ಮಾತು, ಆಹಾರಸೇವನೆ ಈ ಎರಡು ಕಾರ್ಯಗಳಲ್ಲಿ ನಾಲಿಗೆಯು ಪ್ರಧಾನ ಪಾತ್ರವನ್ನು ವಹಿಸುತ್ತದೆ. ಎರಡೂ ಕೆಲಸಗಳು ಹಿತಮಿತವಾಗಿದ್ದರೆ ಮಾತ್ರ ಚೆನ್ನ. ಮಾತಿನ ಬಗ್ಗೆ “ಸದ್ವತ್ತವಿರಲಿ ಸನ್ಮತಿಗೆ” ಎಂಬ ಭಾಗದಲ್ಲಿ ವಿವರಣೆ ನೀಡಲಾಗಿದೆ. ಆಹಾರಕ್ಕೆ ಸಂಬಂಧಿಸಿದ ವಿಶೇಷ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.
1. ಹೆಚ್ಚಿನ ಪ್ರಮಾಣದಲ್ಲಿ ಅತಿಗಟ್ಟಿಯಾದ ಅಥವಾ ಕೇವಲ ಮೆತ್ತಗಿರುವ ಆಹಾರ ಸೇವನೆ ಮಾಡುವುದರಿಂದ ಹಲ್ಲಿನ ಆರೋಗ್ಯದಲ್ಲಿ ಏರುಪೇರಾಗುತ್ತದೆ.
3. ಹುಳಿ ಅಂಶವಿರುವ ಹಣ್ಣುಗಳಾದ ಕಿತ್ತಳೆ, ದ್ರಾಕ್ಷಿ, ಮೂಸಂಬಿ, ದಾಳಿಂಬೆ ಮೊದಲಾದುವುಗಳ ಜೊತೆ ಹಾಲನ್ನು ಸೇವಿಸಬಾರದು.
4. ಅತಿ ಉಪ್ಪು-ಹುಳಿ-ಖಾರ-ಕಹಿ-ಒಗರು: ಈ ರುಚಿಗಳ ಸೇವನೆ ಹಿತವಲ್ಲ.
5. ಬೇಸಗೆ ಕಾಲದಲ್ಲಿ ಅತಿ ಉಪ್ಪು-ಹುಳಿ-ಖಾರದ ಸೇವನೆ ಹಾಗೆಯೇ ಉಷ್ಣಪ್ರದೇಶದಲ್ಲಿ ಅತಿಯಾಗಿ ಉಪ್ಪು-ಹುಳಿಖಾರವಿರುವ ಆಹಾರ ಪದಾರ್ಥಗಳ ಸೇವನೆ ಒಳ್ಳೆಯದಲ್ಲ.
6. ಶೀತಕಾಲದಲ್ಲಿ ಅತಿ ಶೀತವಿರುವ ಆಹಾರ; ಉಷ್ಣಕಾಲದಲ್ಲಿ ಅತಿ ಬಿಸಿಯಾಗಿರುವ ಆಹಾರವನ್ನು ಸೇವಿಸಬಾರದು.
7. ಕೇವಲ ಮನಸ್ಸಿಗೆ ಹಿತವಾಗಿರುವ ಆಹಾರವನ್ನು ಸೇವಿಸಬಾರದು. ಶರೀರಕ್ಕೆ ಒಗ್ಗುತ್ತದೆಯೇ ಎಂಬುದನ್ನು ಗಮನಿಸಿ ಅದಕ್ಕೆ ತಕ್ಕಂತಹ ಆಹಾರವನ್ನು ಸೇವಿಸಬೇಕು.
8. ಮೊಳಕೆ ಕಾಳು, ಎಣ್ಣೆ ಪದಾರ್ಥಗಳು ಹಾಗೂ ಸಿಹಿತಿಂಡಿಗಳನ್ನು ಏಕಕಾಲದಲ್ಲಿ ಸೇವಿಸುವುದು ಹಿತವಲ್ಲ ಮತ್ತು ಆರೋಗ್ಯಕರವಲ್ಲ.
9. ಜೇನುತುಪ್ಪವನ್ನು ಬಿಸಿ ಮಾಡಿ ಆಗಲೀ, ಬಿಸಿ ಆಹಾರದ ಜೊತೆಗಾಗಲೀ ಸೇವಿಸಬಾರದು.
10. ಜೀರ್ಣಿಸಿಕೊಳ್ಳಲು ಆಗುವಷ್ಟು ಪ್ರಮಾಣದಲ್ಲಿ ಆಹಾರವನ್ನು ಸೇವಿಸಬೇಕು.
11. ಊಟಕ್ಕೆ ಮೊದಲು ಅಥವಾ ಊಟವಾದ ನಂತರ ಒಮ್ಮೆಲೇ ನೀರನ್ನು ಸೇವಿಸುವುದು ಹಿತವಲ್ಲ. ಊಟದ ಮಧ್ಯೆ ಸ್ವಲ್ಪ ಸ್ವಲ್ಪವಾಗಿ ನೀರನ್ನು ಸೇವಿಸುವುದು ಒಳ್ಳೆಯದು.
12. ಒಮ್ಮೆ ಸೇವಿಸಿದ ಆಹಾರವು ಜೀರ್ಣವಾದ ನಂತರವೇ ಪುನ: ಆಹಾರವನ್ನು ಸೇವಿಸಬೇಕು.
13. ಆಗಾಗ್ಗೆ ಬೆಚ್ಚಗಿನ ನೀರು ಸೇವನೆಯಿಂದ ಜೀರ್ಣಶಕ್ತಿ ಹೆಚ್ಚುತ್ತದೆ.
14. ಬೇಯಿಸಿದ ಆಹಾರ, ಹಸಿಯಾದ ಆಹಾರ, ಹುರಿದು ತಯಾರಿಸಿದ ಆಹಾರ, ಕರಿದು ತಯಾರಿಸಿದ ಆಹಾರ ಹೀಗೆ ನಾಲ್ಕು ರೀತಿಯಲ್ಲಿ ತಯಾರಿಸಿದ ಆಹಾರವನ್ನು ಹದವರಿತು ಸೇವಿಸಬೇಕು.
16. ಆಹಾರದಲ್ಲಿ ಇರಬೇಕಾದ ಘಟಕಗಳಾದ ಏಕದಳ ಧಾನ್ಯಗಳು (ಅಕ್ಕಿ, ರಾಗಿ, ಜೋಳ, ಗೋಧಿ, ನವಣೆ, ಸಜ್ಜೆ ಇತ್ಯಾದಿ) ದ್ವಿದಳ ಧಾನ್ಯಗಳು (ಹೆಸರು, ಕಡಲೆ, ಹುರುಳಿ, ಉದ್ದುಇತ್ಯಾದಿ) ಆಕಳ ಹಾಲು, ಆಕಳ ತುಪ್ಪ ಕಾಲಾನುಸಾರವಾಗಿ ಸಿಗುವ ಹಣ್ಣು-ಸೊಪ್ಪು-ತರಕಾರಿಗಳು, ನೀರು-ಎಲ್ಲವನ್ನೂ ಸರಿಯಾದ ರೀತಿಯಲ್ಲಿ ಸಂಸ್ಕರಿಸಿಕೊಂಡು ಸೇವಿಸಬೇಕು.
17. ನಿಗದಿತ ಸಮಯದಲ್ಲಿ ಮನಸ್ಸಿಗೆ ಅನುಕೂಲಕರವಾದ ವಾತಾವರಣದಲ್ಲಿ ಮನೆಯವರೊಡಗೂಡಿ ಆಹಾರವನ್ನು ಸೇವಿಸಬೇಕು.
18. ಸುಲಭವಾಗಿ ಜೀರ್ಣಿಸುವ ಆಹಾರ ಪದಾರ್ಥಗಳು (ಹಣ್ಣು, ಬೇಯಿಸಿದ ಆಹಾರ) ಹಾಗೂ ಜೀರ್ಣಿಸಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುವ ಆಹಾರ ಪದಾರ್ಥಗಳು (ಜಿಡ್ಡಿನ ತಿನಿಸುಗಳು, ಸಿಹಿ ತಿನಿಸುಗಳು) ಎರಡನ್ನೂ ಸೇರಿಸಿ ಸೇವಿಸುವುದು ಒಳ್ಳೆಯದಲ್ಲ.
ಡಾ. ಶ್ರೀವತ್ಸ