1. ಪ್ರತಿದಿನ ಆರು ಘಂಟೆಗೆ ಏಳುವ ಅಭ್ಯಾಸ ಒಳ್ಳೆಯದು. ಬೆಳಗಿನ ಪ್ರಶಾಂತ ವಾತಾವರಣ ಓದಲಿಕ್ಕೆ, ಅಭ್ಯಾಸಕ್ಕೆ ಒಳ್ಳೆಯದು. ವಾತಾವರಣದಲ್ಲಿನ ಓಜೋನ್ ಅಂಶವು ಈ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಅದರ ಸೇವನೆ ಆರೋಗ್ಯಕ್ಕೆ ಒಳ್ಳೆಯದು.
2. ಇಷ್ಟ ದೇವರನ್ನೂ, ತಾಯಿತಂದೆಯರನ್ನೂ, ಗುರುಹಿರಿಯರನ್ನೂ ನೆನೆದು ದಿನದ ಚಟುವಟಿಕೆಗಳನ್ನು ಪ್ರಾರಂಭಿಸಬೇಕು. ಬೆಳಿಗ್ಗೆ ಎದ್ದ ಕೂಡಲೇ ಮಲ-ಮೂತ್ರ ವಿಸರ್ಜನೆ ಮಾಡುವ ಅಭ್ಯಾಸವು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
3. ಅನಂತರ ಹಲ್ಲು ಉಜ್ಜುವುದು ಮುಖ್ಯ ಕ್ರಮ ಮೆತ್ತಗಿರುವ ಬ್ರಷ್‍ನಿಂದ, ಬೇವಿನ ಕಡ್ಡಿ ಅಥವಾ ಹೊಂಗೆ ಕಡ್ಡಿಯಿಂದ ಒಸಡಿಗೆ ಪೆಟ್ಟಾಗದಂತೆ ಮೇಲ್ಭಾಗ-ಕೆಳಭಾಗಗಳಲ್ಲಿ ಸರಿಯಾಗಿ ಉಜ್ಜಬೇಕು. ಒಸಡುಗಳನ್ನು ಕೈ ಬೆರಳುಗಳಿಂದ ಉಜ್ಜುವುದು ಉತ್ತಮ. ನಾಲಿಗೆಯನ್ನು ಇದೇ ರೀತಿಯಲ್ಲಿ ಸ್ವಚ್ಛಮಾಡಿಕೊಲ್ಲುವುದು ಸರಿಯಾದ ಕ್ರಮ.
4. ಶುದ್ಧವಾದ ನೀರಿನಿಂದ ಸುಮಾರು ಎರಡು ನಿಮಿಷಗಳ ಕಾಲ ಬಾಯಿ ಮುಕ್ಕಳಿಸಬೇಕು.
5. ಪ್ರತಿ ಬಾರಿ ಆಹಾರವನ್ನು ಸೇವಿಸಿದ ನಂತರ ಹಲ್ಲುಗಳನ್ನು ನಾಲಿಗೆಯನ್ನು ಸ್ವಚ್ಛಗೊಳಿಸಿಕೊಳ್ಳಬೇಕು.
6. ಪ್ರತಿದಿನ ಎರಡೆರಡು ಹನಿ ಎಳ್ಳೆಣ್ಣೆ / ಕೊಬ್ಬರಿ ಎಣ್ಣೆಯನ್ನು ಹದವಾಗಿ ಬಿಸಿಮಾಡಿ ಮೂಗಿನ ಹೊಳ್ಳೆಗಳಿಗೆ ಹಾಕಿಕೊಳ್ಳಬೇಕು. ಇದರಿಂದ ನೆಗಡಿ, ಕೆಮ್ಮು ಮುಂತಾದ ತೊಂದರೆಗಳು ನಮ್ಮನ್ನು ಬಾಧಿಸುವ ಸಾಧ್ಯತೆಗಳು ಕಡಿಮೆಯಾಗುತ್ತದೆ.
7. ವಾರಕ್ಕೆರಡು ಬಾರಿ ಶರೀರಕ್ಕೆ ಎಳ್ಳೆಣ್ಣೆಯನ್ನು ನೀವಿಕೊಳ್ಳಬೇಕು. ಕೈಕಾಲುಗಳಿಗೆ ಮೇಲ್ಭಾಗದಿಂದ ಕೆಳಭಾಗದವರೆಗೆ ನೀವಬೇಕು. ಎದೆ, ಹೊಟ್ಟೆಯ ಭಾಗಕ್ಕೆ ವೃತ್ತಾಕಾರವಾಗಿ ಎಣ್ಣೆಯನ್ನು ನೀವಬೇಕು. ತಲೆ ಹಾಗೂ ಮುಖಭಾಗಗಳಿಗೂ ವೃತ್ತಾಕಾರವಾಗಿ ನೀವಬೇಕು.
8. ಸ್ನಾನಕ್ಕೆ ಉಗುರುಬೆಚ್ಚಗಿನ ನೀರನ್ನು ಬಳಸುವುದು, ಹಾಗೂ ಸ್ನಾನದ ನಂತರ ಓದುವ ಅಭ್ಯಾಸ ಬೆಳೆಸಿಕೊಳ್ಳುವುದು ಸೂಕ್ತ.
9. ಅರ್ಧಲೋಟ ಬೆಚ್ಚಗಿರುವ ನೀರನ್ನು ಪ್ರತಿದಿನ ಪ್ರಾತ:ಕಾಲ ಸೇವಿಸುವುದು ಒಳ್ಳೆಯದು.
10. ಸ್ನಾನದ ನಂತರ ನಮ್ಮ ಇಷ್ಟ ದೇವರ ಪ್ರಾರ್ಥನೆ ಮಾಡಬೇಕು. ಶ್ಲೋಕ, ಸ್ತೋತ್ರಗಳನ್ನು ಹೇಳಿಕೊಳ್ಳಬೇಕು.
12. ಶುದ್ಧವಾದ-ಶುಭ್ರವಾದ ಬಟ್ಟೆಯನ್ನು ಧರಿಸಬೇಕು, ಹತ್ತಿಯ ಬಟ್ಟೆ ಧರಿಸುವುದು ಒಳ್ಳೆಯದು. ಒಳ ಉಡುಪುಗಳು ಮಾತ್ರ ಹತ್ತಿಯದೇ ಆಗಿರಬೇಕು.
13. ಶುದ್ಧವಾದ ಗಾಳಿ, ಸರಿಯಾದ ಬೆಳಕು ಇರುವ ಜಾಗದಲ್ಲಿ ಓದುವುದು – ಬರೆಯುವುದು ಒಳ್ಳೆಯದು.
14. ನಮ್ಮ ಶರೀರವು ಗಡಿಯಾರದಂತೆಯೇ ಕೆಲಸ ಮಾಡುತ್ತದೆ ಅದನ್ನು ನಾವು “ಜೈವಿಕ ಗಡಿಯಾರ” ಎಂದು ಕರೆಯುತ್ತೇವೆ. ಹಾಗಾಗಿ ನಮ್ಮ ದಿನದ ಎಲ್ಲ ಚಟುವಟಕೆಗಳೂ ಸಮಯಕ್ಕೆ ಸರಿಯಾಗಿ ನಡೆಯಬೇಕು.
15. ವಾರಕ್ಕೊಮ್ಮೆ ಕೈ ಬೆರಳು-ಕಾಲ್ಬೆರಳುಗಳ ಉಗುರುಗಳನ್ನು ಕತ್ತರಿಸಿಕೊಳ್ಳಬೇಕು. ಕಿವಿ-ಮೂಗುಗಳನ್ನೂ ಆಗಾಗ್ಗೆ ಸ್ವಚ್ಛಗೊಳಿಸಿಕೊಳ್ಳಬೇಕು.
16. ಪ್ರತಿದಿನ ತಲೆಗೆ ಕೊಬ್ಬರಿ ಇಣ್ಣೆಯನ್ನು ಹಚ್ಚಿಕೊಳ್ಳಬೇಕು. ಅಕಸ್ಮಾತ್ ಸಾಧ್ಯವಾಗದಿದ್ದಲ್ಲಿ ವಾರಕ್ಕೆ ಎರಡು ಬಾರಿಯಾದರೂ ತಲೆಗೆ ಎಣ್ಣೆಯನ್ನು ಹಚ್ಚಿಕೊಳ್ಳಬೇಕು.
17. ದಿನಕ್ಕೆ ಐದಾರು ಬಾರಿ ತಣ್ಣೀರಿನಿಂದ ಮುಖ ಹಾಗೂ ಕಣ್ಣುಗಳನ್ನು ತೊಳೆದುಕೊಳ್ಳಬೇಕು.
18. ದಿನಕ್ಕೆರಡು ಬಾರಿ ಕೂದಲನ್ನು ಸರಿಯಾಗಿ ಬಾಚಿಕೊಳ್ಳಬೇಕು. ಮನೆಯಿಂದ ಹೊರಗೆ ಹೋಗುವಾಗ ಸರಿಯಾದ ಬಟ್ಟೆಯನ್ನು ಧರಿಸಿಕೊಂಡು ಕೂದಲನ್ನು ಬಾಚಿಕೊಂಡು ಹೋಗಬೇಕು.
ಡಾ. ಶ್ರೀವತ್ಸ