Home News ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ

ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ

0

‘ದೇಶಸೇವೆ ಪವಿತ್ರವಾದ ಕೆಲಸ. ಮಕ್ಕಳೇ ನಿಮ್ಮಲ್ಲಿ ಸೈನಿಕರಾಗಬೇಕೆಂಬ ಉತ್ಸಾಹ, ಹುಮ್ಮಸ್ಸು ಮತ್ತು ಗುರಿಯು ಮೂಡಲಿ. ನೀವು ಸೈನಿಕರಾದರೆ ನಮ್ಮ ಇಡೀ ಹಳ್ಳಿಯೇ ಗರ್ವಪಡುತ್ತದೆ’ ಎಂದು ಮುಖ್ಯ ಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ ಹೇಳಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇಂದಿನ ಬಹುತೇಕ ವಿದ್ಯಾವಂತ ಯುವಜನರು ಕೇವಲ ಐಟಿ ಉದ್ಯೋಗವನ್ನು ಮಾತ್ರ ಇಷ್ಟಪಡುತ್ತಿದ್ದಾರೆ. ದೇಶ ಸೇವೆ ಮತ್ತು ಸಮಾಜ ಸೇವೆ ಬಹು ಮುಖ್ಯವಾದದ್ದು. ಜನ್ಮ ನೀಡಿದ ತಾಯಿ ಮತ್ತು ಜನ್ಮಭೂಮಿ ಎರಡೂ ಶ್ರೇಷ್ಠ. ತಾಯ್ನಾಡಿನ ರಕ್ಷಣೆಗೆ ಯುವಜನರು ಸೇನೆಯತ್ತ ಆಕರ್ಷಿತರಾಗಬೇಕು. ಎಳೆಯ ವಯಸ್ಸಿನಿಂದಲೇ ನಿಮಗೆ ದೇಶಸೇವೆಗೆ ಬದುಕನ್ನು ಮುಡಿಪಾಗಿಡುವ ಆದರ್ಶ ಮೈಗೂಡಲಿ’ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್‌ ಮಾತನಾಡಿ, ಪ್ರವಾಸಿಗರ ಸ್ವರ್ಗ ತಾಣವಾದ ಕಾಶ್ಮೀರದ ಕಾರ್ಗಿಲ್ ಪ್ರದೇಶದ ಮೇಲೆ 1999ರಲ್ಲಿ ನಡೆದ ಪಾಕಿಸ್ತಾನದ ಮೋಸದಿಂದ ದಾಳಿ ಮಾಡಿತು. ಈ ಕಾರ್ಗಿಲ್ ಕದನದಲ್ಲಿ ಕೆಚ್ಚೆದೆಯ ಹೋರಾಟ ನಡೆಸಿದ ಸೈನಿಕರ ಹೋರಾಟದ ಫಲವೇ ಕಾರ್ಗಿಲ್ ವಿಜಯೋತ್ಸವ. ನಿರಂತರ ದೇಶಸೇವೆಯಲ್ಲಿ ತೊಡಗಿರುವ ಸೈನಿಕರು ನಮ್ಮೆಲ್ಲರಿಗೂ ಪ್ರೇರಣಾದಾಯಿಗಳು ಎಂದು ಹೇಳಿದರು.
ಶಿಕ್ಷಕರಾದ ಚಾಂದ್‌ಪಾಷ, ಅಶೋಕ್‌, ಭಾರತಿ, ಅಂಗನವಾಡಿ ಶಿಕ್ಷಕಿ ಮಂಜುಳಮ್ಮ, ನೀಲಮ್ಮ, ಎಸ್‌ಡಿಎಂಸಿ ಅಧ್ಯಕ್ಷೆ ಪುಷ್ಪ, ಸದಸ್ಯರಾದ ಚಿಕ್ಕಮುನಿಯಪ್ಪ, ಹನುಮಂತರೆಡ್ಡಿ, ಗ್ರಾಮದ ದ್ಯಾವಪ್ಪ, ಗೋವಿಂದರಾಜ್‌, ಶ್ರೀನಾಥ್‌, ರವೀಂದ್ರ, ವಿಜಿ, ನಯನ್‌, ಮುನಿರಾಜು, ಮಂಜುಳಮ್ಮ, ಮುನಿರತ್ನಮ್ಮ, ವೆಂಕಟಮ್ಮ ಹಾಜರಿದ್ದರು.