Home News ಅತಿಥಿ ಉಪನ್ಯಾಸಕರ ಪ್ರತಿಭಟನೆ

ಅತಿಥಿ ಉಪನ್ಯಾಸಕರ ಪ್ರತಿಭಟನೆ

0

ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಹೋರಾಟದಲ್ಲಿ ಭಾಗವಹಿಸಿ, ಸರ್ಕಾರ ನೀಡಿದ ಆಶ್ವಾಸನೆಯ ಮೇರೆಗೆ ಪುನಃ ಕಾಲೇಜಿಗೆ ಬಂದರೆ, ಪ್ರಾಂಶುಪಾಲರು, ನಮಗೆ ಹಾಜರಾತಿಯನ್ನು ನೀಡದೆ, ಲಿಖಿತವಾಗಿ ಪತ್ರ ಬರೆದುಕೊಟ್ಟು ಕೆಲಸ ಮಾಡುವಂತೆ ಹೇಳುತ್ತಿದ್ದಾರೆಂದು ಆರೋಪಿಸಿ ಅತಿಥಿ ಉಪನ್ಯಾಸಕರು ಕಾಲೇಜಿನ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಪ್ರಥಮದರ್ಜೆ ಕಾಲೇಜಿನ ಸುಮಾರು ೧೭ ಮಂದಿ ಅತಿಥಿ ಉಪನ್ಯಾಸಕರು, ಕಳೆದ ಒಂದು ತಿಂಗಳಿನಿಂದ ತಮ್ಮ ಸೇವೆಯನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಧರಣಿಯಲ್ಲಿ ಭಾಗವಹಿಸಿದ್ದರು. ಸರ್ಕಾರದ ಭರವಸೆಯನ್ನು ಒಪ್ಪಿಕೊಂಡು ಪುನಃ ತಾವು ಸೇವೆ ಸಲ್ಲಿಸುತ್ತಿದ್ದ ಕಾಲೇಜಿಗೆ ವಾಪಸ್ಸು ಬಂದ ಅತಿಥಿ ಉಪನ್ಯಾಸಕರಿಗೆ ಕಾಲೇಜಿನ ಪ್ರಾಂಶುಪಾಲರು, ಹಾಜರಾತಿಯನ್ನು ನೀಡದೆ, ನೀವು ಮೊದಲು ಕೆಲಸ ಮಾಡಿ, ಅನಂತರ ನಿಮಗೆ ಹಾಜರಾತಿಯನ್ನು ಕೊಡುತ್ತೇವೆ ಎಂದು ಹೇಳಿದ್ದಾರೆ. ಇನ್ನು ಮುಂದೆ ನೀವು ಯಾವುದೇ ಧರಣಿ ಅಥವಾ ಪ್ರತಿಭಟನೆಗಳಲ್ಲಿ ಭಾಗವಹಿಸುವುದಿಲ್ಲವೆಂದು, ಒಂದು ಪತ್ರವನ್ನು ಬರೆದುಕೊಟ್ಟು ಆ ನಂತರ ಪಾಠಪ್ರವಚನಗಳನ್ನು ಮಾಡುವಂತೆ ಹೇಳುವ ಮೂಲಕ ಗಾಯದ ಮೇಲೆ ಬರೆಯನ್ನು ಎಳೆಯುವಂತಹ ಕೆಲಸವನ್ನು ಮಾಡುತ್ತಿದ್ದಾರೆಂದು ಅತಿಥಿ ಉಪನ್ಯಾಸಕರು ಆರೋಪಿಸಿ ಪ್ರತಿಭಟನೆ ನಡೆಸಿದರು. ಅತಿಥಿ ಉಪನ್ಯಾಸಕರಿಗೆ ಕಾಲೇಜಿನ ವಿದ್ಯಾರ್ಥಿಗಳು ಕೂಡಾ ಸಹಕಾರ ನೀಡಿದರು.
ಈ ಬಗ್ಗೆ ಪ್ರಾಂಶುಪಾಲ ಚಂದ್ರನಾಯಕ್ ಅವರನ್ನು ಅತಿಥಿ ಉಪನ್ಯಾಸಕರ ಪ್ರತಿಭಟನೆಯ ಬಗ್ಗೆ ಕೇಳಿದಾಗ, ಪ್ರತಿಭಟನೆ ನಮ್ಮ ಕಾಲೇಜಿನ ಮುಂದೆ ಮಾಡುತ್ತಿದ್ದಾರಾ? ನನಗೇನು ಗೊತ್ತಿಲ್ಲ, ಯಾರು ಮಾಡುತ್ತಿದ್ದಾರೆ? ಎಂದು ವಿಚಾರವೇ ಗೊತ್ತಿಲ್ಲದಂತೆ ನಟನೆ ಮಾಡತೊಡಗಿದರು. ಕಳೆದ ಒಂದು ತಿಂಗಳಿನಿಂದ ಅತಿಥಿ ಉಪನ್ಯಾಸಕರು, ಕಾಲೇಜಿನಲ್ಲಿ ಕೆಲಸ ಮಾಡಿಲ್ಲ, ಧರಣಿಯಲ್ಲಿದ್ದರು, ಮಂಗಳವಾರ ಕಾಲೇಜಿಗೆ ಬಂದು ಪಾಠ ಮಾಡಲು ಬಂದಿದ್ದೇವೆ ಎಂದರು, ಇಲಾಖೆಯ ಜಂಟಿ ನಿರ್ದೇಶಕರ ಆದೇಶದಂತೆ ಯಾವುದೇ ಪ್ರತಿಭಟನೆ, ಹಾಗೂ ಧರಣಿಯಲ್ಲಿ ಭಾಗವಹಿಸುವುದಿಲ್ಲವೆಂದು ಮುಚ್ಚಳಿಕೆ ಬರೆದುಕೊಡುವಂತೆ ಹೇಳಿದ್ದೇವೆ. ಅದಕ್ಕೆ ಅವರು ಸಿದ್ದರಿರಲಿಲ್ಲ, ಹಾಗಾಗಿ ನಾನು ಮೇಲಾಧಿಕಾರಿಗಳ ಆದೇಶದಂತೆ ಕೆಲಸ ಮಾಡಬೇಕಾಗಿರುವುದರಿಂದ ಹಾಜರಾತಿ ನೀಡಿಲ್ಲವೆಂದು ಅವರು ತಿಳಿಸಿದರು.
ನಾನು ಯಾವ ಉಪನ್ಯಾಸಕರಿಗೂ ಪಾಠ ಮಾಡಬೇಡಿ ಎಂದು ಹೇಳಿಲ್ಲ, ನಿಮ್ಮ ಪಾಡಿಗೆ ನೀವು ಪಾಠ ಮಾಡಿ, ನಿಮಗೆ ಹಾಜರಾತಿಯನ್ನು ಕೊಡುವ ಜವಾಬ್ದಾರಿ ನನ್ನದು ಎಂದಷ್ಟೆ ಹೇಳಿದ್ದೆ. ಯಲಹಂಕ ಸೇರಿದಂತೆ ಬೇರೆ ಕಾಲೇಜುಗಳಲ್ಲೂ ಅತಿಥಿ ಉಪನ್ಯಾಸಕರಿಂದ ಪಾಠ ಮಾಡಿಸುವ ಬಗ್ಗೆ ವಿಚಾರಿಸಿದ್ದೆ. ಅವರು ಮುಚ್ಚಳಿಕೆ ಬರೆಸಿಕೊಳ್ಳಬೇಕು ಎಂದು ಹೇಳಿದ್ದರು ಎಂದರು.
ಅಧಿಕೃತವಾಗಿ ಜಂಟಿ ನಿರ್ದೇಶಕರಿಂದ ಆದೇಶ ಬಂದಿದೆಯೆ ಎಂದು ಪ್ರಶ್ನಿಸಿದಾಗ. ಇಲ್ಲ ಮೌಖಿಕ ಆದೇಶ ಮಾತ್ರ ಬಂದಿದೆ. ಅಧಿಕೃತವಾಗಿ ಆದೇಶವೇನೂ ಬಂದಿಲ್ಲ, ಇಷ್ಟು ಮಾತ್ರಕ್ಕೆ ಅವರು ಪ್ರತಿಭಟನೆ ಮಾಡುವುದರಲ್ಲಿ ಅರ್ಥವಿಲ್ಲವೆಂದು ಎಂದು ಉತ್ತರ ನೀಡಿದರು.

error: Content is protected !!