Home Health ಕುಮಾರಿ (ಲೋಳೆಸರ)

ಕುಮಾರಿ (ಲೋಳೆಸರ)

0

ಹೆಸರೇ ಸೂಚಿಸುವಂತೆ ಈ ಗಿಡವು ಕುಮಾರಿಯರ (ಹೆಂಗಸರ) ಸಮಸ್ಯೆಗಳನ್ನು ದೂರ ಮಾಡುವುದು ಅಲ್ಲದೆ ಇದರ ಪೌಷ್ಟಿಕಾಂಶ ಗುಣಗಳಿಂದ ಇದನ್ನು ಸೇವಿಸುವವರಿಗೆ ಚಿರ ಯೌವ್ವನವನ್ನು ನೀಡುವುದು ಅಂದರೆ ಕೌಮಾರ್ಯವನ್ನು ಉಂಟುಮಾಡುವುದು.
Aloe Vera ಎಂಬ ಹೆಸರಿನಿಂದ ಪರಿಚಿತವಾಗಿರುವ ಈ ಸಸ್ಯವನ್ನು ಶ್ಯಾಂಪು, ಕ್ರೀಮ್ ಹಾಗೂ ಸಾಬೂನುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ಇದರ ಲ್ಯಾಟಿನ್ ಹೆಸರು Aloe barbadensis “ಲಿಲಿಯೇಷಿಯೆ” ಎನ್ನುವ ಸಸ್ಯ ಶಾಸ್ತ್ರೀಯ ಕುಟುಂಬ ವರ್ಗಕ್ಕೆ ಸೇರಿದೆ.
ಸಂಸ್ಕøತದ ಇತರೇ ಹೆಸರುಗಳು
1. ಕುಮಾರಿ: ಈ ಗಿಡವು ಶೀತ ಗುಣವನ್ನು ಹೊಂದಿದ್ದು, ಸ್ವಲ್ಪವೇ ನೀರಿನ ಅಂಶದಲ್ಲೂ ಬೆಳೆಯುತ್ತದೆ. ಅಲ್ಲದೆ ಯಾವಾಗಲೂ ಚಿರ ಯೌವ್ವನೆಯಂತೆ ನಳನಳಿಸುತ್ತಿರುತ್ತದೆ. ಈ ಗಿಡವು ತನ್ನ ರಾಸಾಯನಿಕ ಗುಣಗಳಿಂದ ಶರೀರಕ್ಕೆ ಬಲ ಮತ್ತು ಪುಷ್ಠಿಯನ್ನು ಕೊಡುತ್ತದೆ.
2. ಘೃತ ಕುಮಾರಿ: ಇದರ ಎಲೆಯಿಂದ ತುಪ್ಪದಂತಿರುವ ಸ್ರಾವವು ಸ್ರವಿಸುತ್ತದೆ. ಆದ್ದರಿಂದ ಈ ಹೆಸರು.
3. ಗೃಹಕನ್ಯಾ: ಈ ಸಸ್ಯವು ತನ್ನ ಸಿಹಿ ಇತ್ಯಾದಿ ಗುಣಗಳಿಂದ ಮನೆಯಲ್ಲಿ ಕನ್ಯೆಯ ಸಮಾನವಾಗಿರುತ್ತದೆ ಅಥವಾ ಕನ್ಯೆಯರ ರೀತಿಯಲ್ಲಿ ಮೃದು ಗುಣಗಳನ್ನು ಹೊಂದಿರುವುದರಿಂದ ಈ ಹೆಸರಿನಿಂದ ಕರೆಯುವರು.
4. ಸಹಾ: ಈ ಗಿಡವು ತೀವ್ರವಾದ ಬಿಸಿಲನ್ನು ಸಹಿಸುತ್ತದೆ.
5. ಕನ್ಯಾ: ಈ ಗಿಡವು ರಸಾಯನ ಗುಣಗಳಿಂದ ಪ್ರಕಾಶಮಾನವಾಗಿರುತ್ತದೆ.
ಉಪಯುಕ್ತ ಅಂಗ
1. ಪತ್ರ, ಪುಷ್ಪ.
2. ಸ್ತ್ರೀಯರಲ್ಲಿ ಮುಟ್ಟಿನ ಸ್ರಾವ ಸರಿಯಾದ ಪ್ರಮಾಣದಲ್ಲಿ ಆಗುತ್ತಿಲ್ಲದಿದ್ದಲ್ಲಿ ಇದರ ತಿರುಳನ್ನು ‘ಕಾಸೀಸ’ ಹಾಗೂ ‘ಟಂಕಣದ’ (ಆಯುರ್ವೇದ ಔಷಧಿ) ಜೋತೆಗೆ ಸೇವಿಸಿದರೆ ಸ್ರಾವವು ಸರಿಯಾದ ಪ್ರಮಾಣದಲ್ಲಿ ಆಗುವುದು.
3. ಜಲೋದರ (ascites) ದಲ್ಲಿ ಲೋಳೆಸರದ ತಿರುಳು ಅಥವಾ ರಸವನ್ನು ನಿತ್ಯವೂ ಸೇವಿಸುವುದು ಹಿತಕರ.
4. ದೇಹದ ಯಾವುದೇ ಭಾಗದಲ್ಲಿ ಊತವಿದ್ದರೆ ಲೋಳೆಸರದ ತಿರುಳನ್ನು ಬಿಸಿ ಮಾಡಿ ಆ ಭಾಗಕ್ಕೆ ಲೇಪಿಸುವುದು ಒಳ್ಳೆಯದು.
5. ಕಾಮಾಲೆಯಲ್ಲಿ ಲೋಳೆಸರದ ತಿರುಳನ್ನು ಅರಿಶಿಣದೊಂದಿಗೆ ಸೇರಿಸಿ ಸೇವಿಸುವುದು ಉತ್ತಮ.
6. ಲೋಳೆಸರದ ತಿರಳನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ಮುಖವನ್ನು ತೊಳೆಯುವುದರಿಂದ ಮುಖವು ಕಾಂತಿಯುಕ್ತವಾಗುವುದು.
7. ಲೋಳೆಸರದ ತಿರುಳನ್ನು ಕೂದಲ ಬುಡಕ್ಕೆ ಹಚ್ಚಿ, ತಿಕ್ಕಿ ಒಂದು ಘಂಟೆಯ ನಂತರ ಸ್ನಾನ ಮಾಡುವುದರಿಂದ ತಲೆ ಹೊಟ್ಟು, ತಲೆ ಕೂದಲು ಉದುರುವಿಕೆಯು ನಿಲ್ಲುವುದು, ಅಲ್ಲದೆ ಕೂದಲು ಕಾಂತಿಯುಕ್ತವಾಗುವುದು. ಕೂದಲಿಗೆ ಕಂಡೀಶನರ್ ರೀತಿಯಲ್ಲಿ ಕೆಲಸ ಮಾಡುವುದು.
8. ಮಲ ವಿಸರ್ಜನೆ ಸರಿಯಾಗಿ ಆಗದಿದ್ದಲ್ಲಿ ಇತರೇ ವಾತಾನುಲೋಮಕ ಔಷಧಿಗಳ ಜೊತೆಗೆ ಇದನ್ನು ಬಳಸುವುದರಿಂದ ಮಲ ವಿಸರ್ಜನೆ ಆಗುತ್ತದೆ.
ಡಾ. ನಾಗಶ್ರೀ ಕೆ.ಎಸ್.