Home News ಆದರ್ಶ ಕುಟುಂಬದ ಕಥನದ ಮೂಲಕ ಸಮಾಜ ತಿದ್ದಿದ ಮಹರ್ಷಿ ವಾಲ್ಮೀಕಿ

ಆದರ್ಶ ಕುಟುಂಬದ ಕಥನದ ಮೂಲಕ ಸಮಾಜ ತಿದ್ದಿದ ಮಹರ್ಷಿ ವಾಲ್ಮೀಕಿ

0

ಆದರ್ಶ ಕುಟುಂಬದಲ್ಲಿನ ಉತ್ತಮವಾದ ಸಂಬಂಧಗಳನ್ನು ಕುರಿತು, ಆದರ್ಶ ರಾಜನ ನಡುವಳಿಕೆ, ಹಾಗೂ ಆದರ್ಶ ಪತ್ನಿಯ ಕರ್ತವ್ಯಗಳನ್ನು ಸಮಾಜಕ್ಕೆ ಸಾರಿ ಹೇಳುವ ರಾಮಾಯಣ ರಚನೆ ಮಾಡಿರುವ ಮಹರ್ಷಿ ವಾಲ್ಮೀಕಿಯವರ ತತ್ವ ಆದರ್ಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ.ಕೋಡಿರಂಗಪ್ಪ ಹೇಳಿದರು.
ನಗರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಶನಿವಾರ ನಾಡಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಆಯೋಜನೆ ಮಾಡಲಾಗಿದ್ದ ಏಳನೇ ವರ್ಷದ ಮಹರ್ಷಿವಾಲ್ಮೀಕಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಭಾಗವಹಿಸಿ ಅವರು ಮಾತನಾಡಿದರು.
ಕೌಟುಂಬಿಕ ಜೀವನ ಮೌಲ್ಯಗಳನ್ನೊಳಗೊಂಡ ಮಹಾಕಾವ್ಯ ರಾಮಾಯಣ ಕೃತಿಯ ಮೂಲಕ ಸಮಾಜದಲ್ಲಿನ ಪ್ರತಿಯೊಬ್ಬ ಮಾನವನು ಸನ್ಮಾರ್ಗವನ್ನು ಕಾಣುವಂತಹ ಅವಕಾಶವನ್ನು ಮಹರ್ಷಿ ವಾಲ್ಮೀಕಿ ಅವರು ಒದಗಿಸಿಕೊಟ್ಟಿದ್ದಾರೆ.
ಬಹಳ ಮುಖ್ಯವಾಗಿ ಶ್ರೀರಾಮನ ಮಕ್ಕಳಾದ ಲವ-ಕುಶರನ್ನು ಶ್ರೀರಾಮನಷ್ಟೆ ಸಮರ್ಥರನ್ನಾಗಿ ಮಾಡುವ ಮೂಲಕ ಮಹರ್ಷಿ ವಾಲ್ಮೀಕಿಯವರ ದೂರದೃಷ್ಟಿ ಪ್ರತಿಯೊಬ್ಬ ಮಾನವನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಸಮಾಜದಲ್ಲಿನ ಮೌಢ್ಯತೆಯನ್ನು ತೊಲಗಿಸಿ, ಜನರ ಮನದಾಳದ ಅಂಧಕಾರವನ್ನು ತೊಲಗಿಸುವ ಮಾರ್ಗದರ್ಶಕರಾಗಿ ಸಂತರಾಗಿ, ದಾರ್ಶನಿಕ ಕವಿಗಳಾಗಿ ಕಠೋರವಾದ ಮನಸ್ಥಿತಿಗಳನ್ನು ಪರಿವರ್ತನೆ ಮಾಡುವಂತಹ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದ ಮಹರ್ಷಿ ವಾಲ್ಮೀಕಿಯವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ರೂಡಿಸಿಕೊಳ್ಳಬೇಕು ಎಂದರು.
ವಾಲ್ಮೀಕಿ ಜನಾಂಗದ ಅದರಲ್ಲಿಯೂ ಮುಖ್ಯವಾಗಿ ಯುವಜನತೆ ವ್ಯಸನಗಳಿಂದ ದೂರವಾಗಿ ಇಂತಹ ಮಹಾಕಾವ್ಯಗಳನ್ನು ಓದುವುದನ್ನು ರೂಡಿಸಿಕೊಳ್ಳಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಆರ್.ಮನೋಹರ್, ಸಮಾಜಸೇವಕ ಅರುಣ್‌ಬಾಬು ಕಾರ್ಯಕ್ರಮದಲ್ಲಿ ಮಾತನಾಡಿದರು.
ವಾಲ್ಮೀಕಿ ಸಮುದಾಯದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣ, ಜಿಲ್ಲಾ ಪಂಚಾಯತಿ ಸದಸ್ಯೆ ತನುಜಾರಘು, ನಗರಸಭೆ ಅಧ್ಯಕ್ಷ ಅಫ್ಸರ್‌ಪಾಷ, ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಜಿಲ್ಲಾಧ್ಯಕ್ಷ ಬಂಕ್‌ಮುನಿಯಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಯರ್ರಬಚ್ಚಪ್ಪ, ಗ್ರೇಡ್ ೨ ತಹಸೀಲ್ದಾರ್ ವಾಸುದೇವಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸಮಾಜ ಕಲ್ಯಾಣಾಧಿಕಾರಿ ಕೃಷ್ಣಪ್ಪ, ಸುರೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕಳೆಕಟ್ಟಿದ ಮೆರವಣಿಗೆ, ಕಲಾತಂಡಗಳು
17sep10ಶಿಡ್ಲಘಟ್ಟದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಗೆ ನಗರ ಸೇರಿದಂತೆ ತಾಲ್ಲೂಕಿನ ವಿವಿದೆಡೆಯಿಂದ ಆಗಮಿಸಿದ್ದ ಸಾವಿರಾರು ಮಂದಿ ವಾಲ್ಮೀಕಿ ಸಮುದಾಯದವರು ನಗರದ ಪ್ರಮುಖ ಬೀದಿಗಳಲ್ಲಿ ವಾಲ್ಮೀಕಿಯವರ ಬೃಹತ್ ಪಲ್ಲಕ್ಕಿ ಉತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ನಗರದ ಹೊರವಲಯದ ಚಿಂತಾಮಣಿ ರಸ್ತೆಯ ಮಯೂರ ವೃತ್ತದ ಬಳಿ ಇರುವ ವಾಲ್ಮೀಕಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ವಾಲ್ಮೀಕಿ ವಿರಚಿತ ರಾಮಾಯಣದಲ್ಲಿನ ಶ್ರೀರಾಮ, ಸೀತೆ, ಲಕ್ಷ್ಮಣ, ಭಕ್ತ ಆಂಜನೇಯನ ವೇಷಧಾರಿಗಳು ಮೆರವಣಿಗೆಯಲ್ಲಿ ಸಾಗುತ್ತಿದ್ದರೆ ರಾಮಾಯಣದ ಕಾಲಘಟ್ಟದಲ್ಲಿ ನಡೆದುಹೋದಂತೆ ಭಾಸವಾಗಿತ್ತ.
ಕುದುರೆ ಸಾರೋಟದ ವಾಲ್ಮೀಕಿಯ ಪಲ್ಲಕ್ಕಿಯ ಉತ್ಸವದೊಂದಿಗೆ ನಾನಾ ಗ್ರಾಮಗಳಿಂದ ಆಗಮಿಸಿದ್ದ ವೇಷ ಭೂಷಣಗಳೊಂದಿಗೆ ಅಲಂಕರಿಸಿದ್ದ ಟ್ರ್ಯಾಕ್ಟರ್‌ಗಳು ಮೆರವಣಿಗೆಯಲ್ಲಿ ಸಾಗಿದವು. ಮಹಿಳೆಯರ ಡೊಳ್ಳು ಕುಣಿತ, ಗಾರುಡಿ ಗೊಂಬೆ, ಕೀಲು ಕುದುರೆ, ಪೂಜಾ ಕುಣಿತ, ಪಟ ಕುಣಿತ, ನಾಸಿಕ್ ಡೋಲ್, ತಮಟೆ ಇನ್ನಿತರೆ ಕಲಾ ತಂಡಗಳು ಮೆರವಣಿಗೆಗೆ ಕಳೆ ನೀಡಿದ್ದವು.
ನಗರದ ಕೋಟೆ ವೃತ್ತದಲ್ಲಿ ವಾಲ್ಮೀಕಿ ಸರ್ಕಾರಿ ನೌಕರರ ಸಂಘದವತಿಯಿಂದ ಬೃಹತ್ ಗಾತ್ರದ ವಾಲ್ಮೀಕಿಯವರ ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು.