Home News ಆರ್ಯ ವೈಶ್ಯ ಮಹಿಳಾ ಮಂಡಳಿ ವತಿಯಿಂದ ಗುರುಪೂರ್ಣಿಮಾ ಪೂಜೆ

ಆರ್ಯ ವೈಶ್ಯ ಮಹಿಳಾ ಮಂಡಳಿ ವತಿಯಿಂದ ಗುರುಪೂರ್ಣಿಮಾ ಪೂಜೆ

0

ಪಟ್ಟಣದ ಆರ್ಯ ವೈಶ್ಯ ಮಹಿಳಾ ಮಂಡಳಿ ವತಿಯಿಂದ ಶನಿವಾರ ಗುರುಪೂರ್ಣಿಮಾ ಪೂಜಾ ಕಾರ್ಯಕ್ರಮವನ್ನು 51 ಸಾಯಿಬಾಬಾ ಮೂರ್ತಿಗಳ ಪ್ರತಿಷ್ಠಾಪನೆಯೊಂದಿಗೆ ವಿಶಿಷ್ಠವಾಗಿ ಆಚರಿಸಲಾಯಿತು.
ವಾಸವಿ ರಸ್ತೆಯ ಕಾಶೀನಾಥ್‌ ಅವರ ಮನೆಯಲ್ಲಿ ಗುರುಪೂರ್ಣಿಮಾ ಪೂಜೆಯನ್ನು ಆಯೋಜಿಸಿದ್ದು, ಬೆಳಿಗ್ಗೆ ಕಾಕಡಾರತಿ, ಮಧ್ಯಾಹ್ನದಾರತಿ, ಸಾಯಂಕಾಲದ ಧೂಪಾರತಿ ಹಾಗೂ ಶೇಜಾರತಿಯನ್ನು ನಡೆಸಲಾಗುತ್ತಿದೆ. ಮಹಿಳೆಯರು ಸಾಯಿಬಾಬಾ ವಚನಾಮೃತದ ಗೀತೆಗಳನ್ನು, ಬಾಬಾ ಸ್ತುತಿ ಪದ್ಯಗಳನ್ನು ಹಾಡಿದರು.
‘ಆಷಾಡಮಾಸದ ಹುಣ್ಣಿಮೆಯಂದು ಪ್ರತಿ ವರ್ಷ ಗುರುಪೂರ್ಣಿಮೆಯನ್ನು ಆಚರಿಸುತ್ತಾ ಬರುತ್ತಿದ್ದೇವೆ. ಕಳೆದ ಐದು ವರ್ಷಗಳಿಂದ ಮಹಿಳಾ ಮಂಡಳಿಯ ಸದಸ್ಯೆಯರು ಒಂದೊಂದು ವರ್ಷ ಒಬ್ಬೊಬ್ಬರ ಮನೆಯಲ್ಲಿ ಪೂಜೆಯನ್ನು ಆಯೋಜಿಸುತ್ತಿದ್ದೇವೆ. ಎಲ್ಲರಿಗೂ ಆ ಸದ್ಗುರು ಒಳ್ಳೆಯದನ್ನು ಮಾಡಲಿ ಎಂಬ ಉದ್ದೇಶದಿಂದ ಆಚರಿಸುವ ಈ ಪೂಜೆಗೆ ಎಲ್ಲರೂ ತಮ್ಮ ಮನೆಗಳಿಂದ ವಿವಿಧ ಪ್ರಸಾದಗಳನ್ನು ತಂದು ನೈವೇದ್ಯ ಮಾಡಿ ಹಂಚುತ್ತೇವೆ. ಜ್ಞಾನ, ಭಕ್ತಿ ಹಾಗೂ ಆರೋಗ್ಯವನ್ನು ಕರುಣಿಸಿದ ಶಿರಡಿ ಸಾಯಿಬಾಬಾ ಅವರ 51 ಮೂರ್ತಿಗಳನ್ನಿಟ್ಟು ಪೂಜೆ ಸಲ್ಲಿಸುತ್ತಿದ್ದೇವೆ’ ಎಂದು ಆರ್ಯ ವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ಗಜಲಕ್ಷ್ಮಿ ತಿಳಿಸಿದರು.
ಆರ್ಯ ವೈಶ್ಯ ಮಹಿಳಾ ಮಂಡಳಿಯ ಸತ್ಯಲಕ್ಷ್ಮಿ, ರೂಪಾ, ಜಯಶ್ರೀ, ಸರಳಾ, ಪ್ರತಿಮಾ ಮತ್ತಿತರರು ಹಾಜರಿದ್ದರು.