Home News ಅತ್ತೆ ಸೊಸೆ, ತಂದೆ ಮಗ ಸ್ಪರ್ಧಿಗಳು

ಅತ್ತೆ ಸೊಸೆ, ತಂದೆ ಮಗ ಸ್ಪರ್ಧಿಗಳು

0

‘ಎಲೆಕ್ಷನ್ಗೆ ನಿಂತಿದೀವಲ್ಲ, ನಾವು ಅತ್ತೆ ಸೊಸೆ ಮಾತಾಡೋದಿಲ್ಲ. ಎಲೆಕ್ಷನ್ ಆದ್ಮೇಲೆ ಮಾತಾಡ್ತೀವಿ’ ಎನ್ನುತ್ತಾರೆ ತಾಲ್ಲೂಕಿನ ತುಮ್ಮನಹಳ್ಳಿ ಪಂಚಾಯತಿಯ ಚುನಾವಣಾ ಸ್ಪರ್ಧಿಗಳಾದ ತಿಮ್ಮಕ್ಕ ಮತ್ತು ರೂಪ.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಅತ್ತೆ ತಿಮ್ಮಕ್ಕ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾದರೆ, ಸೊಸೆ ರೂಪ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ. ತಾಲ್ಲೂಕಿನ ಕೊತ್ತನೂರು ಗ್ರಾಮ ಪಂಚಾಯತಿಯಲ್ಲಿ ತಂದೆ ದೇವರಾಜ್ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾದರೆ, ಮಗ ವಾಸುದೇವ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ. ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯತಿಯ ಅತ್ತೆ ವಿಮಲಮ್ಮ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾದರೆ, ಸೊಸೆ ಶಾಂತ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ.
ಗ್ರಾಮೀಣಾಭಿವೃದ್ಧಿಯನ್ನು ಸ್ಥಳೀಯರೇ ಮಾಡುವ ಉದ್ದೇಶದಿಂದ ರೂಪುಗೊಂಡ ವ್ಯವಸ್ಥೆಯ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಈ ಬಾರಿ ಹಲವೆಡೆ ಒಂದೇ ಕುಟುಂಬದ ಇಬ್ಬಿಬ್ಬರು ಸದಸ್ಯರು ಕಣದಲ್ಲಿದ್ದಾರೆ. ಗ್ರಾಮೀಣರನ್ನು ಒಗ್ಗೂಡಿಸುವ ಉದ್ದೇಶದ ವೈರುಧ್ಯದ ರೀತಿಯಲ್ಲಿ ಕುಟುಂಬದಲ್ಲೇ ವಿರೋಧಿಗಳಾಗಿ ಸ್ಪರ್ಧೆ ನಡೆಸುತ್ತಿದ್ದಾರೆ.
ಮೀಸಲಾತಿ ನೀಡಿರುವುದರಿಂದ ವಿವಿಧ ಪಕ್ಷಗಳಿಗೆ ಸ್ಪರ್ಧಿಗಳು ಸಿಗದಿದ್ದಾಗ ಒಂದೇ ಕುಟುಂಬದವರನ್ನು ತಮ್ಮೆಡೆಗೆ ಸೆಳೆದುಕೊಳ್ಳುತ್ತಾರೆ. ಹಾಗಾಗಿ ತಂದೆಗೆ ಮಗ ಪ್ರತಿಸ್ಪರ್ಧಿ, ಅತ್ತೆಗೆ ಸೊಸೆ ಪ್ರತಿಸ್ಪರ್ಧಿಯಾಗಬೇಕಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.