Home Blogroll ಕೃಷಿ ಸಾಲ, ದಾಖಲೆ, ಸುಸ್ತು ಇತ್ಯಾದಿ!

ಕೃಷಿ ಸಾಲ, ದಾಖಲೆ, ಸುಸ್ತು ಇತ್ಯಾದಿ!

0

ರೈತರು ಖಾಸಗಿ ಸಾಲದ ಬಲೆಗೆ ಸಿಕ್ಕಿ ಬಸವಳಿಯುತ್ತಿದ್ದಾರೆ ಎಂಬುದು ಕೂಡ ಸತ್ಯವೇ. ಬೆಳೆ ನಾಶ, ಬೆಲೆ ಕುಸಿತಗಳದ್ದು ನೇರ ಪರಿಣಾಮವಾಗಿ ಆತ್ಮಹತ್ಯೆಗಳು ಸಂಭವಿಸುತ್ತವೆ. ಖಾಸಗಿ ಸಾಲದ ವಿಪರೀತ ಬಡ್ಡಿ ದರ, ಬಡ್ಡಿ ಮಾರ್ವಾಡಿಗಳ ಗೂಂಡಾಗಿರಿಯೂ ತನ್ನ ಪಾಲನ್ನು ನೀಡಿದೆ. ಕೊನೆ ಪಕ್ಷ ರಾಜ್ಯ ಸರ್ಕಾರ ಇದೀಗ ರೈತರಿಗೆ ಕೃಷಿ ಗ್ರಾಮೀಣ ಬ್ಯಾಂಕ್‍ಗಳಲ್ಲಿ ಶೇ.3ರ ಬಡ್ಡಿದರದಲ್ಲಿ ಸಾಲ ಒದಗಿಸಲು ಮುಂದಾಗಿದೆ.
ಹಾಗೆಂದು ರೈತರು ಟವೆಲ್ ಕೊಡವಿ ಬ್ಯಾಂಕ್ ಮುಂದೆ ನಿಂತರೆ ಸಾಲ ಮಂಜೂರಾಗುವುದಿಲ್ಲ. ಅಲ್ಲೂ ದಾಖಲೆಗಳನ್ನು ಒದಗಿಸುವ ಗೋಟಾಳಿ. ಗ್ರಾಮೀಣ ಬ್ಯಾಂಕ್‍ಗಳಲ್ಲಿ ಒದಗಿಸಬೇಕಾದ ದಾಖಲೆಗಳ ಸಂಖ್ಯೆಯನ್ನು ಸೀಮಿತಗೊಳಿಸಲೂ ಸರ್ಕಾರ ಯೋಚಿಸಬೇಕು. ಅದಕ್ಕೂ ಮುನ್ನ ರೈತರಿಗೆ ಯಾವ್ಯಾವ ದಾಖಲೆಗಳು ಬೇಕು ಎಂಬ ವಿವರ ತಿಳಿದಿದ್ದಾದರೆ ಅಷ್ಟರಮಟ್ಟಿಗೆ ತಿರುಗಾಟಗಳ ಸುಸ್ತು ಕಡಿಮೆಯಾದೀತು. ಆ ನಿಟ್ಟಿನಲ್ಲಿ ಅಧ್ಯಯನ ಆಧರಿಸಿದ ತಿಳುವಳಿಕೆ ಇದು.
ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ಗೆ ತೆರಳುವ ಮುನ್ನವೇ ರೈತರ ಕೈಯಲ್ಲಿ ಕೆಲವು ದಾಖಲೆಗಳು ಸಿದ್ಧವಿದ್ದರೆ ಕ್ಷೇಮ. ಮುಖ್ಯವಾಗಿ, ಜಮೀನಿನ ಮೂಲದಾಖಲೆ ಬೇಕು. ಆಸ್ತಿಯ ಖರೀದಿ ಪತ್ರ ಅಥವಾ ಹಿಸ್ಸಾ ಪತ್ರಗಳೇ ಅವು. ಹಿಸ್ಸಾ ಪತ್ರದ ಸಂಬಂಧವಾಗಿಯೇ ಕೆಲವೊಮ್ಮೆ ಗೊಂದಲಗಳಾಗುತ್ತವೆ. ಹಿಸ್ಸಾದ ಅಧಿಕೃತ ಪತ್ರ ಒಂದೇ ಇದ್ದು, ಅದು ಒಬ್ಬ ಫಲಾನುಭವಿಯಲ್ಲಿ ಮಾತ್ರ ಇರುತ್ತದೆ. ಹಿಸ್ಸಾ ಸಮಯದಲ್ಲೇ ಪ್ರಪ್ರತ್ಯೇಕ ಹಿಸ್ಸಾ ಪತ್ರ ಮಾಡಿಸಿ ನೊಂದಾಯಿಸಿಕೊಳ್ಳುವುದು ಅನುಕೂಲ.
ಮೊತ್ತಮೊದಲಾಗಿ, ಸಂಬಂಧಿಸಿದ ಗ್ರಾಮಲೆಕ್ಕಿಗರಿಂದ ಹಲವು ದಾಖಲೆಗಳನ್ನು ಸಂಪಾದಿಸಿಕೊಳ್ಳಬೇಕಾಗುತ್ತದೆ. ವಂಶವೃಕ್ಷ ಅಂತಹ ಒಂದು ದಾಖಲೆ. ಸಾಲ ಮಾಡುವವರ ಅಜ್ಜ, ಅಜ್ಜಿಯ ಹೆಸರಿನಿಂದ ಆರಂಭಿಸಿ ಮನೆತನದ ಎಲ್ಲ ಗಂಡು-ಹೆಣ್ಣು ಮಕ್ಕಳ ವಿವರ ಇರಿಸಿಕೊಂಡು ಹೋದರೆ ಕೆಲಸ ಸುಗಮ. ಸಾಲ ಮಾಡುವಾತ ತನ್ನ ಪತ್ನಿ, ಮಕ್ಕಳ ವಯಸ್ಸನ್ನೂ ಒದಗಿಸಬೇಕು. ವಂಶವೃಕ್ಷಕ್ಕೆ ಊರಿನ ಕನಿಷ್ಠ ಇಬ್ಬರಿಂದ ಸಾಕ್ಷ್ಯ ಹಾಕಿಸಿಕೊಳ್ಳಬೇಕು. ಇದನ್ನು ಗ್ರಾಮಲೆಕ್ಕಿಗರೇ ಹಾಕಿಸಬೇಕೆಂಬ ನಿಯಮ ಇದ್ದರೂ ಪದ್ಧತಿಯ ಪ್ರಕಾರ ಅದು ರೈತನ ಜವಾಬ್ದಾರಿ!
ಕಂದಾಯ ತೀರುವಳಿಯ ಪತ್ರವೂ ಅವಶ್ಯಕ. ಬಾಕಿ ಇದ್ದ ಕಂದಾಯವನ್ನು ಮಾತ್ರ ಈಗ ಕಟ್ಟಲೇಬೇಕಾಗುತ್ತದೆ! ಗ್ರಾಮಲೆಕ್ಕಿಗರೇ ಜಮೀನಿನ ಚಕ್‍ಬಂದಿಯ ವಿವರಗಳನ್ನು ಲಿಖಿತವಾಗಿ ನೀಡುತ್ತಾರೆ. ಈ ದಾಖಲೆ ಒದಗಿಸಲು ತಮ್ಮ ಜಮೀನಿನ ಗಡಿಯ ನಾಲ್ಕೂ ದಿಕ್ಕುಗಳಲ್ಲಿ ಇರುವ ಚಿರಾಸ್ತಿ ವಿವರವನ್ನು ರೈತನೇ ಒದಗಿಸಿದರೆ ತಕ್ಷಣ ಕೆಲಸ ಆಗುವುದು ಖಚಿತ.
ಈ ಜಮೀನುಗಳ ಅಂದಾಜು ನಕಾಶೆ, ಹಿಡುವಳಿ ದೃಢೀಕರಣದ ವರದಿಯನ್ನು ಗ್ರಾಮಲೆಕ್ಕಿಗರೇ ತಯಾರಿಸಿಕೊಡುತ್ತಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಗ್ರಾಮಲೆಕ್ಕಿಗರಿಂದ
1. ಜಮೀನಿನ ಅಂದಾಜು ನಕಾಶೆ
2. ಹಿಡುವಳಿ ದೃಢೀಕರಣ ಪತ್ರ
3. ಜಮೀನಿನ ಚಕ್‍ಬಂದಿ ದಾಖಲೆ
4. ವಂಶವೃಕ್ಷ
5. ಕಂದಾಯ ತೀರುವಳಿ ಪತ್ರ, ಈ ಐದನ್ನು ಬ್ಯಾಂಕ್‍ಗೆ ಹೋಗುವ ಮುನ್ನವೇ ಪಡೆದುಕೊಂಡಿದ್ದರೆ ಸಲೀಸು.
ಜಮೀನಿನ ಮ್ಯುಟೇಶನ್ ಬೇಕಾದ ಇನ್ನೊಂದು ದಾಖಲೆ. ಅದಾಗಲೇ ಕಂಪ್ಯೂಟರೀಕೃತ ವ್ಯವಸ್ಥೆಯಲ್ಲಿ ಸೇರಿದ್ದರೆ ಕೇವಲ 15 ರೂ. ಶುಲ್ಕ ನೀಡಿ ತಾಲ್ಲೂಕು ಕಛೇರಿ ಅಥವಾ ನೆಮ್ಮದಿ ಕೇಂದ್ರಗಳಲ್ಲಿ ಪಡೆಯಬಹುದು. ಜಮೀನಿನ ಹೋಬಳಿ, ಗ್ರಾಮ ಮತ್ತು ಸರ್ವೆ ನಂ.ಗಳನ್ನು ತಿಳಿಸಿದರೆ ಸಾಕು. ಇದೇ ರೀತಿ ಜಮೀನಿನ ಪಹಣಿ ಪತ್ರವನ್ನು ತೆಗೆದುಕೊಳ್ಳಬೇಕು. ಬ್ಯಾಂಕ್‍ನಲ್ಲಿ ಒಂದಕ್ಕಿಂತ ಹೆಚ್ಚು ಮಾದರಿಯ ಸಾಲ ಪಡೆದರೂ ಒಂದು ಸೆಟ್ ಅಸಲು ಪ್ರತಿ ಸಾಕಾಗುತ್ತದೆ. ಉಳಿದಂತೆ ನಕಲುಗಳನ್ನು ಇರಿಸಿಕೊಳ್ಳಬೇಕು.
ಒಂದೊಮ್ಮೆ ಮ್ಯುಟೇಶನ್ ತಾಲ್ಲೂಕು ಕಛೇರಿಯಲ್ಲಿ ಕಂಪ್ಯೂಟರೀಕೃತ ಆಗಿರÀದಿದ್ದಲ್ಲಿ ಸ್ವಲ್ಪ ಗೋಳಿದೆ. ಸಾಮಾನ್ಯವಾಗಿ, ಈ ಹಳೆಯ ದಾಖಲೆಗಳು ನಾಡ ಕಛೇರಿ ಎಂಬ ವ್ಯವಸ್ಥೆಯಡಿ ಇರುತ್ತವೆ. ಇಲ್ಲಿ ಮ್ಯುಟೇಶನ್‍ನ್ನು ಕೈಯಿಂದ ಬರೆದುಕೊಡಲಾಗುತ್ತದೆ. ನಾವಿರುವ ಸ್ಥಳದಿಂದ ಈ ಕಛೇರಿ ದೂರವಿದ್ದಲ್ಲಿ ಮ್ಯುಟೇಶನ್‍ನ ಖಾಲಿ ಫಾರಂಗಳನ್ನು ಹಿಡಿದುಕೊಂಡೇ ಹೋದರೆ ಕ್ಷೇಮ. ಸಾಧಾರಣವಾಗಿ ಗ್ರಾಮಲೆಕ್ಕಿಗರಲ್ಲಿ ಈ ಕುರಿತಂತೆ ಮಾಹಿತಿ, ಸದರಿ ಕಛೇರಿಯವರ ದೂರವಾಣಿ ಸಂಖ್ಯೆ ಇದ್ದಿರುತ್ತವೆ. ಅದರ ಉಪಯೋಗ ಪಡೆದುಕೊಳ್ಳಬಹುದು. ಗ್ರಾಮಲೆಕ್ಕಿಗರಲ್ಲಿ ಹಾಗೂ ನಾಡ ಕಛೇರಿಗಳಲ್ಲಿ ಲಂಚ ನೀಡದೆ ಕೆಲಸ ಮಾಡಿಸಿಕೊಳ್ಳುವುದು ನಿಮ್ಮ ಸಾಮಥ್ರ್ಯಕ್ಕೆ ಬಿಟ್ಟ ವಿಚಾರ!
ಮುಂದಿನದೇ ಬ್ಯಾಂಕ್ ಭೇಟಿ. ಯಾವುದೇ ಪ್ರಾಥಮಿಕ ಸರಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ನಲ್ಲಿನ ಸಾಲ ಪಡೆಯುವ ಮುನ್ನ ಆ ಬ್ಯಾಂಕ್‍ನ ಸದಸ್ಯರಾಗಬೇಕಾಗುತ್ತದೆ. ಪ್ರತಿ ವಲಯಕ್ಕೆ ಯಾವುದೋ ಒಂದು ಪಿಎಲ್‍ಡಿ ಬ್ಯಾಂಕ್ ನಿರ್ವಾಹಕವಾಗಿರುತ್ತದೆ. ಅಲ್ಲಿ ಮಾತ್ರ ರೈತ ಸಾಲ ಮಾಡಬಹುದು. ಸಾಲ ಪಡೆಯಬೇಕಾದ ಯೋಜನೆಯನ್ನು ಗುರ್ತಿಸಿ ಅವರಿಗೆ ತಿಳಿಸಬೇಕು. ಸಾಮಾನ್ಯವಾಗಿ ಎಲ್ಲ ಸಾಲದ ಯೋಜನೆಗಲಿಗೆ ತಾಂತ್ರಿಕ ವರದಿ ಅಗತ್ಯ. ಈಗೀಗ ಬ್ಯಾಂಕ್‍ಗಳಲ್ಲಿಯೇ ನಿಗದಿಯಾದ ಒಬ್ಬ ಇಂಜಿನೀಯರ್‍ರಿಂದ ವರದಿ ಸಿದ್ಧಪಡಿಸಿಕೊಡುವ ವ್ಯವಸ್ಥೆಯಾಗಿರುತ್ತದೆ. ಸರಿಸುಮಾರು ಅದಕ್ಕೆ 200 ರೂ. ಶುಲ್ಕವಿದೆ. ಅದಕ್ಕೆ ರಸೀದಿ ಮಾತ್ರ ಸಿಕ್ಕುವುದಿಲ್ಲ! ಸಾಲ ಅಪೇಕ್ಷಿಸುವವರಿಗೆ ಸದರಿ ಗ್ರಾಮೀಣ ಬ್ಯಾಂಕ್ ಇತರ ಸ್ಥಳೀಯ ಸಹಕಾರ ಸಂಘ ಹಾಗೂ ಷೆಡ್ಯೂಲ್ ಬ್ಯಾಂಕ್‍ನಿಂದ ಸುಸ್ತಿ ಆಗದಿರುವ ಬಗ್ಗೆ ದೃಢೀಕರಣ ಪತ್ರ ತರಲು ತಿಳಿಸುತ್ತಾರೆ. ಅದಕ್ಕೆಂದೇ ಸಿದ್ಧಪಡಿಸಿದ ಮುದ್ರಿತ ಪತ್ರವನ್ನು ಗ್ರಾಮೀಣ ಬ್ಯಾಂಕ್ ಖುದ್ದು ನೀಡುತ್ತದೆ. ಅದಕ್ಕೆ ಸಹಿ ಮಾಡಿ ಮರಳಿ ನೀಡಬೇಕಾಗುತ್ತದೆ.
ಪ್ರತಿ ಸಾಲ ಯೋಜನೆಗೆ ಒಂದರಂತೆ ಪಾಸ್‍ಪೋರ್ಟ್ ಫೋಟೋ ಬೇಕು. ಇಂತಹ ಸಂದರ್ಭದಲ್ಲಿ ಹೆಚ್ಚು ಫೋಟೋಗಳನ್ನು ಒಯ್ದುಬಿಟ್ಟಿರಬೇಕು. ಈ ದಿನಗಳಲ್ಲಿ 30-35 ಫೋಟೋಗಳನ್ನು 25 ರೂ.ಗಳಿಗೆ ಒದಗಿಸುವ ಕೊಡುಗೆಯನ್ನು ಫೋಟೋ ಸ್ಟುಡಿಯೋಗಳು ಘೋಷಿಸುತ್ತವೆ. ಅದನ್ನು ಬಳಸಿ ಫೋಟೋ ಹೊಡೆಸಿ ಇರಿಸಿಕೊಳ್ಳುವುದು ಜೇಬಿಗೆ ನಿರಾಳ!
ಬ್ಯಾಂಕ್‍ಗಳವರು ಪ್ರತಿ ಫೈಲ್ ಸಿದ್ಧಪಡಿಸಲು ನಿಗದಿತ ಶುಲ್ಕ ಪಡೆಯುತ್ತವೆ. ಇದು ಸಾಕಷ್ಟು ಜಾಸ್ತಿಯೂ ಇರುತ್ತದೆ. ಹಾಗಾಗಿ ಸಾಲ ಮಾಡುವವರು 30-50 ಸಾವಿರದ ಮೊತ್ತದ ಯೋಜನೆಗಳನ್ನು ಆಯ್ದುಕೊಂಡರೆ ಈ ಶುಲ್ಕವನ್ನು ಭರಿಸಬಹುದು. ಇಲ್ಲದಿದ್ದರೆ ನಷ್ಟದ ಬಾಬತ್ತು. ಸಾಲದ ಯೋಜನೆ ಎಷ್ಟೇ ಚಿಕ್ಕದಿದ್ದರೂ ಫೈಲ್‍ನ ನಿಗದಿತ ಫೀ ಬದಲಾಗುವುದಿಲ್ಲ ಎಂಬುದು ನೆನಪಿನಲ್ಲಿರಬೇಕು.
ಬ್ಯಾಂಕ್‍ನಲ್ಲೂ ಕೂಡ ಸರಿಯಾಗಿ ಮಾಹಿತಿ ಕೊಡದೆ ಅಲೆದಾಡಿಸುವುದು ಸಂಪ್ರದಾಯ. `ಸಾಲ ಬೇಕೆಂದರೆ ರೈತ ಓಡಾಡಬೇಕು’ ಎಂಬುದು ಅವರ ನೀತಿ. ಸಾಲ ಯೋಜನೆಗೆ ಬೇಕಾಗುವ ದಾಖಲೆಗಳನ್ನು ಒಂದಲ್ಲ ಎರಡು ಬಾರಿ ಕೇಳಿ ಖಚಿತಪಡಿಸಿಕೊಳ್ಳಬೇಕು. ರೈತ ತನ್ನ ಜಮೀನಿನ ಕೆಲಸ ಬಿಟ್ಟು ಬ್ಯಾಂಕ್‍ಗೆ ಓಡಾಡಲಿ ಎಂದು ಬಯಸುವ ಸ್ಯಾಡಿಸ್ಟ್ ಗುಣಕ್ಕೆ ಏನೂ ಮಾಡಲು ಸಾಧ್ಯವಿಲ್ಲ ಬಿಡಿ.
ಪ್ರತಿ ಸಾಲಕ್ಕೆ ಗ್ರಾಮಲೆಕ್ಕಿಗರು ಕೊಟ್ಟ ದಾಖಲೆಗಳು, ಆರ್‍ಟಿಸಿ, ಮ್ಯುಟೇಶನ್‍ಗಳ ಝೆರಾಕ್ಸ್ ಪ್ರತಿಗಳು ಬೇಕೇ ಬೇಕಾಗುತ್ತವೆ. ಕೆಲವೊಂದು ಸಾಲಕ್ಕೆ ಗ್ರಾಮೀಣ ಬ್ಯಾಂಕ್ ಸ್ವತಃ ದಾಖಲೆ ತರಿಸಿಕೊಳ್ಳಬೇಕು. ಉದಾ.ಗೆ ಕಾಳುಮೆಣಸು ಅಭಿವೃದ್ಧಿಗೆ, ಭೂಮಿ ಸದರಿ ಬೆಳೆಗೆ ಯೋಗ್ಯವೇ ಎಂಬ ಬಗ್ಗೆ ತಾಂತ್ರಿಕ ವರದಿಯನ್ನು ಖುದ್ದು ಬ್ಯಾಂಕ್ ತೋಟಗಾರಿಕೆ ಇಲಾಖೆ ಅಥವಾ ಸಾಂಬಾರ ಮಂಡಳಿಯಿಂದ ತರಿಸಿಕೊಳ್ಳಬೆಕು. ಇತ್ತ ಬ್ಯಾಂಕ್ ಈ ದಾಖಲೆ ಬೇಕು ಎಂದು ರೈತನಲ್ಲಿ ಹೇಳಿ ಅಲೆದಾಡಿಸಿಬಿಡುತ್ತವೆ. ಅತ್ತ ಹಾಗೆಲ್ಲ ನಾವು ಕೊಡೆವು, ಬ್ಯಾಂಕ್ ಪತ್ರ ಬೇಕು ಎಂದು ತೋಟಗಾರಿಕೆ ಇಲಾಖೆ ಕೈಯಾಡಿಸಿಬಿಡುವುದುಂಟು. ರೈತ ಸುಸ್ತು! ಇವ ಪಡೆಯಬೇಕಾದ ದಾಖಲೆ, ಅದಕ್ಕಿರುವ ಮಾಹಿತಿಗಳನ್ನು ಸ್ವಲ್ಪ ಸಮಯ ವೆಚ್ಚ ಮಾಡಿಯಾದರೂ ಅರಿತುಕೊಳ್ಳಬೇಕು. ಬ್ಯಾಂಕ್‍ನಲ್ಲಿ ತುಸು `ದಡ್ಡ’ ಎಂದುಕೊಳ್ಳುವಂತೆ ವರ್ತಿಸಿದರೂ ಚಿಂತೆಯಿಲ್ಲ. ಸಾಧ್ಯವಾದರೆ ಇಂತಹ ಸಾಲ ಕೋರಿದ ಇತರೆ ರೈತರ ದಾಖಲೆಗಳ ಫೈಲ್ ಗಮನಿಸಿದರಂತೂ ಅಷ್ಟರಮಟ್ಟಿಗೆ ಒಳ್ಳೆಯದು.
ಸಾಲವನ್ನು ಸಾಮಾನ್ಯವಾಗಿ ಕೇಂದ್ರ ಬ್ಯಾಂಕ್ ಚೆಕ್ ಮೂಲಕ ಒದಗಿಸುತ್ತಾರೆ. ಮತ್ತೆ ಅದಕ್ಕೆ ಅನುಗುಣವಾಗಿ ಶೇರು ಹಣ ಪಡೆಯುತ್ತಾರೆ. ಸ್ಟಾಂಪ್ ಪೇಪರ್ ಶುಲ್ಕ, ಈಸಿ ಫೀ, ಇತರೆ ಎಂಬಿತ್ಯಾದಿ ಶೀರ್ಷಿಕೆಯಡಿ ವಸೂಲಿಸಲಾಗುತ್ತದೆ. ಇದರಲ್ಲಿ ಶೇರು ಹಣ ಮಾತ್ರ ಮರುಪಾವತಿಗೆ ಲಭ್ಯವಿರುತ್ತದೆ.
ಒಂದರ್ಥದಲ್ಲಿ, ಇಲ್ಲಿನ ಮಾಹಿತಿ ಒಂದು ಪಕ್ಷಿನೋಟ ಮಾತ್ರ. ಕಿರಿಕ್ ಮಾಡುವ ಬ್ಯಾಂಕ್‍ನವರಿಗೆ ಗೋಳು ಹೊಯ್ದುಕೊಳ್ಳಲು ಸಾವಿರ ಮಾರ್ಗಗಳಿವೆ. ರೈತ ನಿರಾಶನಾಗಬೇಕಾಗಿದ್ದಿಲ್ಲ. ಅಷ್ಟಕ್ಕೂ ನಿರಾಶೆಗಳ ತಳಹದಿಯ ಮೇಲೆಯೇ ರೈತನ ಬದುಕು ಕಟ್ಟಲಾಗಿರುವುದು ತಾನೇ?
– ಮಾ.ವೆಂ.ಸ.ಪ್ರಸಾದ್