ ವಿಧಾನಗಳನ್ನು ಇಂದಿನ ವಿದ್ಯಾಭ್ಯಾಸದಲ್ಲಿ ಅಳವಡಿಸಿದ್ದೇ ಆದಲ್ಲಿ ಮಗುವಿನ ಪರಿಪೂರ್ಣ ವಿಕಾಸ ಸಾಧ್ಯ. ಒತ್ತಡಕಾರಿ ಕಲಿಕಾ ವಿಧಾನಗಳನ್ನು ನಮ್ಮದಾಗಿಸಿಕೊಳ್ಳುವುದಕ್ಕಿಂತ ವಿಕಾಸಕಾರಿ ಕಲಿಕಾ ವಿಧಾನಗಳು ನಮಗೆ ಬೇಕಲ್ಲವೇ? ಆಯುರ್ವೇದವು ಜೀವನ ವಿಕಾಸಕಾರಿ. ಇಂತಹ ಜೀವನವನ್ನು ಉನ್ನತಿಯತ್ತ ಕೊಂಡೊಯ್ಯವ, ಕಲಿಕಾ ವಿಧಾನಗಳನ್ನು ನಮ್ಮದಾಗಿಸಿಕೊಳ್ಳೋಣ ಉನ್ನತಿಯ ಉತ್ತುಂಗಕ್ಕೇರೋಣ.
ಓದೋಣ, ಇಂದ್ರಿಯಗಳ ಮೂಲಕವೇ ಕಲಿಯೋಣ, ಕಲಿತಿದ್ದನ್ನು ಹೇಳೋಣ, ಜೊತೆಗೇ ಚರ್ಚಿಸೋಣ. ಕಲಿತು, ಓದಿ, ಹೇಳಿ, ಚರ್ಚಿಸಿ ಪರಿಪೂರ್ಣ ವಿಷಯ ಜ್ಞಾನ ಪಡೆಯೋಣ, ತನ್ಮೂಲಕ ವಿಕಾಸ ಹೊಂದೋಣ.
ಡಾ. ಶ್ರೀವತ್ಸ.