ನಗರದ ವಿವಿಧ ವಾರ್ಡುಗಳು ಹಾಗೂ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಆಧಾರ್ ಕಾರ್ಡು ನೋಂದಣಿ ಹಾಗೂ ತಿದ್ದುಪಡಿ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಕರವೇ ತಾಲ್ಲೂಕು ಅಧ್ಯಕ್ಷ ಶ್ರೀಧರ್ ಒತ್ತಾಯಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ (ಎಚ್.ಶಿವರಾಮೇಗೌಡರ ಬಣ), ಕರವೇ ಸ್ವಾಭಿಮಾನಿ ಬಣ ಹಾಗೂ ಕರ್ನಾಟಕ ಜನಸೈನ್ಯ ಸಹಯೋಗದಲ್ಲಿ ಬುಧವಾರ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚೆಗೆ ಪಡಿತರ ಪಡೆಯಲು ಹಾಗೂ ವಿದ್ಯಾರ್ಥಿಗಳ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಅಗತ್ಯವಿರುವುದರಿಂದ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರಗಳ ಅಗತ್ಯತೆ ಸಾಕಷ್ಟಿದೆ. ಆದರೆ ತಾಲ್ಲೂಕಿನಾಧ್ಯಂತ ಆಧಾರ್ ತಿದ್ದುಪಡಿ ಮಾಡಿಸಲು ಯಾವುದೇ ಕೇಂದ್ರಗಳಿಲ್ಲ. ನಗರದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಒಂದರಲ್ಲಿ ಆಧಾರ್ ಕಾರ್ಡ್ ನೋಂದಣಿ ಮಾಡಿಸುವ ವ್ಯವಸ್ಥೆ ಮಾಡಲಾಗಿದೆಯಾದರೂ ಸೂಕ್ತ ಸಿಬ್ಬಂದಿಯ ಕೊರತೆಯಿಂದ ಅಲ್ಲಿಯೂ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಕಾರ್ಯ ಆಗುತ್ತಿಲ್ಲ. ಹಾಗಾಗಿ ಪ್ರತಿನಿತ್ಯ ತಾಲ್ಲೂಕಿನ ಜನತೆ ಆಧಾರ್ ಕೇಂದ್ರಗಳ ಹುಡುಕಾಟದಲ್ಲಿಯೇ ಕಾಲ ಕಳೆಯುವಂತಾಗಿದೆ.
ಹಾಗಾಗಿ ತಾಲ್ಲೂಕು ಆಡಳಿತ ಕೂಡಲೇ ಎಚ್ಚೆತ್ತುಕೊಂಡು ನಗರದ ೩೧ ವಾರ್ಡುಗಳಿಗೆ ವಾರ್ಡುವಾರು ಒಂದೊಂದು ಆಧಾರ್ ನೋಂದಣಿ ಕೇಂದ್ರ ಹಾಗೂ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಜನತೆಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ಕಸಬಾ ರಾಜಸ್ವ ನಿರೀಕ್ಷಕ ವಿಶ್ವನಾಥ್ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಜನಸೈನ್ಯದ ಅಧ್ಯಕ್ಷ ಎಂ.ಸೋಮಶೇಖರ್, ನಗರ ಘಟಕದ ನಾಗೇಶ್, ಪದಾಧಿಕಾರಿಗಳಾದ ಕುಮಾರ, ಶ್ರೀನಾಥ್, ವೇಣು, ಕರವೇ ಯುವ ಘಟಕದ ಅಧ್ಯಕ್ಷ ರವಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಶಿವಕುಮಾರ್, ಪದಾಧಿಕಾರಿಗಳಾದ ಮಂಜುನಾಥ, ಕೆ.ವಿ.ಗಂಗಾಧರ್, ಕರವೇ ಸ್ವಾಭಿಮಾನಿ ಬಣದ ತಾಲ್ಲೂಕು ಅಧ್ಯಕ್ಷ ಕೆ.ವಿ.ಮಂಜುನಾಥ, ಉಪಾಧ್ಯಕ್ಷ ಮುರಳೀ ಮೋಹನ್, ನಗರ ಘಟಕದ ಮೋಹನ್, ಮುನಿರಾಜು, ಅಂಜದ್ ಹಾಜರಿದ್ದರು.