Home Blogroll ಸುಲುಭದ ಹಣಕ್ಕೆ ಮರುಳಾಗದಿರಿ!

ಸುಲುಭದ ಹಣಕ್ಕೆ ಮರುಳಾಗದಿರಿ!

0

ಗಂಡ, ಮನೆ, ಮಕ್ಕಳು ಎಂದು ಮನೆವಾರ್ತೆಯಲ್ಲಿ ಮಾತ್ರ ತೊಡಗಿಕೊಂಡ ಮಹಿಳೆಯರನ್ನು ಹಿಂದೆಲ್ಲಾ ‘ಹೌಸ್ ವೈಫ್’ ಎಂದು ಕರೆಯಲಾಗುತ್ತಿತ್ತು. ಈಗ ಅವರನ್ನು ಗೌರವಯುತವಾಗಿ ‘ಹೋಮ್ ಮೇಕರ್’ ಎನ್ನಲಾಗುತ್ತದೆ. ಹೆಸರು ಬದಲಾದರೇನು, ಅವರ ಪರಿಸ್ಥಿತಿಗಳು ಮಾತ್ರ ಹಾಗೆಯೇ ಇವೆ.
ನಮ್ಮಲ್ಲಿ ಬಹಳಷ್ಟು ಮಹಿಳೆಯರು ಆರ್ಥಿಕ ವಿಚಾರಗಳಲ್ಲಿ ಹೆಚ್ಚು ತಿಳಿದವರಲ್ಲ. ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಮಹಿಳೆಯರಿಗೆ, ಅದರಲ್ಲೂ ಹೆಚ್ಚಾಗಿ ಮನೆವಾರ್ತೆಯಲ್ಲಿ ಮಾತ್ರ ತೊಡಗಿಕೊಂಡವರಿಗೆ ತಮ್ಮ ಸ್ವಂತದ ಖರ್ಚುಗಳಿಗಾಗಿ ಹೇಗಾದರೂ ಸ್ವಲ್ಪ ಹಣವನ್ನು ಗಳಿಸುವ ಆಸೆಯಿರುತ್ತದೆ. ಜೊತೆಗೆ ತಮ್ಮ ಮನೆಗಳಿಗಾಗಿ ಕಡಿಮೆ ಹಣದಲ್ಲಿ ಅಥವಾ ಕಂತುಗಳಲ್ಲಿ ಗ್ರಾಹಕ ವಸ್ತುಗಳನ್ನು ಕೊಳ್ಳುವ ಆಸೆಯೂ ಇರುತ್ತದೆ. ಇಂದಿನ ಕೊಳ್ಳುಬಾಕ ಸಂಸ್ಕøತಿಯಲ್ಲಿ ಈ ಆಸೆಯ ಬೆಂಕಿಗೆ ತುಪ್ಪಸುರಿದು ಅವರನ್ನು ಆಕರ್ಷಿಸುವುದಕ್ಕೆ ಸಾಕಷ್ಟು ಜನ ಕಾದಿರುತ್ತಾರೆ. ಆಸೆ ಇರುವುದು ತಪ್ಪೇನಲ್ಲ, ಬಿಡಿ. ಆದರೆ ಅದನ್ನು ಪೂರೈಸಿಕೊಳ್ಳಲು ಬೇಕಾದ ದಾರಿಗಳು ಅವರಿಗೆ ಕಾಣುವುದಿಲ್ಲ. ಇದಕ್ಕಾಗಿ ಸರಿಯಾದ ಮಾರ್ಗದಲ್ಲಿ ಒಂದು ಖಾಯಮ್ಮಾದ ಆದಾಯದ ಮೂಲವನ್ನು ಹುಡುಕಿಕೊಳ್ಳುವ ಬಗೆಗೆ ಸಂಪೂರ್ಣ ಮಾಹಿತಿ ಮತ್ತು ಮನಸ್ಥಿತಿ ಇಲ್ಲದ ಅವರೆಲ್ಲಾ ಯವ್ಯಾವುದೋ ಶಾರ್ಟ್ ಕರ್ಟ್‍ಗಳನ್ನು ಹಿಂದೆ ಬಿದ್ದು ಮೋಸ ಹೋಗುತ್ತಾರೆ. ಮಹಿಳೆಯರಿಗೆ ಸಮಾನ ಸಂಖ್ಯೆಯಲ್ಲಿ ಗಂಡಸರೂ ಇಂತಹ ಆಮಿಷಗಳಿಗೆ ಸಿಲುಕಿ ಮೋಸ ಹೋಗಿರುತ್ತಾರೆ. ಆದರೆ ಆರ್ಥಿಕವಾಗಿ ಸ್ವಾವಲಂಬಿಗಳಲ್ಲದ ಮಹಿಳೆಯರು ಮಾತ್ರ ಹೆಚ್ಚಿನ ಕಿರಿಕಿರಿಗಳನ್ನು ಅನುಭವಿಸುತ್ತಾರೆ.
ವಿನಿವಿಂಕ್ ಶಾಸ್ತ್ರಿಯ ಮೋಸದ ಕಥೆ ನಿಮಗೆಲ್ಲಾ ನೆನಪಿರಬೇಕಲ್ಲ್ವಾ? ಬಹುಷಃ ಮರೆತಿರಲೂಬಹುದು. ಜನ ಹೀಗೆ ಮರೆಯುವುದನ್ನೇ ಈ ರೀತಿಯ ವಂಚಕರ ಬಂಡವಾಳವಾಗಿಸಿಕೊಳ್ಳುತ್ತಾರೆ. ಹಾಗೆ ನೋಡಿದರೆ ಶಾಸ್ತ್ರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮುಗ್ಧ ಬಳಕೆದಾರರನ್ನು ವಂಚಿಸಿದವರ ಕಥೆಗಳು ಸಾಕಷ್ಟಿವೆ. ಈ ದಗಲಬಾಜಿಗಳಿಗೆ ಶಿಕ್ಷೆಯಾಯಿತೋ ಬಿಟ್ಟಿತೋ ಅನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ ಒಂದಂತೂ ಖಾತ್ರಿ-ಇವರಿಂದ ವಂಚನೆಗೊಳಗಾದವರ ಹಣದ ಹೆಚ್ಚಿನ ಪಾಲು ಹಿಂತಿರುಗಿ ಬಂದಿಲ್ಲ. ಅದಕ್ಕಿಂತ ಹೆಚ್ಚು ಆತಂಕಕಾರಿಯಾದ ಸಂಗತಿಯೆಂದರೆ ಈ ವಂಚಕರ ಜಾಲ ಬೀದಿಗಳನ್ನು, ಬಡಾವಣೆಗಳನ್ನು ಅಥವಾ ಊರುಗಳನ್ನು ಬದಲಾಯಿಸುತ್ತಿದ್ದಾರೆ ಮತ್ತು ತಮ್ಮ ಆಳ, ವಿಸ್ತಾರಗಳನ್ನು ಪಸರಿಸಿಕೊಳ್ಳುತ್ತಿದ್ದಾರೆ.
ಹಾಗಿದ್ರೆ ಯಾಕೆ ಇಂತಹ ವಂಚನೆಯ ಪ್ರಕರಣಗಳು ಪುವರಾವರ್ತನೆಯಾಗುತ್ತಲೇ ಇರುತ್ತವೆ? ಇವನ್ನೆಲ್ಲಾ ನಿಲ್ಲಿಸಲು ಮತ್ತು ವಂಚಿತರಿಗೆ ನ್ಯಾಯ ಒದಗಿಸಲು ಸರ್ಕಾರಿ ವ್ಯವಸ್ಥೆ ಇಲ್ಲವೇ?
ನಮ್ಮ ಸರ್ಕಾರಿ ವ್ಯವಸ್ಥೆಯ ಬಗೆಗೆ ಕಡಿಮೆ ಮಾತನಾಡಿದಷ್ಟೂ ಒಳ್ಳೆಯದು. ಇದರ ವೇಗ, ನಿಷ್ಠೆ, ಪ್ರಾಮಾಣಿಕತೆಯ ಬಗೆಗೆ ಎಲ್ಲರಿಗೂ ತಿಳಿದೇ ಇದೆ. ನ್ಯಾಯವನ್ನು ಕೇಳುವವರೇ ವಂಚಿಸುವವರಿಗಿಂತ ತೊಂದರೆಗೊಳಗಾಗುವ ಸಂದರ್ಭಗಳೇ ಹೆಚ್ಚು. ಹಾಗಾಗಿ ವಂಚನೆಗೊಳಗಾಗದಂತೆ ನಾವು ಎಚ್ಚೆತ್ತುಕೊಳ್ಳುವುದು ಮತ್ತು ನಮ್ಮ ಸುತ್ತಲಿನವರನ್ನು ಎಚ್ಚರಿಸುವುದರ ತುರ್ತು ಅಗತ್ಯವಿದೆ.
ವಂಚನೆಯ ವಿಧಾನಗಳು
ದಶಕಗಳ ಹಿಂದೆ ಹೆಚ್ಚಿನ ಬಡ್ಡಿಯ ಆಸೆ ತೋರಿಸಿ ಜನರನ್ನು ವಂಚಿಸುವ ಸಾಕಷ್ಟು ಕಂಪನಿಗಳು ಎಲ್ಲ ಕಡೆ, ಅದರಲ್ಲೂ ಹೆಚ್ಚಾಗಿ ಕೇರಳದಲ್ಲಿ ಹುಟ್ಟಿಕೊಂಡಿದ್ದವು. ಅವುಗಳನ್ನು “ಬ್ಲೇಡ್ ಕಂಪನಿಗಳು” ಎಂದು ಕರೆಯಲಾಗಿತ್ತು. ಇವುಗಳನ್ನು ಹಿಡಿತದಲ್ಲಿಡಲು ಸರ್ಕಾರ ಸಾಕಷ್ಟು ಕ್ರಮಗಳನ್ನೇನೋ ತೆಗೆದುಕೊಂಡಿದೆ. ಆದರೆ ಈಗ ವಂಚನೆಯ ಸ್ವರೂಪ, ಆಳ, ವಿಸ್ತಾರಗಳೆಲ್ಲಾ ಬದಲಾಗಿವೆ ಮತ್ತು ಹೆಚ್ಚಾಗಿವೆ. ಸಧ್ಯಕ್ಕೆ ಈ ರೀತಿ ಜನರನ್ನು ವಂಚಿಸುವ ಎಲ್ಲಾ ಕಂಪನಿಗಳನ್ನೂ ಒಟ್ಟಾಗಿ “ಬ್ಲೇಡ್ ಕಂಪನಿಗಳು” ಎಂದು ಕರೆಯೋಣ. ಇವುಗಳ ವೈವಿಧ್ಯತೆಯ ಕೆಲವು ಮಾದರಿಗಳನ್ನು ಮೊದಲು ನೋಡೋಣ.
ನೆಟ್‍ವರ್ಕ್ ಮಾರ್ಕೆಟಿಂಗ್
ನೀವು ಒಂದು ನಿಗದಿತ ಮೊತ್ತವನ್ನು ನೀಡಿ ಸದಸ್ಯರಾಗಬೇಕು. ಈ ಮೊತ್ತ ಸಾವಿರ ರೂಪಾಯಿನಿಂದ ಲಕ್ಷಾಂತರ ರೂಪಾಯಿಗಳಿರಬಹುದು. ಜಪಾನಿನ ಮ್ಯಾಗ್ನೆಟಿಕ್ ಬೆಡ್ ಕೊಡುವ ಯೋಜನೆ ಹೊಂದಿದ್ದ ಕಂಪನಿಯೊಂದರ ಸದಸ್ಯತ್ವದ ಹಣ ಒಂದು ಲಕ್ಷ ರೂಪಾಯಿಗಳಾಗಿತ್ತು! [ಆ ಕಂಪನಿ ಈಗ ಮಂಗಮಾಯವಾಗಿದೆ ಎಂದು ಹೇಳಲೇಬೇಕಿಲ್ಲ.] ನೀವು ಕೊಟ್ಟ ಹಣಕ್ಕೆ ಕೆಲವು ವಸ್ತುಗಳನ್ನು ಕೊಡುತ್ತಾರೆ. ಅದರ ಬೆಲೆ ನಿಮ್ಮ ಹಣಕ್ಕೆ ಸಮಾನವಾದುದು ಎಂದು ಕಂಪನಿಯವರು ಹೇಳಿದರೂ, ಅದರ ನಿಜ ಬೆಲೆ ತೀರ ಕಡಿಮೆ ಇರುತ್ತದೆ. ನಂತರ ನೀವು ಹೊಸ ಹೊಸ ಸದಸ್ಯರನ್ನು ಸರಣಿಯಲ್ಲಿ ನಿಮ್ಮ ಕೆಳಗೆ ನೋಂದಾಯಿಸುತ್ತಾ ಹೋದಂತೆ ನಿಮಗೆ ಕಮೀಷನ್ ಬರುತ್ತಾ ಹೋಗುತ್ತದೆ. ನೀವು ಹಾಕಿದ ಹಣದ ಸಾವಿರಾರು ಪಟ್ಟು ಗಳಿಸಬಹುದು ಎಂದು ಕಂಪನಿಗಳು ಪ್ರಚಾರ ಮಾಡುತ್ತವೆ.
ಪ್ರಾಂರಂಭದಲ್ಲಿ ಇವರು ಉತ್ತಮ ಹೋಟೆಲ್‍ಗಳಲ್ಲಿ ಸಭೆ ಕರೆದು ಯಾರ್ಯಾರದ್ದೋ ಯಶೋಗಾಥೆಗಳನ್ನು ಆಕರ್ಷಕವಾಗಿ ವರ್ಣಿಸಿ, ನೀವೆಲ್ಲಾ ಕೆಲಸವನ್ನೇ ಮಾಡದೆ ಜೀವನ ಪರ್ಯಂತ ಲಕ್ಷ, ಕೋಟಿ ಗಳಿಸಿ ಪ್ರಪಂಚವನ್ನೆಲ್ಲಾ ಸುತ್ತಬಹುದೆಂದೆಲ್ಲಾ ಹೇಳಿ ನಿಮ್ಮನ್ನು ಖೆಡ್ಡಾಕ್ಕೆ ಬೀಳಿಸುತ್ತಾರೆ. ಕಷ್ಟಪಟ್ಟು ದುಡಿದು ಗಳಿಸುವವರೆಲ್ಲಾ ಇವರ ದೃಷ್ಟಿಯಲ್ಲಿ ಮೂರ್ಖರು ಎನ್ನುವಂತೆ ಬಣ್ಣಿಸುತ್ತಾ ಕೆಲವೇ ತಿಂಗಳಲ್ಲಿ ಹೇಳಹೆಸರಿಲ್ಲದಂತೆ ಕಾಣೆಯಾಗುತ್ತಾರೆ. ನಮ್ಮ ಹಣವನ್ನು ಕಳೆದುಕೊಂಡಿದ್ದಲ್ಲದೇ, ಮುಲಾಜನ್ನು ಖರ್ಚು ಮಾಡಿ ನೆಂಟರಿಷ್ಟರನ್ನೆಲ್ಲಾ ಸದಸ್ಯರನ್ನು ಮಾಡಿದ ನಾವು, ಅವರಿಂದ ತಪ್ಪಿಸಿಕೊಂಡು ಓಡಾಡಬೇಕಾಗುತ್ತದೆ; ಕೆಲವೊಮ್ಮೆ ಅವರಿಂದ ಚನ್ನಾಗಿ ಉಗಿಸಿಕೊಂಡು ಸಂಬಂಧಗಳನ್ನು ಹಾಳುಮಾಡಿಕೊಳ್ಳಬೇಕಾಗುತ್ತದೆ.
ಹಣದ ಸರಪಳಿಗಳು
ಇವು ಮೇಲೆ ಹೇಳಿದ ನೆಟ್‍ವರ್ಕ್ ಮಾರ್ಕೆಟಿಂಗ್ ಕಂಪನಿಗಳಂತೆಯೇ ಕೆಲಸ ಮಾಡುತ್ತವೆ. ಒಂದೇ ವ್ಯತ್ಯಾಸವೆಂದರೆ ನಾವು ಸದಸ್ಯತ್ವಕ್ಕಾಗಿ ಕೊಡುವ ಹಣಕ್ಕೆ ಬದಲಾಗಿ ಇವು ಯಾವುದೇ ವಸ್ತುಗಳನ್ನು ನೀಡುವುದಿಲ್ಲ. ನೀವು ನೊಂದಾಯಿಸಿದ ಸದಸ್ಯರ ಸಂಖ್ಯೆಯ ಆಧಾರದ ಮೇಲೆ ನಿಮಗೆ ಆಕರ್ಷಕ ಕಮೀಷನ್ ನೀಡುವ ಭರವಸೆ ನೀಡುತ್ತಾರೆ. ನೀವು ಕೊಡುವ ಹಣವನ್ನು ಅವರು ಹೇಗೆ ಮತ್ತು ಎಲ್ಲಿ ಹೂಡುತ್ತಾರೆ ಮತ್ತು ಅವರ ಆದಾಯದ ಮೂಲಗಳೇನು ಎಂಬ ಯಾವುದೇ ಪ್ರಶ್ನೆಗಳಿಗೆ ಉತ್ತರವಿಲ್ಲ.
ಬಹುಮಾನ ಅಥವಾ ಬಡ್ಡಿ ನೀಡುವ ಕಂಪನಿಗಳು
ನಿಮ್ಮಿಂದ ನಿಗದಿತ ಮೊತ್ತದ ಹಣವನ್ನು ಡಿಪಾಸಿಟ್ ಆಗಿ ಪಡೆಯುವ ಈ ಕಂಪನಿಗಳು ನಿರ್ದಿಷ್ಟ ಅವಧಿಯ ನಂತರ ಹಣದ ಮೊತ್ತದ ಹತ್ತಾರು ಪಟ್ಟು ಬೆಲೆಯ ವಸ್ತುಗಳನ್ನು ನೀಡುವುದಾಗಿ ಆಶ್ವಾಸನೆ ನೀಡುತ್ತವೆ. ಉದಾಹರಣೆಗೆ ನೀವು ಈಗ ಹತ್ತುಸಾವಿರ ರೂಪಾಯಿ ಕೊಟ್ಟರೆ ಮೂರು ತಿಂಗಳ ನಂತರ ಮೂವತ್ತು ಸಾವಿರ ಬೆಲೆಯ ಎಲ್.ಸಿ.ಡಿ. ಟೀ.ವಿ. ಕೊಡುವ ಭರವಸೆ ಕೊಡುತ್ತಾರೆ.
ಇನ್ನೂ ಕೆಲವರು ಸ್ವಲ್ಪ ಬದಲಾವಣೆ ಮಾಡಿ, ನಮ್ಮ ಹತ್ತುಸಾವಿರ ರೂಪಾಯಿಗೆ ಪ್ರತಿಯಾಗಿ ತಿಂಗಳಿಗೊಮ್ಮೆ ಸಾವಿರ ರೂಪಾಯಿಯನ್ನು ನಿರಂತರವಾಗಿ ನೀಡುತ್ತಾ ಬರುವ ಭರವಸೆ ನೀಡುತ್ತಾರೆ. ಇನ್ನೂ ಹಲವರು ಅವಧಿ ಮುಗಿದ ಮೇಲೆ ಅಸಲನ್ನೂ ಹಿಂತಿರುಗಿಸುವ ಆಸೆ ತೋರಿಸುತ್ತಾರೆ. ಅವರು ಕೊಡುತ್ತೇವೆಂದು ಹೇಳುವ ಬಡ್ಡಿ ವಾರ್ಷಿಕ 120% ಆಗುತ್ತದೆ. ಬ್ಯಾಂಕ್‍ಗಳು ಕೇವಲ 8-10% ಬಡ್ಡಿ ಕೊಡುವಾಗ ಇಂತಹ ಸ್ಕೀಮ್ ಗಳು ಜನರನ್ನು ಸೆಳೆಯುವುದರಲ್ಲಿ ಆಶ್ಚರ್ಯವೇನು?
ತಮ್ಮ ಪ್ರಾಮಾಣಿಕತೆಯನ್ನು ತೋರಿಸಲು ಆರಂಭದಲ್ಲಿ ಕೆಲವು ಜನರಿಗೆ ಅವರು ಭರವಸೆ ನೀಡಿದಂತೆ ವಸ್ತುಗಳು ಅಥವಾ ಬಡ್ಡಿಯನ್ನು ಕೊಟ್ಟಿರುತ್ತಾರೆ. ಕೆಲವು ನಯವಂಚಕರು ತಮ್ಮ ಕಡೆಯ ಜನಗಳನ್ನೇ ಜನರ ಮಧ್ಯೆ ಬಿಟ್ಟು ತಮಗೆ ಹಣ ಅಥವಾ ಬಹುಮಾನಗಳು ಈಗಾಗಲೇ ಬಂದಿದೆಯೆಂದು ಸುಳ್ಳು ಪ್ರಚಾರ ಮಾಡಿಸಿರುತ್ತಾರೆ! ನಂತರ ಕೆಲವೇ ದಿನಗಳಲ್ಲಿ ಅವರು ಸಾಕಷ್ಟು ಹಣ ಸಂಗ್ರಹಿಸಿ ರಾತ್ರೋರಾತ್ರಿ ಜಾಗ ಖಾಲಿಮಾಡುತ್ತಾರೆ.
ಚಿನ್ನದ ಸ್ಕೀಮ್‍ಗಳು
ದೊಡ್ಡ ದೊಡ್ಡ ಚಿನ್ನದ ವ್ಯಾಪಾರಿಗಳಿಂದ ಹಿಡಿದು ಬಡಾವಣೆ ಮೂಲೆಯಲ್ಲಿರುವ ಅಂಗಡಿಗಳವರೂ ಮಾಡುತ್ತಿರುವ ಈ ರೀತಿಯ ಸ್ಕೀಮ್‍ಗಳಲ್ಲಿ ಸಾಕಷ್ಟು ವಿಶ್ವಾಸಾರ್ಹವಾಗಿದ್ದು ವರ್ಷಗಳಿಂದ ನಡೆಯುತ್ತಾ ಬಂದಿವೆ. ಪ್ರತಿ ತಿಂಗಳು ಸದಸ್ಯರಿಂದ ನಿರ್ದಿಷ್ಟ ಮೊತ್ತದ ಹಣವನ್ನು ತೆಗೆದುಕೊಂದು ತಿಂಗಳಿಗೊಮ್ಮೆ ಲಾಟರಿ ನಡೆಸುತ್ತಾರೆ. ವಿಜೇತರಾದ ಒಬ್ಬರಿಗೆ ಆ ತಿಂಗಳೇ ಭರವಸೆ ನೀಡೀದ ಬಂಗಾರದ ಆಭರಣ ನೀಡುತ್ತಾರೆ ಮತ್ತು ಅವರು ಮುಂದೆ ಹಣ ಕಟ್ಟುವ ಅಗತ್ಯವಿರುವುದಿಲ್ಲ. ಲಾಟರಿಯಲ್ಲಿ ವಿಜೇತರಾಗದೇ ಉಳಿದವರಿಗೆ ಅವಧಿಯ ನಂತರ ಅವರು ನೀಡಿದ ಹಣದ ಮೊತ್ತಕ್ಕೆ ಸಮನಾದ ಆಭರಣ ನೀಡುತ್ತಾರೆ.
ಈ ಸ್ಕೀಮ್‍ಗಳನ್ನು ನಡೆಸುವವರು ತಮಗೆ ಬರುವ ಲಾಭದ ಒಂದಂಶದಲ್ಲಿ ಪ್ರತಿ ತಿಂಗಳೂ ಬಹುಮಾನ ನೀಡುತ್ತಾರೆ ಎಂದು ತರ್ಕಿಸಿರಬಹುದು. ಹಾಗಿದ್ದರೂ ಯೋಜನೆ ನಡೆಸುವವರ ವಿಶ್ವಾಸಾರ್ಹತೆ, ಅವಧಿ ಮುಗಿದ ಮೇಲೆ ನೀಡುವ ಆಭರಣಗಳ ಬೆಲೆ ಮತ್ತು ಗುಣಮಟ್ಟ ಮುಂತಾದ ಅಂಶಗಳನ್ನೆಲ್ಲಾ ನಿಧಾನವಾಗಿ ಯೋಚಿಸಿ ಹಣ ಹೂಡುವ ನಿರ್ಧಾರ ಮಾಡಬೇಕು.
ಚಿಟ್ ಫಂಡ್‍ಗಳು
ಜನಸಾಮಾನ್ಯರ ಭಾಷೆಯಲ್ಲಿ “ಚೀಟಿ” ಎಂದು ಕರೆಸಿಕೊಳ್ಳುವ ಇದು ಸರ್ವವ್ಯಾಪಿ. ಕಛೇರಿ, ಬಡಾವಣೆ, ಹೆಂಗಸರ ಕಿಟ್ಟಿಪಾರ್ಟಿ, ಸ್ನೇಹಿತರ ಗುಂಪು-ಹೀಗೆ ಎಲ್ಲಾ ಕಡೆ ಇದರ ವ್ಯವಹಾರವಿದೆ. ದೊಡ್ಡ ದೊಡ್ಡ ಫೈನಾನ್ಸ್ ಕಂಪನಿಗಳು ಇದನ್ನು ನಿರಂತರವಾಗಿ ವಿಶ್ವಾಸಾರ್ಹವಾಗಿ ನಡೆಸಿಕೊಂಡು ಬಂದಿವೆ. ಇವೆಲ್ಲದರ ನಡುವೆ ಅನಾಮಾಧೇಯರಿಂದ ಜನರು ಹಣ ಕಳೆದುಕೊಂಡ ಉದಾಹರಣೆಗಳೂ ದಂಡಿಯಾಗಿ ಸಿಗುತ್ತವೆ. ಸ್ನೇಹಿತರ ಗುಂಪುಗಳಲ್ಲಿ ಚೀಟಿ ನಡೆಸಿ ಸ್ನೇಹ ಮತ್ತು ಹಣ ಎರಡನ್ನೂ ಕಳೆದುಕೊಂಡವರೂ ಇದ್ದಾರೆ. ಹಾಗಾಗಿ ಸಂಪೂರ್ಣ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳದೆ, ಹೆಚ್ಚಿನ ಬಡ್ಡಿಯ ಆಸೆಗೆ ಚಿಟ್ ಗಳ ಸದಸ್ಯರಾಗಬಾರದು.
ಟೀಕ್ ಪ್ಲಾಂಟೇಷನ್‍ಗಳು
ನೀವು ನಿರ್ದಿಷ್ಟ ಮೊತ್ತದ ಹಣವನ್ನು ಕೊಟ್ಟರೆ ನಿಮಗಾಗಿ ಕಂಪನಿಯ ಜಾಗದಲ್ಲಿ ತೇಗದ ಮರವೊಂದನ್ನು ಕಾದಿರಿಸಲಾಗುತ್ತದೆ. ಹದಿನೈದು ಇಪ್ಪತ್ತು ವಷರ್Àಗಳ ನಂತರ ಆ ಮರದಿಂದ ಬರುವ ಹಣ ನಿಮ್ಮದಾಗುತ್ತದೆ. ಈ ರೀತಿ ನೀವು ಹೂಡಿದ ಹಣದ ಹತ್ತಾರು ಪಟ್ಟು ಹಣ ನಿಮಗೆ ಸಿಗುತ್ತದೆ ಎನ್ನುವುದು ಅವರ ಅಂಬೋಣ. ಇತ್ತೀಚೆಗೆ ಈ ಕಂಪನಿಗಳ ಭರಾಟೆ ಕಡಿಮೆಯಾಗಿರುವುದನ್ನು ನೋಡಿದರೆ ಹಳೆಯ ಕಂಪನಿಗಳೆಲ್ಲಾ ಪಾಪರ್ ಚೀಟಿ ತೆಗೆದುಕೊಂಡಂತೆ ಕಾಣುತ್ತದೆ.
ವಂಚನೆಯ ನೂತನ ಮಾದರಿಗಳು
ಇಲ್ಲಿ ಹೇಳಿರುವುದು ಕೆಲವೇ ಉದಾಹರಣೆಗಳು ಮಾತ್ರ. ನಾನು ಮೇಲೆ ಹೇಳಿದಂತೆ ಸರ್ಕಾರ ಒಂದು ರೀತಿಯ ವಂಚನೆಯನ್ನು ನಿಭಾಯಿಸಲು ಕಾನೂನು ರೂಪಿಸುತ್ತಿದ್ದಂತೇ, ಹೊಸ ಹೊಸ ಮೋಸದ ಯೋಜನೆಗಳು ಶುರುವಾಗುತ್ತವೆ. ಅಂದರೆ ಎಲ್ಲಾ ಕ್ಷೇತ್ರಗಳಲ್ಲಿ ಆಗುವಂತೆ ಇಲ್ಲೂ ಸಾಕಷ್ಟು ಸಂಶೋಧನೆಗಳು ನಡೆಯುತ್ತಿರುತ್ತವೆ!
ಇತ್ತೀಚೆಗೆ ಸಿಂಗಪೂರ್ ಮೂಲದ “ಸ್ಪೀಕ್ ಏಷಿಯಾ” ಎನ್ನುವ ಕಂಪನಿಯು ಪತ್ರಿಕೆ ಮತ್ತು ಟೀವಿಗಳಲ್ಲಿ ಪ್ರಚಾರ ಮಾಡುವುದನ್ನು ಗಮನಿಸುತ್ತಿದ್ದೆ. ಕೆಲವು ದಿನಗಳ ಹಿಂದೆ ಪರಿಚಿತನೊಬ್ಬ ಇದರ ಸದಸ್ಯನಾಗಲು ಪುಸಲಾಯಿಸಿದ. ಹತ್ತುಸಾವಿರ ರೂಪಾಯಿ ಕೊಟ್ಟು ಸದಸ್ಯರಾದರೆ ನಮಗೆ ಪ್ರತಿ ತಿಂಗಳು ನಾಲ್ಕು ಮಾರುಕಟ್ಟೆ ಸರ್ವೆಗಳಿಗೆ ಪ್ರತಿಕ್ರಿಯಿಸುವ ಅವಕಾಶ ಸಿಗುತ್ತದೆ. ಅಂತರ್ ರ್ಜಾಲದ ಮೂಲಕ ನಡೆಯುವ ಸರ್ವೆಯೊಂದಕ್ಕೆ ನಮಗೆ ಸಾವಿರ ರೂಪಾಯಿಗಳ ಸಂಭಾವನೆ ಸಿಗುತ್ತದೆ. ಅಂದರೆ ಮೂರು ತಿಂಗಳಿಗೆ ನೀವು ಹೂಡಿದ ಹಣ ಹಿಂತಿರುಗಿ ನಿಮ್ಮ ಕೈಸೇರಿ ನಂತರ ತಿಂಗಳಿಗೆ ನಾಲ್ಕು ಸಾವಿರ ಮುಫತ್ತಾಗಿ ಸಿಗುತ್ತದೆ. ಜೊತೆಗೆ ಹೊಸ ಸದಸ್ಯರನ್ನು ಪರಿಚಯಿಸುವವರಿಗೆ ಹೆಚ್ಚಿನ ಆದಾಯವಿದೆ. ಎಂತಹ ವಿದ್ಯಾವಂತರನ್ನೂ ಆಕರ್ಷಿಸಬಲ್ಲ ಇಂತಹ ಯೋಜನೆಗಳು ಹಲವಾರು ಇರಬಹುದು.
ನಾನು ಕಂಪನಿಯ ಮೂಲವನ್ನೆಲ್ಲಾ ಜಾಲಾಡಿದರೂ ಖಚಿತ ಮಾಹಿತಿಗಳು ಸಿಗಲಿಲ್ಲ. ಕಂಪನಿಯ ವೆಬ್ ಸೈಟ್ ಒಮ್ಮೆಯೂ ತೆರೆದುಕೂಳ್ಳಲೇ ಇಲ್ಲ. ನಂತರದ ದಿನಗಳಲ್ಲಿ ಭಾರತ ಸರ್ಕಾರ ಈ ಕಂಪನಿಯ ಬ್ಯಾಂಕ್ ಖಾತೆಯನ್ನು ಫ್ರೀಜ್ [ಅಂದರೆ ಕಂಪನಿ ಖಾತೆಯಿಂದ ಸರ್ಕಾರದ ಒಪ್ಪಿಗೆ ಇಲ್ಲದೆ ಹಣ ತೆಗೆಯುವಂತಿಲ್ಲ] ಎಂಬ ಸುದ್ದಿ ಓದಿದೆ. ಇತ್ತೀಚೆಗೆ ಕಂಪನಿಯ ವಿರುದ್ಧ ಕಾನೂನು ಕ್ರಮವನ್ನು ಸರ್ಕಾರ ತೆಗೆದುಕೊಂಡಿದೆ. ಆದರೆ ಅದಕ್ಕೂ ಮೊದಲೇ ಸಾಕಷ್ಟು ಜನರು ಹಣ ಕಳೆದುಕೊಂಡಿರುವ ಸಾಧ್ಯತೆಗಳಿವೆ.
ಆದಾಯದ ಮೂಲಗಳೇನು?
ನಾವು ಹಣ ಹೂಡುವ ಕಂಪನಿಯ ಬಗೆಗೆ ಯಾವುದೇ ಅಂತೆಕಂತೆಗಳನ್ನು ನಂಬದೆ, ಮೊದಲು ಸಂಪೂರ್ಣ ವಿವರ ಪಡೆಯಬೇಕು. ಸಾಮಾನ್ಯವಾಗಿ ಬ್ಯಾಂಕ್‍ಗಳು ವಾರ್ಷಿಕ 8-10% ಬಡ್ಡಿ ನೀಡುತ್ತವೆ. ಶೇರು ಮತ್ತು ಮ್ಯೂಚುಯಲ್ ಫಂಡ್‍ಗಳಲ್ಲಿ ಸುಮಾರು 15-20% ಆದಾಯ ಬರಬಹುದು. ಆದರೆ ಬ್ಯಾಂಕ್‍ಗಳು ನೀಡುವ ಮಟ್ಟದ ಸ್ಥಿರತೆ ಮತ್ತು ಭದ್ರತೆ ಇವುಗಳಿಗಿರುವುದಿಲ್ಲ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಶ್ರಮದ ಅಗತ್ಯ ಮತ್ತು ಬಹಳ ಅಸ್ಥಿರತೆ ಇದ್ದು, 25% ನಿವ್ವಳ ಆದಾಯ ಬರಬಹುದು. ಹೀಗಿರುವಾಗ ಈ ಕಂಪನಿಗಳು ತಮಗೂ ಲಾಭ ಮಾಡಿಕೊಂಡು ಹಣ ಹೂಡಿದವರಿಗೆ ಶೇಕಡ ನೂರಕ್ಕಿಂತ ಹೆಚ್ಚಿನ ಪ್ರತಿಫಲ ಕೊಡುವುದು ಹೇಗೆ ಸಾಧ್ಯ? ಹೆಚ್ಚಿನ ಕಂಪನಿಗಳು ತಮ್ಮ ಆದಾಯದ ಮೂಲಗಳ ಬಗೆಗೆ ಮಾತನಾಡುವುದೇ ಇಲ್ಲ. ಆದರೆ ಹಣ ಹೂಡುವ ನಾವು ಅದನ್ನೆಲ್ಲಾ ಪ್ರಶ್ನಿಸಲೇಬೇಕಾಗುತ್ತದೆ. ಇದಕ್ಕೆ ಸರಿಯಾದ ಉತ್ತರವಿಲ್ಲವೆಂದಾದರೆ ಅವರು ನಮಗೆ ಹಣ ಕೊಡಲು ಇನ್ನೊಬ್ಬರಿಗೆ ಮೋಸ ಮಾಡುತ್ತಾರೆ ಎಂಬುದು ಖಚಿತ. ಯಾರಿಗೆ ಟೋಪಿ ಬಿದ್ದರೇನು, ನಮಗೆ ಹಣ ಸಿಕ್ಕರಾಯಿತು-ಎಂದು ಯೋಚಿಸುವವರೆಲ್ಲಾ ನೆನಪಿಟ್ಟುಕೊಳ್ಳಬೇಕಾದದ್ದು, ಆ ರೀತಿ ಟೋಪಿ ಹಾಕಿಸಿಕೊಳ್ಳುವವರು ನಾವೇ ಆಗಿರುವ ಸಾಧ್ಯತೆ ಇರಬಹುದಲ್ಲವೇ?
ಗ್ರಾಹಕರ ಅಜ್ಞಾನ ಮತ್ತು ಅತಿ ಆಸೆಯೇ ಹೆಚ್ಚಿನ ಸಂದರ್ಭಗಳಲ್ಲಿ ವಂಚನಗೆ ಕಾರಣ. ಮೋಸಗಾರರು ಹೊಸ ವೇಷ ಆಶ್ವಾಸನೆಗಳೊಂದಿಗೆ ಬರುತ್ತಲೇ ಇರುತ್ತಾರೆ. ಅವರಿಂದ ದೂರ ಉಳಿಯುವ ಎಚ್ಚರಿಕೆ ನಮಗಿರಬೇಕು. ಹಣ ಕಳೆದುಕೊಂಡ ಮೇಲೆ ಕಂಪನಿ ಆಫೀಸನ್ನು ಘೇರಾವ್ ಮಾಡುವುದು, ಪೋಲೀಸ್ ಸ್ಟೇಷನ್ ಎದುರು ಪ್ರತಿಭಟಿಸುವುದು ಅಥವಾ ಟೀವಿ ಕ್ಯಾಮರಾಗಳ ಮುಂದೆ ಗೋಳು ತೋಡಿಕೊಳ್ಳುವುದರಿಂದ ಏನು ಪ್ರಯೋಜನ? ಇಂತಹ ಬ್ಲೇಡ್ ಕಂಪನಿಗಳು ನಿಮ್ಮ ಬಡಾವಣೆಗೆ ಬಂದ ತಕ್ಷಣ ಪೋಲೀಸರಿಗೆ ದೂರು ನೀಡಿ ಮತ್ತು ಜನರನ್ನು ಎಚ್ಚರಿಸಿ. ಇಲ್ಲದಿದ್ದರೆ ಈ ರೀತಿಯ ವಂಚನೆಗಳು ಪುನರಾವರ್ತನೆಯಾಗುತ್ತಲೇ ಇರುತ್ತವೆ.
ನಡಹಳ್ಳಿ ವಸಂತ್