Home Health ಸದ್ವಋತ್ತ ಬೇಕು ಸನ್ಮತಿಗೆ

ಸದ್ವಋತ್ತ ಬೇಕು ಸನ್ಮತಿಗೆ

0

ಆಹಾರ, ವಿಹಾರ ಮತ್ತು ಆಚಾರ-ಈ ಮೂರು ಬದುಕಿನಲ್ಲಿ ಅಳವಡಿಸಿಕೊಂಡಾಗ ಬದುಕು ಸುಗಮವಾಗಿ ಸಾಗುತ್ತದೆ. ಆಹಾರ, ವಿಹಾರಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಾಗಿದೆ. ಆಚಾರವು ವ್ಯಕ್ತಿಯ ಜೀವನಕ್ಕೆ ಬಹಳ ಅಗತ್ಯ. ಆಯುರ್ವೇದದಲ್ಲಿ ಸದ್ವøತ್ತ ಎಂಬ ವಿಷಯದಡಿಯಲ್ಲಿ ಆರೋಗ್ಯಕಾರಿ ವಿಚಾರದ ಬಗ್ಗೆ ತಿಳಿಸಲಾಗಿದೆ. ಅವುಗಳಲ್ಲಿ ಕೆಲವನ್ನು ಈ ಸಂದರ್ಭದಲ್ಲಿ ಇಲ್ಲಿ ತಿಳಿದುಕೊಳ್ಳೋಣ.
1. ಗುರುಹಿರಿಯರನ್ನು ಗೌರವಿಸಬೇಕು. ದೇವರನ್ನು ಪೂಜಿಸಬೇಕು.
2. ಶರೀರವನ್ನು ಶುದ್ಧವಾಗಿಟ್ಟುಕೊಳ್ಳಬೇಕು.
3. ಐದು ದಿವಸ ಅಥವಾ ವಾರಕ್ಕೊಮ್ಮೆ ಕೈ ಬೆರಳು ಹಾಗೂ ಕಾಲ್ಬರಳಿನ ಉಗುರುಗಳನ್ನು ಕತ್ತರಿಸಿಕೊಳ್ಳಬೇಕು.
4. ಸದಾ ಶುಭ್ರವಾದ ವಸ್ತ್ರಗಳನ್ನೇ ಧರಿಸಬೇಕು. ಆಯಾ ಸಮಯ, ಸಂದರ್ಭಕ್ಕೆ ಅನುಸಾರವಾಗಿ ಬಟ್ಟೆಗಳನ್ನು ಧರಿಸಬೇಕು.
5. ಮಾತು ಹಿತ-ಮಿತವಾಗಿರಬೇಕು. ನಮ್ಮ ಮಾತಿನಿಂದ ಬೇರೆಯವರಿಗೆ ನೋವಾಗಬಾರದು.
6. ಸಮಯಕ್ಕೆ ಅನುಸಾರವಾಗಿ ಹಿತಮಿತವಾಗಿ ಮಾತನಾಡಬೆಕು.
7. ಮಾತಿನಲ್ಲಿ ಯಾವಾಗಲೂ ನಿಜಾಂಶವಿರಬೇಕು.
8. ಸದಾ ಉತ್ಸಾಹದಿಂದ ಶಾಂತ ರೀತಿಯಿಂದ ಬದುಕಬೇಕು.
9. ಬೇರೆಯವರ ಯಶಸ್ಸನ್ನು ಕಂಡು ಹೊಟ್ಟೆಕಿಚ್ಚು ಪಡಬಾರದು. ನಾವೂ ಅವರಂತೆ ಆಗಲು ಅನುಸರಿಸಬೇಕಾದ ಮಾರ್ಗವನ್ನು ತಿಳಿದು ಅಳವಡಿಸಿಕೊಳ್ಳಬೇಕು.
10. ಮಲಿನವಾದ ಸ್ಥಳ, ದುಷ್ಟರ ಸಹವಾಸ ಒಳ್ಳೆಯದಲ್ಲ.
11. ಆಯಾಸವಾಗುವಷ್ಟು ಶಾರೀರಕ ವ್ಯಾಯಾಮ ಮತ್ತು ಮಾನಸಿಕ ಚಟುವಟಿಕೆಗಳು ಒಳ್ಳೆಯದಲ್ಲ.
12. ಯಾರೊಂದಿಗೂ ವೈರತ್ವವನ್ನು ಕಟ್ಟಿಕೊಳ್ಳುವುದು ಸರಿಯಲ್ಲ.
13. ತಪ್ಪು ಮಾಡಿದವರನ್ನು ಅಥವಾ ಯಾವುದಾದರೂ ಸಂದರ್ಭದಲ್ಲಿ ನಿಮಗೆ ಏನಾದರೂ ತೊಂದರೆ ಕೊಟ್ಟವರನ್ನು ಕ್ಷಮಿಸಬೇಕು.
14. ಸೋಲು ಗೆಲುವುಗಳನ್ನು ಒಂದೇ ರೀತಿಯಲ್ಲಿ ಸ್ವೀಕರಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ್ದಲ್ಲಿ ಅಥವಾ ಕಡಿಮೆಯಾಗಿದ್ದಲ್ಲಿ-ಹೀಗೆ ಎಲ್ಲಾ ಸಂದರ್ಭಗಳನ್ನೂ ಒಂದೇ ರೀತಿಯಲ್ಲಿ ನೋಡುವ ವಿಧಾನವನ್ನು ಬೆಳೆಸಿಕೊಳ್ಳಬೇಕು.
15. ಬೇರೆಯವರ ವಸ್ತುಗಳಿಗೆ ಆಸೆಪಡುವುದಾಗಲೀ ಅಥವಾ ಬೇರೆಯವರ ವಸ್ತುಗಳನ್ನು ಅವರ ಅನುಮತಿಯಿಲ್ಲದೆ ಬಳಸುವುದಾಗಲಿ ಒಳ್ಳೆಯದಲ್ಲ.
16. ನಿಮ್ಮ ಪ್ರತಿಕ್ರಿಯೆ ಸಂದರ್ಭಕ್ಕೆ ಅನುಸಾರವಾಗಿಬೇಕು.
17. ಅತಿ ಜೋರಾಗಿ ನಗುವುದು, ಮಾತನಾಡುವುದು, ಬೇರೆಯವರನ್ನು ಅಪಹಾಸ್ಯ ಮಾಡುವುದು ಒಳ್ಳೆಯದಲ್ಲ.
18. ನಿಮ್ಮ ಪ್ರತಿಕ್ರಿಯೆ ಸಂದರ್ಭಕ್ಕೆ ಅನುಸಾರವಾಗಿರಬೇಕು.
19. ಕಿವಿ, ಮೂಗು, ಕಣ್ಣುಗಳಿಂದ ಬರುವ ಕಿಟ್ಟವನ್ನು ಸರಿಯಾಗಿ ಸ್ವಚ್ಛಗೊಳಿಸಿಕೊಳ್ಳಬೇಕು.
20. ಸಮಯಕ್ಕೆ ಸರಿಯಾಗಿ ಮಲ-ಮೂತ್ರಗಳನ್ನು ವಿಸರ್ಜನೆ ಮಾಡಬೇಕು. ಮಲ-ಮೂತ್ರ ಪ್ರವೃತ್ತಿಗಳನ್ನು ತಡೆಯಬಾರದು.
21. ಹಸಿವು ನೀರಡಿಕೆಗಳನ್ನು ತಡೆಯಬಾರದು. ಹಸಿವಾದಾಗ ಆಹಾರವನ್ನು ಸೇವಿಸಬೇಕು. ನೀರಡಿಕೆಯಾದಾಗ ನೀರನ್ನು ಕುಡಿಯಬೇಕು.
22. ಯಾರಾದರೂ ಅವಮಾನ ಮಾಡಿದ ಪಕ್ಷದಲ್ಲಿ, ಬೈದಿದ್ದಲ್ಲಿ ಅಥವಾ ಅಪಹಾಸ್ಯ ಮಾಡಿದ್ದಲ್ಲಿ-ಅಂಥ ಸಂದರ್ಭಗಳನ್ನು ಮರೆತುಬಿಡಬೇಕು. ತಪ್ಪಿದ್ದಲ್ಲಿ ತಿದ್ದಿಕೊಂಡು, ಸರಿಯಾಗಿದ್ದ ಪಕ್ಷದಲ್ಲಿ ಹಾಗೆಯೇ ಮುಂದುವರೆಯಬೇಕು.
23. ಸಮಯವನ್ನು ವ್ಯರ್ಥವಾಗಿ ಕಳೆಯದೆ ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳಬೇಕು.
24. ಯವುದೇ ಕೆಲಸವನ್ನಾದರೂ ಸರಿಯಾಗಿ ಆಲೋಚಿಸದೆ, ಯೋಜನೆ ಮಾಡಿಕೊಳ್ಳದೇ ಮಾಡಬಾರದು.
25. ಯಾರನ್ನಾದರೂ ಅತಿಯಾಗಿ ಅವಮಾನಿಸುವುದು ಅಥವಾ ಅತಿಯಾಗಿ ನಂಬುವುದು-ಎರಡೂ ಒಳ್ಳೆಯದಲ್ಲ.
26. ಯಾವುದೇ ಸಂದರ್ಭದಲ್ಲಾಗಲೀ ಅತಿಯಾಗಿ ಖುಷಿಯಾಗಿರುವುದಾಗಲೀ, ಅತಿ ದು:ಖ-ಬೇಸರ ಪಡುವುದಾಗಲೀ ಒಳ್ಳೆಯದಲ್ಲ. ಎಲ್ಲ ಭಾವನೆಗಳೂ ಹಿತಮಿತವಾಗಿರಬೇಕು.
27. ಪ್ರತಿದಿನವೂ ಪ್ರಾರ್ಥನೆ ಮೊದಲಾದ ಹಿರಿಯರು ತಿಳಿಹೇಳುವ ಧಾರ್ಮಿಕ ವಿಧಾನಗಳನ್ನು ಪಾಲಿಸುವುದು ಒಳ್ಳೆಯದು.
28. ಜ್ಞಾನೇಂದ್ರಿಯಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಅವುಗಳನ್ನು ಅತಿಯಾಗಿ ಬಳಸುವುದು, ಬಳಸದೇ ಇರುವುದು, ಅಸಮರ್ಪಕವಾದ ರೀತಿಯಲ್ಲಿ ಬಳಸುವುದು ರೋಗಕಾರಕ.
29. ದೂರದರ್ಶನ, ಗಣಕಯಂತ್ರಗಳನ್ನು ಅತಿಯಾಗಿ ನೋಡುವುದು, ಅತಿ ಹತ್ತಿರದಿಂದ ನೋಡುವುದು ಕಣ್ಣುಗಳಿಗೆ ಅಹಿತಕರ. ಪ್ರಕೃತಿಯ ಸುಂದರ ದೃಶ್ಯ, ಬೆಳಗಿನ ಮೂಡುವ ಸೂರ್ಯ ಸಂಜೆ ಮುಳುಗುವ ಸೂರ್ಯ, ಉದ್ಯಾನವನ, ಹಸಿರು ಗಿಡ, ಪಶುಪಕ್ಷಿಗಳ ವೀಕ್ಷಣೆ ಕಂಗಳಿಗೂ ಹಿತ, ಮನಸ್ಸಿಗೂ ಮುದ.
30. ಶ್ರವಣೇಂದ್ರಿಯ (ಕಿವಿ)ವನ್ನು ಕ್ರಮವರಿತು ಬಳಸಬೇಕು. ಅತಿ ಜೋರಾದ ಶಬ್ದವನ್ನು ಕೇಳುವುದು, ಅತಿಯಾದ ದೂರವಾಣಿಯ ಬಳಕೆ, ಇಯರ್ ಫೋನ್ ಬಳಸಿ ಹಾಡು ಕೇಳುವುದು ಮೊದಲಾದುವುಗಳಿಂದ ಕೇಳುವ ಶಕ್ತಿ ಕಡಿಮೆ ಆಗುತ್ತದೆ. ಸುಶ್ರಾವ್ಯವಾದ ಹಾಡುಗಳು, ಮೆಲುದನಿಯ ಮಾತು, ಹಕ್ಕಿಗಳ ಕಲರವ, ಮೃದುವಾಗಿ ಶಬ್ದವನ್ನು ಹೊರಡಿಸುವ ವಾದ್ಯಗಳನ್ನು ಕೇಳುವುದರಿಂದ ಕಿವಿಯ ಶ್ರವಣ ಸಾಮಥ್ರ್ಯವೂ ಹೆಚ್ಚುತ್ತದೆ. ಮನಸ್ಸೂ ಶಾಂತವಾಗಿರುತ್ತದೆ.
31. ಅತಿಯಾದ ಗಂಧ (ಸುಗಂಧ/ದುರ್ಗಂಧ) ಯುಕ್ತ ವಸ್ತುಗಳನ್ನು ಬಳಸುವುದು, ಆಘ್ರಾಣಿಸುವುದು (ಸೆಂಟ್, ಡಿಯೋಡರೆಂಟ್, ರೂಮ್ ಫ್ರೆಶನರ್‍ಗಳ ಅತಿಯಾದ ಬಳಕೆ) ಇವೆಲ್ಲ ಆರೋಗ್ಯಕ್ಕೆ ಹಾನಿಕರ, ಸುಗಂಧ ಪುಷ್ಪಗಳಾದ ಮಲ್ಲಿಗೆ, ಸಂಪಿಗೆ ಮೊದಲಾದವುಗಳನ್ನು ಆಘ್ರಾಣಿಸುವುದು, ಕರ್ಪೂರ, ಶ್ರೀಗಂಧಗಳ ಸುವಾಸನೆಯನ್ನು ಆಘ್ರಾಣಿಸುವುದು ಮನಸ್ಸಿಗೆ ಮುದ ನೀಡುತ್ತದೆ. ಯಾವುದೇ ಮಾನಸಿಕ ಒತ್ತಡ ಉಂಟಾಗದಂತೆ ನೈಸರ್ಗಿಕ ಸುಗಂಧ ದ್ರವ್ಯಗಳು ಮಾಡುತ್ತವೆ.
32. ಸೇವಿಸುವಂಥ ಆಹಾರದಲ್ಲಿ ಸಿಹಿ, ಕಹಿ, ಖಾರ, ಹುಳಿ, ಉಪ್ಪು, ಒಗರು-ಈ ಆರೂ ರುಚಿ (ರಸ) ಗಳಿರಬೇಕು. ಯಾವುದೇ ಒಂದು ರುಚಿ (ರಸ)ಯ ಅತಿಯಾದ ಬಳಕೆ ಒಳ್ಳೆಯದಲ್ಲ.
33. ಸ್ವಾಭಾವಿಕ ಸೌಂದರ್ಯ ಪ್ರಸಾದನ (ಪೌಡರ್, ಸ್ನೋ, ಮೇಕಪ್ ದ್ರವ್ಯಗಳು) ಗಳ ಅತಿಯಾದ ಬಳಕೆ ಒಳ್ಳೆಯದಲ್ಲ.
34. ಜ್ಞಾನೇಂದ್ರಿಯಗಳಾದ ಕಣ್ಣು-ಕಿವಿ-ಮೂಗು-ನಾಲಿಗೆ ಹಾಗೂ ಚರ್ಮಗಳನ್ನು ಅತಿಯಾಗಿ ಉತ್ತೇಜಿಸುವಂತಹ ಯಾವುದೇ ಕ್ರಿಯೆ ಅಥವಾ ಯಾವುದೇ ವಸ್ತುವಿನ ಬಳಕೆ ಬೇಡ.
35. ಆಹಾರವನ್ನು ಸೇವಿಸುವಾಗ ಮಾತನಾಡುವದು, ನಗುವುದು, ಕೂರದರ್ಶನ ವೀಕ್ಷಣೆ-ಇವೆಲ್ಲ ಒಳ್ಳೆಯದಲ್ಲ.
36. ಶುದ್ಧವಾದ ವಾತಾವರಣದಲ್ಲಿ, ಮನೆಯವರೆಲ್ಲರ ಜೊತೆ, ಶಾಂತವಾದ ಮನಸ್ಸಿನಿಂದ ಆಹಾರವನ್ನು ಸೇವಿಸಬೇಕು.
37. ಬೆಚ್ಚಗಿರುವ, ದ್ರವಾಂಶವಿರುವ, ತಾಜಾ ಆಹಾರವನ್ನು ಸೇವಿಸಬೇಕು.
38. ಅತಿ ನಿಧಾನವಾಗಿ, ಅತಿ ಶೀಘ್ರವಾಗಿ ಆಹಾರವನ್ನು ಸೇವಿಸಬಾರದು.
39. ಸಭೆಗಳಲ್ಲಿ, ನಾಲ್ಕಾರು ಜನ ಸೇರಿದ ಸ್ಥಳಗಳಲ್ಲಿ ಗೌರವಯುತವಾಗಿ ನಡೆದುಕೊಳ್ಳಬೇಕು. ಶರೀರದ ಭಂಗಿ, ಮಾತನಾಡುವ ರೀತಿ ಎಲ್ಲರಿಗೂ ಒಪ್ಪುವಂತಿರಬೇಕು.
40. ಸಭೆ ಸಮಾರಂಭಗಳಲ್ಲಿ ಅನವಶ್ಯವಾದ ಶರೀರದ ಚೇಷ್ಟೆಗಳು (ವಿನಾಕಾರಣ ಕೈ-ಕಾಲು ಆಡಿಸುವುದು, ಕಣ್ಣುರೆಪ್ಪೆಗಳನ್ನು ಆಡಿಸುವುದು, ಹುಬ್ಬಿನ ಚಲನೆ ಇತ್ಯಾದಿ), ಅತಿ ಜೋರಾದ, ಸಂದರ್ಭಕ್ಕೆ ಹೊಂದದ ಮಾತುಗಳು ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ.
41. ಜನರಿರುವ ಸ್ಥಳಗಳಲ್ಲಿ ಜೋರಾಗಿ ಆಕಳಿಸುವುದು, ಕೂಗುವುದು, ವಿನಾಕಾರಣ ಕೋಪಗೊಂಡು ಕಿರುಚಾಡುವುದು ತರವಲ್ಲ.
42. ಮಾತನಾಡಬೇಕಾದಲ್ಲಿಮಾತನಾಡದಿರುವುದು, ಮೌನವಾಗಿರಬೇಕಾದಲ್ಲಿ ಮಾತನಾಡುವುದು ಎರಡೂ ಸರಿಯಲ್ಲ.
43. ಅತಿಯಾದ ಮಾತು, ಸುಳ್ಳುಮಾತು, ಬೇರೆಯವರನ್ನು ನೋಯಿಸುವಂತಹ ಮಾತು, ಹಿತವೆನಿಸದ ಮಾತು-ಇವುಗಳನ್ನು ಆಡಬಾರದು.
44. ನಿದ್ದೆ ಬರುವಾಗ ನಿದ್ದೆ ಮಾಡಬೇಕು. ಅಕಸ್ಮಾತ್ ರಾತ್ರಿ ನಿದ್ದೆಗೆಟ್ಟಿದ್ದಲ್ಲಿ ಮರುದಿನ ಹಗಲು ಆಹಾರ ಸೇವನೆಗೂ ಮೊದಲು ನಿದ್ದೆ ಮಾಡಿ ವಿಶ್ರಾಂತಿ ಪಡೆಯುವುದು ಒಳ್ಳೆಯದು.
45. ಹಗಲು ಹೊತ್ತು ಆಹಾರ ಸೇವನೆಯ ನಂತರ ನಿದ್ದೆ ಮಾಡುವುದು ಹಿತವಲ್ಲ. ವಿಶ್ರಾಂತಿ ಬೇಕಿನಿಸಿದ ಪಕ್ಷದಲ್ಲಿ ಆಹಾರ ಸೇವನೆಗೂ ಮೊದಲು ವಿಶ್ರಾಂತಿ ಪಡೆಯುವುದು ಹಿತಕರ.
46. ಯಾವುದೇ ಕೆಲಸವನ್ನಾದರೂ ಶ್ರದ್ಧೆಯಿಂದ ಮಾಡಬೇಕು. ದೊಡ್ಡ ಕೆಲಸವಾಗಲೀ ಸಣ್ಣ ಕೆಲಸವಾಗಲೀ-ಅದನ್ನು ಮನಸ್ಸಿಟ್ಟು ಮಾಡಬೇಕು.
47. ಯಾವುದೇ ಸಮಸ್ಯೆ ಉಂಟಾದಾಗ ಸಮಸ್ಯೆಯ ಬಗ್ಗೆ ಯೋಚಿಸಬಾರದು, ಪರಿಹಾರದ ಬಗ್ಗೆ ಯೋಚಿಸಬೇಕು. ಆಗ ಸಮಸ್ಯೆಯು ಖಂಡಿತವಾಗಿ ನಿವಾರಣೆಯಾಗುತ್ತದೆ.
48. ಸಮಯ ಹಾಗೂ ಸಂದರ್ಭಗಳಿಗೆ ಅನುಸಾರವಾಗಿ ಶಾರೀರಿಕವಾಗಿ, ಮಾನಸಿಕವಾಗಿ ಹಾಗೂ ವಾಚಿಕವಾಗಿ ಹೊಂದಿಕೊಂಡಾಗ ಮಾತ್ರ ಆರೋಗ್ಯ ಲಭ್ಯ.
49. ಸದಾ ಪ್ರಕೃತಿಯೊಂದಿಗೆ ಹೊಂದಿಕೊಂಡಿರಬೇಕು. ನೀರು, ಗಾಳೀ, ಆಹಾರ ಎಲ್ಲವೂ ನಮಗೆ ಪ್ರಕೃತಿಯೊಂದರಿಂದಲೇ ಲಭಿಸುತ್ತದೆ. ಹಾಗಾಗಿ ಪ್ರಕೃತಿಯ ರಕ್ಷಣೆ ನಮ್ಮ ಆದ್ಯ ಕರ್ತವ್ಯ.
50. “ನಮ್ಮ ಏಳ್ಗೆಗೆ ನಾವೇ ಶಿಲ್ಪಿ” ಎಂಬುದನ್ನು ನೆನಪಿನಲ್ಲಿ ಇಟ್ಟುಕೊಂಡಿರಬೇಕು. ಮೇಲಿನ ಎಲ್ಲಾ ಅಂಶಗಳನ್ನೂ ಅರ್ಥಮಾಡಿಕೊಂಡು ಅಳವಡಿಸಿಕೊಂಡರೆ ಬದುಕಿನಲ್ಲಿ ಯಶಸ್ಸು ನಿಶ್ಚಿತ.
ಡಾ. ಶ್ರೀವತ್ಸ