Home News ಆರೋಗ್ಯವಂತ ನಗರವನ್ನು ರೂಪಿಸಬೇಕು

ಆರೋಗ್ಯವಂತ ನಗರವನ್ನು ರೂಪಿಸಬೇಕು

0

ನಗರದಲ್ಲಿ ಬಹುತೇಕರು ರೇಷ್ಮೆ ಗುಡಿ ಕೈಗಾರಿಕೆಯನ್ನು ಅವಲಂಭಿಸಿದ್ದಾರೆ. ಸುಮಾರು ಐದು ಸಾವಿರ ಕುಟುಂಬಗಳು ರೇಷ್ಮೆ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಚರಂಡಿ, ರಸ್ತೆ, ಕುಡಿಯುವ ನೀರು ಹಾಗೂ ಸ್ವಚ್ಛತೆಗೆ ಆದ್ಯತೆಯನ್ನು ನೀಡುವ ಮೂಲಕ ಆರೋಗ್ಯವಂತ ನಗರವನ್ನು ರೂಪಿಸಬೇಕೆಂದು ನೂತನ ನಗರಸಭೆ ಆಡಳಿತ ಮಂಡಳಿಗೆ ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಶನಿವಾರ ಸ್ವಚ್ಛಭಾರತ್ ಮಿಷನ್ ಯೋಜನೆಯಡಿಯಲ್ಲಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಎಲ್ಲಾ ನಗರಸಭೆಯ ಸದಸ್ಯರು, ತಾಲ್ಲೂಕಿನ ಜನಪ್ರತಿನಿಧಿಗಳು ಪ್ರತಿ ವಾರಕ್ಕೊಮ್ಮೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸಬೇಕು. ‘ನಮ್ಮ ಊರು, ನಮ್ಮ ಬೀದಿ’ ಎಂಬ ಅಭಿಮಾನ ಮೂಡುವಂತೆ ಸ್ಪರ್ಧಾತ್ಮಕವಾಗಿ ಅವರವರ ವಾರ್ಡುಗಳನ್ನು ನೈರ್ಮಲ್ಯರಹಿತವಾಗಿಸಬೇಕು. ಇದರಿಂದ ಆರೋಗ್ಯವಂತ ಊರು ನಮ್ಮದಾಗುತ್ತದೆ ಎಂದು ಹೇಳಿದರು.
ನಗರಸಭಾ ಅಧ್ಯಕ್ಷ ಅಫ್ಸರ್ಪಾಷ ಮಾತನಾಡಿ, ನಮ್ಮ ನೂತನ ನಗರಸಭಾ ಆಡಳಿತ ಮಂಡಳಿಯ ಮೊದಲ ಆಧ್ಯತೆ ಸ್ವಚ್ಛತೆಯಾಗಿದೆ. ಈ ದಿನ ಸರ್ಕಾರಿ ಆಸ್ಪತ್ರೆ ಆವರಣ ಸೇರಿದಂತೆ ಆಸ್ಪತ್ರೆಯಿಂದ ಪದವಿ ಪೂರ್ವ ಕಾಲೇಜಿನ ಕಾಂಪೌಂಡ್ವರೆಗೂ ಸ್ವಚ್ಛಗೊಳಿಸಲಿದ್ದೇವೆ. ಮಂಗಳವಾರ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೂ ಸ್ವಚ್ಛತೆ ಕಾರ್ಯವನ್ನು ನಡೆಸಲಿದ್ದೇವೆ. ಪೌರಕಾರ್ಮಿಕರಿಗೆ ಬೇಕಾದ ಮೂಲ ಸೌಕರ್ಯಗಳನ್ನು ನೀಡುತ್ತಿದ್ದೇವೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ ಕೈಗವಸು, ಮಾಸ್ಕ್, ಶೂ, ಕೋಟುಗಳನ್ನು ನಗರಸಭೆ ವತಿಯಿಂದ ವಿತರಿಸಲಾಯಿತು.
ನಗರಸಭಾ ಸದಸ್ಯರಾದ ನಂದಕಿಶನ್, ರಾಘವೇಂದ್ರ, ಸಿಕಂದರ್, ವೆಂಕಟಸ್ವಾಮಿ, ಲಕ್ಷ್ಮಯ್ಯ, ಡಾ.ತಿಮ್ಮೇಗೌಡ, ಡಾ.ಮಮತ, ಸರ್ಕಾರಿ ಆಸ್ಪತ್ರೆ ಅಭಿವೃದ್ಧಿ ಸಮಿತಿ ಸದಸ್ಯ ಶ್ರೀನಿವಾಸ್, ಮಂಜುನಾಥ್, ಸುರೇಶ್, ಮುಕ್ತಿಯಾರ್ಪಾಷ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!