Home News ಅಡುಗೆ ಅನಿಲ್ ಸಂಪರ್ಕಕ್ಕೆ ದುಪ್ಪಟ್ಟು ಹಣ

ಅಡುಗೆ ಅನಿಲ್ ಸಂಪರ್ಕಕ್ಕೆ ದುಪ್ಪಟ್ಟು ಹಣ

0

ಸರ್ಕಾರ ಬಿ.ಪಿ.ಎಲ್.ಕಾರ್ಡುದಾರರಿಗೆ ವಿಧಿಸಿರುವ ದರಕ್ಕಿಂತ ದುಪ್ಪಟ್ಟು ಹಣವನ್ನು ಪಡೆದುಕೊಂಡು ಅಡುಗೆ ಅನಿಲ್ ಸಂಪರ್ಕವನ್ನು ಕೊಡುತ್ತಿದ್ದು, ಸಂಬಂಧಪಟ್ಟ ಏಜೆನ್ಸಿಯವರ ಮೇಲೆ ಸೂಕ್ತ ಕ್ರಮಜರುಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ತಹಶೀಲ್ದಾರರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಬುಧವಾರ ಮನವಿ ಸಲ್ಲಿಸಿದ ರೈತ ಸಂಘದ ಪದಾಧಿಕಾರಿಗಳು, ಶಿಡ್ಲಘಟ್ಟ ನಗರದ ಇಂಡೇನ್ ಗ್ಯಾಸ್ ಏಜೆನ್ಸಿಯ ಮಾಲೀಕರು, ಸರ್ಕಾರದ ನಿಯಮದಂತೆ ೧,೬೫೦ ರೂಪಾಯಿಗಳಿಗೆ ಅನಿಲ ಸಂಪರ್ಕವನ್ನು ನೀಡದೆ, ೩,೫೦೦ ರೂಪಾಯಿಗಳನ್ನು ಪಡೆದುಕೊಂಡರೂ ಕೂಡಾ ತಿಂಗಳುಗಟ್ಟಲೆ ಸತಾಯಿಸುತ್ತಿದ್ದಾರೆ. ಗ್ಯಾಸ್ಸ್ಟೌವ್ ನಮ್ಮಲ್ಲೆ ಪಡೆದುಕೊಳ್ಳಬೇಕು ಎಂದು ನಿರ್ಬಂಧ ಹೇರುತ್ತಿದ್ದಾರೆ. ಈ ಬಗ್ಗೆ ಮಾಲೀಕರನ್ನು ಪ್ರಶ್ನಿಸಿದರೆ, ಸರಿಯಾಗಿ ಸ್ಪಂದಿಸುತ್ತಿಲ್ಲ. ಇದರಿಂದ ಗ್ರಾಮಾಂತರ ಪ್ರದೇಶಗಳ ರೈತಾಪಿ ವರ್ಗದ ಜನರಿಗೆ ತೀರಾ ತೊಂದರೆಯಾಗಿದೆ. ಸಿಲಿಂಡರ್ಗಳ ಬೆಲೆ ಎಷ್ಟು ಎನ್ನುವ ಬಗ್ಗೆ ದರಪಟ್ಟಿಯನ್ನು ಹಾಕಿಲ್ಲ. ಈ ಬಗ್ಗೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿದ್ದರೂ ಕೂಡಾ ಜಾಣಕುರುಡು ಪ್ರದರ್ಶನ ಮಾಡುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಏಜೆನ್ಸಿಯವರನ್ನು ಕರೆಸಿ, ರೈತರ ಸಮ್ಮುಖದಲ್ಲಿ ಅವರಿಂದ ಮಾಹಿತಿಯನ್ನು ಪಡೆಯಬೇಕು. ತಾಲ್ಲೂಕಿನ ನಾಗರಿಕರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಬೇಕು ಎಂದು ಅವರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಡಿ.ವಿ.ನಾರಾಯಣಸ್ವಾಮಿ, ಎಸ್.ಎನ್.ಮಾರಪ್ಪ, ಮುನೇಗೌಡ, ಮಳ್ಳೂರು ಅಶೋಕ್, ವೇಣು, ಎಂ.ಸತೀಶ್, ನಾಗೇಶ್, ನವೀನ್, ವೆಂಕಟಾಚಲಪತಿ, ಮಂಜು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.