ಅಂಗವಿಕಲರ ಬಗ್ಗೆ ಅನುಕಂಪ ತೋರುವ ಬದಲಿಗೆ ಅವರಿಗೆ ಸಿಗಬೇಕಾದ ಸರ್ಕಾರಿ ಸವಲತ್ತುಗಳನ್ನು ತ್ವರಿತವಾಗಿ ಸಿಗುವಂತೆ ಮಾಡಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ವಿಕಲಚೇತನ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಂತೋಷ್‌ಕುಮಾರ್ ಒತ್ತಾಯಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಸೋಮವಾರ ವಿಕಲಚೇತನ ರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಶಿಡ್ಲಘಟ್ಟ ತಾಲ್ಲೂಕು ಪಂಚಾಯಿತಿಯಲ್ಲಿ ಕಳೆದ ೨01೪ ರಿಂದ ಈವರೆಗೂ ಬಂದಿರುವ ಅನುದಾನಗಳಲ್ಲಿ ವಿಕಲಚೇತನರಿಗಾಗಿ ಮೀಸಲಿಟ್ಟಿರುವ ಶೇ ೩ ಹಾಗು ಶೇ ೫ ರ ಅನುದಾನ ಸುಮಾರು ೨೦ ಲಕ್ಷ ರೂಗಳಿಷ್ಟಿದೆಯಾದರೂ ಅಧಿಕಾರಿಗಳ ಹಾಗು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಈ ಹಣ ವಿಕಲಚೇತನರಿಗಾಗಿ ಬಳಕೆಯಾಗಿಲ್ಲ. ಈ ಬಗ್ಗೆ ಸಾಕಷ್ಟು ಭಾರಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆಯಾದರೂ ಸಬೂಬು ಹೇಳಿಕೊಂಡು ಕಾಲ ಕಳೆಯುತ್ತಿದ್ದಾರೆ. ಕೂಡಲೇ ಈ ಹಣವನ್ನು ವಿಕಲಚೇತನರ ಶ್ರೇಮಾಭಿವೃದ್ಧಿಗಾಗಿ ಬಳಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿದೇಶಕ ಸಿ.ಎಸ್.ಶ್ರೀನಾಥಗೌಡರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರ ಸ್ವೀಕರಿಸಿದ ತಾಲ್ಲೂಕು ಪಂಚಾಯಿತಿ ಸಹಾಯಕ ನಿದೇಶಕ ಸಿ.ಎಸ್.ಶ್ರೀನಾಥಗೌಡ ಮಾತನಾಡಿ, ವಿಕಲಚೇತನರ ಅನುಮೋದನೆ ಪಟ್ಟಿ ತಯಾರಿಸಲಾಗಿದ್ದ ಈ ಹಿಂದೆ ವಿವಿಧ ಸಲಕರಣೆ ವಿತರಿಸಲು ದಿನಾಂಕವನ್ನು ನಿಗಧಿಪಡಿಸಲಾಗಿತ್ತು. ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಾದ್ದರಿಂದ ದಿನಾಂಕ ಮುಂದೂಡಬೇಕಾಯಿತು. ಆದಷ್ಟು ಬೇಗ ಅರ್ಹ ವಿಕಲಚೇತನರಿಗೆ ಸಿಗಬೇಕಾದ ಸವಲತ್ತುಗಳನ್ನು ನೀಡಲು ಕ್ರಮ ಜರುಗಿಸಲಾಗುವುದು ಎಂದರು.
ವಿಕಲಚೇತನ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ವೈ.ಎನ್.ಗಂಗಾಧರ್, ವಿಕಲಚೇತನ ಸಂಘಟನೆಯ ಕೆ.ವಿ.ಸುಬ್ರಮಣಿ, ಉಷಾಕಿರಣ್, ಕೃಷ್ಣಕುಮಾರ್ ಹಾಜರಿದ್ದರು.