Home News ಆಡಳಿತ ಕಾರ್ಯವೈಖರಿ ಖಂಡಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳಿಂದ ಶಾಸಕರಿಗೆ ಮನವಿ

ಆಡಳಿತ ಕಾರ್ಯವೈಖರಿ ಖಂಡಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳಿಂದ ಶಾಸಕರಿಗೆ ಮನವಿ

0

ಕಳೆದ ಒಂದು ವರ್ಷದಿಂದ ದಲಿತರ ಕುಂದುಕೊರತೆ ಸಭೆ ಕರೆಯದೇ ನಿರ್ಲಕ್ಷಿಸಿರುವುದು ಹಾಗೂ ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ತಾಲ್ಲೂಕು ಆಡಳಿತದ ಕಾರ್ಯವೈಖರಿ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಬುಧವಾರ ತಾಲ್ಲೂಕು ಕಚೇರಿ ಆವರಣದಲ್ಲಿ ಶಾಸಕ ವಿ.ಮುನಿಯಪ್ಪರಿಗೆ ಮನವಿ ಪತ್ರ ಸಲ್ಲಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ೭೨ ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಮುಗಿಸಿಕೊಂಡು ತಾಲ್ಲೂಕು ಕಚೇರಿಗೆ ಬಂದ ಶಾಸಕರಿಗೆ ಕದಸಂಸ ಪದಾಧಿಕಾರಿಗಳು ತಾಲ್ಲೂಕು ಆಡಳಿತದ ಕಾರ್ಯವೈಖರಿ ಹಾಗೂ ದಲಿತರ ಹಕ್ಕೊತ್ತಾಯಗಳನ್ನು ಒಳಗೊಂಡ ಮನವಿ ಪತ್ರ ಸಲ್ಲಿಸಿದರು.
ಈ ಹಿಂದೆ ತಾಲ್ಲೂಕು ಆಡಳಿತ ಮಾಜಿ ಶಾಸಕ ಎಂ.ರಾಜಣ್ಣರ ಅಧ್ಯಕ್ಷತೆಯಲ್ಲಿ ನಡೆಸಿದ ದಲಿತರ ಕುಂದುಕೊರತೆ ಸಭೆಯಲ್ಲಿ ತೀರ್ಮಾನಿಸಲಾಗಿದ್ದ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಭವನಕ್ಕೆ ಸ್ಥಳ ಈವರೆಗೂ ಗುರುತಿಸಿಲ್ಲ. ತಾಲ್ಲೂಕಿನಾದ್ಯಂತ ಈವರೆಗೂ ಬಗರ್‌ಹುಕುಂ ಯೋಜನೆಯಡಿ ನಮೂನೆ ೫೦ ಹಾಗು ೫೩ ಸಲ್ಲಿಸಿರುವ ಯಾವುದೇ ದಲಿತರಿಗೂ ಸಾಗುವಳಿ ಪತ್ರ ವಿತರಿಸಿಲ್ಲ. ತಾಲ್ಲೂಕಿನ ವಿವಿದೆಡೆ ನಕಲಿ ದಾಖಲೆ ಸೃಷ್ಟಿಸಿ ಸತ್ತವರ ಹೆಸರಲ್ಲಿ ಫಹಣಿ ನಮೂದಿಸಿ ಅಕ್ರಮವೆಸಗಿರುವ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಬೇಕು. ತಾಲ್ಲೂಕಿನ ವಿವಿದೆಡೆ ಇಂದಿಗೂ ದಲಿತರ ಹಾಗು ಅಲ್ಪಸಂಖ್ಯಾತರಿಗೆ ಸ್ಮಶಾನ ವಿಲ್ಲದೇ ಇದ್ದರೂ ತಾಲ್ಲೂಕು ಆಡಳಿತ ಮೌನವಹಿಸಿದೆ. ಸಾಲದೆಂಬಂತೆ ತಾಲ್ಲೂಕು ಆಡಳಿತದಿಂದ ಕಳೆದ ೨-೩ ವರ್ಷಗಳಿಂದ ಅಂತ್ಯ ಸಂಸ್ಕಾರದ ಹಣ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳ ಯಾವುದೇ ಪಿಂಚಣಿ ವಿತರಣೆಯಾಗಿಲ್ಲ.
ಮೇಲ್ಕಂಡ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಖುದ್ದು ತಹಸೀಲ್ದಾರ್‌ರನ್ನು ಸಂಪರ್ಕಿಸಲು ಅವರ ಕಚೇರಿಗೆ ಹೋದರೆ ದಲಿತರು ಎಂಬ ಒಂದೇ ಕಾರಣಕ್ಕೆ ಅವರನ್ನು ಗಂಟೆಗಟ್ಟಲೇ ಕಾಯಿಸುವುದು ಹಾಗೂ ದಲಿತ ಮುಖಂಡರ ಬಗ್ಗೆ ಕೇವಲವಾಗಿ ಮಾತಾಡುವ ಮೂಲಕ ದಲಿತ ವಿರೋಧಿ ನೀತಿಯನ್ನು ಅಧಿಕಾರಿಗಳು ಅನುಸರಿಸುತ್ತಾರೆ.
ಕೂಡಲೇ ತಾಲ್ಲೂಕು ಆಡಳಿತವನ್ನು ಚುರುಕುಗೊಳಿಸುವ ಕೆಲಸವನ್ನು ತಾವುಗಳು ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿ ಶಾಸಕ ವಿ.ಮುನಿಯಪ್ಪರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಶಾಸಕ ವಿ.ಮುನಿಯಪ್ಪ ಸ್ಥಳಕ್ಕೆ ತಹಸೀಲ್ದಾರ್ ಅಜಿತ್‌ಕುಮಾರ್ ರೈ ಅವರನ್ನು ಕರೆಸಿ ದಲಿತ ಮುಖಂಡರು ನೀಡಿರುವ ಮನವಿ ಪತ್ರವನ್ನು ನೀಡಿ ಮುಂದಿನ ದಲಿತರ ಕುಂದುಕೊರತೆ ಸಭೆಯೊಳಗೆ ಇದೀಗ ಮುಖಂಡರು ನೀಡಿರುವ ಎಲ್ಲಾ ಬೇಡಿಕೆಗಳನ್ನು ಪೂರ್ಣಗೊಳಿಸುವಂತೆ ತಿಳಿಸಿದರು. ಸಭೆಯಲ್ಲಿ ಪುನಃ ದಲಿತ ಮುಖಂಡರಿಂದ ಇದೇ ವಿಷಯಗಳ ಪ್ರಸ್ತಾಪವಾಗಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕದಸಂಸ ಜಿಲ್ಲಾ ಸಂಚಾಲಕ ಕೆ.ಎಸ್.ಅರುಣ್‌ಕುಮಾರ್, ತಾಲ್ಲೂಕು ಸಂಚಾಲಕ ಅಶೋಕ್, ಜಿಲ್ಲಾ ಸಂಘಟನಾ ಸಂಚಾಲಕ ಎಸ್.ಎಂ.ಮುನಿವೆಂಕಟಪ್ಪ, ನಗರ ಘಟಕ ಸಂಚಾಲಕ ಜೆ.ಎನ್.ಪ್ರಕಾಶ್, ಪದಾಧಿಕಾರಿಗಳಾದ ದ್ಯಾವಪ್ಪ, ಕಿರಣ್‌ಕುಮಾರ್, ವೇಣು, ನಾಗರಾಜ್ ಹಾಜರಿದ್ದರು.

error: Content is protected !!