ಚಂದದ ಗೊಂಬೆಯಂಗಡಿ ಎದುರು ನಿಂತ ಮಗುವೊಂದು ತನ್ನ ಖುಷಿಯನ್ನು ವ್ಯಕ್ತ ಪಡಿಸಲಾಗದೇ ಬೆರಗುಗಣ್ಣಿನಿಂದ ಕಣ್ಣು ಮಿಟುಕಿಸದೆ ನೋಡುವ ಹಾಗೆ, ಅಂದು ನನ್ನ ಪುಟ್ಟ ಪುಸ್ತಕವೊಂದನ್ನ ನೋಡುತ್ತಾ ನಿಂತೆ. ಎಷ್ಟು ದಿನವಾಗಿತ್ತು ಅದನ್ನು ಮುಟ್ಟಿನೋಡದೇ! ಹಿಂದೊಮ್ಮೆ ಶಾಲೆ ಬದಲಿಸುವಾಗ, ಕಾಲೇಜು ಬಿಡುವಾಗ, ಚಿಕ್ಕ ಪುಸ್ತಕದಲ್ಲಿ ಗೆಳೆಯರಿಂದ ಆಟೋಗ್ರಾಫ್ ಬರೆಸಿಟ್ಟುಕೊಂಡ ಪುಸ್ತಕವದು. ನನ್ನ ಜೀವನದ ಹಾದಿಯಲ್ಲಿ ಕೆಲಕಾಲ ಹೆಜ್ಜೆಯಿಟ್ಟು ಜೊತೆಯಾದವರ ನೆನೆದ ಮನಸ್ಸು ಅಂದು ಹುಡುಕಿಕೊಟ್ಟದ್ದು ಇದೇ ಪುಸ್ತಕವನ್ನು. ಭದ್ರವಾಗಿ ಬೀಗ ಹಾಕಿಟ್ಟಿದ್ದ ಪುಸ್ತಕವದು! ಬಹುಶ: ಆ ಪುಟ್ಟ ಪುಟ್ಟ ಸಾಲುಗಳು ಎಲ್ಲಿ ಹಾರಿ ಹೋದಾವು ಎಂಬ ಭ್ರಮೆ ಇದ್ದಿರಬೇಕು ನನಗೆ!
ಪುಸ್ತಕ ತೆರೆಯುತ್ತಿದ್ದಂತೆ ನನಗೇ ತಿಳಿಯದೇ ಮುಗುಳು ನಗೆಯೊಂದು ಮೂಡಿತ್ತು. 20 ವರ್ಷಗಳ ಜೀವನ ಒಂದು ಪುಟ್ಟ ಸಿನಿಮಾದಂತೆ ಕಣ್ಣೆದುರಿಗೆ ಹಾದು ಹೋಗಿತ್ತು. ಅದರಲ್ಲಿ ಅದೆಷ್ಟು ಜನ ಕಣ್ಣೆದುರಿಗೆ ಬಂದು ಹೋದವರು! ಅದರಲ್ಲಿ ಕೆಲವರು ಪ್ರೀತಿಯಿಂದ, ಹಲವರು ತುಂಟತನದಿಂದ, ಇನ್ನೂ ಕೆಲವರು ಹಠದಿಂದ ಏನೇನೆಲ್ಲಾ ಬರೆದ ದೊಡ್ಡ ಹಾಗೂ ದಡ್ಡ ಸಾಲುಗಳನ್ನು ಓದಿದರೆ ಈಗ ತಮಾಷೆಯೆನಿಸುತ್ತದೆ.
ಎಷ್ಟೊ ಬಾರಿ ನಾನು ಚಿಕ್ಕವಳಿದ್ದಾಗ, ಈ ಆಟೋಗ್ರಾಫ್ ಬರೆದುಕೊಡುವುದಕ್ಕೆ, ಬೇರೆಯವರಿಂದ ಬರೆಸಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದೆ. ಪ್ರತೀ ಬಾರಿಯೂ ಅನಿಸುತ್ತಿದ್ದುದು, ಈ ನಮ್ಮ ಸ್ನೇಹ ನಿಜವಾಗಿದ್ದರೆ, ಅವರು ನಮ್ಮುಳಗೆ ಅಚ್ಚೊತ್ತಿದ್ದರೆ, ಅದು ಶಾಶ್ವತ. ಎಂದೆಂದಿಗೂ ಯಾರೂ ಅಳಿಸಲಾಗದು. ಇದಕ್ಕೆ ಈ ಪುಸ್ತಕದ ನೆರವು ಬೇಕಾ? ಎಂದು. ಈ ಸ್ನೇಹವೆಂಬುದು ಒಂದು ಸಮುದ್ರವಿದ್ದಂತೆ. ಇಲ್ಲೆ ಹಳೇ ನೀರು ಹೊಸ ನೀರು ಸೇರಿಯೇ ಹೊಸ ಅಲೆಯಾಗಬೇಕು. ಹಾಗಿದ್ದರೆ ಈ ಹಳೆಯ ಸ್ನೇಹವನ್ನು ನಾ ಮರೆಯುದುಂಟಾ? ನಮ್ಮ ಗೆಳೆತನಕ್ಕೆ ಈ ಪುಸ್ತಕದ ಹಂಗು ಬೇಕಾ? ನನ್ನ ಮನಸ್ಸು ಸಾಲದಾ? ಎಂದು ಪ್ರತೀ ಬಾರಿಯೂ ಪುಸ್ತಕವನ್ನು ಕೈಗೆತ್ತಿಕೊಂಡಾಗ ಅನ್ನಿಸುತ್ತಿದ್ದುದು ನಿಜ.
ಆದರೆ….ಕೆಲವೊಮ್ಮೆ ದೇವರು ಇಲ್ಲ ಎಂದು ವಾದ ಮಾಡುವವನೊಬ್ಬ, ಸುತ್ತಲಿನ ಜನರೆಲ್ಲರೂ ಜಾತ್ರೆಯಲ್ಲಿ ದೇವರಿಗೆ ಕೈ ಮುಗಿಯುವುದನ್ನು ನೋಡಿ ಭಯದಿಂದಲೋ, ತನಗೇನಾದರಾದೀತು ಎಂಬ ಕಾರಣದಂದಲೋ ತನ್ನ ಕೈಗಳನ್ನೂ ಜೋಡಿಸಿದಂತೆ, ನಾನೂ ಕೂಡ ಎಲ್ಲರ ಹಾಗೆ, ಈ ಆಟೋಗ್ರಾಫ್ ಪುಸ್ತಕದ ಹಾಳೆಗಳನ್ನು ತುಂಬಿಸಿಟ್ಟಿದ್ದೆ. ಇದರ ಅಸ್ತಿತ್ವದ ಅನುಭವ ನನಗೆ ಈಚೆಗೆ ತಿಳಿದದ್ದು, ಅರಿವಾದದ್ದು.
ನಮ್ಮ ಜೀವನದಲ್ಲಿ ಎಷ್ಟೋ ಮಂದಿ ಬಂದು ಹೋಗುತ್ತಾರೆ. ಆದರೆ ಚಿಕ್ಕ ವಯಸ್ಸಿನಲ್ಲಿ ಬಂದ ಆ ಪುಟಾಣಿಗಳು, ನಮ್ಮ ಬಾಲ್ಯವನ್ನ್ನು ಮತ್ತೆ ನೆನಪಿಸುತ್ತಾರೆ. ಹತ್ತಿರವಿದ್ದೂ ದೂರವಿರುವ, ದೂರವಿದ್ದೂ ಹತ್ತಿರವಿದ್ದಂತೆ ತೋರುವ ಈ ಜೀವನದ ವೈರುಧ್ಯ, ನನಗೆ ಅರ್ಥವಾದದ್ದು ಮೊನ್ನೆ ಈ ಬಾಲ್ಯದ ಸ್ನೇಹಿತರನ್ನು ಒಡಿಲಿನಲ್ಲಿ ಹಿಡಿದಿಟ್ಟುಕೊಂಡ ಈ ಪುಟ್ಟ ಪುಸ್ತಕದಿಂದ.
ನೀವು ಕೂಡ ಇದನ್ನು ಜೋಪಾನವಾಗಿಟ್ಟಿದ್ದರೆ, ಒಮ್ಮೆ ಅದರ ಪುಟಗಳನ್ನು ತಿರುವಿಹಾಕಿ. ಆ ಚೊಕ್ಕ ಮನಸ್ಸಿನ ಚಿಕ್ಕ ಚಿಕ್ಕ ಭಾವನೆಗಳು ನಿಮ್ಮ ಮನಸ್ಸಿಗೆ ಮತ್ತೆ ಖುಷಿಯ ರೆಕ್ಕೆಯನ್ನು ಹಚ್ಚುತ್ತದೆ. ಏನಂತೀರ?
ಸ್ಫೂರ್ತಿ ವಾನಳ್ಳಿ