Home News ಅಪರೂಪದ ಶಿಲ್ಪಕಲೆಯಿರುವ ದೇವರಿಲ್ಲದ ದೇವಾಲಯ – ಸಾದಲಿಯ ಪೆದ್ದಗುಡಿ

ಅಪರೂಪದ ಶಿಲ್ಪಕಲೆಯಿರುವ ದೇವರಿಲ್ಲದ ದೇವಾಲಯ – ಸಾದಲಿಯ ಪೆದ್ದಗುಡಿ

0

ಸರ್‌, ನಮ್ಮೂರು ನಮ್ಮ ಜಿಲ್ಲೆಗಾಗಿ… ದಯವಿಟ್ಟು ಪರಿಶೀಲಿಸಿ….
ದೇವಾಲಯವೆಂದರೆ ಕೇವಲ ದೇವರ ಪೂಜೆಯಲ್ಲ, ಅದೊಂದು ಸಾಂಸ್ಕೃತಿಕ ತಾಣ. ನಮ್ಮ ಆಚಾರ, ವಿಚಾರ, ಸಂಸ್ಕಾರವನ್ನು ರೂಪಿಸುವ ಧಾರ್ಮಿಕ ಕೇಂದ್ರವಾಗಿ ಹಿಂದಿನವರು ದೇವಸ್ಥಾನವನ್ನು ನಿರ್ಮಿಸುತ್ತಿದ್ದರು. ವಿಜಯನಗರ ಕಾಲದಲ್ಲಿ ದೇಗುಲಗಳು ನೃತ್ಯ, ಸಂಗೀತ, ಕಲಾ ಕೇಂದ್ರಗಳಾಗಿದ್ದವು. ಹಾಗಾಗಿ ವಿಶಿಷ್ಠ ಕೆತ್ತನೆಗಳು, ಕಂಬಗಳು, ಮಂಟಪಗಳು ಶಿಲ್ಪಿಗಳ ಚಾತುರ್ಯತೆಯನ್ನು ಹೊಂದಿರುತ್ತಿದ್ದವು.
ವಿಜಯನಗರ ಕಾಲದ ಅಪರೂಪದ ಕೆತ್ತನೆಗಳಿಂದ ಕೂಡಿರುವ ಪುರಾತನ ಗುಡಿಯೊಂದು ತಾಲ್ಲೂಕಿನ ಸಾದಲಿ ಗ್ರಾಮದ ಹೊರವಲಯದಲ್ಲಿದೆ. ಅದನ್ನು ಗ್ರಾಮಸ್ಥರು ಪೆದ್ದಗುಡಿ ಅಥವಾ ದೊಡ್ಡಗುಡಿ ಎಂದು ಕರೆಯುತ್ತಾರೆ. ಮೂಲತಃ ಚನ್ನಕೇಶವ ದೇವಾಲಯವಾದ ಇದರಲ್ಲಿ ದೇವರ ಮೂರ್ತಿಯಿಲ್ಲ. ಹಿಂದೆ ಗ್ರಾಮದ ನಡುವೆಯಿದ್ದ ಈ ದೇವಾಲಯ ಈ ಭಾಗದ ಪ್ರಮುಖ ಶ್ರದ್ಧಾ ಕೇಂದ್ರವಾಗಿತ್ತು. ದೊಡ್ಡದಾಗಿದ್ದ ಈ ದೇವಸ್ಥಾನವನ್ನು ತೆಲುಗು ಭಾಷೆಯ ಪ್ರಭಾವದಿಂದ ಪೆದ್ದ(ದೊಡ್ಡ)ಗುಡಿ ಎಂದು ಜನರು ಪ್ರೀತಿಯಿಂದ ಕರೆಯುತ್ತಿದ್ದರು.

ಕಂಬಕ್ಕೆ ಒರಗಿ ನಿದ್ರಿಸುತ್ತಿರುವ ದನಕಾಯುವವ
ಕಂಬಕ್ಕೆ ಒರಗಿ ನಿದ್ರಿಸುತ್ತಿರುವ ದನಕಾಯುವವ

ಸಾದಲಿಯನ್ನು ನಿರ್ಮಿಸಿದ್ದು ಕಿರಿಯ ಪಾಂಡವ ಸಹದೇವ ಎನ್ನುತ್ತಾರೆ ಹಿರಿಯರು. ಅದರಿಂದಾಗಿ ಇದನ್ನು ಹಿಂದೆ ಸಹದೇವಪಟ್ಟಣ ಅಥವಾ ಸಹದೇವಪುರ ಎನ್ನುತ್ತಿದ್ದರಂತೆ. ಮುಂದೆ ಅದು ಸಹದೇವಪಲ್ಲಿ, ಸಾದಹಳ್ಳಿ ಎಂದಾಗಿ ಈಗ ಸಾದಲಿಯಾಗಿದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸಾದಲಿ ಪ್ರಮುಖ ಪಾಳೆಯಪಟ್ಟಾಗಿದ್ದು, ನಾಗಣ್ಣ ಒಡೆಯರ್ ಹಾಗೂ ಆತನ ಮಗ ದೇಪಣ್ಣ ಒಡೆಯರ್ ೧೩೭೦ ರಿಂದ ೧೩೮೫ ಆಳ್ವಿಕೆ ನಡೆಸಿದ್ದಾಗಿ ತಿಳಿದುಬರುತ್ತದೆ. ಆ ಕಾಲದಲ್ಲಿಯೇ ದೇವಾಲಯ ನಿರ್ಮಾಣವಾಗಿದೆ.
ಗಂಡು ಹೆಣ್ಣಿನ ನೃತ್ಯದ ಭಂಗಿ

ಹಲವು ಕಾರಣಗಳಿಂದ ಗ್ರಾಮವು ಪೂರ್ವಭಾಗಕ್ಕೆ ಸ್ಥಳಾಂತರವಾಯಿತು. ಹೊಸ ಸ್ಥಳಕ್ಕೆ ಹೋದ ಗ್ರಾಮಸ್ಥರು ಹಳೆಯ ಗ್ರಾಮದಲ್ಲಿದ್ದ ಚನ್ನಕೇಶವಸ್ವಾಮಿ, ಆಂಜನೇಯಸ್ವಾಮಿ ಮತ್ತು ಈಶ್ವರನ ದೇವಸ್ಥಾನದ ಮೂರ್ತಿಗಳನ್ನು ತೆಗೆದುಕೊಂಡು ಬಂದು ಹೊಸ ಸ್ಥಳದಲ್ಲಿ ಸ್ಥಾಪಿಸಿಕೊಂಡರು. ಆದರೆ ಹಳೆಯ ಕಾಲದ ಕಲಾವಂತಿಕೆಯ ದೇಗುಲ ಮಾತ್ರ ಹಾಗೆಯೇ ಉಳಿದುಹೋಯಿತು. ಕಾಲಚಕ್ರ ಉರುಳಿದಂತೆ ಹಳೆಯ ದೇವಸ್ಥಾನದ ಬಗ್ಗೆ ಅಕ್ಕರೆ ಮೂಡಿ ಆಂಜನೇಯಸ್ವಾಮಿ ದೇವಾಲಯವನ್ನು ಮಾತ್ರ ಪುನರುಜ್ಜೀವನಗೊಳಿಸಿದ್ದಾರೆ. ಆದರೆ ವಿಶಿಷ್ಠ ಕೆತ್ತನೆಗಳಿರುವ ಚನ್ನಕೇಶವಸ್ವಾಮಿ ಮತ್ತು ಹತ್ತಿರದಲ್ಲೇ ಇರುವ ಈಶ್ವರನ ದೇವಾಲಯ, ಶನಿಮಹಾತ್ಮನ ದೇವಾಲಯ ಗಿಡಗಂಟಿಗಳಿಂದ ಆವೃತವಾಗಿವೆ.
ಅತಿ ದೊಡ್ಡದಾದ ಮೀನನ್ನು ಕತ್ತಿಯಲ್ಲಿ ಕೊಲ್ಲಲು ಹೊರಡುತ್ತಿರುವ ಯೋಧನ ಶಿಲ್ಪ

ದೊಡ್ಡಗುಡಿಯ ಪ್ರತಿ ಕಂಬದ ಮೇಲೂ ದೇವತೆಗಳ, ದೇವಲೀಲೆಗಳ ಕೆತ್ತನೆಗಳಿವೆ. ದೇವಸ್ಥಾನದ ಹೊರ ಗೋಡೆಯ ಮೇಲೆ ಮತ್ಸ್ಯ, ಆಮೆ, ಜಿಂಕೆ, ಬೇಟೆ, ನೃತ್ಯ ಮೊದಲಾದ ವಿಶಿಷ್ಠ ಕೆತ್ತನೆಗಳನ್ನು ಕಾಣಬಹುದಾಗಿದೆ. ಕಾಲನ ಹೊಡೆತಕ್ಕೆ ಸಾಕಷ್ಟು ಸವೆದಿದ್ದರೆ, ನಾನಾ ಕಾರಣಗಳಿಂದ ಹಲವು ಶಿಲ್ಪಗಳು ಭಿನ್ನವಾಗಿವೆ. ಗಂಡು ಹೆಣ್ಣಿನ ನೃತ್ಯದ ಭಂಗಿಯು ಶೃಂಗಾರ ಪ್ರಧಾನವಾಗಿದ್ದರೆ, ಕಂಬಕ್ಕೆ ಒರಗಿ ನಿದ್ರಿಸುತ್ತಿರುವ ದನಕಾಯುವವ ಸಾಮಾನ್ಯರ ಬದುಕನ್ನು ಪ್ರತಿನಿಧಿಸುತ್ತದೆ. ವೃದ್ಧ ಬ್ರಾಹ್ಮಣ ಕೊಡೆ ಹಿಡಿದು ನಡೆದುಹೋಗುತ್ತಿರುವ ಚಿತ್ರ ನಾನಾ ಅರ್ಥಗಳನ್ನು ಸೂಚಿಸುತ್ತದೆ. ಯಾಳಿ ಎಂದು ಕರೆಯಲ್ಪಡುವ ಸಿಂಹದೇಹಿ ಆನೆ ಮುಖದ ಶಿಲ್ಪ, ವಾಲಿ ಸುಗ್ರೀವರ ಹೋರಾಟ, ತಾಯಿ ಮತ್ತು ಮರಿ ಜಿಂಕೆಗಳ ವಾತ್ಸಲ್ಯ ಅಪರೂಪದ್ದು. ವಿಷ್ಣು ಪತ್ನಿ ಸಮೇತನಾಗಿ ಆಗಮಿಸಿ ಬಲಿಚಕ್ರವರ್ತಿಯನ್ನು ಕಾಲೆತ್ತಿ ತುಳಿಯುವ ಶಿಲ್ಪ ವಿಶಿಷ್ಟವಾಗಿದೆ. ವಿಷ್ಣುವು ವಾಮನ ರೂಪದಲ್ಲಿರದೆ ವಿಷ್ಣು ರೂಪಿಯಾಗಿಯೇ ಇರುವಂತೆ ಶಿಲ್ಪಿ ಕೆತ್ತಿದ್ದಾನೆ. ಮೀನನ್ನು ಬಲೆಕಾಹಿ ಹಿಡಿಯುವುದು ರೂಢಿ. ಆದರೆ ಅತಿ ದೊಡ್ಡದಾದ ಮೀನನ್ನು ಕತ್ತಿಯಲ್ಲಿ ಕೊಲ್ಲಲು ಹೊರಡುತ್ತಿರುವ ಯೋಧನನ್ನು ಶಿಲ್ಪಿ ಕೆತ್ತಿರುವುದು ಸುಂದರವಾಗಿದೆ.
ವಿಷ್ಣು ಪತ್ನಿ ಸಮೇತನಾಗಿ ಆಗಮಿಸಿ ಬಲಿಚಕ್ರವರ್ತಿಯನ್ನು ಕಾಲೆತ್ತಿ ತುಳಿಯುವ ಶಿಲ್ಪ

‘ಜನಪದ ಕಥೆಯೊಂದರ ಪ್ರಕಾರ ಬಡ ವೃದ್ಧೆಯ ಶಾಪದಿಂದ ಈ ಗ್ರಾಮ ಹಿಂದಿನ ಸಾದಲಿ ಗ್ರಾಮ ಸುಟ್ಟುಹೋಗಿದ್ದು, ಅದರ ಪೂರ್ವಕ್ಕೆ ಸ್ಥಳಾಂತರಗೊಂಡಿತೆಂದು ಹಿರಿಯರು ಹೇಳುತ್ತಾರೆ.
ಪೆದ್ದಗುಡಿ ಅಥವಾ ದೊಡ್ಡಗುಡಿ ಎಂದು ಕರೆಯಲ್ಪಡುವ ಚನ್ನಕೇಶವ ದೇವಾಲಯ ಅಪರೂಪದ ಕೆತ್ತನೆಗಳಿಂದ ಕೂಡಿದೆ. ಈಗ ಅದರ ಸುತ್ತ ಲಾಂಟಾನಾ ಗಿಡಗಳು ಆವೃತಗೊಂಡಿವೆ. ದೇವರಿರದಿದ್ದರೂ ನಮ್ಮ ಹಿಂದಿನವರ ಕಲಾವಂತಿಕೆಗೆ ಸಾಕ್ಷಿಯಾಗಿರುವ ಈ ದೇವಾಲಯವನ್ನು ಸಂರಕ್ಷಿಸಿ ಉಳಿಸುವ ಕೆಲಸ ಆಗಬೇಕು’ ಎನ್ನುತ್ತಾರೆ ಗ್ರಾಮದ ಜಗದೀಶ್‌ಬಾಬು.

error: Content is protected !!