Home Kids ಮಕ್ಕಳಿಗೆ ಸಹಜ ಬಾಲ್ಯದ ಆನಂದವನ್ನು ಅನುಭವಿಸಲು ಬಿಡುತ್ತಿದ್ದೇವೆಯೇ?

ಮಕ್ಕಳಿಗೆ ಸಹಜ ಬಾಲ್ಯದ ಆನಂದವನ್ನು ಅನುಭವಿಸಲು ಬಿಡುತ್ತಿದ್ದೇವೆಯೇ?

0

“ನಿಮ್ಮ ನಾಲ್ಕು ವರ್ಷದ ಮಗು…
• ನಿಮ್ಮ ಹಾಗೆ ಓದಬಲ್ಲ
• 6ಕ್ಕೂ ಹೆಚ್ಚು ಭಾಷೆ ಮಾತನಾಡಬಲ್ಲ
• ಕಂಪ್ಯೂಟರ್ ಬಳಸಬಲ್ಲ
• ಸಂಗೀತವಾದ್ಯ ನುಡಿಸಬಲ್ಲ
• ಒಂದು ಗಂಟೆ ಧ್ಯಾನಾವಸ್ಥೆಯಲ್ಲಿ ಕೂರಬಲ್ಲ…. ಇತ್ಯಾದಿ”.
ಇದು ಶಾಲೆಯೊಂದು ಪೋಷಕರನ್ನು ಆಕರ್ಷಿಸಲು ನೀಡಿರುವ ಜಾಹಿರಾತಿನ ಸಾಲುಗಳು. ಬಹುಷಃ ಇಂತಹ ಶಾಲೆಗಳಿಗೆ ಜನ ಮುಗಿಬೀಳುವುದರಲ್ಲಿ, ಕೇಳಿದಷ್ಟು ಫೀಸು, ಡೊನೇಷನ್‍ಗಳನ್ನು ಕಕ್ಕುವುದರಲ್ಲಿ ಆಶ್ಚರ್ಯವೇನಿಲ್ಲ.
ಇಂತಹ ಶಾಲೆಗಳಲ್ಲಿ ಕಲಿತ ಮಕ್ಕಳು ಹತ್ತು ಹನ್ನೆರೆಡು ವರ್ಷಕ್ಕೆ ವಯಸ್ಕರರ ಜ್ಞಾನ, ಗುಣ ಸ್ವಭಾವಗಳನ್ನೆಲ್ಲಾ ಬೆಳೆಸಿಕೊಳ್ಳುತ್ತಾರೆಂದುಕೊಳ್ಳೋಣ. ಇದು ಪೋಷಕರಿಗೆ ಅತ್ಯಂತ ಆನಂದ ಮತ್ತು ಹೆಮ್ಮೆ ತರುವ ವಿಚಾರವೇನೋ ನಿಜ, ಆದರೆ ಇದರ ಇನ್ನೊಂದು ಮುಖವನ್ನು ನಾವು ಯೋಚಿಸಿದ್ದೇವೆಯೇ? ಇಂತಹ ಮಕ್ಕಳು ಪೋಷಕರ ಹತ್ತಿರ ಬಂದು, “ಅಪ್ಪಾ ನಾನೀಗ ಮಾನಸಿಕವಾಗಿ, ಭೌದ್ಧಿಕವಾಗಿ ಬೆಳೆದಿದ್ದೇನೆ, ನನಗೊಂದು ಮದುವೆ ಮಾಡು” ಅಂದರೆ ಪೋಷಕರೇನು ಮಾಡಬೇಕು? ಹಾಗೊಮ್ಮೆ ನೇರವಾಗಿ ಕೇಳದಿದ್ದರೂ, ಹದಿವಯಸ್ಸಿನ ಮಕ್ಕಳು ಡೇಟಿಂಗ್ ಹೋಗಲು ಶುರುಮಾಡಿದರೆ, ಸಿಗರೇಟ್, ಗುಟ್ಕಾ, ಮದ್ಯ ಮುಂತಾದವುಗಳನ್ನು ಸೇವಿಸತೊಡಗಿದರೆ, ಹೆಣ್ಣು ಮಕ್ಕಳು ಗರ್ಭಧರಿಸಿದರೆ, ಅದನ್ನೆಲ್ಲಾ ಒಪ್ಪಿಕೊಳ್ಳಲು ಪೋಷಕರು ಸಿದ್ಧರಿದ್ದಾರೆಯೇ? ಇದಕ್ಕೆಲ್ಲಾ ಜೀವಂತ ಉದಾಹರಣೆಗಳು ಪಾಶ್ಚಿಮಾತ್ಯ ದೇಶಗಳಲ್ಲಿ ಹೇರಳವಾಗಿ ಸಿಕ್ಕುತ್ತವೆ. ನಮ್ಮ ಮೆಟ್ರೋಗಳಲ್ಲಿಯೂ ಇತ್ತೀಚೆಗೆ ಇವು ಅಪರೂಪವೇನಲ್ಲ.
ಮಕ್ಕಳು ಕೆಲವೇ ವಿಚಾರದಲ್ಲಿ, ಅದೂ ಪೋಷಕರಿಗೆ ಬೇಕಾದ ವಿಚಾರದಲ್ಲಿ ಮಾತ್ರ ದೊಡ್ಡವರಂತಿರಬೇಕು; ಉಳಿದಂತೆ ಮಕ್ಕಳೇ ಆಗಿರಬೇಕು-ಎಂದು ಬಯಸುವವರಿಗೆ ನಿರಾಸೆ ಕಾದಿರುತ್ತದೆ. ಒಮ್ಮೆ ವಯಸ್ಕರ ಪ್ರಪಂಚದ ಟಿಕೆಟ್ ಮಕ್ಕಳಿಗೆ ಸಿಕ್ಕ ಮೇಲೆ, ಅವರು ಅದನ್ನು ಎಲ್ಲಾ ಕಡೆ ಉಪಯೋಗಿಸುತ್ತಾರೆ. ಇದೆಲ್ಲಾ ವಿತಂಡವಾದ ಎಂದು ಹೊರನೋಟಕ್ಕೆ ಅನ್ನಿಸಿದರೂ, ದುರಾದೃಷ್ಟವಶಾತ್ ಇದು ವಾಸ್ತವ.
ಪ್ರಕೃತಿಯ ಎಲ್ಲಾ ಚಲನೆಗೂ ಒಂದು ವೇಗವನ್ನು ಪ್ರಕೃತಿಯೇ ನಿರ್ಧರಿಸುತ್ತದೆ. ಅದನ್ನು ಅಲ್ಪ ಸ್ವಲ್ಪ ಹೆಚ್ಚು ಅಥವಾ ಕಡಿಮೆ ಮಾಡಬಹುದೇನೋ. ಆದರೆ ಆಧುನಿಕ ಮಾನವ ಮಾಡುತ್ತಿರುವಂತೆ ಆ ಕೆಲಸಗಳ ವೇಗ ಮತ್ತು ನೀತಿನಿಯಮಗಳನ್ನು ತೀವ್ರವಾಗಿ ಹೆಚ್ಚಿಸಲು ಅಥವಾ ಬದಲಾಯಿಸಲು ಪ್ರಯತ್ನಿಸಿದರೆ, ಅದರ ಭಯಂಕರ ಅಡ್ಡಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ಪರಿಸರಕ್ಕೆ ಸಂಬಂಧಿಸಿದ ಹಲವಾರು ವಿಚಾರಗಳಲ್ಲಿ ನಾವು ಈಗಾಗಲೇ ಕಾಣುತ್ತಿದ್ದೇವೆ.
ಇದೇ ರೀತಿ ಮನುಷ್ಯನ ದೈಹಿಕ, ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆ ಕೂಡ ಪ್ರಕೃತಿ ನಿರ್ಧಾರಿತ ವೇಗದಲ್ಲೇ ಮತ್ತು ನಿಯಮಗಳಲ್ಲೇ ಆಗಬೇಕು. ದೇಹದ ಮತ್ತು ಮನಸ್ಸಿನ ಬೆಳವಣಿಗೆಗೆ ಸಾಮರಸ್ಯವಿರಬೇಕು. ಇದನ್ನು ಕಡೆಗಣಿಸಿ ಯಾವುದಾದರೂ ಒಂದರ ಬೆಳವಣಿಗೆಯನ್ನು ತೀವ್ರಗೊಳಿಸಲೆತ್ನಿಸಿದರೆ ಮಕ್ಕಳ ಭಾವೀ ಜೀವನದ ಮೇಲೆ ಕೆಲವು ಅಡ್ಡಪರಿಣಾಮಗಳಾಗಬಹುದು.
ಇದಕ್ಕೆ ನಮ್ಮ ಕಣ್ಣೆದುರೇ ಸಾಕಷ್ಟು ಉದಾಹರಣೆಗಳಿದ್ದರೂ ನಾವು ಒಪ್ಪಿಕೊಳ್ಳುವುದಿಲ್ಲ. ಒಲಂಪಿಕ್ ಕ್ರೀಡೆಗಳಲ್ಲಿ ಮೆಡಲ್ ಗೆಲ್ಲುವುದಕ್ಕಾಗಿಯೇ ಮಕ್ಕಳ ಮೇಲೆ ಎಂತಹ ಒತ್ತಡಗಳನ್ನು ಹೇರಿ ಛಾಂಪಿಯನ್‍ಗಳನ್ನು ಸಿದ್ಧಪಡಿಸುತ್ತಾರೆಂಬುದನ್ನು ಹೆಚ್ಚಿನ ದೇಶಗಳು ಗೌಪ್ಯವಾಗಿಡುತ್ತವೆ. ಮೂಳೆಗಳು, ಮಾಂಸಖಂಡಗಳು, ಅದರ ಜೊತೆಗೆ ಮನಸ್ಸು, ಬುದ್ಧಿ ಯಾವುದೂ ಬೆಳೆಯದ ಮೂರ್ನಾಲ್ಕು ವರ್ಷದ ಹಸುಳೆಗಳ ಮೇಲೆ ಏನೆಲ್ಲಾ ಪ್ರಯೋಗ ಮಾಡುತ್ತಾರೆ ಮತ್ತು ಒತ್ತಡಗಳನ್ನು ಹೇರುತ್ತಾರೆ ಎನ್ನುವುದನ್ನು ಓದಿದರೆ ಇವರೇನು ಮನುಷ್ಯರಾ ಅಥವಾ ಕಟುಕರಾ ಎನ್ನುವ ಅನುಮಾನ ಬರುತ್ತದೆ. ದೇಶಕ್ಕಾಗಿ ಮೆಡಲ್‍ಗಳನ್ನು ಗೆದ್ದ ಮೇಲೆ ಈ ಛಾಂಪಿಯನ್‍ಗಳು ಉಳಿದ ಜೀವಮಾನವನ್ನು ಹೇಗೆ ಕಳೆಯುತ್ತಾರೆ ಎಂಬ ಮಾಹಿತಿ ನಮಗೆಲ್ಲಾ ನಗಣ್ಯವಾಬಿಡುತ್ತದೆ. ಚೈನಾದಂತಹ ದೇಶಗಳಲ್ಲಂತೂ ಎಲ್ಲಾ ಗೌಪ್ಯವಾಗಿಯೇ ನಡೆಯುತ್ತದೆ.
ಮೇಲಿನದು ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಬೆಳವಣಿಗೆಯಾಗಿರದ ಮಕ್ಕಳ ದೈಹಿಕ ಬೆಳವಣಿಗೆಯನ್ನು ಮಾತ್ರ ತೀವ್ರಗೊಳಿಸುವ ಕ್ರೂರ ಕ್ರಿಯೆಯಾದರೆ, ಇವತ್ತಿನ ವಿದ್ಯಾವಂತ ತಂದೆತಾಯಂದಿರು ಮಾಡುತ್ತಿರುವುದು ಇದರ ಇನ್ನೊಂದು ಮುಖ. ಅಂದರೆ ದೇಹ, ಮನಸ್ಸುಗಳ ಬೆಳವಣಿಗೆಯ ವೇಗವನ್ನು ಮೀರಿ ಬುದ್ಧಿ ಮಾತ್ರ ಬೆಳೆವಣಿಗೆ ಆಗಬೇಕೆಂದು ಅಪೇಕ್ಷಿಸುವ ಇವರುಗಳು ತಮ್ಮ ಮಕ್ಕಳ ಮೇಲೆ ಅದೇ ರೀತಿಯ ಅನ್ಯಾಯಗಳನ್ನು ಮಾಡುತ್ತಿರುತ್ತಾರೆ. ತಮ್ಮ ಜೀವನದ ಬಗೆಗೆ ಇನ್ನೂ ಏನೂ ನಿರ್ಧಾರಗಳನ್ನು ತೆಗೆದುಕೊಳ್ಳಲಾರದ ಸ್ಥಿತಿಯಲ್ಲಿರುವ, ಭಾವನಾತ್ಮವಾಗಿ ಮತ್ತು ಆರ್ಥಿಕವಾಗಿ ಪೋಷಕರ ಮೇಲೆ ಅವಲಂಬಿತರಾಗಿರುವ ಮಕ್ಕಳ ಮೇಲೆ ಪೋಷಕರು ನಡೆಸುವ ಈ ರೀತಿಯ ದಬ್ಬಾಳಿಕೆ ಯಾವುದೇ ಕಾನೂನಿನಡಿ ಶಿಕ್ಷೆಗೆ ಒಳಪಡಿಸಲಾರದ್ದು. ಹಾಗಾಗಿಯೇ ಇಂತಹ ದಬ್ಬಾಳಿಕೆಯನ್ನು ಸಹಿಸಲಾರದ ಮಕ್ಕಳಿಗೆ ಉಳಿದಿರುವುದು ಆತ್ಮಹತ್ಯೆಯೊಂದೇ ದಾರಿ. ಒತ್ತಡವನ್ನು ನಿಭಾಯಿಸಲಾರದ ಎಷ್ಟೋ ಮಕ್ಕಳು ಇದರ ಮೊರೆಹೋಗುತ್ತಿದ್ದಾರೆ.
ಶಾಲಾದಿನಗಳಲ್ಲಿ ಸರಿಯಾಗಿ ಊಟ, ನಿದ್ದೆ ಮಾಡಲೂ ಆಗದಷ್ಟು ಕಲಿಕೆಯ ಒತ್ತಡ, ರಜ ಬಂತೆಂದರೆ ಬೇಸಿಗೆ ಶಿಬಿರಗಳು, ಅಬಾಕಸ್ ತರಗತಿಗಳು, ನೆನಪಿನ ಶಕ್ತಿ ವೃದ್ಧಿಸುವ ತರಬೇತಿ, ಮುಂದಿನ ತರಗತಿ ಟ್ಯೂಷನ್ ಕ್ಲಾಸ್‍ಗಳು ಮುಂತಾದವು. ಪೋಷಕರೇನು ತಮ್ಮ ಮಕ್ಕಳನ್ನು ಕೀ ಹಾಕಿದೊಡನೆ ಸ್ಟಾರ್ಟ್ ಆಗಿ, ಆಕ್ಸಿಲರೇಟರ್ ಒತ್ತಿದೊಡನೆ ಬೇಕಾದ ವೇಗದಲ್ಲಿ ಓಡುವ ತಮ್ಮ ಐಷಾರಾಮಿ ಕಾರು ಎಂದುಕೊಡಿದ್ದಾರೆಯೇ? ದುರಂತ ಅಂದರೆ ನಿರ್ಜೀವ ಕಾರುಗಳಿಗೆ ಸಿಗುವಷ್ಟು ಉಸಿರಾಟದ ಸಮಯವೂ ನಮ್ಮ ಮಕ್ಕಳಿಗೆ ಸಿಗುತ್ತಿಲ್ಲ.
ಇಂದಿನ ಮಕ್ಕಳು ತಮ್ಮ ಸಹಜವಾದ ತುಂಟಾಟದ, ಚಂಚಲತೆಯ, ಕುತೂಹಲದ, ಹುಡುಕಾಟ-ಪ್ರಯೋಗಶೀಲತೆಯ ಬಾಲ್ಯವನ್ನು ಕಳೆಯುವುದು ಇನ್ನು ಮುಂದೆ ಸಾಧ್ಯವೇ ಇಲ್ಲ ಅನ್ನಿಸುತ್ತದೆ. ಜಗಜಿತ್ ಸಿಂಗ್ ಹಾಡಿದ “ಏ ದೌಲತ್ ಭೀ ಲೇಲೋ, ಏ ಷೊಹರತ್ ಭಿ ಲೇ ಲೋ” ಎನ್ನುವ ಗಜಲ್‍ನ ಹಾಡುಗಳನ್ನು ಎಲ್ಲರೂ ಒಮ್ಮೆ ಕೇಳಲೇಬೇಕು. ಈ ಹಾಡಿನ ಹಿನ್ನೆಲೆಯಲ್ಲಿ ಇಂದಿನ ಮಕ್ಕಳ, ಹೆಚ್ಚಾಗಿ ಪಟ್ಟಣಗಳಲ್ಲಿರುವವರ ಪರಿಸ್ಥಿತಿ ನೋಡಿದರೆ, ಜಗಜಿತ್ ಸಿಂಗ್‍ನ ಧ್ವನಿಯ ವಿಷಾದ ನಮ್ಮನ್ನು ಕಾಡುತ್ತದೆ.
ಬಾಲ್ಯವನ್ನು ಸಂಪೂರ್ಣವಾಗಿ ಅನುಭವಿಸದ ಮಕ್ಕಳು ಮುಂದೆ ಕ್ರೂರಿಗಳೂ, ಸಮಾಜಘಾತುಕರೂ ಆಗುವ ಸಾಧ್ಯತೆಗಳಿವೆಯೆಂದು ಸಮಾಜವಿಜ್ಞಾನಿಗಳು ಹೇಳುತ್ತಾರೆ. ಇದು ಎಲ್ಲಾ ಮಕ್ಕಳಿಗೂ ಅನ್ವಯಿಸುವುದಿಲ್ಲವೆಂದುಕೊಂಡರೂ, ನಾವೀಗ ಮಕ್ಕಳಿಗೆ ಕೊಡುತ್ತಿರುವ ಬಾಲ್ಯದ ಅನುಭವಗಳು ಅವರ ಸಂತೃಪ್ತ ಜೀವನಕ್ಕೆ ಬುನಾದಿಯನ್ನಂತೂ ಹಾಕುವುದು ಸಾಧ್ಯವಿಲ್ಲ. ಇದರಿಂದ ತಾವು ಗಳಿಸಿರುವ ಭರಪೂರ ಹಣದ ಮಧ್ಯೆಯೂ ಅವರು ಅಸುಖಿಗಳಾಗುವುದಷ್ಟೇ ಅಲ್ಲ, ಅದನ್ನು ತಮ್ಮ ಮುಂದಿನ ತಲೆಮಾರಿಗೂ ವರ್ಗಾಯಿಸುತ್ತಾರೆ.
ಈ ಪ್ರಪಂಚದ ಪ್ರತಿಯೊಂದು ಜೀವಿಯೂ ಅನನ್ಯವಾದದ್ದು. ಅದನ್ನು ಸಹಜವಾಗಿ ಬೆಳೆಯಲು ಬಿಟ್ಟರೆ ನಮ್ಮ ಚಿಂತನೆಯ ಮಿತಿಗಳನ್ನು ಮೀರಿ ಅವು ಅರಳುವ ಸಾಧ್ಯತೆಗಳಿರುತ್ತವೆ. ಇದು ನಮ್ಮ ಮಕ್ಕಳಿಗೂ ಅನ್ವಯಿಸುತ್ತದೆ. ಆದ್ದರಿಂದ ಪೋಷಕರೇ ದಯವಿಟ್ಟು ನಿಮ್ಮ ಮಕ್ಕಳನ್ನು ಹಣಗಳಿಸುವ ಭಾವೀ ಯಂತ್ರಗಳಂತೆ ಮಾತ್ರ ನೋಡದೆ, ಅವರಲ್ಲಿ ಒಂದು ಜೀವಂತ ವ್ಯಕ್ತಿಯನ್ನು, ವ್ಯಕ್ತಿತ್ವವನ್ನು, ಅರಳುವ ಪ್ರತಿಭೆಯನ್ನು ಹುಡುಕಿ. ಅವರಿಗೆ ಬಾಲ್ಯದ ಸಹಜ ಆನಂದಗಳನ್ನು ಹೊಂದಲು ಅವಕಾಶಮಾಡಿಕೊಡಿ.
– ವಸಂತ್ ನಡಹಳ್ಳಿ