Home News ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ

ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ

0

ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಒಂದು ಕೋಟಿ ರೂಪಾಯಿಗಳ ಹಣ ಸರ್ಕಾರದಿಂದ ಬಿಡುಗಡೆಯಾಗಿದ್ದರೂ ಕೂಡಾ ಭೂಮಿಯನ್ನು ಗುರ್ತಿಸಿಕೊಡುವಲ್ಲಿ ತಾಲ್ಲೂಕು ಆಡಳಿತ ವಿಫಲವಾಗಿ ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಪದಾಧಿಕಾರಿಗಳು ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ತಾಲ್ಲೂಕು ಕಛೇರಿಯ ಸಭಾಂಗಣದಲ್ಲಿ ಸೋಮವಾರ ಆಯೋಜನೆ ಮಾಡಲಾಗಿದ್ದ ಡಾ.ಬಿ.ಆರ್.ಅಂಬೆಡ್ಕರ್ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭವನ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಚರ್ಚೆ ನಡೆಸುವಾಗ ತಹಶೀಲ್ದಾರರ ಹೇಳಿಕೆಯಿಂದ ಬೇಸತ್ತು ಹೊರಬಂದು ಅವರು ಪ್ರತಿಭಟನೆ ನಡೆಸಿದರು.
ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ವಿಚಾರದಲ್ಲಿ ವಿಚಾರ ಪ್ರಸ್ತಾಪ ಮಾಡಿದಾಗ, ಸಭೆಯನ್ನು ಕರೆದಿರುವುದು ಕೇವಲ ಜಯಂತಿ ಆಚರಣೆಯ ಬಗ್ಗೆ ಮಾತ್ರ ಭವನದ ವಿಚಾರದ ಬಗ್ಗೆ ಈಗಾಗಲೇ ನಡಾವಳಿಯನ್ನು ಸಿದ್ದಪಡಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದೇವೆ. ನಮ್ಮ ಕೆಲಸ ನಾವು ಮಾಡಿದ್ದೇವೆ, ಇನ್ನೇನು ಮಾಡಬೇಕು ಎಂದು ತಹಶೀಲ್ದಾರ್ ಕೆ.ಎಂ.ಮನೋರಮಾ ಮಾತನಾಡುತ್ತಿದ್ದಂತೆ, ಕೆರಳಿದ ದಲಿತ ಮುಖಂಡರು ಭವನ ನಿರ್ಮಾಣ ಮಾಡುವಂತೆ ಕಳೆದ ಕೆಲ ವರ್ಷಗಳಿಂದ ಹೋರಾಟಗಳನ್ನು ಮಾಡುತ್ತಿದ್ದೇವೆ, ಕಾಟಾಚಾರಕ್ಕೆ ಸುಮಾರು ೫ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಭವನ ನಿರ್ಮಾಣ ಮಾಡಿದ್ದು, ಅದನ್ನು ಸಮಾಜ ಕಲ್ಯಾಣಾಧಿಕಾರಿಗಳ ಕಛೇರಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ಸರ್ಕಾರದಿಂದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸುಮಾರು ೧ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಾರೆ. ಆದರೆ ತಾಲ್ಲೂಕು ಆಡಳಿತ ಭೂಮಿಯನ್ನು ಗುರ್ತಿಸುವಲ್ಲಿ ವಿಫಲವಾಗಿದೆ.
ನಗರದ ಹಳೇ ತಾಲ್ಲೂಕು ಕಛೇರಿಯ ಜಾಗದಲ್ಲಿದ್ದ ಸಿವಿಲ್ ನ್ಯಾಯಾಲಯವನ್ನು ಈಗ ಹೊಸಕಟ್ಟಡಕ್ಕೆ ವರ್ಗಾವಣೆ ಮಾಡಿದ್ದಾರೆ. ಈಗ ಹಳೇ ಕಟ್ಟಡ ಖಾಲಿಯಾಗಿದ್ದು, ಅದರ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗಬೇಕು. ಭವನ ದಲಿತರು ಸೇರಿದಂತೆ ಎಲ್ಲಾ ಜನಾಂಗಗಳಿಗೆ ಕೌಶಲ್ಯ ಅಭಿವೃದ್ಧಿ ಹಾಗೂ ವಿವಿಧ ಬಗೆಯ ತರಬೇತಿ ಕಾರ್ಯಕ್ರಮಗಳಿಗೆ ಉಪಯೋಗವಾಗುವಂತಿರಬೇಕು. ಒಂದು ವೇಳೆ ಹಳೇ ತಾಲ್ಲೂಕು ಕಚೇರಿಯ ಜಾಗವನ್ನು ಮಂಜೂರು ಮಾಡದಿದ್ದರೆ, ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪುನಃ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ತಹಶೀಲ್ದಾರ್ ಮನೋರಮಾ, ಅವರು, ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸುತ್ತೇವೆ, ನಿಮ್ಮ ಮನವಿಯಂತೆ ಹಳೇ ತಾಲ್ಲೂಕು ಕಛೇರಿಯನ್ನು ಜಿಲ್ಲಾಧಿಕಾರಿಗಳು ವೀಕ್ಷಣೆ ಮಾಡಿ, ಜಾಗ ಸೂಕ್ತವಾಗಿಲ್ಲವೆಂಬ ಕಾರಣಕ್ಕಾಗಿ ಬೇರೆ ಜಾಗವನ್ನು ಸೂಚಿಸುವಂತೆ ತಿಳಿಸಿದ್ದರು. ಅವರ ಆದೇಶದಂತೆ ಈಗಾಗಲೇ ಹನುಮಂತಪುರದ ಬಳಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಜಾಗವನ್ನು ಗುರ್ತಿಸಲಾಗಿದೆ ಎಂದು ಸಮಾಧಾನಪಡಿಸಿ ಪೂರ್ವಭಾವಿ ಸಭೆಗೆ ಬರುವಂತೆ ಮನವಿ ಮಾಡಿದರೂ ಕೂಡಾ ಪ್ರತಿಭಟನಾಕಾರರು ಒಪ್ಪಲಿಲ್ಲ. ನಂತರ ಮನವಿ ಪತ್ರವನ್ನು ತಹಶೀಲ್ದಾರರಿಗೆ ಸಲ್ಲಿಸಿ ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.
ನಡೆಯದ ಪೂರ್ವಭಾವಿ ಸಭೆ: ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಅಧಿಕಾರಿಗಳು ಭಾಗವಹಿಸಿದ್ದರಿಂದ ಬೇಸರ ವ್ಯಕ್ತಪಡಿಸಿದ ತಹಶೀಲ್ದಾರ್ ಮನೋರಮಾ ಮೋಬೈಲ್ ಮೂಲಕ ಕೆಲವು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸಭೆಯನ್ನು ಮುಂದೂಡಿದರು.
ಕೇಸು ದಾಖಲು ಮಾಡಲು ಒತ್ತಾಯ: ಕಳೆದ ಬಾರಿ ಜಿಲ್ಲಾಕೇಂದ್ರ ಚಿಕ್ಕಬಳ್ಳಾಪುರದಲ್ಲಿ ಕರೆಯಲಾಗಿದ್ದ ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆಯ ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರುವ ಕಾರಣ ಅಧಿಕಾರಿಗಳ ಮೇಲೆ ಕೇಸುದಾಖಲಾಗಿತ್ತು, ಅದೇ ಪ್ರಕಾರ ಈ ಸಭೆಗೆ ಬಾರದೇ ಇರುವ ಅಧಿಕಾರಿಗಳ ಮೇಲೆ ಕೇಸು ದಾಖಲು ಮಾಡಬೇಕು ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಪದಾಧಿಕಾರಿಗಳು ಒತ್ತಾಯಿಸಿದರು.
ತಹಶೀಲ್ದಾರ್ ಕೆ.ಎಂ.ಮನೋರಮಾ, ಗ್ರೇಡ್-೨ ತಹಶೀಲ್ದಾರ್ ವಾಸುದೇವಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜ್ರಾವ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ದಲಿತ ಮುಖಂಡರುಗಳಾದ ಸಿ.ಎಂ.ಮುನಿಯಪ್ಪ, ಚಿಕ್ಕಮುನಿಯಪ್ಪ, ಎನ್.ಎ.ವೆಂಕಟೇಶ್, ಲಕ್ಷ್ಮೀನಾರಾಯಣ, ನರಸಿಂಹಮೂರ್ತಿ, ಮುನೀಂದ್ರ, ಗುರುಮೂರ್ತಿ, ಕೃಷ್ಣಮೂರ್ತಿ, ನರಸಿಂಹಮೂರ್ತಿ, ಗ್ಯಾಸ್ನಾಗರಾಜ್, ಚಲಪತಿ, ಅರುಣ್ಕುಮಾರ್ ಮತ್ತಿತರರು ಪೂರ್ವಭಾವಿ ಸಭೆಯಲ್ಲಿ ಹಾಜರಿದ್ದರು.