Home Blogroll ಕುಸಿಯುತ್ತಿರುವ ಆಪ್ತತೆ..

ಕುಸಿಯುತ್ತಿರುವ ಆಪ್ತತೆ..

0

‘ಇಂಥ ಮೇಳದವರಿಂದ‘ ಒಂದೇ ಒಂದು ಆಟ, ರಸಿಕರಿಗೆ ರಸದೂಟ, ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ, ಇಂದೇ ಇಂಥ ಮೈದಾನದಲ್ಲಿ ಹಾಕಿದ ಭವ್ಯ, ದಿವ್ಯ ವಿದ್ಯುದ್ದೀಪಾಲಂಕೃತ ರಂಗಮಂಟಪದಲ್ಲಿ, ಇಂಥ ಪ್ರಸಂಗ, ಇಂತಿಂಥ ಕಲಾವಿದರ ಪಾತ್ರಗಳು’ ಇತ್ಯಾದಿ ಪ್ರಾಸಬದ್ಧವಾದ ಮಾತುಗಳ ಮೂಲಕ ಆಟೋರಿಕ್ಷಾಕ್ಕೆ ಕಟ್ಟಿದ ಮೈಕಿನ ಮೂಲಕ ಅಥವಾ ಮೇಳದ ಟೆಂಪೋಕ್ಕೆ ಹಾಕಿದ ಮೈಕಿನ ಮೂಲಕ ನಡೆಯಲಿರುವ ಯಕ್ಷಗಾನ ಪ್ರಸಂಗದ ಕುರಿತು ಮಾಹಿತಿ ಮತ್ತು ಆಹ್ವಾನವನ್ನು ಪೇಕ್ಷಕರಿಗೆ ನೀಡುತ್ತಿದ್ದ ಕಾಲವೊಂದಿತ್ತು, ಆದರೆ ಕಾಲ ಬದಲಾದಂತೆ ಪ್ರಚಾರದ ವೈಖರಿ ಕೂಡ ಬದಲಾಗಿದ್ದು ಅಲ್ಲದೆ ಪ್ರೇಕ್ಷಕರು ಕೂಡ ಬದಲಾಗುತ್ತಿರುವುದು ವರ್ತಮಾನದ ವಿಶೇಷ. ಆಗೆಲ್ಲ ಕಲಾವಿದರು ಮತ್ತು ಪ್ರೇಕ್ಷಕರು ನಡುವೆ ವೈಯಕ್ತಿಕ ಪರಿಚಯ, ಪರಸ್ಪರ ವಿಚಾರ ವಿನಿಮಯಗಳು ಇರುತ್ತಿದ್ದವು. ರಾತ್ರಿಯಿಡೀ ನೋಡಿದ ಆಟದ ಕುರಿತು ಚರ್ಚೆಗಳಾಗುತ್ತಿದ್ದವು, ಪ್ರೇಕ್ಷಕರಲ್ಲೂ ಕಲಾವಿದರ ಕುರಿತು (ಅವರವರದ್ದೇ ಆದ ಕಾರಣಗಳಿಂದಾಗಿ) ಅಭಿಮಾನಿ ಬಳಗಗಳು ಇದ್ದದ್ದು ನಿಜ, ಹಾಗೇ ಮೇಳಗಳ ಕುರಿತೂ ಕೂಡ, ಪ್ರೇಕ್ಷಕ ವರ್ಗ ಮೇಳದಿಂದ ಮೇಳಕ್ಕೆ ಬೇರೆಯಾಗಿರುತ್ತಿದ್ದುದೂ ಉಂಟು.
ಯಕ್ಷಗಾನ ಪ್ರದರ್ಶನ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ‘ಸಮಯಮಿತಿ’ ಗೆ ಒಳಪಟ್ಟು ಪ್ರದರ್ಶನಗೊಳ್ಳಲು ಪ್ರಾರಂಭಿಸಿದಾಗಲೂ, ಕಲಾವಿದರು ಮತ್ತು ಪ್ರೇಕ್ಷಕರ ಸಂಬಂಧಗಳಲ್ಲಿ ಬಿರುಕುಗಳು ಸೃಷ್ಟಿಯಾದದ್ದಿಲ್ಲ, ಆದರೆ ಇತ್ತೀಚಿಗೆ ಜರುಗುತ್ತಿರುವ ಪ್ರದರ್ಶನಗಳನ್ನು ಕಂಡಾಗ ಕಂದಕ ಸೃಷ್ಟಿಯಾಗುತ್ತಿರುವುದು ಕಣ್ಣಿಗೆ ರಾಚುವಂತಿದೆ, ಕಾರಣಗಳು ಅನೇಕ ಇರಬಹುದು.
ಯಕ್ಷಗಾನದಲ್ಲಿ ಪ್ರಸ್ತುತ ಎರಡು ಬಗೆಯ ಮೇಳಗಳು, ಹವ್ಯಾಸಿ ಮೇಳಗಳು, ಇವು ಕೆಲವೊಂದು ಕಲಾವಿದರು ತಮ್ಮ ಬಿಡುವಿನ ವೇಳೆಯಲ್ಲಿ ಅಂದರೆ ವೃತ್ತಿನಿರತ ಮೇಳಗಳಲ್ಲಿ ಕೆಲಸವಿರದ ಸಮಯದಲ್ಲಿ ತಮ್ಮದೆ ಆದ ಒಂದು ಗುಂಪಿನೊಂದಿಗೆ ತಿರುಗಾಟ ಮಾಡುವುದು.
ಇನ್ನೊಂದು ವೃತ್ತಿ ನಿರತಮೇಳಗಳು ಇವುಗಳಲ್ಲಿ ಕೆಲವು, ಕೇವಲ ಹರಕೆ ಹೊತ್ತವರಿಗೆ ಮೀಸಲಾಗಿವೆ, ಹರಕೆ ಹೊತ್ತವರಿಗೆ ಹರಕೆ ತೀರಿದರೆ ಸರಿ. ಹೇಗೂ ಹರಕೆ ಬಯಲಾಟವೆಂದು ಕಲಾವಿದರು ತಮ್ಮಿಷ್ಟದಂತೆ ಪಾತ್ರ ಮಾಡಿ ಹೋದರಾಯಿತೆಂದು ಭಾವಿಸಿ ಪಾತ್ರ ನಿರ್ವಹಸಿದರೂ ಪ್ರಶ್ನಿಸಲು ಪ್ರೇಕ್ಷಕರು ಮುಂದಾಗುವುದಿಲ್ಲ. ಕಾರಣ ಆಟ ಆಡಿಸುವವರೇ ಬೇರೆ, ನೋಡುವವರೇ ಬೇರೆ ಉಳಿದ ವೃತ್ತಿನಿತರ ಮೇಳಗಳು ಮೊದಲಿನ ಹಾಗೆ ತಾವೇ ಖುದ್ಧಾಗಿ ಯಾವುದೇ ಪ್ರದರ್ಶನ ಏರ್ಪಡಿಸಿ, ಅದರ ಲಾಭ – ನಷ್ಟಗಳಿಗೆ ಭಾದ್ಯರಾಗುವುದಕ್ಕೆ ಬದಲಾಗಿ ಗುತ್ತಿಗೆದಾರರಿಗೆ ಪ್ರದರ್ಶನಗಳನ್ನು ಒಪ್ಪಿಸಿ ನಿಶ್ಚಿಂತರಾಗುವುದೇ ಅಧಿಕವಾಗುತ್ತಿದೆ. ಇಲ್ಲಿ ನಷ್ಟದ ಪ್ರಶ್ನೆ ಮೇಳಕ್ಕೆ ಉದ್ಬವಿಸುವುದಿಲ್ಲ, ಅದೇನಿದ್ದರೂ ಗುತ್ತಿಗೆದಾರರಿಗೆ ಬಿಟ್ಟ ವಿಷಯ. ಯಾವುದೇ ಗುತ್ತಿಗೆದಾರರಾದರೂ ನಷ್ಟ ಮಾಡಿಕೊಂಡು ಕಲಾಪೋಷಣೆ(!) ಮಾಡುವುದಿಲ್ಲ. ಆ ಮೇಳಗಳ ಕಲಾವಿದರು ಜೊತೆ ಕೆಲವೊಂದು ತಾರಾಮೌಲ್ಯಗಳಿರುವ ಕಲಾವಿದರು ಹಾಕಿಕೊಂಡು, ಪ್ರದರ್ಶನ ಪೂರ್ವದಲ್ಲೇ ಸಾಕಷ್ಟು ಹಣವನ್ನು ಗೌರವ ಪ್ರವೇಶ, ಪೋಷಕರು, ಮಹಾಪೋಷಕರು ಇತ್ಯಾದಿ ಹೆಸರಿನಲ್ಲಿ ಸಂಗ್ರಹಿಸಿಕೊಂಡು ನಿಶ್ಚಿಂತರಾಗುತ್ತಾರೆ. ಗುತ್ತಿಗೆದಾರರಿಗೆ ಇದೊಂದು ಲಾಭದಾಯಕ ವೃತ್ತಿ, ಕೆಲ ಸಂಘ, ಸಂಸ್ಥೆಗಳೂ ಇದಕ್ಕೆ ಹೊರತಲ್ಲ, ಒಂದಿಷ್ಟು ಹಣಗಳಿಸಲು, ಆಟವೊಂದನ್ನು ಗುತ್ತಿಗೆ ಪಡೆದು, ಸಾಧ್ಯವಾದಲ್ಲೆಲ್ಲ ಟಿಕೇಟ್ ಗಳನ್ನು ಹಾಕಿ ಲಾಭವಾಗುವುದನ್ನು ಖಾತ್ರಿಪಡಿಸಿಕೊಳ್ಳುತ್ತವೆ. ಹೀಗಾದಾಗ ಸ್ವ ಇಚ್ಚೆಯಿಂದ ಆಟ ನೋಡಲು ಬರುವ ಪ್ರೇಕ್ಷಕರಿಗೆ ಬದಲಾಗಿ ಹೇಗೂ ಟಿಕೇಟ್ಟಿದೆ ಎಂದು ಪುರುಸೊತ್ತು ಆದ ಹೊತ್ತಿಗೆ ಬಂದು, ಒಂದಷ್ಟು ಹೊತ್ತು ಕಳೆದು ಎದ್ದು ಹೋಗುವವರೇ ಅಧಿಕ. ಹೀಗಾಗಿ ಗೌರವ ಪ್ರವೇಶಕ್ಕಾಗಿ ಕಾಯ್ದಿರಿಸಿದ ಆಸನಗಳು ಮೊದಲಿಗೆ ಖಾಲಿ ಖಾಲಿ ಅನಂತರ ಸ್ವಲ್ಪ ಹೊತ್ತು ಭರ್ತಿ ಮತ್ತೆ ಖಾಲಿ, ಖಾಲಿ.
ಹೀಗಾಗಿ ಬಹುತೇಕ ಪ್ರೇಕ್ಷಕರು ಇಲ್ಲಿ ಸಂಚಾರಿ ಪ್ರೇಕ್ಷಕರೇ ವಿನಃ ಕಲಾಸಕ್ತ ಪ್ರೇಕ್ಷಕರಲ್ಲ, ಕಲಾವಿದರೂ ತಮ್ಮ ಸಂಭಾವನೆ ಖಾತ್ರಿಯಾಗಿರುವ ಕಾರಣದಿಂದ, ಸಭೆಯ ಹಿಂದೆ ಇರುವ ಪ್ರೇಕ್ಷಕರನ್ನು ನಿರ್ಲಕ್ಷಿಸಿದರೆ ಅದು ಸ್ವಾಭಾವಿಕ ಸಂಗತಿಯೇ ಆಗಿಬಿಡುತ್ತದೆ. ಮುಂದೆ ಸಂಚಾರಿ ಘಟಕ, ಹಿಂದಿನದ್ದು ಕಾಣಲಾಗದ್ದು! ಹೀಗಾಗಿ ಕಲಾವಿದರು ಮತ್ತು ಪ್ರೇಕ್ಷಕರ ನಡುವೆ ಏರ್ಪಡಬೇಕಾದ ಸಂಬಂಧದ ಸೃಷ್ಟಿ ಸಾಧ್ಯವಾಗದೆ ಒಟ್ಟಾರೆ ಪ್ರದರ್ಶನಕ್ಕಾಗಿ ಪ್ರದರ್ಶನ ಎಂಬಂತೆ ಪರಿವರ್ತಿತವಾಗುತ್ತಿರುವುದು ವರ್ತಮಾನದ ವ್ಯವಸ್ಥೆಯೇ ಆಗುತ್ತಿದೆ ಎಂಬುದು ವಿಷಾದದ ಸಂಗತಿ. ಇದರ ಜೊತೆಗೆ ಮೇಳದ ಖಾಯಂ ಕಲಾವಿದರು ಮತ್ತು ಅತಿಥಿ ಕಲಾವಿದರ ನಡುವಿನ ಹೊಂದಾಣಿಕೆಯ ಕೊರತೆ. ಅತಿಥಿ ಕಲಾವಿದರಿಗೆ ಸಂಭಾವನೆ ಅಧಿಕವೆಂಬ ಅಸಹನೆ ಕೂಡ ಪ್ರದರ್ಶನದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಒಂದು ಕಾಲದಲ್ಲಿ ವೃತ್ತಿನಿರತರಾಗಿದ್ದವರೇ ಸ್ವಯಂ ನಿವೃತ್ತಿ ಪಡೆದೋ ಅಥವಾ ಇನ್ನಿತರ ಕಾರಣಗಳಿಂದಲೂ ಮೇಳಗಳಿಂದ ದೂರಾಗಿ, ಕೇವಲ ಅತಿಥಿ ಕಲಾವಿದರಾಗಿ ಕರೆದಾಗ, ಕರೆದ ಮೇಳಗಳಿಗೆ, ಕರೆದ ಗುತ್ತಿಗೆದಾರರೊಂದಿಗಿನ ಸಂಬಂಧದಿಂದಾಗಿ ಬಂದು ಹೋಗುವುದು, ದುಡ್ಡಿನ ಮಾನದಂಡದಿಂದಲೇ ವಿನಃ ಕಲೆಯ ಮೇಲಿನ ಗೌರವದಿಂದ ಎಂದು ನಂಬುವುದು ಕಷ್ಟ. ಹಾಗಾಗೀ ಪರಸ್ಪರ ದುಡ್ಡು ಮಾಡುವುದರತ್ತಲೇ ಲಕ್ಷ ಹೊಂದುತ್ತ ಹೋದಂತೆ ಕಲೆಯ ಅವ್ಯವಸ್ಥೆಯ ಕುರಿತು ಹೆಚ್ಚು ಚರ್ಚಿಸುವುದೇ ಅನಗತ್ಯವೆನ್ನಿಸಬಹುದು! ಜೊತೆಗೆ ಸಿನಿಮಾಗಳನ್ನು ಮೀರಿಸುವ ಹಟತೊಟ್ಟು ಅವುಗಳ ಕಥೆಗಳನ್ನೇ ಯಕ್ಷಗಾನ ಮೇಳಕ್ಕೆ ತಂದು ವೇಷ, ಭೂಷಣವೊಂದನ್ನು ಹೊರತುಪಡಿಸಿ ಉಳಿದಂತೆ ಶುದ್ಧ ಸಾಮಾಜಿಕ ಪ್ರಸಂಗ ಪ್ರದರ್ಶಿಸುವ ಮೂಲಕ, ಪ್ರೇಕ್ಷಕರು ಬಯಸುತ್ತಾರೆ ಎಂದು ಸಮಜಾಯಿಸಿ ನೀಡುತ್ತ ಅದರಿಂದ ಮಾಡಿಕೊಳ್ಳಬಹುದಾದ ಲಾಭದತ್ತ ಮಾತ್ರ ಲಕ್ಷ ಹರಿಸುವುದೂ, ಕಲೆಯ ಬೆಳವಣಿಗೆಯ ದೃಷ್ಟಿಯಿಂದ ಅಪಾಯಕಾರಿಯಾದ ಅಂಶವೇ ಆಗಬಹುದು. ದಿನಗಳು ಉರುಳಿದಂತೆ ಮೂಲವೇ ಮರೆತು ಹೊಸತೇ ಮೂಲವೆಂಬಂತೆ ಒಂದು ಭ್ರಮಾಲೋಕ ಸೃಷ್ಟಿಯಾದರೆ ಭವಿಷ್ಯದ ಪ್ರೇಕ್ಷಕರಿಗೆ ಏನು ದಕ್ಕಬಹುದು?
ಯಕ್ಷಗಾನ ಕಲೆಯ ಉಳಿವಿಗೆ ಮತ್ತು ಬೆಳವಣಿಗೆಗೆ ಟೊಂಕಕಟ್ಟಿ ನಿಲ್ಲಲು ಅನುವಾಗಬೇಕೆಂಬ ಮಹದಾಸೆ ಹೊತ್ತು ಹುಟ್ಟಿದ ಸರ್ಕಾರಿ ಕೃಪಾಘೋಷಿತ ಯಕ್ಷಗಾನ ಅಕಾಡೆಮಿ, ಸದಾ ತನ್ನ ಕೊರತೆ ಬಜೆಟನ್ನೆ ಬಿಂಬಿಸುತ್ತ್ತಿರುತ್ತದೆ. ಅಲ್ಲಲ್ಲಿ ಒಂದಿಷ್ಟು ಕಮ್ಮಟಗಳನ್ನು, ಸಮ್ಮೇಳನಗಳನ್ನು ಪಂಡಿತರಿಂದ ಏರ್ಪಡಿಸಿ, ಒಂದಿಷ್ಟು ಕಲೆಯ ಕುರಿತಾಗಿ ಹಳೆಯ ಮೆಲುಕುಗಳನ್ನು ಮತ್ತು ಹೊಸ ಹಳಹಳಿಕೆಗಳನ್ನು ಮಂಡಿಸುವುದಕ್ಕೆ ಸೀಮಿತವಾಗುತ್ತದೆ. ಹಾಗೇ ಕೆಲವಡೆ ಕೆಲವು ಪ್ರದರ್ಶನಗಳಿಗೆ ಒಂದಿಷ್ಟು ಧನಸಹಾಯ ಮಾಡಿ ಅಲ್ಲಿಗೆ ಅಕಾಡೆಮಿಗೆ ಸಂಬಂಧಪಟ್ಟವರು, ಆಗಮಿಸಿ, ಪ್ರದರ್ಶನದ ಹೊತ್ತಲ್ಲೆ ಒಂದಷ್ಟು ಭಾಷಣ ಬಿಗಿಯಬಹುದು ಸಾಮನ್ಯ ಸಂಗತೀಯೇ ಅಥವಾ ಸಂಪ್ರದಾಯವೇ ತಿಳಿಯದಂತಾಗುತ್ತದೆ. ಹಾಗೇ ಅಶಕ್ತ ಕಲಾವಿದರಿಗೆ ಸಹಾಯವನ್ನು ನೀಡಬಹುದು ಯಾ ಸಹಾಯ ನೀಡುವಂತೆ ಸರಕಾರಕ್ಕೆ ಮನವಿ ಮಾಡಿ ಪ್ರಭಾವವನ್ನು ಬೀರಬಹುದು. ಇದು ಯೋಗ್ಯವಾದ ಕ್ರಮವೇ ಸರಿ. ಆದರೆ ಅದರೊಟ್ಟಿಗೆ ಸಶಕ್ತ ಕಲಾವಿರ ಸೃಷ್ಟಿಗೆ ಅದಕ್ಕಿಂತ ಹೆಚ್ಚಾಗಿ ಪ್ರೇಕ್ಷಕರಲ್ಲಿ ಕಾಳಜಿ ಮಾಡುವ ಕುರಿತಾಗಿ ನಡೆಸಿದ ಪ್ರಯತ್ನಗಳ ಕುರಿತು ಮಾಹಿತಿ ಸಿಕ್ಕಿಲ್ಲ. ಬಹುಶಃ ಪ್ರಚಾರದ ಕೊರತೆಯಿದ್ದರೂ ಇರಬಹುದು ಅಥವಾ ತಿಳುವಳಿಕೆಯ ಕೊರತೆಯಿದ್ದರೂ ಇರಬಹುದು. ಮತ್ತೆ ಮುಂದೆ ಸರಿಯಾದ ಪ್ರಯತ್ನಗಳು ನಡೆಯಲ್ಪಟ್ಟು, ಫಲಕಾರಿಯಾಗಿ, ಕಾಟಾಚಾರಕ್ಕಲ್ಲದೆ ನಿಜವಾದ ಕಲಾಸಕ್ತಿಯಿಂದ ಕಳಕಳಿಯಿಂದ ಪ್ರದರ್ಶನಗಳಿಗೆ ಬರುವ ಪ್ರೇಕ್ಷಕ ವರ್ಗ ಸೃಷ್ಟಿಯಾದರೆ ಅದಕ್ಕಿಂತ ಸಂತೋಷದ ಸಂಗತಿ ಬೇರೆ ಇರಲಾರದು.
ಕಲೆ ಕಲಾವಿದರು ನಿಜವಾದ ಕಲಾ ರಸಿಕ ಪ್ರೇಕ್ಷಕರಲ್ಲಿ ಪರಸ್ಪರ ಅನುಸಂಧಾನ ಏರ್ಪಟ್ಟಾಗ ಮಾತ್ರ ಕಲೆಯ ಅಭಿವೃದ್ಧಿ ಸಾಧ್ಯ ಹಾಗಲ್ಲದೆ ಹರಕೆ ಗುತ್ತಿಗೆಗಳಿಂದ ಮೇಳಗಳು ಮತ್ತು ಗುತ್ತಿಗೆದಾರರು, ಕಲಾವಿದರು ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದಬಹುದೆ ವಿನಃ ಕಲೆಯಲ್ಲವೆಂಬುದನ್ನು ಖಂಡಿತವಾಗಿ ಹೇಳಿದರೆ ಕಹಿಯೆಂದು ಭಾವಿಸುವುದು, ಅವರವರ ಮನೋಧರ್ಮಕ್ಕೆ ಬಿಟ್ಟಿದ್ದು.
ರವೀಂದ್ರ ಭಟ್ ಕುಳಿಬೀಡು.