ಎಲ್ಲಿದೆ ಪರಿಹಾರ?
ಇದೆಲ್ಲಾ ಬಹಳ ದೊಡ್ಡ ಸಾಮಾಜಿಕ ಸಮಸ್ಯೆ, ಹಾಗಾಗಿ ಇದನ್ನು ನಿಭಾಯಿಸಲು ಚಿಂತಕರು, ಸಮಾಜ ವಿಜ್ಞಾನಿಗಳು, ಸರ್ಕಾರಗಳು ಪ್ರಯತ್ನಪಡಬೇಕು ಎನ್ನುವುದು ಹೆಚ್ಚಿನ ಜನರ ತಿಳುವಳಿಕೆ. ಇದು ಸ್ವಲ್ಪ ಮಟ್ಟಿಗೆ ನಿಜವೇ ಇದ್ದರೂ, ಇದನ್ನೆ ನಂಬಿ ಕುಳಿತರೆ ನಾವೆಲ್ಲಾ ನಮ್ಮ ಜವಾಬ್ದಾರಿಯನ್ನು ಕಳಚಿಕೊಂಡಂತಾಗುತ್ತದೆ. ಹಾಗಾಗಿ ಪೋಷಕರು ಮತ್ತು ಮಕ್ಕಳು ತಮ್ಮ ಮಟ್ಟದಲ್ಲಿ ಮಾಡಬಹುದಾದ್ದೇನು ಎನ್ನುವುದರ ಬಗೆಗೆ ಯೋಚನೆ ಮಾಡಲೇಬೇಕಾಗಿದೆ.
ಮದುವೆಗೆ ಮೊದಲು;
1. ಪೋಷಕರು ಮತ್ತು ಮಕ್ಕಳು ವಿವಾಹದ ವಿಚಾರದಲ್ಲಿ ಮುಕ್ತವಾಗಿ ಮಾತನಾಡುವ, ಚರ್ಚೆ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಇಲ್ಲಿ ಪೋಷಕರು ನೆನಪಿಡಬೇಕಾದ ಅಂಶವೆಂದರೆ ಬೇರೆಲ್ಲಾ ವಿಷಯಗಳಲ್ಲಿ ಅವರು ಗಂಟುಮೋರೆಯನ್ನು ಹಾಕಿಕೊಂಡಿದ್ದಾಗ, ವಿವಾಹ ವಿಚಾರದಲ್ಲಿನ ಮಾತುಕತೆಗಳು ಮಾತ್ರ ಮುಕ್ತವಾಗಿರಲು ಸಾಧ್ಯವಿಲ್ಲ. ಹಾಗಾಗಿ ಮನೆಯಲ್ಲಿ ಎಲ್ಲಾ ವಿಚಾರಗಳಲ್ಲಿನ ಚರ್ಚೆಗೆ ಮುಕ್ತತೆ ಇರಲೇಬೇಕು. ಇಬ್ಬರಿಗೂ ನಿರ್ಧಾರಗಳ ಸ್ವಾತಂತ್ರವಿದ್ದರೂ ಮತ್ತೊಬ್ಬರ ಅಭೀಪ್ರಾಯಗಳನ್ನು ಕೇಳುವ, ಗೌರವಿಸುವ ಮನಸ್ಥಿತಿ ಇರಬೇಕು.
2. ಇವತ್ತಿನ ಆರ್ಥಿಕ ಸ್ವಾತಂತ್ರ, ಮುಕ್ತ ಲೈಂಗಿಕತೆ ಇವುಗಳಿಂದಾಗಿ ಎಷ್ಟೋ ಯುವಕ ಯುವತಿಯರಿಗೆ ಮದುವೆ ಅಗತ್ಯ ಅಂತ ಅನ್ನಿಸದಿದ್ದರೆ ಅದು ತಪ್ಪೇನಲ್ಲ. ಇಂತಹ ಜೀವನ ಶೈಲಿಯ ಒಳಹೊರಗುಗಳನ್ನು ತಿಳಿದುಕೊಂಡು ಅವರು ಮಾಡಿಕೊಂಡ ಆಯ್ಕೆ ಇದಾಗಿರಬೇಕು ಅಷ್ಟೆ. ಅಂತವರು ಮದುವೆಯಾಗಬೇಕಾದರೆ, ಒಂದು ದೀರ್ಘಕಾಲೀನ ಸಂಬಂಧಕ್ಕೆ ತಾವು ಮಾನಸಿಕವಾಗಿ ಸಿದ್ಧರಿದ್ದೇವೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಎಲ್ಲರ ದುಗುಡ, ದುರಂತಗಳಿಗೆ ಕಾರಣರಾಗಬಹುದು.
3. ಪ್ರೇಮ ವಿವಾಹವೇ ಸರ್ವೋತ್ತಮ ಎಂದುಕೊಳ್ಳುವ ಯುವಜನತೆ ಮತ್ತು ಪ್ರೇಮ ವಿವಾಹವೆಂದ ಕೂಡಲೇ ಕನಲುವ ಪೋಷಕರು-ಇಬ್ಬರೂ ವಾಸ್ತವಿಕತೆಯಿಂದ ದೂರವಿರುತ್ತಾರೆ. ಒಂದು ಸುಖದಾಂಪತ್ಯಕ್ಕೆ ಅಗತ್ಯವಿರುವುದು ಮದುವೆಯ ನಂತರದ ದಿನಗಳಲ್ಲಿ ದಂಪತಿಗಳ ಮನೋಭಾವದ ಹೊಂದಾಣಿಕೆ ಎಷ್ಟರ ಮಟ್ಟಿಗೆ ಆಗುತ್ತದೆ ಎನ್ನುವುದು ಮಾತ್ರ. ಇದನ್ನು ಶಬ್ದಗಳಲ್ಲಿ ಹೇಳಿಬಿಡುವುದು ಸುಲುಭ, ಆದರೆ ವಾಸ್ತವದಲ್ಲಿ ಇದನ್ನು ಕಂಡುಹಿಡಿಯುವುದಕ್ಕೆ ಯಾವುದೇ ಸೂತ್ರಗಳಿಲ್ಲ. ಹಾಗಿದ್ದರೂ ಇದರ ಬಗೆಗೆ ಕೆಲವು ಸರಳ ಮಾಹಿತಿಗಳನ್ನು ನೀಡಬಹುದು.
* ಮದುವೆಯಾಗುವವರಿಗಿಬ್ಬರಿಗೂ ತಮ್ಮ ಆದ್ಯತೆಗಳ ಖಚಿತತೆ ಇರಬೇಕು. ಆಯ್ಕೆಯನ್ನು ಮಾಡಿಕೊಳ್ಳುವಾಗ ಜಾತಿ, ಉದ್ಯೋಗ, ಆದಾಯ, ರೂಪ, ಹವ್ಯಾಸಗಳು ಹೀಗೆ ಹಲವಾರು ಮಾನದಂಡಗಳಿರುತ್ತವೆ. ಇವುಗಳಲ್ಲಿ ಎಲ್ಲವೂ ಹೊಂದಾಣಿಕೆಯಾಗುತ್ತದೆ ಎಂದು ನಿರೀಕ್ಷಿಸಬಾರದು. ಅವರವರಿಗೆ ಪ್ರಮುಖವೆನ್ನಿಸುವ ಯಾವುದಾದರೂ ಪ್ರಮುಖವಾದ ಎರಡು ಹೆಚ್ಚೆಂದರೆ ಮೂರು ಅಂಶಗಳಲ್ಲಿ ಮಾತ್ರ ಸಾಮರಸ್ಯ ಹುಡುಕಬೇಕು.
* ಪ್ರೇಮಿಗಳು ಮೇಲಿನ ವಿಚಾರ ತಮಗೆ ಸಂಬಂಧಿಸಿದ್ದಲ್ಲ ಎಂದುಕೊಳ್ಳುವಂತಿಲ್ಲ. ಪ್ರೇಮದ ನಶೆ ಎಲ್ಲ ಭಿನ್ನತೆಯನ್ನೂ ತಾತ್ಕಾಲಿಕವಾಗಿ ಹಿಂದಕ್ಕೆ ತಳ್ಳಿರುತ್ತದೆ. ಹಾಗಾಗಿ ಎಲ್ಲಾ ಪ್ರೇಮಿಗಳಿಗೂ ತಮ್ಮದು ಅಮರಪ್ರೇಮ ಅನ್ನಿಸುತ್ತಿರುತ್ತದೆ. ಒಮ್ಮೆ ದಾಂಪತ್ಯದ ಜವಾಬ್ದಾರಿಗಳನ್ನು ನಿಭಾಯಿಸುವ ಸಮಯ ಬಂದ ತಕ್ಷಣ ಈ ನಶೆ ಸಂಪೂರ್ಣವಾಗಿ ಇಳಿದು, ಕಠೋರ ವಾಸ್ತವ ಕಣ್ಣೆದುರಿಗೆ ಬರುತ್ತದೆ! ಹಾಗಾಗಿ ಮದುವೆಯಾಗಬೇಕೆಂದಿರುವ ಪ್ರೇಮಿಗಳು ತಮ್ಮ ಭಾವೀಜೀವನದ ಆದ್ಯತೆಗಳ ಬಗೆಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕಾಗುತ್ತದೆ.
*ಪೋಷಕರು ಹೇಗಾದರೂ ಮಾಡಿ ಪ್ರೇಮವಿವಾಹಗಳನ್ನು ತಪ್ಪಿಸುವ ಪ್ರಯತ್ನವನ್ನು ಮಾತ್ರ ಮಾಡದೆ ತಮ್ಮ ಮಕ್ಕಳ ಆಯ್ಕೆ ಎಷ್ಟು ಸೂಕ್ತ ಅಂತ ಮಕ್ಕಳ ಜೊತೆ ಚರ್ಚೆಮಾಡಬೇಕು. ಇದರಿಂದ ಮಕ್ಕಳನ್ನು ಈ ವಿವಾಹದಿಂದ ದೂರಮಾಡುವುದು ಸಾಧ್ಯವಾಗದಿದ್ದರೂ ಕೊನೆಯ ಪಕ್ಷ ಅವರಿಗೆ ತಮ್ಮ ಜವಾಬ್ದಾರಿಗಳ ಅರಿವನ್ನು ಮೂಡಿಸಬಹುದು.
4. ”ಸಾವಿರ ಸುಳ್ಳನ್ನಾದರೂ ಹೇಳಿ ಒಂದು ಮದುವೆ ಮಾಡಿಸು” ಎನ್ನುವ ಹಳೆಯ ನಾಣ್ಣುಡಿ ಇವತ್ತಿನ ಸಂದರ್ಭದಲ್ಲಿ ಅಪಾಯಕಾರಿಯಾಗಬಹುದು. ಇದನ್ನು “ಸಾವಿರ ನಿಜವನ್ನಾದರೂ ಹೇಳಿ ಒಂದು ಹೊಂದಾಣಿಕೆಯಾಗಲಾರದ ಮದುವೆಯನ್ನು ತಪ್ಪಿಸು” ಎಂದು ಬದಲಾಯಿಸಿದರೆ ಉತ್ತಮ! ಹುಡುಗ, ಹುಡುಗಿಯರಷ್ಟೇ ಅಲ್ಲ ಅವರ ಪೋಷಕರು, ಮನೆಯವರೆಲ್ಲಾ ಸಂಬಂಧಗಳನ್ನು ಮಾಡುವಾಗ ಸುಳ್ಳನ್ನು ಹೇಳಲೇಬಾರದು. ಇದರಿಂದ ಮುಂದೆ ಭಾರೀ ಅನಾಹುತಗಳಾಗಬಹುದು. ಸುಳ್ಳು ಹೇಳುವಷ್ಟೇ ಅಪಾಯಕಾರಿಯಾದ ಇನ್ನೊಂದು ಅಂಶ ವಸ್ತುಸ್ಥಿತಿಯನ್ನು ಮುಚ್ಚಿಡುವುದು ಕೂಡ. ಯಾವುದು ಪ್ರಮುಖ ವಿಚಾರ, ಮತ್ತಾವುದು ಕ್ಷುಲ್ಲಕ ವಿಚಾರ ಎನ್ನುವುದು ಆಯಾ ವ್ಯಕ್ತಿಯ ಮೇಲೆ ಅವಲಂಭಿಸಿರುತ್ತದೆ. ಹಾಗಾಗಿ ಸಂಬಂಧಿಸಿದ ಎಲ್ಲ ವಿಚಾರಗಳನ್ನು ಬಿಚ್ಚಿಡಬೇಕು. ಉದಾಹರಣೆಗೆ ಮದುವೆಯಾಗುವ ಹುಡುಗ/ಗಿ ಸಂಪೂರ್ಣವಾಗಿ ಆರೋಗ್ಯವಾಗಿದ್ದರೂ ಕುಟುಂಬದಲ್ಲಿ ಇತರರಿಗೆ ಮಾನಸಿಕ/ದೈಹಿಕ ಖಾಯಿಲೆ ಇರುವುದು; ಹತ್ತಿರದ ಸಂಬಂಧಿಯೊಬ್ಬರು ನ್ಯಾಯಾಲಯಗಳಿಂದ ಶಿಕ್ಷೆಗೊಳಗಾಗಿರುವುದು; ವ್ಯಾಪಾರ ವ್ಯವಹಾರಗಳಲ್ಲಿ ನಷ್ಟವನ್ನು ಅನುಭವಿಸಿರುವುದು- ಮುಂತಾದವು. ಇಂತಹ ವಿಚಾರಗಳು ದಂಪತಿಗಳ ಸೌಹಾರ್ದಯುತ ಬದುಕಿಗೆ ಅಗತ್ಯವಿಲ್ಲ, ನಿಜ. ಆದರೆ ಒಮ್ಮೆ ಭಿನ್ನಾಭಿಪ್ರಾಯಗಳು ಮೂಡಿದಾಗ ಅವುಗಳನ್ನು ಹೆಚ್ಚು ಇವು ಮಾಡಲು ಸಾಕಾಗುತ್ತದೆ! ಇಂತಹದೇ ಕ್ಷುಲ್ಲಕ ವಿಚಾರಗಳಿಗಾಗಿ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟೆಲೇರಿರುವವರು ಸಾಕಷ್ಟು ಜನರಿದ್ದಾರೆ.
6. ಜಾತಕ ಮತ್ತಿತರ ಧಾರ್ಮಿಕ ನಂಬಿಕೆಗಳು ಯಾರದ್ದಾದರೂ ಆದ್ಯತೆಯಾಗಿದ್ದರೆ ಅದು ಅವರವರ ಆಯ್ಕೆ. ಹಾಗಿದ್ದರೂ ಅವುಗಳನ್ನು ಮಾತ್ರ ನಂಬಿ ಕಣ್ಣಿಗೆ ಕಾಣುವ ಸತ್ಯಗಳನ್ನು ಕಡೆಗಣಿಸಬಾರದು. ಜಾತಕವನ್ನು ಸಂಪೂರ್ಣ ಹೊಂದಾಣಿಕೆ ಮಾಡಿ ಮದುವೆಯಾದ ನನ್ನ ಪರಿಚಿತರು ಆರೇ ತಿಂಗಳಲ್ಲಿ ವಿಚ್ಛೇದನ ಪಡೆದುಕೊಂಡರು. ಇಂತಹ ಸಾವಿರಾರು ಘಟನೆಗಳು ನಮ್ಮ ಸುತ್ತಲೂ ಇವೆ.
7. ಸಾಂಪ್ರದಾಯಿಕ ಮದುವೆಗಳಲ್ಲೂ ಹುಡುಗ ಹುಡುಗಿಯರಿಗೆ ಮುಕ್ತವಾಗಿ ಮಾತನಾಡಿಕೊಳ್ಳಲು ಅವಕಾಶವಿರಬೇಕು. ಹೆಣ್ಣು ನೋಡಲು ಹೋದಾಗ ಉಪ್ಪಿಟ್ಟು, ಕೇಸರಿಬಾತುಗಳ ಮಧ್ಯೆ ಹತ್ತು ನಿಮಿಷದ ಖಾಸಗಿಯಾಗಿ ಮಾತನಾಡುವ ರಿವಾಜಿನಿಂದ ಏನೂ ಪ್ರಯೋಜನವಿಲ್ಲ. ಆಗ “ನಿನ್ನ ಹೆಸರೇನು, ಏನು ಓದಿದ್ದೀಯಾ, ಯಾವ ಕಾಲೇಜು, ಯಾವ ವರ್ಷ”, ಎಂದೆಲ್ಲಾ ಕೇಳುವಷ್ಟರಲ್ಲಿ ಪೋಷಕರಿಂದ ಕರೆ ಬಂದಿರುತ್ತದೆ! ಇದಕ್ಕೆ ಬದಲಾಗಿ ಎರಡೂ ಕಡೆÀಯ ಹಿರಿಯರು ಮಕ್ಕಳಿಗೆ, “ನಿಮ್ಮಿಬ್ಬರ ವಿವಾಹ ಮಾಡುವ ಯೋಚನೆಯಿದೆ. ನೀವಿಬ್ಬರೂ ಕುಳಿತು ಮಾತನಾಡಿ ನಿಮ್ಮ ತೀರ್ಮಾನವನ್ನು ಹೇಳಿ” ಎಂದು ಸೂಚಿಸಬಹುದು. ಇಂತಹ ಚರ್ಚೆ, ವಿಚಾರ ವಿನಿಮಯಗಳನ್ನು ಒಂದೆರೆಡು ಘಂಟೆಗಳಲ್ಲಿ ಮುಗಿಸಬೇಕಾಗಿಲ್ಲ. ಇದಕ್ಕಾಗಿ ಹತ್ತಾರು ಬಾರಿ ಭೇಟಿಯಾಗುವ ಅವಕಾಶವಿರಬೇಕು. ಆಗ ಮಾತ್ರ ಸರಿಯಾದ ತೀರ್ಮಾನ ತೆಗೆದುಕೊಳ್ಳಲು ಸಾಧ್ಯ. ಇದೊಂದು ರೀತಿಯ ಸಾಂಪ್ರದಾಯಿಕ ಪ್ರೇಮವಿವಾಹವೆಂದು ಆಗ ಹೆಮ್ಮೆಯಿಂದ ಹೇಳಬಹುದು!
ಇತ್ತೀಚೆಗೆ ನನ್ನ ಸಂಬಂಧಿಯೊಬ್ಬರಲ್ಲಿ ಇಂತಹದೇ ಘಟನೆ ನಡೆಯಿತು. ಮನೆಯ ಹಿರಿಯರೆಲ್ಲಾ ಸೇರಿ ಹುಡುಗ ಮತ್ತು ಹುಡುಗಿಯ ಒಪ್ಪಿಗೆಯನ್ನು ಪಡೆದು ಮದುವೆಯನ್ನು ನಿಶ್ಚಯಿಸಿದ್ದರು. ಮೊದಲ ಭೇಟಿಯಲ್ಲಿ ಒಪ್ಪಿಗೆ ನೀಡಿದ್ದ ಮಕ್ಕಳು ನಿಶ್ಚಿತಾರ್ತಕ್ಕೆ ಮೊದಲು ಮತ್ತೆ ಕೆಲವು ಬಾರಿ ಭೇಟಿಯಾಗಿ ಚರ್ಚೆ ಮಾಡಿದ ನಂತರ ವಿವಾಹವಾಗದೇ ಇರಲು ನಿರ್ಧರಿಸಿದರು. ಇದರಿಂದ ಮುಂದೆ ಆಗಬಹುದಾದ ಸಾಕಷ್ಟು ಕಿರಿಕಿರಿಗಳನ್ನು ತಪ್ಪಿಸಲು ಸಾಧ್ಯವಾಯಿತು.
ಮುಂದುವರೆಯುವುದು…
ವಸಂತ್ ನಡಹಳ್ಳಿ