ನಾಗರಿಕರ ಸಹಕಾರವಿದ್ದಾಗ ಮಾತ್ರ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಸದುಪಯೋಗವಾಗುತ್ತವೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ೨೦೧೬-೧೭ ನೇ ಸಾಲಿನ ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ ಅರ್ಜಿ ಸಲ್ಲಿಸಿದ್ದಂತಹ ಸುಮಾರು ೩೮ ಮಂದಿ ಫಲಾನುಭವಿಗಳಿಗೆ ಕಾಮಗಾರಿ ಆದೇಶ ವಿತರಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಉತ್ತಮ ಮನೆ ನಿರ್ಮಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು ನಗರವ್ಯಾಪ್ತಿಯಲ್ಲಿರುವ ಎಸ್ಸಿ/ಎಸ್ಟಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಮನೆ ನಿರ್ಮಿಸಿಕೊಳ್ಳಲು ೩ ಲಕ್ಷ ೩೦ ಸಾವಿರ ರೂ ಹಣ ನೀಡುತ್ತಿದೆ. ಅರ್ಹ ಫಲಾನುಭವಿಗಳು ನಗರಸಭೆ ಅಧಿಕಾರಿಗಳು ಮತ್ತು ಸದಸ್ಯರ ಜೊತೆ ಚರ್ಚಿಸಿ ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಮುಖಾಂತರ ವ್ಯವಹಾರ ಮಾಡಬೇಡಿ ಎಂದರು.
ನಗರಸಭೆ ವ್ಯಾಪ್ತಿಗೆ ಬರುವ ಸುಮಾರು ೧೧೩ ಮಂದಿ ಪರಿಶಿಷ್ಠ ಜಾತಿ ಹಾಗೂ ಪಂಗಡದ ಫಲಾನುಭವಿಗಳು ಈ ಯೋಜನೆಯಡಿ ಅರ್ಜಿ ಸಲ್ಲಿಸಿದ್ದು, ಈಗಾಗಲೇ ಮೊದಲನೇ ಹಂತದಲ್ಲಿ ೪೫ ಮಂದಿ ಕಾಮಗಾರಿ ಆದೇಶ ವಿತರಿಸಲಾಗಿದೆ. ಇದೀಗ ೩೮ ಮಂದಿಗೆ ಕಾಮಗಾರಿ ಆದೇಶ ಪತ್ರ ವಿತರಿಸಲಾಗುತ್ತಿದೆ. ಇನ್ನುಳಿದ ೩೦ ಮಂದಿ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರವನ್ನು ಮುಂದಿನ ವಾರ ವಿತರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿಸುರೇಶ್, ಪೌರಾಯುಕ್ತ ಜಿ.ಎನ್.ಚಲಪತಿ, ನಗರಸಭೆ ಸದಸ್ಯ ಶಫೀ, ನಗರಸಭೆ ವ್ಯವಸ್ಥಾಪಕ ಮಂಜುನಾಥ್, ಸುಧಾಕರ್ ಹಾಜರಿದ್ದರು.