ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮ ಪಂಚಾಯಿತಿ, ಶ್ರೀ ವೆಂಕಟೇಶ್ವರ ಇಂಡೇನ್ ಗ್ಯಾಸ್ ಏಜೆನ್ಸೀಸ್ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ “ಎಲ್‌ಪಿಜಿ ಪಂಚಾಯಿತಿ” ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜು ಮಾತನಾಡಿದರು.
ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ ಕುಟುಂಬಗಳಿಗೂ ಅಡುಗೆ ಅನಿಲ ಸಿಗಬೇಕು. ಕುಟುಂಬದ ಆರೋಗ್ಯ ದೃಷ್ಟಿಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಉಜ್ವಲ ಯೋಜನೆಯ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಪ್ರಧಾನಮಂತ್ರಿ ಉಜ್ವಲ ಯೋಜನೆ ಕುಟುಂಬದ ವೆಚ್ಚ ಕಡಿಮೆ ಮಾಡುವುದಷ್ಟೇ ಅಲ್ಲದೇ ಮಹಿಳೆಯರ ಆರೋಗ್ಯ ಸುದಾರಣೆಯಲ್ಲಿ ಹೆಚ್ಚಿನ ಪಾತ್ರ ವಹಿಸಿದೆ. ಹಿಂದೆ ಅಡುಗೆ ಮಾಡಬೇಕಾದರೆ ಬಳಸುವ ಸೌದೆಯಿಂದ ವಿಪರೀತ ಹೊಗೆ ಬರುತ್ತಿದ್ದ ಕಾರಣ ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿತ್ತು. ಇದೀಗ ಅಡುಗೆ ಅನಿಲ ಉಪಯೋಗಿಸುವುದರಿಂದ ಸಮಯ ಉಳಿತಾಯವಾಗುವ ಜೊತೆಗೆ ಸೌದೆ ಕಡಿದು ಅರಣ್ಯ ನಾಶದಿಂದ ಉಂಟಾಗುತ್ತಿದ್ದ ಪರಿಸರ ಹಾನಿ ತಪ್ಪಿದೆ ಎಂದರು.
ಇಂಡೇನ್ ಗ್ಯಾಸ್ ಏಜೆನ್ಸಿಯ ಕೋಲಾರ ಚಿಕ್ಕಬಳ್ಳಾಪುರ ಪ್ರಾದೇಶಿಕ ವ್ಯವಸ್ಥಾಪಕಿ ನೂರ್ ಫಾತಿಮಾ ಮಾತನಾಡಿ, ಮಹಿಳೆಯರು ಅಡುಗೆ ಅನಿಲ ಬಳಸುವಾಗ ಎಚ್ಚರಿಕೆಯಿಂದರಬೇಕು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೇಡಿಕೆಯನ್ವಯ ಅಡುಗೆ ಅನಿಲದ ಬೆಲೆಯನ್ನು ಸರ್ಕಾರ ತೀರ್ಮಾನಿಸುತ್ತದೆ. ಸರ್ಕಾರದ ಸೂಚನೆಯ ಮೇರೆಗೆ ಅಡುಗೆ ಅನಿಲದ ಧರದಲ್ಲಿ ಏರು ಪೇರಾಗುತ್ತದೆ. ಜನ ಸಾಮಾನ್ಯರಿಗೂ ಉಪಯೋಗವಾಗಲಿ ಎನ್ನುವ ಉದ್ದೇಶದಿಂದ ಇದೀಗ ೫ ಕೆಜಿಯ ಸಿಲಿಂಡರ್ ಸಹ ಲಭ್ಯವಿದ್ದು ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಅಡುಗೆ ಅನಿಲ ಬಳಸುವಾಗ ಸೋರುವಿಕೆ ವಾಸನೆ ಬಂದರೆ ತಕ್ಷಣ ಗ್ಯಾಸ್ ವಿತರಕರಿಗೆ ಮಾಹಿತಿ ನೀಡಿದಲ್ಲಿ ಅವರು ಬಂದು ಸೋರುವಿಕೆ ತಡೆಗಟ್ಟುವ ಕೆಲಸ ಮಾಡುತ್ತಾರೆ. ಮನೆಗಳಲ್ಲಿ ಅಡುಗೆ ಅನಿಲ ಆನ್ ಮಾಡಿಟ್ಟು ಟಿ.ವಿ.ದಾರಾವಾಹಿ ನೋಡಲು ಹೋಗದೇ ಜಾಗೃತೆ ವಹಿಸಿರಿ ಎಂದರು.
ಕಾರ್ಯಕ್ರಮದಲ್ಲಿ ಅಡುಗೆ ಅನಿಲದ ಬಳಕೆಯ ಬಗ್ಗೆ ಗ್ರಾಹಕರು ಯಾವ ಯಾವ ಸುರಕ್ಷತೆ ಕ್ರಮಗಳನ್ನು ಅನುಸರಿಸಬೇಕು ಎನ್ನುವುದನ್ನು ನಗರದ ಇಂಡೇನ್ ಗ್ಯಾಸ್ ಏಜೆನ್ಸಿಯ ಅಣ್ಣಪ್ಪ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿಯಪ್ಪ, ಪಿಡಿಓ ಅಂಜನ್‌ಕುಮಾರ್, ಶ್ರೀ ವೆಂಕಟೇಶ್ವರ ಗ್ಯಾಸ್ ಏಜೆನ್ಸಿಯ ಮಾಲೀಕ ನಾಗರಾಜ್, ವ್ಯವಸ್ಥಾಪಕ ಪ್ರಕಾಶ್ ಹಾಗೂ ಸಿಬ್ಬಂದಿ ಹಾಜರಿದ್ದರು.