Home News ಅಂಧ ಮಕ್ಕಳ ಶಾಲೆಯಲ್ಲಿ ‘ಅವನಿ ಬಳಗ’

ಅಂಧ ಮಕ್ಕಳ ಶಾಲೆಯಲ್ಲಿ ‘ಅವನಿ ಬಳಗ’

0

ಪಟ್ಟಣದ ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿ ಭಾನುವಾರ ಚಿಕ್ಕಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ವಿಶಿಷ್ಠವಾಗಿ ಸಾಮಾಜಿಕ ಕಳಕಳಿಯುಳ್ಳ ಸಂಘವೊಂದನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿದ್ದ ಆಶಾಕಿರಣ ಅಂಧ ಮಕ್ಕಳು ಮತ್ತು ಚಿಕ್ಕಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು.
ಕಾರ್ಯಕ್ರಮದಲ್ಲಿದ್ದ ಆಶಾಕಿರಣ ಅಂಧ ಮಕ್ಕಳು ಮತ್ತು ಚಿಕ್ಕಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು.

‘ಅವನಿ ಬಳಗ’ ಎಂಬ ಹೆಸರಿನ ಸಂಘವನ್ನು ಪ್ರಾಧ್ಯಾಪಕಿ ಡಾ.ಸುಧಾ ಅವರಿಂದ ಉದ್ಘಾಟಿಸಿ, ಅಂಧಮಕ್ಕಳೊಂದಿಗೆ ಹಿರಿಯ ವಿದ್ಯಾರ್ಥಿಗಳು ದಿನ ಪೂರ್ತಿ ಕಳೆದರು. ಅಂಧ ಮಕ್ಕಳಿಗೆ ಹಾಡು ಕಲಿಸಿ, ಆಟ ಆಡಿಸಿ, ಸಿಹಿ ಹಂಚಿ, ಅವರೊಂದಿಗೆ ಊಟ ಮಾಡಿ ‘ಎಲ್ಲರೊಳಗೊಂದಾಗು ಮಂಕುತಿಮ್ಮ’ ಎಂಬ ಹಿರಿಯರ ವಾಣಿಯನ್ನು ಪಾಲಿಸಿದರು.
‘ಏನಾಗಲಿ ಮುಂದೆ ಸಾಗು ನೀ..’ ಎಂಬ ಹಾಡನ್ನು ಮಕ್ಕಳೊಂದಿಗೆ ಹಾಡು ತಾವೂ ಸ್ಫೂರ್ತಿಯನ್ನು ಪಡೆದರು. ಮಕ್ಕಳ ಪ್ರತಿಭಾ ಪ್ರದರ್ಶನದಲ್ಲಿ ಅವರು ಪ್ರದರ್ಶಿಸಿದ ಏಕಪಾತ್ರಾಭಿನಯ, ಸಂಗೀತ, ಕಥೆ ಮುಂತಾದವುಗಳನ್ನು ಕಂಡು ಮೂಕ ವಿಸ್ಮಿತರಾದರು. ಅಂಧ ಮಕ್ಕಳಿಗೆ ಹಾಡುಗಳ ರಸಪ್ರಶ್ನೆಯನ್ನು, ವಿವಿಧ ಆಟಗಳನ್ನು ಏರ್ಪಡಿಸಿ ತಾವೂ ಭಾಗಿಯಾಗಿ ನಲಿದರು. ಜೊತೆಯಲ್ಲೇ ಸಿಹಿ ತಿಂದು, ಊಟ ಮಾಡಿದರು.
‘ಅವನಿ ಎಂದರೆ ಭೂಮಿ. ಬಳಗ ಅಂದರೆ ಕುಟುಂಬ. ಬೇರೆ ಬೇರೆ ಮನೆಯಲ್ಲಿ ಹುಟ್ಟಿ ಬೆಳೆದಿದ್ದರೂ ನಮ್ಮ ಭೂತಾಯಿಯ ಸೇವೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವೆಂದು ಭಾವಿಸಿ ಚಿಕ್ಕಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳೊಂದಿಗೆ ಒಂದು ಕುಟುಂಬದಂತೆ ‘ಅವನಿ ಬಳಗ’ವನ್ನು ಸ್ಥಾಪಿಸಿದ್ದೇವೆ. ಸಮಾಜಕ್ಕೆ ಅಲ್ಪ ಸೇವೆಯನ್ನು ಸಲ್ಲಿಸುವ ಉದ್ದೇಶದಿಂದ ಸ್ಥಾಪಿಸಿರುವ ಸಂಘದಿಂದ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿದ್ದೇವೆ. ಉಚಿತ ಆರೋಗ್ಯ ಸೇವೆ, ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಅಂಧ ಮಕ್ಕಳೊಂದಿಗೆ, ವೃದ್ಧಾಶ್ರಮದ ವೃದ್ಧರೊಂದಿಗೆ ಕಾಲ ಕಳೆದು ನೆರವು ನೀಡುವುದು ಮುಂತಾದ ಯೋಜನೆಗಳಿವೆ. ಭಗತ್‌ಸಿಂಗ್‌ ಅವರ ಜನ್ಮದಿನದಂದು ಈ ಸಂಘ ಉದ್ಘಾಟನೆಯಾಗುತ್ತಿರುವುದು ಸಕಾರಾತ್ಮಕವಾಗಿದೆ. ಯುವಜನರಿಂದ ಬದಲಾವಣೆ ಸಾಧ್ಯ ಎಂಬ ಅವರ ಮಾತುಗಳನ್ನು ನಾವು ಅಕ್ಷರಶಃ ಪಾಲಿಸುತ್ತಿದ್ದೇವೆ’ ಎಂದು ‘ಅವನಿ ಬಳಗ’ದ ಗೌರವಾಧ್ಯಕ್ಷೆ ಡಾ.ಸುಧಾ ತಿಳಿಸಿದರು.
ಶಿಕ್ಷಕ ವೇಣುಗೋಪಾಲ್‌, ಪ್ರಾಧ್ಯಾಪಕ ಗಂಗಾಧರ್‌, ‘ಅವನಿ ಬಳಗ’ದ ಅಧ್ಯಕ್ಷೆ ಉಷಾ, ಕಾರ್ಯದರ್ಶಿ ಚನ್ನಕೇಶವ, ಖಜಾಂಚಿ ಗಾಯಿತ್ರಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!